3,737 ಕೋಟಿ ಬೋನಸ್ ಪ್ರಕಟ; ಕೇಂದ್ರ ನೌಕರರಿಗೆ ಬಂಪರ್ ಗಿಪ್ಟ್

Team Newsnap
2 Min Read
Image Source : google/ Picture By : Prajavani.net

ಕೇಂದ್ರ ಸರ್ಕಾರ ತನ್ನ ಸಿ ಮತ್ತು ಡಿ ದರ್ಜೆ ನೌಕರರಿಗೆ ಕಳೆದ ಹಣಕಾಸು ವರ್ಷದ ಬೋನಸ್ ಅನ್ನು ಘೋಷಿಸಿದೆ.

30 ಲಕ್ಷ ನೌಕರರಿಗೆ 2019-20ನೇ ಸಾಲಿನ ಬೋನಸ್ ಸಿಗಲಿದೆ. ಇದರ ಒಟ್ಟು ಮೊತ್ತ 3,737 ಕೋಟಿ ರೂ ಆಗಿದೆ. ನೌಕರರಿಗೆ ಬೋನಸ್ ನೀಡುವ ಈ ನಿರ್ಧಾರಕ್ಕೆ ಕೇಂದ್ರ ಸಂಪುಟದಿಂದ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ತಿಳಿಸಿದ್ದಾರೆ.

ಪ್ರತೀ ದಸರಾ ವೇಳೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಬೋನಸ್ ನೀಡುವ ಕ್ರಮ ಅನುಸರಿಸುತ್ತದೆ. ಆದರೆ, ಈ ಬಾರಿ ಕೊರೋನಾ ವೈರಸ್ ತಂದಿಟ್ಟ ಸಂಕಷ್ಟದಲ್ಲಿ ಬೋನಸ್ ಎಂಬುದು ಸರ್ಕಾರಿ ನೌಕರರಿಗೆ ಗಗನ ಕುಸುಮ ಎನಿಸಿತ್ತು.

ಯಾರೂ ಕೂಡ ಬೋನಸ್ ನಿರೀಕ್ಷೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೋನಸ್ ನೀಡುವ ನಿರ್ಧಾರ ಹಲವರಿಗೆ ಸಖೇದಾಶ್ಚರ್ಯ ತಂದಿದೆ.

ನಾನ್-​ಗೆಜೆಟೆಡ್ ನೌಕರರಿಗೆ ಮಾತ್ರ ಈ ಬಾರಿ ಬೋನಸ್ ನೀಡಲಾಗುತ್ತಿದೆ. ನಾನ್​-ಗೆಜೆಟೆಡ್ ನೌಕರರು ಎಂದರೆ ಸಿ ಮತ್ತು ಡಿ ದರ್ಜೆ ಸರ್ಕಾರಿ ನೌಕರರಾಗಿದ್ಧಾರೆ. ಕೇಂದ್ರ ಸರ್ಕಾರದ ಅಧೀನದ ವಿವಿಧ ಇಲಾಖೆಗಳಲ್ಲಿ ಇಂಥ 30 ಲಕ್ಷ ನೌಕರರಿದ್ದಾರೆ. ರೈಲ್ವೇಸ್, ಅಂಚೆ, ಇಪಿಎಫ್​ಒ, ಇಸಿಐಸಿಯಂಥ ವಾಣಿಜ್ಯ ಸರ್ಕಾರಿ ಸಂಸ್ಥೆಗಳಲ್ಲಿ 17 ಲಕ್ಷ ನಾನ್-ಗೆಜೆಟೆಡ್ ಉದ್ಯೋಗಿಗಳಿದ್ದಾರೆ. ಇವರಿಗೆ ಉತ್ಪನ್ನಶೀಲತೆ ಆಧಾರದ ಬೋನಸ್ ನೀಡಲಾಗುತ್ತದೆ. ಹಾಗೆಯೇ, ಇತರ 13 ಸರ್ಕಾರಿ ನೌಕರರಿಗೆ ಉತ್ಪನ್ನರಹಿತ ಬೋನಸ್ ನೀಡಲಾಗುತ್ತಿದೆ.

ಅಕ್ಟೋಬರ್ 26ರಂದು ಇರುವ ವಿಜಯದಶಮಿ ಹಬ್ಬಕ್ಕೆ ಮುನ್ನ ಬೋನಸ್ ಹಣವನ್ನು ಎಲ್ಲಾ ಅರ್ಹ ಉದ್ಯೋಗಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಕೇಂದ್ರ ಸರ್ಕಾರದ ಈ ಬೋನಸ್ ನೀಡುವ ಕ್ರಮದಿಂದ ದೇಶದ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆಂದು ಪ್ರಕಾಶ್ ಜಾವಡೇಕರ್ ನಿರೀಕ್ಷಿಸಿದ್ದಾರೆ. ಮುಂಬರುವ ಹಬ್ಬದ ಸೀಸನ್​ನಲ್ಲಿ ಜನರಿಗೆ ಕೊಳ್ಳುವ ಶಕ್ತಿ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರೈಲ್ವೆ ಸಿಬ್ಬಂದಿಯ ಒಕ್ಕೂಟವು ದಸರಾ ಬೋನಸ್​ಗೆ ಒತ್ತಾಯಿಸಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು ತತ್​ಕ್ಷಣವೇ ಬೋನಸ್ ನೀಡಬೇಕೆಂದು ಆಗ್ರಹಿಸಿದ್ದ ಒಕ್ಕೂಟ, ಅ. 22ರಂದು ಎರಡು ಗಂಟೆ ಕಾಲ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಹೇಳಿತ್ತು.

Share This Article
Leave a comment