December 23, 2024

Newsnap Kannada

The World at your finger tips!

dasara

ಅ. 17ರಿಂದ ಪ್ರವಾಸಿ ತಾಣಗಳು ಬಂದ್; ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿಷೇಧ

Spread the love

ಮೈಸೂರು ದಸರಾ ಉತ್ಸವ ಆರಂಭಕ್ಕೆ ಎರಡೇ ದಿನ ಬಾಕಿ ಇದೆ. ದಸರಾ ವೀಕ್ಷಿಸಲು ಸಾಕಷ್ಟು ಪ್ರವಾಸಿಗರು ಬರುವುದರಿಂದ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಹಾಗೂ ಮೈಸೂರಿನಲ್ಲಿ ಕೊರೋನಾ ಹರಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಅ. 17ರಿಂದ ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳನ್ನೂ ಬಂದ್ ಮಾಡಲು ಆದೇಶಿಸಲಾಗಿದೆ.

ನಿನ್ನೆ ಮಧ್ಯರಾತ್ರಿಯಿಂದಲೇ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ, ದಸರಾಗೆ ಸಾರ್ವಜನಿಕರ‌‌ನ್ನು ನಿಯಂತ್ರಿಸಲು ಮೈಸೂರು ಜಿಲ್ಲಾಡಳಿತ ಪ್ರವಾಸೋದ್ಯಮವನ್ನೇ ಬಂದ್ ಮಾಡಿದೆ. 

ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ನಂಜನಗೂಡು ದೇವಾಲಯಗಳನ್ನು ಬಂದ್ ಮಾಡಲಾಗುವುದು. ನ.1ರವರೆಗೆ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ದಸರಾ ರಜೆಗೆ ಮೈಸೂರಿಗೆ ಬರಬೇಡಿ ಎಂದು ಮೈಸೂರು ಜಿಲ್ಲಾಡಳಿತ ಮನವಿ ಮಾಡಿದೆ. ಈ ಬಾರಿಯ ದಸರಾವನ್ನು ವರ್ಚುವಲ್ ದಸರಾವನ್ನಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ.
ಮನೆಯಲ್ಲೇ ಕುಳಿತು, ಟಿವಿಯಲ್ಲಿ ದಸರಾ ವೀಕ್ಷಿಸಲು ಕೋರಲಾಗಿದೆ.

ದಸರಾ ವೇಳೆ ಪ್ರತಿ ವರ್ಷ ನೂರಾರು ಕಾರ್ಯಕ್ರಮ ನಡೆಯುತ್ತಿದ್ದ ಜಾಗದಲ್ಲಿ ಮೂರು ಕಾರ್ಯಕ್ರಮಕ್ಕೆ ಸೀಮಿತಗೊಳಿಸಲಾಗಿದೆ. ಈ ಬಾರಿಯ ದಸರಾ ಉದ್ಘಾಟನೆ, ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತವಾಗಿದೆ.

ಕೊರೊನಾ ನಡುವೆ ದಸರಾ ಆಚರಿಸುವ ಅನಿವಾರ್ಯತೆ ಇದೆ. ಹೀಗಾಗಿ ಪ್ರವಾಸೋದ್ಯಮಕ್ಕೆ ಬ್ರೇಕ್ ಬಿದ್ದಿದೆ. ದಸರಾ ಮುಗಿಯುವವರೆಗೂ 2 ಹಂತಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಇಂದು ಮಧ್ಯರಾತ್ರಿಯಿಂದ ಅ. 18ರ ಮಧ್ಯರಾತ್ರಿಯವರೆಗೆ ಮೊದಲ ಹಂತದಲ್ಲಿ ಮತ್ತು ಅ. 25ರ ಮುಂಜಾನೆಯಿಂದ ನ. 1ರ ಮಧ್ಯರಾತ್ರಿಯವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ.

ರಸ್ತೆ ಹಾಗೂ ಮೆಟ್ಟಿಲುಗಳ ಮಾರ್ಗ‌ದಿಂದ ಪ್ರವೇಶ ನಿಷೇಧಿಸಲಾಗಿದೆ. ಅ.17 ರಂದು ಗಣ್ಯರ ಹಾಗೂ ಅನುಮತಿ ಪಡೆದಿರುವ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. ನಿಷೇಧಿತ ದಿನಗಳಲ್ಲಿ ಸಾರ್ವಜನಿಕರಿಗೆ ಚಾಮುಂಡಿ ಬೆಟ್ಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.

ಚಾಮುಂಡಿ ಬೆಟ್ಟಕ್ಕೆ ಇಂದಿನಿಂದ ಭದ್ರತೆ ಕೈಗೊಂಡ ಪೊಲೀಸರು ಚಾಮುಂಡಿ ಬೆಟ್ಟಕ್ಕೆ ಎಂಟ್ರಿ ಆಗುವ ತಾವರೆಕಟ್ಟೆ ಬಳಿ‌ಯೇ ಬ್ಯಾರಿಕೇಡ್ ಹಾಕಿದ್ದಾರೆ. ಬೆಟ್ಟದ ನಿವಾಸಿಗಳು ಹಾಗೂ ದಸರಾ ಸಿದ್ದತೆಯ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗುತ್ತುದೆ. ದಸರಾ ಉದ್ಘಾಟನ ದಿನವೂ ಕೂಡ ಆಹ್ವಾನಿತ ಗಣ್ಯರು ಸೇರಿ ಮಾಧ್ಯಮಕ್ಕೆ ಮಾತ್ರ ಅವಕಾಶ ನೀಡಲಾಗುವುದು.

ಮೈಸೂರು ದಸರಾಗೆ ಎರಡೇ ದಿನ ಬಾಕಿ ಇರುವುದರಿಂದ ಮೈಸೂರು ಅರಮನೆಯಲ್ಲಿ ಆನೆಗಳಿಗೆ ತಾಲೀಮು ಮುಂದುವರೆದಿದೆ. ಅಂಬಾರಿ ಹೊರುವ ಅಭಿಮನ್ಯು ಆನೆಗೆ ಭಾರ ಹೊರೆಸಿ ತಾಲೀಮು ನಡೆಸಲಾಗಿದೆ. ಜಂಬೂಸವಾರಿಗೆ ಇನ್ನು ಕೇವಲ 11 ದಿನಗಳಷ್ಟೇ ಬಾಕಿ ಉಳಿದಿದೆ. ಈಗಾಗಲೇ ಮರದ ಅಂಬಾರಿ ತಾಲೀಮು ಆರಂಭವಾಗಬೇಕಿತ್ತು. ಆದರೆ, ಕ್ರೇನ್ ಜೋಡಣೆಯಾಗದ ಹಿನ್ನೆಲೆಯಲ್ಲಿ ಮರದ ಅಂಬಾರಿ ತಾಲೀಮು ಮುಂದೂಡಿಕೆಯಾಗಿದೆ. ಅಭಿಮನ್ಯುಗೆ ಭಾನುವಾರದಿಂದ ಮರದ ಅಂಬಾರಿ ತಾಲೀಮು ನಡೆಸುವ ಸಾಧ್ಯತೆಯಿದೆ.

Copyright © All rights reserved Newsnap | Newsever by AF themes.
error: Content is protected !!