November 24, 2024

Newsnap Kannada

The World at your finger tips!

deepa1

ವಿವಿಧತೆಯಲ್ಲಿ ಏಕತೆ ಅದೇ ನಮ್ಮ ಶ್ರೇಷ್ಠತೆ……

Spread the love

ಬಹುತ್ವ ಭಾರತ್ ಬಲಿಷ್ಠ ಭಾರತ್…….

ಗಣರಾಜ್ಯಗಳ ಒಕ್ಕೂಟ ಈ ನಮ್ಮ ಭಾರತ…………….

ದೇಶದ ವಿವಿಧ ರಾಜ್ಯಗಳ ಪ್ರಾತಿನಿಧಿಕ ಜೀವನಶೈಲಿಯನ್ನು ಸರಳವಾಗಿ ನನ್ನ ಅನುಭವದ ಮಿತಿಯಲ್ಲಿ ವಿವರಿಸುವ ಒಂದು ಸಣ್ಣ ಪ್ರಯತ್ನ………

ಸುರಿವ ಬೆವರು ಟವಲಿನಲ್ಲಿ ಒರೆಸಿಕೊಂಡು ಪಂಚೆ ಎತ್ತಿ ಕಟ್ಟಿ ಸೈಕಲ್ ತುಳಿಯುತ್ತಾ ಸಾಗುವ ತಮಿಳಿನವ…….

ದಟ್ಟ ಮೀಸೆಯ ದಪ್ಪ ಶರೀರದ ಗಡುಸು ಧ್ವನಿಯ ಕುಡುಗೋಲಿಡಿದು ಕುರುಚಲು ದಾರಿಯಲ್ಲಿ ನಡೆಯುತ್ತಿರುವ ತೆಲುಗಿ‌ನವ……..

ಬಿಳಿ ಸೀರೆಯುಟ್ಟು ಕಡುಕಪ್ಪು ತಲೆಗೂದಲ ರಾಶಿಯ, ಹಣೆಗೆ ಕುಂಕುಮ ತಲೆಗೆ ಹೂಮುಡಿದ ಮಾಲೆಯಾಳಿ ಕುಟ್ಟಿ…….

ತಲೆಗೆ ರುಮಾಲು ಸುತ್ತಿ ಜೋಳದ ರಾಶಿಯ ನಡುವೆ ಕುಕ್ಕರಗಾಲಿನಲ್ಲಿ ಕುಳಿತು ಕಳೆ ಕೀಳುತ್ತಿರುವ ಕನ್ನಡಿಗ,…………

ಸೇಬಿನಂತ ಕೆನ್ನೆಯ, ಹಿಮದ ರಾಶಿಯನ್ನೇ ಮೈಮೇಲೆ ಆವರಿಸಿಕೊಂಡಂತ್ತಿರುವ ತಣ್ಣನೆಯ ನಗುವಿನ ಕಾಶ್ಮೀರಿ ಸುಂದರಿ…….

ತಲೆಗೆ ಬಣ್ಣದ ಟೋಪಿ ಹಾಕಿ, ಕೈಯಲ್ಲಿ ಆಕಳು ಹಿಡಿದು ಸಂಜೆಗತ್ತಲಲ್ಲಿ ಬಿರಬಿರನೆ ಹೆಜ್ಜೆಯಾಕುತ್ತಾ ಸಾಗುವ ಗಂಡನ ಹಿಂದೆ, ರಂಗುರಂಗಾದ ಲಂಗ ದಾವಣಿ ಹಾಕಿ, ಕಿವಿ ಮೂಗುಗಳಿಗೆ ಮುತ್ತಿನ ಒಡವೆಗಳನ್ನು ತೊಟ್ಟು ತಲೆಯ ಮೇಲೆ ಸೌದೆ ಹೊತ್ತು ಸಾಗುವ ಈಶಾನ್ಯದ ಸಿಕ್ಕಿಂ ನಾಗಾಲ್ಯಾಂಡ್ ತ್ರಿಪುರ ಮಿಜೋರಾಂ ಅರುಣಾಚಲ ಮೇಘಾಲಯ ಮಣಿಪುರಿಗಳು……..

ಬೆನ್ನಿಗೆ ಮಗುವನ್ನು ಕಟ್ಟಿಕೊಂಡು, ಸೊಂಟಕ್ಕೆ ಚೀಲ ಸಿಕ್ಕಿಸಿಕೊಂಡು ಬೆಳಗಿನ ಚಳಿಯಲ್ಲಿ ಚಹಾ ತೋಟದ ಎಲೆ ಬಿಡಿಸುತ್ತಿರುವ ಅಸ್ಸಾಮಿಗಳು………

ಟ್ರ್ಯಾಕ್ ಸೂಟ್ ಹಾಕಿಕೊಂಡು ಮೈದಾನದಲ್ಲಿ ದೂರ ದೂರ ಓಡುವ, ಅಖಾಡದಲ್ಲಿ ಕಚ್ಚೆ ಕಟ್ಟಿಕೊಂಡು ಕುಸ್ತಿ ಅಭ್ಯಾಸ ಮಾಡುವ, ಹುರಿ ಮೀಸೆಯ ಹರಿಯಾಣಾದವರು……..

ರೋಟಿ ಸುಡುತ್ತಾ ಕೋಳಿ ಬೇಯಿಸುತ್ತಾ ದುಪ್ಪಟದಲ್ಲಿ ಮೂಗನ್ನು ಒರೆಸಿಕೊಳ್ಳುತ್ತಿರುವ ಹೆಂಡತಿಯನ್ನು ಮಾತನಾಡಿಸುತ್ತಾ ಮರಕ್ಕೆ ದಾರದಲ್ಲಿ ಕಟ್ಟಿರುವ ಜೋಕಾಲಿಯಲ್ಲಿ ಮಗುವನ್ನು ತೂಗುತ್ತಿರುವ ರಾಜಸ್ಥಾನಿ……..

ಸುತ್ತಲೂ ಹಾಕಿರುವ ಬೆಂಕಿಯ ಕೆಂಡದಲ್ಲಿ ಮೈ ಬಿಸಿ ಮಾಡಿಕೊಳ್ಳುತ್ತಾ ಬೀಡಿ ಸೇದುತ್ತಾ ಹಾದಿಯಲ್ಲಿ ಹೋಗುವವರಿಗೆಲ್ಲಾ ಜೈ ಶ್ರೀರಾಮ್ ಹೇಳುತ್ತಾ ತನ್ನ ಮಾರಾಟದ ಬೊಂಬೆಗಳನ್ನು ಗಾಡಿಗೆ ಕಟ್ಟುತ್ತಿರುವ ಉತ್ತರ ಪ್ರದೇಶದವ………

ವಿಧವಿಧವಾದ ಬಟ್ಟೆಗಳನ್ನು ಒಪ್ಪವಾಗಿ ಜೋಡಿಸಲು ಸಹಾಯಕಿಗೆ ಹೇಳುತ್ತಾ ಕ್ಯಾಷ್ ಕೌಂಟರಿನಲ್ಲಿ ಹಣದ ಪೆಟ್ಟಿಗೆಗೆ ಪೂಜೆ ಮಾಡುತ್ತಾ ಭಕ್ತಿಯಿಂದ ಕೈ ಮುಗಿಯುತ್ತಿರುವ ಗುಜರಾತಿನವ………

ಎತ್ತಿನ ಗಾಡಿಯಲ್ಲಿ ಕಬ್ಬಿನ ರಾಶಿಯನ್ನು ಕಟ್ಟಿ ಸುಡು ಬಿಸಿಲಿನಲ್ಲಿ ದನಗಳನ್ನು ಚಾವಟಿಯಿಂದ ಹೊಡೆಯುತ್ತಾ ಕಾರ್ಖಾನೆಗೆ ಹೋಗುತ್ತಿರುವ ಮರಾಠಿಯವ……

ಸಿಹಿ ತಿನಿಸುಗಳನ್ನು ಲಗುಬುಗೆಯಿಂದ ಬಂದ ಗಿರಾಕಿಗಳಿಗೆ ಕೊಡುತ್ತಾ ಇನ್ನೊಂದಿಷ್ಟು ಚಂಪಾಕಲಿ ರಸಗುಲ್ಲಾಗಳನ್ನು ತಯಾರಿ ಮಾಡುವಂತೆ ಜೋರಾಗಿ ಕೂಗುತ್ತಾ ಇರುವ ಬೆಂಗಾಲಿ ಬಾಬು…….

ಸೂಟು ಬೂಟು ತೊಟ್ಟು ವಿದೇಶಿ ಪ್ರವಾಸಿಗರಿಗೆ ಪ್ರಖ್ಯಾತ ಮತ್ತು ಐತಿಹಾಸಿಕ ಚರ್ಚುಗಳು ಬೀಚುಗಳು ಹೋಟೆಲುಗಳ ಬಗ್ಗೆ ಮಾಹಿತಿ ನೀಡುತ್ತಿರುವ ಗೋವಾದ ಪ್ರವಾಸಿ ಮಾರ್ಗದರ್ಶಕ………..

ಸೂರ್ಯಾಸ್ತದ ಸಮಯದಲ್ಲಿ ಮೀನು ಹಿಡಿಯುವ ದೋಣಿಯೊಂದಿಗೆ ದಡ ಸೇರಿ ಹೆಂಡತಿ ಮಕ್ಕಳೊಂದಿಗೆ ಅಂದು ಬಲೆಗೆ ಬಿದ್ದ ವಿವಿಧ ಜಾತಿಯ ಮೀನುಗಳನ್ನು ಆರಿಸಿ ಚೀಲಕ್ಕೆ ತುಂಬುತ್ತಿರುವ ಒರಿಸ್ಸಾದವ…….

ಆಗ ತಾನೆ ಬೆಳಗಿನ ನಮಾಜು ಮುಗಿಸಿ ತನ್ನ ಸ್ವಂತದ ಟೆಂಪೋ ಟ್ರಾವಲರ್ ಗಾಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಒಪ್ಪಂದದ ಪ್ರಕಾರ ಆಗ್ರಾದ ತಾಜ್ ಮಹಲ್ ತೋರಿಸಲು ಗಡಿಬಿಡಿಯಿಂದ ಗಾಡಿ ಒರೆಸುತ್ತಿರುವ ದೆಹಲಿಯವ………

ತಮ್ಮ ಜನರ ಮೇಲೆ ಆಗಿಂದಾಗ್ಗೆ ನಡೆಯುತ್ತಿರು ದೌರ್ಜನ್ಯಕ್ಕಾಗಿ ದುಷ್ಟ ಭೂ ಮಾಲೀಕರ ಮೇಲೆ ಹಲ್ಲೆ ಮಾಡಲು ಒಂದಷ್ಟು ಯುವಕರಿಗೆ ಪ್ರಚೋದನೆ ಕೊಡುತ್ತಿರುವ ಛತ್ತೀಸ್ಗಢದವ……..

ಕೃಪಾಣ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಭಾಂಗ್ರಾ ನೃತ್ಯ ಮಾಡುತ್ತಾ ಅಮೃತಸರದ ಸ್ವರ್ಣ ದೇಗುಲದ ಮುಂದೆ ಜನರನ್ನು ರಂಜಿಸುತ್ತಿರುವ ಪಂಜಾಬಿ…..

ಹೊಸ ಮಾದರಿಯ ಬಂದೂಕುಗಳನ್ನು ಪರಿಶೀಲಿಸುತ್ತಾ ಅದನ್ನು ಕೊಳ್ಳಲು ಬರುವ ಗಿರಾಕಿಗಳ ಏಜೆಂಟ್ ಗಳಿಗೆ ಮೊಬೈಲ್ ನಲ್ಲಿ ಅದರ ಮಾಹಿತಿ ಕೊಡುತ್ತಾ ಖುಷಿಯಿಂದಿರುವ ಜಾರ್ಖಂಡ್ ನವ….

ಕಾಡಿನ ಗಾಂಭೀರ್ಯ ಸಮುದ್ರದ ರೌದ್ರೌವತೆಯ ಮಡಿಲಲ್ಲಿ ತನ್ನದೇ ಬದುಕು ಸಾಗಿಸುತ್ತಿರುವ ಅಂಡಮಾನ್ ನಿಕೋಬಾರ್ ದ್ವೀಪಗಳವರು……..

ಅರವಿಂದ ಆಶ್ರಮದ ನೀರವ ಮೌನದಲ್ಲಿ ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತಾ ವಿಶ್ರಾಂತ ಜೀವನ ನಡೆಸುತ್ತಿರುವ ಪುದುಚೇರಿಯವ…….

ರಾಜಕೀಯದ ತವಕ ತಲ್ಲಣ ವಂಚನೆಗಳನ್ನು ಮೆಲುಕು ಹಾಕುತ್ತಾ ತನ್ನ ಭವಿಷ್ಯದ ಬಗ್ಗೆ ಚಿಂತಾಕ್ರಾಂತನಾಗಿ ಕೆಲಸ ಹುಡುಕುತ್ತಾ ಬೇರೆ ರಾಜ್ಯಕ್ಕೆ ವಲಸೆ ಹೋಗಲು ರೈಲು ಗಾಡಿ ಹತ್ತುತ್ತಿರುವ ಬಿಹಾರಿ……

ಸೌಂದರ್ಯವೇ ಮೈವೆತ್ತಂತ ಗಿರಿ ಶಿಖರಗಳ – ಯಾತ್ರಾ ಸ್ಥಳಗಳ ನೆಲದಲ್ಲಿ ವಾತಾವರಣದ ಏರಿಳಿತಗಳ ನಡುವೆ ನೆಮ್ಮದಿಯಿ ಬದುಕಿಗೆ ತಡಕಾಡುತ್ತಿರುವ ಉತ್ತರ ಕಾಂಡದವ……..

ಎಷ್ಟೊಂದು ವಿಸ್ಮಯಗಳ ಅದ್ಭುತ ಅವರ್ಣನೀಯ ವೈವಿಧ್ಯಮಯ ದೇಶ ನಮ್ಮ ಈ ಭಾರತ……….

ಕೇವಲ ಚುನಾವಣಾ ರಾಜಕೀಯದ ಅಧಿಕಾರಕ್ಕಾಗಿ ಇದನ್ನು ಹಾಳು ಮಾಡದೆ ದೇಶದ ಘನತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು.

ನೆನಪಿಡಿ…..

ಗಣರಾಜ್ಯೋತ್ಸವ ಸನಿಹದಲ್ಲಿ……..

ವಿವಿಧತೆಯಲ್ಲಿ ಏಕತೆ ಅದೇ ನಮ್ಮ ಶ್ರೇಷ್ಠತೆ……

ವಿವೇಕಾನಂದ. ಹೆಚ್. ಕೆ

Copyright © All rights reserved Newsnap | Newsever by AF themes.
error: Content is protected !!