December 23, 2024

Newsnap Kannada

The World at your finger tips!

amitshah

ಪೊಲೀಸ್ ಪಡೆಗಳನ್ನು ಆಧುನೀಕರಣಗೊಳಿಸುವ ಸಂಕಲ್ಪ: ಗೃಹ ಸಚಿವ ಅಮಿತ್ ಶಾ

Spread the love

ಭಯೋತ್ಪಾದನೆ, ಸೈಬರ್‌ ಅಪರಾಧ ಮತ್ತು ಗಡಿಭದ್ರತೆಯ ನಿರ್ವಹಣೆಯಲ್ಲಿ ಎದುರಾಗುವ ಹೊಸ ಸವಾಲುಗಳಿಗೆ ಪೊಲೀಸ್ ಮತ್ತು ಅರೆಸೇನಾ ಪಡೆಯ ಯೋಧರನ್ನು ಅಣಿಗೊಳಿಸಲು ಕೇಂದ್ರ ಸರ್ಕಾರ ಎಲ್ಲ ವಿಭಾಗಗಳನ್ನೂ ಆಧುನೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದರು.

ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆ, ಕೋಟಾ ನೋಟು ದಂಧೆ, ಮಾದಕ ವಸ್ತು ನಿಯಂತ್ರಣ, ಸೈಬರ್ ಅಪರಾಧ, ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾನವ ಕಳ್ಳಸಾಗಣೆಯಂತಹ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ಹೊಸ ಸವಾಲುಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಕಳೆದ ಎರಡು ಮೂರು ದಶಕಗಳಿಂದ ಹೊಸ ಆಯಾಮದೊಂದಿಗೆ ನಡೆಯುತ್ತಿರುವ ಈ ದಂಧೆಗಳನ್ನು ಹತ್ತಿಕ್ಕಲು ಪೊಲೀಸರನ್ನು ಸಜ್ಜುಗೊಳಿಸುವುದು ಸವಾಲಿನ ಕೆಲಸವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಇಂಥ ದುಷ್ಕೃತ್ಯಗಳನ್ನು ಎದುರಿಸಲು ಪೊಲೀಸರಿಗೆ ತರಬೇತಿ ನೀಡುವುದಕ್ಕಾಗಿ ಸಮಗ್ರ ಆಧುನೀಕರಣ ಕಾರ್ಯಕ್ರಮವೊಂದನ್ನು ಸರ್ಕಾರ ರೂಪಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಎಲ್ಲ ಸವಾಲುಗಳನ್ನು ಎದುರಿಸಲು ಮೋದಿ ಸರ್ಕಾರ ಸನ್ನದ್ಧವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶದ ಗಡಿಗಳನ್ನು ಅಭೇದ್ಯ ಕೋಟೆಯನ್ನಾಗಿಸಲು ಸರ್ಕಾರ ತಂತ್ರಜ್ಞಾನವನ್ನು ರೂಪಿಸುತ್ತಿದೆ ಮತ್ತು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಸೈನಿಕರು ಮತ್ತು ತಂತ್ರಜ್ಞಾನ ಎರಡೂ ಪರಸ್ಪರ ಕೈ ಜೋಡಿಸುವುದರಿಂದ ದೇಶದ ಗಡಿಗಳನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಅಮಿತ್‌ ಶಾ ಹೇಳಿದರು. ಪೊಲೀಸ್ ಸಿಬ್ಬಂದಿ  ಜಾಗರೂಕತೆಯಿಂದ ದೇಶದ ಒಳಗೆ ಮತ್ತು ಗಡಿಭಾಗದಲ್ಲಿ ಭದ್ರತೆಯನ್ನು ಖಾತರಿಪಡಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.

Copyright © All rights reserved Newsnap | Newsever by AF themes.
error: Content is protected !!