ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಬೇಕು-ನಿರಂಜನಾನಂದಪುರಿ ಶ್ರೀ

Team Newsnap
1 Min Read

ಸಮಗ್ರ ಕರ್ನಾಟಕದ ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಬೇಕು ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಗಳು ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಯಾವ ರೀತಿ‌ ಹೋರಾಟ ನಡೆಸಬೇಕು ಎಂದು ಅಕ್ಟೋಬರ್ 11 ರಂದು ಅರಮನೆ ಮೈದಾನದಲ್ಲಿ ನಮ್ಮ ಸಮುದಾಯದ ಎಲ್ಲ ಜನಪ್ರತಿನಿಧಿಗಳ ಸಭೆ ನಡೆಸಲಾಗುವುದು ಎಂದರು.

ನಾವು ವಾಕ್ಮೀಕಿ‌ ಸಮುದಾಯದ ಮೀಸಲಾತಿಗೆ ತೊಂದರೆಯನ್ನುಂಟು‌ ಮಾಡದೇ ಎಸ್‌‌ಟಿ ಪಂಗಡ ಸೇರಲು ಹೋರಾಟ ನಡೆಸಲಿದ್ದೇವೆ. ಮೂಲತಃವಾಗಿ ಕುರುಬ ಸಮುದಾಯವು ಬುಡಕಟ್ಟು ಜನಾಂಗದ ಮೂಲಕ ಗುರುತಿಸಿಕೊಂಡಿದೆ. ನಾವು ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡುವುದಿಲ್ಲ. ನಾವು ಶೇಕಡ 3 ರಿಂದ 7ಕ್ಕೆ ಮೀಸಲಾತಿಗೆ ಬೇಡಿಕೆ ಇಟ್ಟಿದ್ದೇವೆ. ನಮ್ಮ ಸಮುದಾಯದ ಮೀಸಲಾತಿಯೊಂದಿಗೆ ಎಸ್‌ಟಿ ಸೇರಬಯುಸುತ್ತೇವೆಯೇ ಹೊರತು ಎಸ್‌ ಸಿಗೆ ಹೋಗಿ ಅಲ್ಲಿ ವಾಲ್ಮೀಕಿ ಸಮುದಾಯಕ್ಕೆ ತೊಂದರೆ ನೀಡುವದಿಲ್ಲ’ ಎಂದರು.

ಹೋರಾಟದ ಕುರಿತು ಮಾತನಾಡಿದ ಗ್ರಾಮೀಣಾಭಿವೃದ್ದಿ ಸಚಿವ ಕೆ‌.ಎಸ್. ಈಶ್ವರಪ್ಪ ‘ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೇಳುವ ಅಂಶಗಳನ್ನು ಕೊಡಲು ನಾವು ತಯಾರು‌. ಕುರುಬ ಎಸ್‌ಟಿ ವ್ಯವಸ್ಥೆ ಆಗಬೇಕು ಎನ್ನುವ ಅಪೇಕ್ಷೆ ಇದೆ. ಇನ್ನೂ ಕೆಲ ಹಿಂದುಳಿದ ವರ್ಗದವರು ನಮ್ಮ ಬಳಿ ಬಂದು ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ನಾವು ಅವರಿಗೂ ಬೆಂಬಲ‌ ನೀಡಲು ಸಿದ್ಧ’ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡ ಹೆಚ್.ಎಂ. ರೇವಣ್ಣ ‘ಇದು ಹಿಂದಿನಿಂದಲೂ ನಡೆದು ಬಂದಿರುವ ಹೋರಾಟ. ಈಶ್ವರಪ್ಪ ಅವರ ನೇತೃತ್ವದಲ್ಲಿ‌ ನಾವು ಹೋರಾಟ ನಡೆಸಲಿದ್ದೇವೆ. ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದೆ‌. ಪಕ್ಷಾತೀತವಾಗಿ‌ ನಾವು ಹೋರಾಟ ನಡೆಸಲಿದ್ದೇವೆ’ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಈಶ್ವರಾನಂದಪುರಿ ಮಹಾಸ್ವಾಮಿಗಳು, ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು, ಬೆಳಗಾವಿಯ ಅಮರೇಶ್ವರ ಮಹಾಸ್ವಾಮಿಗಳು, ಅಹಿಂದ ನಾಯಕ ಕೆ. ಮುಕುಡಪ್ಪನವರು, ರಘುನಾಥರಾವ್ ಮಲಕಾಪೂರೆ ಮುಂತಾದವರು ಉಪಸ್ಥಿತರಿದ್ದರು.

Share This Article
Leave a comment