ವೈವಿಧ್ಯಮಯ ಭಾರತದಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾಗಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸರಿದ ನಂತರವೂ ಈಗಲೂ ಆ ವಿಷಯದಲ್ಲಿ ಗಲಭೆಗಳು ಸಂಭವಿಸುತ್ತದೆ ಎಂದರೆ ನಮ್ಮ ಸಮಾಜ ಇನ್ನೂ ಅನಾಗರಿಕ ಸ್ಥಿತಿಯಲ್ಲಿಯೇ ಇದೆ ಎಂಬುದರಲ್ಲಿ ಸಂಶಯವಿಲ್ಲ.
ಸರಿ ತಪ್ಪುಗಳು – ಕುಂದು ಕೊರತೆಗಳ ನಡುವೆಯೂ ಈ ಅಧ್ಯಾಯ ಈಗಾಗಲೇ ಮುಗಿದಿದೆ. ಒಂದು ಪೀಳಿಗೆ ಇದನ್ನು ದಾಟಿದೆ. ಕೆಲವೇ ಕೆಲವು ಗಡಿ ಭಾಗಗಳಲ್ಲಿ ಮಾತ್ರ ಒಂದಷ್ಟು ಅನ್ಯಾಯ ಅಥವಾ ಭಾಷಾ ತೊಂದರೆ ಆಗಿರುವುದು ನಿಜ. ಅದು ಸಹಜ ಕೂಡ. ನಮ್ಮ ಪೂರ್ವಿಕರ ತಾಯಿ ಭಾಷೆ ಮಾತನಾಡುತ್ತಾ ಬೆಳೆದ ನಾವುಗಳು ಇದ್ದಕ್ಕಿದ್ದಂತೆ ಆ ಪ್ರದೇಶದ ಗಡಿಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಬೇರೆ ಭಾಷೆಯ ರಾಜ್ಯವಾಗಿ ಘೋಷಿಸಿದಾಗ ಒಂದಷ್ಟು ಬೇಸರವಾಗುತ್ತದೆ.
ಮುಖ್ಯವಾಗಿ ಕರ್ನಾಟಕದ ಗಡಿ ಪ್ರದೇಶದ ಬಗ್ಗೆ ಮಾತನಾಡುವುದಾದರೆ ಮಡಕಶಿರ – ಮಿಡಗೇಶಿ – ಪಾವಗಡ ಭಾಗಗಳಲ್ಲಿ ಕನ್ನಡ ಮತ್ತು ತೆಲುಗು,
ಹೊಸೂರು – ಅತ್ತಿಬೆಲೆ ಭಾಗಗಳಲ್ಲಿ ಕನ್ನಡ ಮತ್ತು ತಮಿಳು, ಕಾಸರಗೋಡು ಭಾಗದಲ್ಲಿ ಕನ್ನಡ ಮತ್ತು ಮಲೆಯಾಳಂ, ನಿಪ್ಪಾಣಿ ಖಾನಾಪುರ ಸೊಲ್ಲಾಪುರ ಭಾಗಗಳಲ್ಲಿ ಕನ್ನಡ ಮತ್ತು ಮರಾಠಿ ಭಾಷೆಗಳ ವಿಷಯದಲ್ಲಿ ಸ್ವಲ್ಪ ಅವ್ಯವಸ್ಥೆ ಅಥವಾ ಗೊಂದಲ ಇದೆ.
ಆಗಿನ ಭಾಷಾವಾರು ಪ್ರಾಂತಗಳ ರಚನೆಯ ಮಾನದಂಡಗಳ ಆಧಾರದ ಮೇಲೆ ಬೃಹತ್ ದೇಶವನ್ನು ವಿಭಜಿಸುವಾಗ ಸಹಜವಾಗಿ ಈ ಕೊರತೆಗಳು ನಿರೀಕ್ಷಿತವೇ. ತೀರಾ ಅನ್ಯಾಯ ಎಂದು ಭಾವಿಸಿದಾಗ ಭಾರತದ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವ ಅವಕಾಶ ಸಹ ಇದೆ. ಅದೇ ರೀತಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಈ ವಿವಾದ ನ್ಯಾಯಲಯದಲ್ಲಿದೆ ಮತ್ತು ಎರಡೂ ಕಡೆ ಪ್ರಜಾಪ್ರಭುತ್ವ ವ್ಯವಸ್ಥೆಯ ಜವಾಬ್ದಾರಿ ಸರ್ಕಾರಗಳಿವೆ ಹಾಗು ಬಲಿಷ್ಠ ಸಂವಿಧಾನ ಸಹ ಇದೆ. ಜೊತೆಗೆ ಎರಡೂ ರಾಜ್ಯಗಳು ಒಪ್ಪಿಕೊಂಡ ಮಹಾಜನ್ ವರದಿ ಈ ವಿವಾದವನ್ನು ಬಹುತೇಕ ಬಗೆಹರಿಸಿದೆ.
ಇದರ ನಂತರವೂ ಈ ಹುಚ್ಚಾಟಗಳು ಮುಂದುವರೆದರೆ ಇದನ್ನು ನಾಗರಿಕ ಸಮಾಜ ಎಂದು ಹೇಗೆ ಹೇಳುವುದು. ಒಂದೇ ದೇಶದ ಎರಡು ರಾಜ್ಯಗಳ ಒಂದು ಸಣ್ಣ ಗಡಿ ವಿವಾದ ಈ ಹಂತಕ್ಕೆ ತಲುಪಿದರೆ ಹೇಗೆ. ಅದೂ ಈ ರಾಜ್ಯಗಳು ಸೇರಿ ಇಡೀ ದೇಶದಲ್ಲಿ ಕೊರೋನಾ ಓಮಿಕ್ರಾನ್ ನಂತ ಸಾಂಕ್ರಾಮಿಕ ರೋಗಗಳು ಜನರನ್ನು ಅವರ ಬದುಕನ್ನು ಅತ್ಯಂತ ಸಂಕಷ್ಟಕ್ಕೆ ಗುರಿಮಾಡಿರುವಾಗ ಅದನ್ನು ನಿಭಾಯಿಸಲು ಎಲ್ಲಾ ಶ್ರಮ ಅಧಿಕಾರ ಸಂಪನ್ಮೂಲಗಳನ್ನು ಬಳಸಬೇಕಾದ ಸಮಯದಲ್ಲಿ ಈ ಕಪಿಚೇಷ್ಟೆಗಳನ್ನು ಹೇಗೆ ಸಹಿಸುವುದು.
ಆ ದೃಷ್ಟಿಯಿಂದ ನೋಡುವುದಾದರೆ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ರಾಜಕೀಯ ಪಕ್ಷ ಅಥವಾ ಸಂಘಟನೆಯ ಅಸ್ತಿತ್ವವೇ ಪ್ರಶ್ನಾರ್ಹ. ಅದು ಈ ನೆಲದ ಕಾನೂನು ಮತ್ತು ನೈತಿಕ ಮೌಲ್ಯಗಳಿಗೆ ವಿರುದ್ದವಾದುದು. ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಏನು ಕೆಲಸ.
ಕರ್ನಾಟಕ ಮತ್ತು ಮಹಾರಾಷ್ಟ್ರ ಎಂಬ ಪ್ರದೇಶಗಳ ವಿಭಜನೆ ಸ್ಪಷ್ಟವಾಗಿ ಆದ ಮೇಲೆ ವಿವಾದದ ಅವಶ್ಯಕತೆಯೇ ಇಲ್ಲ. ಒಂದು ವೇಳೆ ಇಲ್ಲಿರುವ ಮರಾಠಿ ಭಾಷಿಕರಿಗೆ ತಮ್ಮ ಭಾಷೆಯೇ ಬದುಕಿಗೆ ಅತಿಮುಖ್ಯ ಎನ್ನುವುದಾದರೆ ಅವರು ಮಹಾರಾಷ್ಟ್ರಕ್ಕೆ ಹೋಗಬೇಕು. ಹಾಗೆಯೇ ದೇಶದ ಯಾವುದೇ ಭಾಗದ ಜನ ಅಲ್ಲಿನ ಸ್ಥಳೀಯ ಭಾಷೆ ಸಂಸ್ಕೃತಿಗೆ ಒಗ್ಗಿಕೊಳ್ಳಲು ಸಾಧ್ಯವಾಗದಿದ್ದರೆ ತಾವು ಇಚ್ಚಿಸಿದ ಜಾಗಕ್ಕೆ ಹೋಗುವ ಸ್ವಾತಂತ್ರ್ಯವಿದೆ. ಇದು ಕಾಸರಗೋಡು ಕನ್ನಡಿಗರಿಗೂ ಅನ್ವಯ. ಅದು ಬಿಟ್ಟು ರಾಜ್ಯಗಳ ಗಡಿಗಳನ್ನೇ ಮತ್ತೆ ಮಾರ್ಪಡಿಸುವುದು ಜೇನು ಗೂಡಿಗೆ ಕಲ್ಲು ಹೊಡೆದಂತೆ ಆಗುತ್ತದೆ. ಭಾವನಾತ್ಮಕವಾಗಿ ಇತರ ಬೇರೆ ರಾಜ್ಯಗಳ ಜನರು ಸಹ ತಮ್ಮ ಅನುಕೂಲಕ್ಕೆ ತಕ್ಕಂತೆ ಕೆರಳಬಹುದು.
ಬಾವುಟ ಸುಡುವುದು, ಮೂರ್ತಿಗಳನ್ನು ವಿರೂಪಗೊಳಿಸುವುದು, ಚಿತ್ರಗಳಿಗೆ ಚಪ್ಪಲಿಯಲ್ಲಿ ಹೊಡೆಯುವುದು ತೀರಾ ಕೆಳಹಂತದ ನಡವಳಿಕೆ. ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು, ಮುಖ್ಯ ನ್ಯಾಯಾಧೀಶರು ಸೇರಿ ಅತ್ಯಂತ ಮಹತ್ವದ ಜವಾಬ್ದಾರಿ ಹೊಂದಿರುವ ಜನರು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವಾಗ ಈ ಪುಂಡಾಟಗಳಿಗೆ ಅವಕಾಶವೇ ಇರಬಾರದು.
ನಮ್ಮ ಶ್ರಮ ಪ್ರಗತಿಯ ಕಡೆಗೆ ಇರಬೇಕೆ ಹೊರತು ವಿನಾಶದ ಕಡೆಗಲ್ಲ. ಇಷ್ಟು ಸಣ್ಣ ವಿಷಯ ಅಷ್ಟು ದೊಡ್ಡದಾಗಿ ದುಷ್ಪರಿಣಾಮ ಬೀರುವುದಾದರೆ ಸರ್ಕಾರ ಎಂಬ ವ್ಯವಸ್ಥೆಗೆ ಬೆಲೆಯೇ ಇರುವುದಿಲ್ಲ.
ನಿನ್ನೆ ಎಂಬುದು ಮುಗಿದ ಅಧ್ಯಾಯ, ನಾಳೆ ಎಂಬುದು ನಮ್ಮ ಕೈಯಲ್ಲಿ ಈಗ ಇಲ್ಲ. ಇಂದು ಎಂಬುದು ಮಾತ್ರ ನಮ್ಮ ಬದುಕಿನ ವಾಸ್ತವ ಸತ್ಯ. ಅದನ್ನು ಸರಿಯಾಗಿ ಅನುಭವಿಸುವ ದಿಕ್ಕಿನಲ್ಲಿ ನಾವು ಯೋಚಿಸಬೇಕು. ಕೆಲವೇ ಪುಂಡ ಪೋಕರಿಗಳು ಇಡೀ ನಾಡಿನ ನೆಮ್ಮದಿ ಕೆಡಿಸುವುಷ್ಟು ಬಲಶಾಲಿಗಳಾಗಲು ನಮ್ಮ ಕಾನೂನು ಸುವ್ಯವಸ್ಥೆ ಮತ್ತು ಪ್ರಬುದ್ಧ ಮನಸ್ಸುಗಳು ಅವಕಾಶ ಕೊಡಬಾರದು. ದುಷ್ಟ ಸ್ವಾರ್ಥಿ ಜನಗಳಿಗೆ ನಮ್ಮ ಮನಸ್ಸಿನಲ್ಲಿ ಹೆಚ್ಚು ಜಾಗ ಆಕ್ರಮಿಸಲು ಬಿಡದೆ ಒಳ್ಳೆಯ ವಿಷಯಗಳಿಗೆ ಹೆಚ್ಚು ಅವಕಾಶ ಕಲ್ಪಿಸೋಣ ಎಂದು ಮನವಿ ಮಾಡಿಕೊಳ್ಳುತ್ತಾ…..
ವಿವೇಕಾನಂದ.ಹೆಚ್. ಕೆ
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!