ರಂಗಭೂಮಿ, ಹಿರಿತೆರೆ, ಕಿರುತೆರೆ ನಟ ಜೂನಿಯರ್ ‘ರಾಜ್‌ಕುಮಾರ್’ ಎಂದೇ ಪ್ರಖ್ಯಾತರಾದ ಕೊಡಗನೂರಿನ ಜಯಕುಮಾರ್ ಹೃದಯಾಘಾತದಿಂದ ದಾವಣಗೆರೆಯಲ್ಲಿ ನಿಧನರಾದರು.
ಸುಮಾರು ನಾಲ್ಕೂವರೆ ದಶಕದಿಂದ ವೃತ್ತಿ ರಂಗಭೂಮಿ ಹಾಗೂ ಸಿನಿಮಾ, ಧಾರಾವಾಹಿಗಳ ನಂಟನ್ನು ಇವರು ಹೊಂದಿದ್ದಾರೆ. ಅವರ ಹುಟ್ಟೂರು ದಾವಣಗೆರೆಯ ಕೊಡಗನೂರು.
‘ಜಯಕುಮಾರ್ , ಕುಮಾರಸ್ವಾಮಿ ಕಂಪನಿ, ಗುಬ್ಬಿ ಕಂಪನಿ ಮುಂತಾದೆಡೆಗಳಲ್ಲಿ ಪಳಗಿದ ಪ್ರತಿಭಾವಂತ ನಟ. ಇವರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ಯಾವುದೇ ಪಾತ್ರ ಕೊಟ್ಟರೂ ಮಾಡುತ್ತಿದ್ದರು. ಪ್ರತಿಯೊಂದು ನಾಟಕದಲ್ಲೂ ಇವರ ಅಭಿನಯದ ವೈಖರಿ, ಆಂಗಿಕ ಭಾಷೆ, ಧ್ವನಿ ಏರಿಳಿತ, ಬೇರೇಯೇ ಇರುತ್ತಿದ್ದವು. ಇವರು ಪ್ರತಿಯೊಂದು ಪಾತ್ರದಲ್ಲೂ ತದ್ಯಾತ್ಮ ಹೊಂದಿ ಪಾತ್ರವೇ ತಾವಾಗುತ್ತಿದ್ದರು’ ಎನ್ನುತ್ತಾರೆ ರಂಗಭೂಮಿ ವಿಮರ್ಶಕ ಗುಡಿಹಳ್ಳಿ ನಾಗರಾಜ.
‘ರಾಜಕುಮಾರ್ ಅವರನ್ನು ಜಯಕುಮಾರ್ ಅನುಕರಣೆ ಮಾಡುತ್ತಿದ್ದರಾದರೂ ಅದು ಅವರ ಅಭಿನಯದಲ್ಲಿ ಕಂಡು ಬರುತ್ತಿರಲಿಲ್ಲ. ತಮ್ಮ ಅಭಿನಯದಲ್ಲಿ ಸ್ವಂತಿಕೆ ಉಳಿಸಿಕೊಂಡೇ ಕೆಲಸ ಮಾಡಿದವರು ಅವರು. ಪ್ರಸ್ತುತ ಕಂಪನಿ ನಾಟಕಗಳೆಂದರೆ ಎಲ್ಲರೂ ಮೂಗು ಮುರಿಯುತ್ತಾರೆ. ಅದರ ಅಶ್ಲೀಲ ಸಂಭಾಷಣೆ, ಜೊಳ್ಳು ಕಥಾಹಂದರದಿಂದಾಗಿ ಹವ್ಯಾಸಿಗಳು, ರಂಗಭೂಮಿ ವಿಶ್ಲೇಷಕರು ವೃತ್ತಿರಂಗಭೂಮಿಯಲ್ಲಿನ ಆಸಕ್ತಿ ಕಳೆದುಕೊಂಡಿದ್ದಾರೆ. ಆದರೆ ಇವರು ಅದೇ ವೃತ್ತಿರಂಗಭೂಮಿಯಿಂದ ಅರಳಿದ ಹೂವು’ ಎಂದು ಅಭಿಪ್ರಾಯ ಪಟ್ಟರು.
ಕಲಾಸೇವೆಗೆ ಅನೇಕ ಪ್ರಶಸ್ತಿಗಳು ದೊರಕಿವೆ. ಸುವರ್ಣ ಅಕಾಡೆಮಿ ಪ್ರಶಸ್ತಿ, ವರದಪ್ಪ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಸಂದ ಪ್ರಶಸ್ತಿಗಳು.
ಜಯಕುಮಾರ್ ಅವರ ಕೆಲವು ಪ್ರಮುಖ ನಾಟಕಗಳೆಂದರೆ, ಪೊಲೀಸನ ಮಗಳು, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಹಾತ್ಮೆ, ಮದಕರಿನಾಯಕ, ಮುದುಕನ ಮದುವೆ, ಟಿಪ್ಪು ಸುಲ್ತಾನ, ಗೋಮುಖ ವ್ಯಾಘ್ರ, ರಾಷ್ಟ್ರವೀರ ಎಚ್ಚಮ್ಮನಾಯಕ. ತಾಯಿಗೊಬ್ಬ ಕರ್ಣ, ಸತ್ಯನಾರಾಯಣ ಪೂಜಾಫಲ, ಸಾಂಗ್ಲಿಯಾನ-3, ಜನುಮದ ಜೋಡಿ, ಕಿಟ್ಟಿ, ಜಾಕಿ, ರಾಜ, ತಾಯಿ, ಶಬರಿ ಇವರ ಅಭಿನಯದ ಕೆಲವು ಚಲನಚಿತ್ರಗಳು. ಇವರು 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಂಕ್ರಾಂತಿ, ಮಹಾಮಾಯೆ, ಅಪ್ಪ, ಕೆಳದಿ ಚನ್ನಮ್ಮ, ಭಾಗೀರಥಿ, ಶ್ರೀ ರಾಘವೇಂದ್ರ ವೈಭವ, ಪಾ.ಪ.ಪಾಂಡು ಇವರ ನಟನೆಯ ಕೆಲವು ಗಮನಾರ್ಹ ಧಾರಾವಾಹಿಗಳು.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )