November 24, 2024

Newsnap Kannada

The World at your finger tips!

ಅಮ್ಮ

ಕಣ್ಣಿಗೆ ಕಾಣುವ ದೇವರು ಅಮ್ಮ – Happy Mother’s Day

Spread the love

ಇಂದು ವಿಶ್ವ ಅಮ್ಮಂದಿರ ದಿನ. ವಾರಿಧಿಗಿಂತಲೂ ವಿಶಾಲವಾದ ಅಮ್ಮನ ವಾತ್ಸಲ್ಯ, ಮಮಕಾರದ ಭಾವನೆಗಳು, ಹೃದಯವಂತಿಕೆಗಳಿಗೆ ಬೆಲೆ ಕಟ್ಟಲಾಗದು. ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎನ್ನುತ್ತಾರೆ. ಅದರಲ್ಲೂ ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ವಿಶೇಷ ಸ್ಥಾನ ಮಾನ, ಗೌರವ ನೀಡಲಾಗುವುದು.

ದೇವರು ಎಂದರೆ ಒಂದು ನಂಬಿಕೆ ಆದರೆ ತಾಯಿ ಎಂದರೆ ವಾಸ್ತವದ ಪ್ರತೀಕ. ನಿತ್ಯವೂ ನಮ್ಮ ಸೇವೆ, ಆರೈಕೆ ಮಾಡುತ್ತಲೇ ಗಾಣದ ಎತ್ತಿನ ರೀತಿಯಲ್ಲಿ ಯಾವ ಫಲಾಪೇಕ್ಷೆ ಇಲ್ಲದೆ ದುಡಿಯವ ಅದಮ್ಯ ಚೇತನ. ನಾವು ಎಲ್ಲಾ ವಸ್ತುಗಳನ್ನು ಖರೀದಿಸಬಹುದು. ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ . ಆದರೆ. ಅಮ್ಮ ಖರೀದಿಸಲಾಗದ , ಬೆಲೆ ಕಟ್ಟದ ಅಮೂಲ್ಯ ರತ್ನ .

ನಮ್ಮ ಸಂಸ್ಕೃತಿ- ಪರಂಪರೆಯಲ್ಲಿ ತಾಯಿ ವೈವಿದ್ಯಮಯ ಬದುಕು , ಕಾಳಜಿ ಚಿತ್ರಣವೇ ಬೇರಿದೆ

ಅಥರ್ವಣ ವೇದದ ಭೂಮಿಸೂಕ್ತದಲ್ಲಿ (ಅಥರ್ವ ವೇದ ೧೦:೧:೧೨)  –
ತಾಸು ನೋ ದೇಹ್ಯಭಿ ನಃ ಪವಸ್ವ ಮಾತಾ ಭೂಮಿಃ ಪುತ್ರೋsಹಂ ಪೃಥಿವ್ಯಾಃ |

ಅನ್ನುವ ಸಾಲುಗಳು ಬರುತ್ತವೆ. ಅಂದರೆ, ಭೂಮಿ ಎನ್ನುವುದು ತಾಯಿಯಾಗಿದ್ದರೆ, ಪರ್ಜನ್ಯನು ತಂದೆ ಎಂದು ಹೇಳಿದ್ದಾರೆ ಪರ್ಜನ್ಯ ಅವರಿಬ್ಬರ ಮಕ್ಕಳು. ಮಳೆ ಮತ್ತು ಮಳೆಯನ್ನಾಶ್ರಯಿಸಿದ ಜೀವಿಗಳು ಎಂದು ಹೇಳಲಾಗಿದೆ.

ಜಗತ್ತಿನ ಯಾವ ದೇಶವೂ ಸಹ ತನ್ನ ನೆಲವನ್ನು ತಾಯಿ ಎಂದು ಒಪ್ಪಿಕೊಂಡಿರದ ಕಾಲದಲ್ಲಿ ಇಡೀ ಭೂ ಮಂಡಲವನ್ನೇ ತನ್ನ ತಾಯಿ ಮತ್ತು ಆ ತಾಯಿಯ ಮಕ್ಕಳು ನಾವು ಎಂಬ ಭಾವನೆ ಭಾರತೀಯ ಸನಾತನ ಧರ್ಮದಲ್ಲಿ ಇತ್ತು.
ಆ ರೀತಿಯ ಭಾವನೆಗಳು ಈ ನೆಲದ ಸಂಸ್ಕಾರದಿಂದ ಬರತಕ್ಕವೇ ಬೇರೆ ಎಲ್ಲೂ ಬರಲು ಸಾಧ್ಯವೇ ಇಲ್ಲ.

ತಾಯಿ ಅಂದರೆ ಯಾರು?ನಮಗೆ ಜನ್ಮ ನೀಡಿದಾಕೆ,. ಸಾಕಿ ಸಲಹಿ ಪ್ರೀತಿ ಕೊಟ್ಟಾಕೆ, ನೆಲೆ ನಿಂತ ಭೂಮಿ, ನೀರೂಡಿಸುವ ಜಲ, ಭಾವನೆಗಳನ್ನು ವ್ಯಕ್ತಪಡಿಸಲು ಬಳಸುವ ಭಾಷೆ ಎಲ್ಲವೂ ಮಾತೃ ಸ್ವರೂಪಿಯೇ.. ಹೀಗೆ ಎಲ್ಲದರಲ್ಲೂ ತಾಯಿಯನ್ನು ಕಾಣುತ್ತಾ, ಮಾತೃ ದೇವೋ ಭವ ಎಂದು ಸಾರುವ ದೇಶದಲ್ಲೂ ಒಂದು ದಿನವನ್ನು ತಾಯಂದಿರ ದಿನವನ್ನಾಗಿ ಪ್ರತ್ಯೇಕವಾಗಿ ಆಚರಿಸಲಾಗುತ್ತಿದೆ.

ಇಂದು ಮೇ ತಿಂಗಳ ಎರಡನೇ ಭಾನುವಾರ, ವಿಶ್ವ ಮಾತೃ ದಿನಾಚರಣೆ. ಭಾರತದಲ್ಲೂ ಸಹ ಇತ್ತೀಚಿಗೆ ಇದನ್ನು ಪರಿಗಣಿಸಿ ಆಚರಿಸಲಾಗುತ್ತಿದೆ. ಪ್ರತಿಯೊಂದು ಸಂಬಂಧಗಳಿಗೂ ಹೀಗೆ ಒಂದು ದಿನವನ್ನು ಮೀಸಲಿರಿಸಿ ಆಚರಿಸುವುದು ಭಾರತದ ಮಟ್ಟಿಗಂತೂ ಹೊಸತೇ ಸರಿ. ನಿತ್ಯವೂ ಸಂಬಂಧಗಳನ್ನು ಸಂಭ್ರಮಿಸುವುದು ನಮ್ಮ ಸಂಸ್ಕೃತಿ. ಆದರೆ ಅದಕ್ಕೂ ಒಂದು ದಿನ ಮೀಸಲಿರಿಸಿ ಸಂಭ್ರಮಿಸಿದರೆ ತಪ್ಪೇನು??

ಇದನ್ನು ಓದಿ : ಅಮ್ಮ ಎನ್ನುವ ಎರಡಕ್ಷರದಿ

ಮಾತೃ ದಿನಾಚರಣೆ ವಿಚಾರಕ್ಕೆ ಬಂದರೆ 1908ರಲ್ಲಿ USA ಪ್ರಜೆಯಾದ Anna Jarvis ಎಂಬಾಕೆ ತನ್ನ ಮೃತ ತಾಯಿಯ ನೆನಪಲ್ಲಿ ಅಮ್ಮನ ದಿನ ಶುರು ಮಾಡಿದಳು ಅಂತ ಹೇಳುತ್ತಾರೆ.

ಆಕೆಯ ತಾಯಿ Ann Maria Reeves Jarvis ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ ಎಂದು ಸ್ಥಳೀಯ ಅನಕ್ಷರಸ್ಥ ಮಹಿಳೆಯರಿಗೆ ಹೇಳಿಕೊಡಲು ಕಾರ್ಯಾಗಾರ ನಡೆಸುತ್ತಿದ್ದಳು. ಆಕೆಯ ಮರಣಾನಂತರ ಮಗಳು ಎಲ್ಲ ತಾಯಂದಿರಿಗೂ ಗೌರವ ಸೂಚಿಸಲು ಒಂದು ದಿನವನ್ನು ಮೀಸಲಿಟ್ಟು ಸಂಭ್ರಮಿಸಬೇಕು ಎಂದು ಮಾತೃ ದಿನಾಚರಣೆಯನ್ನು ಶುರು ಮಾಡಿದಳು ಅನ್ನುತ್ತದೆ ಇತಿಹಾಸ.

USA ದೇಶದಲ್ಲಿ ಶುರುವಾದ ಈ ಆಚರಣೆ ಕ್ರಮೇಣ ವಿಶ್ವಕ್ಕೆಲ್ಲ ಪಸರಿಸಿತು. ನಮ್ಮಲ್ಲಿ ಇತ್ತೀಚಿಗೆ ಪಾಶ್ಚಾತ್ಯರಿಂದ ಬಂದದ್ದೆಲ್ಲವೂ ಅಪಥ್ಯ ಅನಿಸುವ ಧೋರಣೆ ಶುರುವಾಗಿ ಬಿಟ್ಟಿದೆ. ಅಲ್ಲಿಂದ ಬಂದ ಯಾವುದೇ ಸಂಪ್ರದಾಯಗಳನ್ನು ಆಚರಿಸ ಬಾರದು, ನಮಗ್ಯಾಕೆ ಅದು ಅನ್ನುವ ಭಾವ.

ಆದರೆ ಆನೋs ಭದ್ರಾ: ಕ್ರತವೋ ಯಂತು ವಿಶ್ವತ: – ಪ್ರಪಂಚದ ಸುವಿಚಾರಗಳು ಏನೇ ಬರಲಿ, ಎಲ್ಲವನ್ನೂ ಸ್ವೀಕರಿಸೋಣ ಎಂದು ಸಾರಿದ ವೇದಗಳ ಮೂಲದವರು ನಾವು. ಇಡೀ ವರ್ಷ ತಾಯಿಗೆ ನಮಿಸುವುದರ ಜೊತೆಗೆ, ಇದೊಂದು ದಿನವನ್ನು ಸಂಭ್ರಮದಿಂದ ಆಚರಿಸಿ, ನಮ್ಮ ನಮ್ಮ ತಾಯಂದಿರಿಗೆ ಖುಷಿ ಉಂಟುಮಾಡಿದರೆ ಎಷ್ಟು ಚೆನ್ನ.
ಒಂದು ಒಳ್ಳೆ ಉದ್ದೇಶದಿಂದ ಶುರುಮಾಡಿದ ಕಾರ್ಯ ಒಳಿತನ್ನೇ ಪಸರಿಸುತ್ತದೆ. Anna Jarvis ನಿಜಕ್ಕೂ ಒಂದು ಸತ್ಸಂಪ್ರದಾಯವನ್ನು ಪ್ರಾರಂಭಿಸಿದಳು. ತಾಯಿಯ ಕುರಿತು – ಅವಳ ಜೀವನ, ಅವಳ ಕೆಲಸಗಳು ಎಲ್ಲವೂ ಅವಳ ಕರ್ತವ್ಯ, ಮಾಡುತ್ತಿದ್ದಾಳೆ ಅಷ್ಟೇ ಬಿಡು ಅನ್ನೋ ಧೋರಣೆ ಹಲವೆಡೆ ಈಗಲೂ ಕಾಣಬಹುದು. ಅಂಥದ್ದರಲ್ಲಿ ತಾಯಿಯ ತ್ಯಾಗಗಳನ್ನು ನೆನೆದು, ಅವಳನ್ನೂ ಒಂದಿಡೀ ದಿನ ಸಂಭ್ರಮಿಸುವುದು ಒಂದೊಳ್ಳೆ ಬದಲಾವಣೆ ತಾನೇ?? ಆದರೆ ಈ ಬದಲಾವಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು.

ತಾಯಿಯ ಪ್ರೀತಿಯನ್ನು ಅನುದಿನವೂ ಸಂಭ್ರಮಿಸಬೇಕು. ತಾಯಿ ಅಂದರೆ ಕೇವಲ ಹೆತ್ತ ತಾಯಿಯಲ್ಲ, ಮೇಲೆ ತಿಳಿಸಿದ ಮಾತೃಸ್ವರೂಪಿಯಾದ ನೆಲ, ಜಲ, ಭಾಷೆ ಎಲ್ಲದರ ಕಾಳಜಿ, ನಮ್ಮದೆಂದು ಕಾಪಾಡಿಕೊಳ್ಳುವ ಭಾವನೆಯಿಂದ ಅವುಗಳನ್ನು ಸಂಭ್ರಮಿಸಬೇಕು.
ತಾಯಂದಿರನ್ನು ಅನುದಿನವೂ ಕಾಳಜಿಯಿಂದ ನೋಡಿಕೊಳ್ಳುವ ಮನೋವೃತ್ತಿ ಎಲ್ಲೆಡೆ ಬೆಳೆಯಲಿ, ನಮ್ಮ ಸುತ್ತಲಿನ ಪ್ರಕೃತಿ ಮಾತೆಯನ್ನು ಕಾಪಿಟ್ಟುಕೊಳ್ಳುವ ಕಾಳಜಿ ಬೆಳೆಯಬೇಕು

ಭಾರತದಲ್ಲಿ ಇತ್ತೀಚಿನ ದಶಕಗಳಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ವೃದ್ಧಾಶ್ರಮಗಳಲ್ಲಿ ಆಸರೆ ಪಡೆದಿರುವ ಅಸಂಖ್ಯಾತ ತಾಯಂದಿರಿಗೆ ತಮ್ಮ ಮಕ್ಕಳ ಪ್ರೀತಿ ಸಿಗುವಂತಾಗಲಿ. ವಿಶ್ವ ಮಾತೃ ದಿನದ ಶುಭಾಶಯಗಳು.

  • ವಾಸಂತಿ ಎಂ ರಾವ್
    ಶಿಕಾರಿಪುರ
Copyright © All rights reserved Newsnap | Newsever by AF themes.
error: Content is protected !!