ಟಾಟಾ ಕಂಪನಿಯ ಮಡಿಲಿಗೆ ಏರ್ ಇಂಡಿಯಾ……
ಮುಂದೆ….
ಅಂಬಾನಿ ಕಂಪನಿಯ ಮಡಿಲಿಗೆ ಭಾರತೀಯ ರೈಲ್ವೆ…
ಮುಂದೆ….
ಅಧಾನಿ ಕಂಪನಿಯ ಒಡೆತನಕ್ಕೆ
ಬಿ ಎಸ್ ಎನ್ ಎಲ್…..
ಮುಂದೆ….
ಬಿರ್ಲಾ ಕಂಪನಿಯ ಒಡೆತನಕ್ಕೆ ಎಲ್ ಐ ಸಿ…..
ಇನ್ನೂ ಮುಂದೆ….
ಮೈಕ್ರೋಸಾಫ್ಟ್ ಒಡೆತನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್……
ಇನ್ನೂ ಇನ್ನೂ ಮುಂದೆ….
ಗೂಗಲ್ ಮಡಿಲಿಗೆ ಭಾರತೀಯ ಸೇನೆ…..
ಇನ್ನೂ ಇನ್ನೂ ಇನ್ನೂ ಮುಂದೆ….
ಅಮೆಜಾನ್ ಮಡಿಲಿಗೆ ಭಾರತೀಯ ಚುನಾವಣಾ ಆಯೋಗ……
ಇನ್ನೂ ಇನ್ನೂ ಇನ್ನೂ ಮುಂದೆ….
ಭಾರತೀಯ ಸರ್ಕಾರವನ್ನು ವಶಪಡಿಸಿಕೊಂಡ ವಿದೇಶಿ ಕಂಪನಿಗಳ ಒಕ್ಕೂಟ…….
ಇದು ತಮಾಷೆಯೇ, ವ್ಯಂಗ್ಯವೇ, ಕುಚೇಷ್ಟೆಯೇ, ನಕಾರಾತ್ಮಕ ಮನೋಭಾವವೇ, ಭವಿಷ್ಯದ ವಾಸ್ತವವೇ….
ಅಥವಾ ನಮಗೆಲ್ಲ ಎಚ್ಚರಿಕೆಯ ಗಂಟೆಯೇ…….!!!
ನಿಮ್ಮ ವಿವೇಚನೆಗೆ ಬಿಡುತ್ತಾ……
ನನ್ನ ಅಭಿಪ್ರಾಯ ಮಾತ್ರ ಈ ರೀತಿಯಲ್ಲಿ……..
ಖಾಸಗೀಕರಣದಿಂದ ಸಾಕಷ್ಟು ಲಾಭಗಳು ಇವೆ ಹಾಗೆಯೇ ಸಾಕಷ್ಟು ಅಪಾಯಗಳು ಇವೆ. ಇಲ್ಲಿ ಮುಖ್ಯವಾಗಿ ಖಾಸಗೀಕರಣ ವ್ಯವಸ್ಥೆಯನ್ನು ಯಶಸ್ವಿಗೊಳಿಸುವ ಮಾನಸಿಕ ಆರ್ಥಿಕ ಸಾಮಾಜಿಕ ಮತ್ತು ಆಡಳಿತಾತ್ಮಕ ಪರಿಸ್ಥಿತಿ ಭಾರತದಲ್ಲಿ ಇದೆಯೇ ಎಂಬುದು ಮೂಲಭೂತ ಪ್ರಶ್ನೆ. ಸಂಸದೀಯ ಪ್ರಜಾಪ್ರಭುತ್ವ, ಚುನಾವಣಾ ರಾಜಕೀಯ, ವರ್ಣಾಶ್ರಮ ಪದ್ಧತಿ, ನಾನಾ ರೀತಿಯ ಭ್ರಷ್ಟಾಚಾರ, ಮೂಢನಂಬಿಕೆ ಅಜ್ಞಾನ ಮುಂತಾದ ಅನೇಕ ಕೊರತೆಗಳ ನಡುವೆ ನಿಜಕ್ಕೂ ಖಾಸಗೀಕರಣ ಎಲ್ಲಾ ರೀತಿಯಲ್ಲಿಯೂ ಯಶಸ್ವಿಯಾಗುವುದೇ……
ಖಾಸಗೀಕರಣ ಈಗಿನ ಸಮಸ್ಯೆ ಮಾತ್ರವಲ್ಲ. ಕಳೆದ 25 ವರ್ಷಗಳಿಂದ ಚರ್ಚಿಸಲ್ಪಡುತ್ತಿರುವ ಆರ್ಥಿಕ ಚಿಂತನೆ……
ಖಾಸಗೀಕರಣ ಮತ್ತು ಸರ್ಕಾರಿ ಆಡಳಿತ ನಿಯಂತ್ರಣ……….
ಯಾವುದು ಉತ್ತಮ ಮತ್ತು ಯಾರಿಗೆ ಯಾವುದು ಉತ್ತಮ ಎಂಬುದು ಒಂದು ದೊಡ್ಡ ಪ್ರಶ್ನೆ…….
ಅದಕ್ಕೆ ಮೊದಲು ಒಂದು ಸರಳ ವಿವರಣೆ…..
ಸಾಮಾನ್ಯವಾಗಿ,
ಬಡವರು, ಶ್ರಮಜೀವಿಗಳು, ಸಾಧಾರಣ ಮಟ್ಟದ ವಿದ್ಯಾವಂತರು, ಗ್ರಾಮೀಣ ಪ್ರದೇಶದವರು, ಜಾತಿಯ ಕೆಳವರ್ಗದವರು, ವಾಸ್ತವವಾದಿಗಳು, ಮುಂತಾದವರು ಸರ್ಕಾರಿ ಕೇಂದ್ರಿತ ಆಡಳಿತ ವ್ಯವಸ್ಥೆ ಇಷ್ಟಪಡುತ್ತಾರೆ. ಕಾರಣ ಸರ್ಕಾರ ಕನಿಷ್ಠ ನಮ್ಮ ಸಂಕಷ್ಟಗಳಿಗೆ ಸ್ಪಂದಿಸುತ್ತದೆ ಮತ್ತು ಅದನ್ನು ನಾವು ಪ್ರಶ್ನಿಸಬಹುದು ಎಂಬ ಆಶಾ ಭಾವನೆ.
ಶ್ರೀಮಂತರು, ವಿದ್ಯಾವಂತರು, ಪ್ರತಿಭೆಯುಳ್ಳವರು, ತುಂಬಾ ಚಟುವಟಿಕೆಯಿಂದ ಇರುವವರು, ಜಾತಿಯ ಮೇಲ್ವರ್ಗದವರು, ಸಾಮರ್ಥ್ಯದಿಂದ ಹಣಗಳಿಸುವುದೇ ನಿಜವಾದ ಅಭಿವೃದ್ಧಿ ಎಂದು ಅರ್ಥೈಸುವವರು, ನಂಬಿಕೆಯ ಮೇಲೆ ಅವಲಂಬಿತರಾದವರು ಮುಂತಾದವರು ಖಾಸಗೀಕರಣ ಹೆಚ್ಚು ಇಷ್ಟಪಡುತ್ತಾರೆ.
ಕಾರಣ ಸ್ಪರ್ಧೆ ಮತ್ತು ಪ್ರತಿಭೆಗೆ ತಕ್ಕಂತ ಫಲ ದೊರೆಯುತ್ತದೆ ಎಂಬ ನಂಬಿಕೆ.
ಭಾರತದ ಆಂತರಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ಮತ್ತಷ್ಟು ಸ್ಪಷ್ಟವಾಗಿ ಮತ್ತು ನೇರವಾಗಿ ಹೇಳಬೇಕೆಂದರೆ,….
ಬಲಪಂಥೀಯ ಬಿಜೆಪಿ ಪಕ್ಷದ ಒಲವು ಖಾಸಗೀಕರಣದ ಕಡೆ,
ಎಡಪಂಥೀಯ ಕಮ್ಯುನಿಸ್ಟ್ ಪಕ್ಷದ ನಿಲುವು ಸರ್ಕಾರಿ ವ್ಯವಸ್ಥೆ ಕಡೆ,
ಕಾಂಗ್ರೆಸ್ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ನೆಹರು ಪ್ರಣೀತ ವ್ಯವಸ್ಥೆಯ ಕಡೆ ಒಲವು ಹೊಂದಿದೆ. ( ಆದರೆ ರಾಜೀವ್ ಗಾಂಧಿ ಮತ್ತು ನಂತರ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಆಡಳಿತದಲ್ಲಿ ಜಾಗತೀಕರಣಕ್ಕೆ ಸಹಿಹಾಕಿದ ನಂತರ ಹೆಚ್ಚು ಕಡಿಮೆ ಖಾಸಗೀಕರಣದತ್ತ ಭಾರತ ದಾಪುಗಾಲು ಇಟ್ಟಿತು )
ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅತಿಹೆಚ್ಚು ಖಾಸಗೀಕರಣಕ್ಕೆ ಮುಂದಾಗಿದೆ.
ಈಗ ನಿಜವಾದ ಪ್ರಶ್ನೆ ಇರುವುದು ಭಾರತದ ಈಗಿನ ಪರಿಸ್ಥಿತಿಯಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಯಾವುದು ಹೆಚ್ಚು ಸೂಕ್ತ.
ಖಾಸಗೀಕರಣವನ್ನು ಸಂಪೂರ್ಣ ಒಪ್ಪಿಕೊಂಡ ಪಾಶ್ಚಾತ್ಯ ದೇಶಗಳು ಅಭಿವೃದ್ಧಿ ವಿಷಯದಲ್ಲಿ ಬಹಳಷ್ಟು ಮುಂದೆ ಸಾಗಿವೆ ಎಂಬುದು ಸ್ವಲ್ಪಮಟ್ಟಿಗೆ ನಿಜ.
ಸರ್ಕಾರಿ ವ್ಯವಸ್ಥೆ ಸಂಪೂರ್ಣ ಅಳವಡಿಸಿಕೊಂಡ ಕಮ್ಯುನಿಸ್ಟ್ ರಾಷ್ಟ್ರಗಳು ಪ್ರಾರಂಭದಲ್ಲಿ ಯಶಸ್ವಿಯಾಗಿ ನಂತರ ಸಂಕಷ್ಟಕ್ಕೆ ಸಿಲುಕಿ ಕೊನೆಗೆ ಕೆಲವು ನಿರ್ಧಿಷ್ಟ ವಲಯಗಳಲ್ಲಿ ಖಾಸಗೀಕರಣಕ್ಕೆ ಶರಣಾಗಿ ಮುಕ್ತ ಮಾರುಕಟ್ಟೆಗೆ ಪ್ರವೇಶ ಪಡೆದು ವಿದೇಶಿ ಬಂಡವಾಳ ಆಕರ್ಷಿಸಿ ಈಗ ಒಂದಷ್ಟು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ ಎಂಬುದೂ ಸತ್ಯ. ಆದರೂ ಸಂಪೂರ್ಣ ನಿಯಂತ್ರಣ ಸರ್ಕಾರದ ಬಳಿ ಇಟ್ಟುಕೊಂಡಿರುತ್ತವೆ.
ಯಾವುದೇ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ಸಾಮಾನ್ಯ ಜನ ವಿದ್ಯಾವಂತರು, ಬುದ್ದಿವಂತರು, ದಕ್ಷರು ಮತ್ತು ಪ್ರಾಮಾಣಿಕರು ಆಗಿರಬೇಕು ಹಾಗು ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆ ಇರಬೇಕಾಗುತ್ತದೆ. ಆಡಳಿತ ಪಾರದರ್ಶಕವಾಗಿರಬೇಕು ಮತ್ತು ನೀತಿ ನಿಯಮಗಳ ಅನುಷ್ಠಾನ ಹೆಚ್ಚು ಖಚಿತವಾಗಿರಬೇಕು ಹಾಗು ಎಲ್ಲಕ್ಕಿಂತ ಮುಖ್ಯವಾಗಿ ಬಂಡವಾಳಶಾಹಿ – ಯಜಮಾನಿಕೆ ಪರವಾಗಿ ನಿಯಮಗಳು ರೂಪಿತವಾಗಿರುವಂತೆ ಕಾರ್ಮಿಕರ ಹಿತಾಸಕ್ತಿಯೂ ಬಹುಮುಖ್ಯ ಆಧ್ಯತೆಯಾಗಿರಬೇಕು. ಕೇವಲ ಪುಸ್ತಕದಲ್ಲಿ ಮಾತ್ರ ನಮೂದಾಗಿರಬಾರದು. ಆಗ ಎರಡೂ ವ್ಯವಸ್ಥೆ ಯಶಸ್ವಿಯಾಗುತ್ತದೆ.
ಭಾರತದಂತ ಬೃಹತ್ ವೈವಿಧ್ಯಮಯ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟದಲ್ಲಿ ಇದೊಂದು ಬಹುದೊಡ್ಡ ಸವಾಲು.
ಖಾಸಗಿ ವ್ಯವಸ್ಥೆಯಲ್ಲಿ ಹಣದ ಪ್ರಾಮುಖ್ಯತೆ ಅರ್ಥಾತ್ ವ್ಯಾಪಾರದ ಬೆಳವಣಿಗೆಯೇ ಮುಖ್ಯವಾಗಿರುತ್ತದೆ. ಅದರ ಸುತ್ತಲೂ ಎಲ್ಲವೂ ಸುತ್ತುತ್ತದೆ. ಅಂದರೆ ಶಿಸ್ತು, ಸೌಲಭ್ಯ, ಜವಾಬ್ದಾರಿ, ಸೇವೆ, ಮೇಲ್ವಿಚಾರಣೆ, ದೌರ್ಜನ್ಯ, ಶೋಷಣೆ, ನಿರ್ಧಯತೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಯಾವುದೇ ಸಾಮಾಜಿಕ ನ್ಯಾಯ ಅಥವಾ ಹೊಣೆಗಾರಿಕೆಗೆ ಅವರು ಅಷ್ಟಾಗಿ ಸ್ಪಂದಿಸುವುದಿಲ್ಲ. ಕಾನೂನಿಗೆ ಮಾತ್ರ ಜವಾಬ್ದಾರರಾಗಿರುತ್ತಾರೆ. ಹೆಚ್ಚು ಹೆಚ್ಚು ಲಾಭಗಳಿಸಲು ಪ್ರಯತ್ನಿಸುತ್ತಲೇ ಇರುವುದರಿಂದ ಪರೋಕ್ಷವಾಗಿ ದೇಶದ ಆರ್ಥಿಕತೆಗೆ ಲಾಭವಾಗುತ್ತದೆ. ಸಾಮಾಜಿಕ ನ್ಯಾಯ ಹಿನ್ನೆಲೆಗೆ ಸರಿಯುತ್ತದೆ.
ಹಾಗೆಯೇ ಒಂದು ವೇಳೆ ನಷ್ಟವಾಗುವುದಾದರೆ ಬಹಳಷ್ಟು ಕಂಪನಿಗಳು ನೌಕರರ ಹಿತಾಸಕ್ತಿ ಕಾಪಾಡದೆ ನಡು ನೀರಿನಲ್ಲಿ ಕೈ ಬಿಡುತ್ತವೆ. ಕಾನೂನಿನ ಕ್ರಮಗಳು ಇದ್ದರು ಈ ದೇಶದಲ್ಲಿ ಅದು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.
ಇದು ವಾಸ್ತವ.
ಪಾಶ್ಚಾತ್ಯ ದೇಶಗಳಲ್ಲಿ ಇರುವಂತೆ ಮಾಲೀಕರು ಮತ್ತು ಕೆಲಸಗಾರರ ನಡುವೆ ಸಮಾನ ಹಕ್ಕುಗಳು ಇಲ್ಲಿ ಜಾರಿಯಾಗುವುದಿಲ್ಲ.
ಸರ್ಕಾರಿ ನಿಯಂತ್ರಣದ ಸಾರ್ವಜನಿಕ ವ್ಯವಸ್ಥೆ ಹೆಚ್ಚು ಜವಾಬ್ದಾರಿಯುತ ಮತ್ತು ಪಾರದರ್ಶಕತೆ ಹೊಂದಿರುತ್ತದೆ. ಕೆಲಸಗಾರರ ಹಿತಾಸಕ್ತಿಗಳನ್ನು ಕಾಪಾಡುತ್ತದೆ. ಎಂತಹ ನಷ್ಟದ ಪರಿಸ್ಥಿತಿಯಲ್ಲಿಯೂ ನೌಕರರ ಕೈ ಬಿಡುವುದಿಲ್ಲ. ಆದರೆ ಈ ಸೌಲಭ್ಯಗಳೇ ಅತಿಯಾಗಿ ಕ್ರಮೇಣ ಸಾರ್ವಜನಿಕ ಆಡಳಿತ ವ್ಯವಸ್ಥೆ ಭ್ರಷ್ಟ, ಸೋಂಬೇರಿ ಮತ್ತು ದುರಹಂಕಾರಿತನ ಪರಮಾವಧಿ ತಲುಪುತ್ತದೆ. ಕೆಲಸಗಳು ನಿರ್ಧಿಷ್ಟ ಸಮಯದಲ್ಲಿ ಆಗದೇ ನಿಧಾನಗತಿಯಲ್ಲಿ ಸಾಗುತ್ತವೆ. ಅದರಲ್ಲೂ ಚುನಾವಣಾ ರಾಜಕೀಯದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಅತಿಯಾಗಿರುತ್ತದೆ. ನಷ್ಟವಾದರೆ ನನಗೇನು ಎಂಬ ಉಡಾಫೆ ಮನೋಭಾವ ಬೆಳೆಯುತ್ತದೆ. ಕೆಲಸ ಮತ್ತು ಸಂಬಳದ ಗ್ಯಾರಂಟಿ ಅವರನ್ನು ಈ ಸ್ಥಿತಿಗೆ ತಳ್ಳುತ್ತದೆ.
ಈ ಎಲ್ಲಾ ಒಳಿತು ಕೆಡಕುಗಳ ನಂತರ ಭಾರತಕ್ಕೆ ಯಾವುದು ಹೆಚ್ಚು ಸೂಕ್ತ ಎಂಬುದನ್ನು ಪರಿಶೀಲಿಸಬೇಕು……
ಮೊದಲೇ ಹೇಳಿದಂತೆ ಭಾರತ ಒಂದು ಮಿನಿ ವಿಶ್ವ. ಇಲ್ಲಿ ಒಂದು ನಿರ್ಧಿಷ್ಟ ನೀತಿ ನಿಯಮಗಳು ಎಲ್ಲಾ ರೀತಿಯಲ್ಲಿಯೂ ಸರಿ ಹೊಂದುವುದಿಲ್ಲ. ಅನೇಕ ಕ್ಷೇತ್ರಗಳಲ್ಲಿ ಸರ್ಕಾರಿ ಅಡಳಿತ ನಿಯಂತ್ರಣವೇ ಇರಬೇಕಾಗುತ್ತದೆ.
ಬಡವರು, ದೀನ ದಲಿತರು ವಿಶೇಷ ಚೇತನರು ಅಸಹಾಯಕರು ಮತ್ತು ಎಲ್ಲಾ ರೀತಿಯ ಶೋಷಿತರ ಹಿತ ಕಾಪಾಡಿ ಸಾಮಾಜಿಕ ನ್ಯಾಯ ಒದಗಿಸಲು ಸಾರ್ವಜನಿಕ ಆಡಳಿತದ ಅವಶ್ಯಕತೆ ಇದೆ.
ಉದಾಹರಣೆಗೆ,.
ಬ್ಯಾಂಕಿಂಗ್, ಕೃಷಿ, ಸಾರಿಗೆ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳನ್ನು ಸಂಪೂರ್ಣ ಖಾಸಗೀಕರಣ ಮಾಡಿದರೆ ಏನಾಗಬಹುದು. ಆಗ ಸ್ಪರ್ಧೆ ಏರ್ಪಟ್ಟು ಗುಣಮಟ್ಟ ಹೆಚ್ಚುತ್ತದೆ ನಿಜ. ಆದರೆ ಅದು ದುಬಾರಿಯಾಗುತ್ತದೆ. ಕೇವಲ ಶ್ರೀಮಂತರು ಮಾತ್ರ ಅದರ ಉಪಯೋಗ ಪಡೆಯಲು ಸಾಧ್ಯವಾಗುತ್ತದೆ. ಬಡವರ ಗತಿ ?
ಏಕೆಂದರೆ ಭಾರತ ಇನ್ನೂ ಬಡದೇಶ – ಅಭಿವೃದ್ಧಿ ಹೊಂದುತ್ತಿರುವ ದೇಶ.
ಜಾತಿ ವ್ಯವಸ್ಥೆಯಲ್ಲಿ, ಶಿಕ್ಷಣ ವ್ಯವಸ್ಥೆಯಲ್ಲಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಅಸಮಾನತೆ ಈಗಲೂ ತುಂಬಿ ತುಳುಕುತ್ತಿದೆ. ಖಾಸಗೀಕರಣ ಈ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ರೈಲು, ಜೀವ ವಿಮೆ ಮುಂತಾದ ಕ್ಷೇತ್ರಗಳ ಖಾಸಗೀಕರಣ ಭವಿಷ್ಯದಲ್ಲಿ ಎಲ್ಲಾ ಜಾತಿ ವರ್ಗದ ಬಡವರಿಗೆ ಆತಂಕ ಸೃಷ್ಟಿ ಮಾಡಬಹುದು.
ಕೊನೆಯದಾಗಿ,
ಖಾಸಗೀಕರಣವಾಗಲಿ ಅಥವಾ ಸರ್ಕಾರಿ ಆಡಳಿತ ಆಗಿರಲಿ, ಇದೇ ಜನರೇ ಎರಡೂ ಕಡೆ ಕೆಲಸ ಮಾಡುವವರು. ಒಂದು ಕಡೆ ಸೋಂಬೇರಿ ಭ್ರಷ್ಟರು ಮತ್ತೊಂದು ಕಡೆ ಅತ್ಯುತ್ತಮ ಕುಶಲಗಾರರು, ಇದು ಹೇಗೆ ಸಾಧ್ಯ.
ಅಂದರೆ ಜನರ ಒಟ್ಟು ವ್ಯಕ್ತಿತ್ವ ಉನ್ನತ ಮಟ್ಟಕ್ಕೆ ಏರಿಸಿದರೆ, ಜಾತಿ ರಹಿತ ಸಮ ಸಮಾಜ ನಿರ್ಮಾಣವಾದರೆ ಆಗ ದಕ್ಷತೆ – ಪ್ರಾಮಾಣಿಕತೆ ತಾನೇತಾನಾಗಿ ಬೆಳೆಯುತ್ತದೆ. ಆಗ ಖಾಸಗೀಕರಣ – ಸಾರ್ವಜನಿಕ ಆಡಳಿತ ಎಂಬುದರಲ್ಲಿ ಅಂತಹ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ.
ಅಮೆರಿಕ, ಆಸ್ಟ್ರೇಲಿಯಾ, ಯೂರೋಪಿನ ಕೆಲವು ದೇಶಗಳು, ಜಪಾನ್ ಕೊರಿಯಾ ಯುಎಇ ಇತ್ಯಾದಿ ದೇಶಗಳು ಇದಕ್ಕೆ ಅತ್ಯುತ್ತಮ ಉದಾಹರಣೆ.
.
ಭಾರತವು ಸಹ ಸರ್ಕಾರಿ ಆಡಳಿತದಿಂದ ಬಸವಳಿಯದೆ, ಖಾಸಗೀಕರಣದಿಂದ ನಲುಗದೆ ಜನರ – ಸಮಾಜದ ಒಟ್ಟು ಗುಣಮಟ್ಟ ಉನ್ನತ ಮಟ್ಟಕ್ಕೇರಿ ಒಳ್ಳೆಯ ಜೀವನ ಜನರದಾಗಲಿ ಎಂದು ಆಶಿಸುತ್ತಾ……….
ಇದು ಮೇಲ್ನೋಟದ ಸರಳ ವಿವರಣೆ. ಆಳದಲ್ಲಿ ಮತ್ತಷ್ಟು ವಿಸ್ತೃತ ಚರ್ಚೆಯ ಅವಶ್ಯಕತೆ ಇದೆ.
ವಿವೇಕಾನಂದ. ಹೆಚ್.ಕೆ.
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!