November 10, 2024

Newsnap Kannada

The World at your finger tips!

yedi

ಸುರೇಶ್ ಅಂಗಡಿ ಸ್ಮಾರಕ ನಿರ್ಮಾಣ: ಸಿಎಂ ಯಡಿಯೂರಪ್ಪ ಭರವಸೆ

Spread the love

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ದಿ.ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿ ಇರುವ ಸುರೇಶ್ ಅಂಗಡಿ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ದಿ.ಸುರೇಶ್ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ‌ ಸಲ್ಲಿಸಿದರು.

ನಂತರ ಕುಟುಂಬದ ಸದಸ್ಯರ ಜತೆ ಮಾತನಾಡಿದ ಸಿಎಂ ದಿ.ಸುರೇಶ್ ಅಂಗಡಿ ಸಜ್ಜನಿಕೆಯ ನಡವಳಿಕೆಯನ್ನು ಸ್ಮರಿಸಿದರು.

ದಿ.ಸುರೇಶ್ ಅಂಗಡಿ ತಾಯಿ ಸೋಮವ್ವ ಕೈಹಿಡಿದು ಕೆಲಹೊತ್ತು ಭಾವುಕರಾದ ಮುಖ್ಯಮಂತ್ರಿಗಳು, ಧೈರ್ಯದಿಂದ ಇರುವಂತೆ ತಿಳಿಸಿದರು.

ದೇವರು ಈ ರೀತಿ ಅನ್ಯಾಯ ಮಾಡಬಾರದಿತ್ತು ಎಂದು ದುಃಖ ವ್ಯಕ್ತಪಡಿಸಿದ ಸಿಎಂ ಸುರೇಶ್ ಅಂಗಡಿ ಆಸ್ಪತ್ರೆಯಲ್ಲಿ ಇದ್ದಾಗ ಆರೋಗ್ಯವಾಗಿ ಇದ್ದೀನಿ ಎಂದು ತಿಳಿಸಿದ್ದನ್ನು ನೆನಪಿಸಿಕೊಂಡರು.

ದೆಹಲಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಸೂಚನೆ:

ದೆಹಲಿಯ ರುದ್ರಭೂಮಿಯ ಅಭಿವೃದ್ಧಿಯ ಜತೆಗೆ ಅಲ್ಲಿ ದಿ.ಸುರೇಶ್ ಅಂಗಡಿ ಅವರ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಸುರೇಶ್ ಅಂಗಡಿ ಅವರ ಸಂಬಂಧಿಕರೂ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್, ಬಾಕಿ ಉಳಿದಿದ್ದ ರೈಲ್ವೆ ಇಲಾಖೆಯ ಬಹುತೇಕ ಯೋಜನೆಗಳಿಗೆ ಅಂಗಡಿ ಚಾಲನೆ ನೀಡಿದ್ದರು ಎಂದು ನೆನಪಿಸಿಕೊಂಡರು.

yedi 1

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕದ ವಿವಿಧ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ತೀವ್ರ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಬಳಿಕ ಅಂಗಡಿ ಅವರು ಅತ್ಯಂತ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಕೂಡ ಸುರೇಶ್ ಅಂಗಡಿ ಅವರೊಂದಿಗಿನ ಒಡನಾಟ ಸ್ಮರಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಪತ್ನಿ ಮಂಗಲಾ ಸುರೇಶ್ ಅಂಗಡಿ, ಮಕ್ಕಳಾದ ಶ್ರದ್ಧಾ ಹಾಗೂ ಸ್ಫೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!