December 25, 2024

Newsnap Kannada

The World at your finger tips!

JANATH JALADARE

ಮೇ 13ರಂದು JDS ಜನತಾ ಜಲಧಾರೆಗೆ ತೆರೆ : ಲೋಣಿ ವಾಯುವ್ಯ ಕ್ಷೇತ್ರದ ಅಭ್ಯರ್ಥಿ

Spread the love

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮೇ ತಿಂಗಳ 13ರಂದು ನೆಲಮಂಗಲ ಟೋಲ್ ಪ್ಲಾಜಾ ಬಳಿ ಬೃಹತ್ ಜನತಾ ಜಲಧಾರೆ ಸಮಾವೇಶ ನಡೆಯಲಿದೆ.

ಆ ಬೃಹತ್ ಸಮಾವೇಶದ ಸಿದ್ಧತೆ ಮತ್ತು ರೂಪುರೇಶೆಗಳ ಬಗ್ಗೆ ಇಂದು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆ (ಕೋರ್ ಕಮಿಟಿ) ಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.

ಈ ಸಭೆಯ ನಂತರ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ ಅವರು ಮಾತನಾಡಿ, ರಾಜ್ಯದ 184 ವಿಧಾನಸಭೆ ಕ್ಷೇತ್ರಗಳಲ್ಲಿ ಜಲಧಾರೆಯ 15 ಗಂಗಾ ರಥಗಳು ಯಶಸ್ವಿಯಾಗಿ ಸಂಚರಿಸುತ್ತಿವೆ. ಇವುಗಳ ಮೂಲಕ ರಾಜ್ಯದ ಎಲ್ಲಾ ಜೀವ ನದಿಗಳಿಂದ ಸಂಗ್ರಹ ಮಾಡಲಾಗಿರುವ ಪುಣ್ಯಜಲವನ್ನು ಒಂದು ಬೃಹತ್ ಕಲಶಕ್ಕೆ ತುಂಬಿಸಿ ಸಮಾವೇಶದಲ್ಲಿ ಪೂಜೆ ನೆರವೇರಿಸಲಾಗುವುದು. ಈ ಸಮಾವೇಶದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನ ಸೇರಲಿದ್ದಾರೆ ಎಂದರು.

ಸಂಜೆ 4 ಗಂಟೆಗೆ ಆರಂಭ ಆಗಲಿರುವ ಸಮಾವೇಶದಲ್ಲಿ ಮಾಜಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ, ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಹಿರಿಯ ಮುಖಂಡರು, ಸಾಹಿತಿಗಳು, ಬುದ್ಧಿಜೀವಿಗಳು, ಕನ್ನಡಪರ, ರೈತಪರ ಹೋರಾಟಗಾರರು ಭಾಗಿಯಾಗುವರು ಎಂದು ತಿಳಿಸಿದರು.

ಗಂಗಾ ಆರತಿ:

ಸಮಾವೇಶದ ಕೊನೆಯಲ್ಲಿ ಗಂಗಾ ಪೂಜೆ ನೆರವೇರಿಸಿದ ಮೇಲೆ ಅತ್ಯಂತ ಸಂಪ್ರದಾಯಬದ್ಧವಾಗಿ ಗಂಗಾ ಆರತಿಯನ್ನು ನೆರವೇರಿಸಲಾಗುವುದು. ಈ ಕಾರ್ಯಕ್ರಮ ನಡೆಸಿಕೊಡಲು ವಾರಾಣಸಿಯಿಂದ ಪಂಡಿತರನ್ನು ಕರೆಸಲಾಗುವುದು. ಸಂಜೆಯ ಹೊತ್ತಿನಲ್ಲಿ ಆರತಿ ಕಾರ್ಯಕ್ರಮ ವಿಶೇಷವಾಗಿ ಮೂಡಿಬರಲಿದೆ ಎಂದರು.

ಅಭ್ಯರ್ಥಿ ಆಯ್ಕೆ:

ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಚಂದ್ರಶೇಖರ್ ಲೋಣಿ ಅವರನ್ನು ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!