ವಿಸ್ಮಯ ಮೂಡಿಸಿದ ಮೂಕಿಚಿತ್ರಗಳ ಪ್ರದರ್ಶನ
• ಅ.ನಾ.ಪ್ರಹ್ಲಾದರಾವ್
`ಮನುಷ್ಯ ಸಾಂಸ್ಕೃತಿಕವಾಗಿ ಚೈತನ್ಯಶೀಲನಾದ ದಿನದಿಂದ ನಾಟಕ, ದೊಡ್ಡಾಟ, ಯಕ್ಷಗಾನ, ಹರಿಕಥೆ, ಹಾಡು, ಸಂಗೀತ ಮುಂತಾದ ನಾನಾ ರೂಪಗಳಿಂದ ಮನರಂಜಿಸಿಕೊಳ್ಳಲಾರAಭಿಸಿದ. ಮೊದಮೊದಲಲ್ಲಿ ದೇವರು, ಭಕ್ತಿ, ಮೋಕ್ಷಕ್ಕೆ ಮಾತ್ರ ಸಂಬಂಧಿಸಿದ್ದ ಈ ಮಾಧ್ಯಮ ಕಾಲಕ್ರಮೇಣ ರೂಪಾಂತರಹೊಂದಿತು. ದಿನಕಳೆದಂತೆ ರಂಗಭೂಮಿ, ಪರದೆಯಂತಹ ಕಲ್ಪನೆಗಳನ್ನು ಸಾಕಾರಗೊಳಿಸಿದ ಮನುಷ್ಯ ಈ ಕಲಾಮಾಧ್ಯಮಕ್ಕೆ ಮತ್ತಷ್ಟು ರಂಗನ್ನು ತಂದುಕೊಟ್ಟ. ನಾಟಕ, ಸಂಗೀತ ಇವಿಷ್ಟೇ ಮನರಂಜನೆಯ ಮಾಧ್ಯಮವಾಗಿದ್ದಾಗ ೧೮ನೇ ಶತಮಾನದ ಅಂತ್ಯದಲ್ಲಿ ವಿಶ್ವದಲ್ಲಿ ಒಂದು ಅಚ್ಚರಿ ಘಟಿಸಿತು. ೧೮೯೫ರ ನವೆೆಂಬರ್ ೨೮ರಂದು ಪ್ಯಾರಿಸ್‌ನಲ್ಲಿ ಲುಮಿನರ್ ಸಹೋದರರು ಚಲನಚಿತ್ರವೆಂಬ ಅದ್ಭುತ, ರೋಮಾಂಚಂಕತೆಯನ್ನು ತೆರೆದಿಟ್ಟರು. ಕೇವಲ ಆರು ತಿಂಗಳಲ್ಲಿಯೇ ಈ ವಿಸ್ಮಯ ಭಾರತಕ್ಕೆ ಕಾಲಿರಿಸಿತು..
೧೯೦೭ರಲ್ಲಿ ಭಾರತದ ಮೊತ್ತ ಮೊದಲ ಚಿತ್ರಮಂದಿರ ಎಲ್‌ಫಿನ್‌ಸ್ಟನ್ ಪಿಕ್ಚರ್ ಪ್ಯಾಲೇಸ್ ಕಲ್ಕತ್ತದಲ್ಲಿ ಪ್ರಾರಂಭವಾಯಿತು. ರಾಜಾಹರಿಶ್ಚಂದ್ರ ಭಾರತದ ಪ್ರಪ್ರಥಮ ಮೂಕಿ ಕಥಾಚಿತ್ರ. ದುಂಡಿರಾಜ ಗೋವಿಂದ ಫಾಲ್ಕೆ ರೂಪಿಸಿದ ಈ ಚಿತ್ರ ೧೯೧೩ರ ಮೇ ೩ರಂದು ಮುಂಬೈನ ಕೋರೋನೇಷನ್ ಚಿತ್ರಮಂದಿರದಲ್ಲಿ ಬಿಡುಗಡೆ ಆಯಿತು. ೧೯೧೮ರಲ್ಲಿ ಸರ್ಕಾರ ಚಲನಚಿತ್ರಗಳ ಮೇಲೆ ನಿಯಂತ್ರಣ ತರುವ ಸಲುವಾಗಿ ಸೆನ್ಸಾರ್ ಪದ್ಧತಿಯನ್ನು ಜಾರಿಗೆ ತಂದಿತು. ಹೀಗೆ ಚಲನಚಿತ್ರ ಆವಿಷ್ಕಾರಗೊಳ್ಳುತ್ತಾ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಹೆಚ್ಚು ಹೆಚ್ಚು ಸುಧಾರಣೆಗಳೊಂದಿಗೆ ಜನರನ್ನು ನಿಬ್ಬೆರಗುಗೊಳಿಸಲಾರಂಭಿಸಿತು.
ಬೆಂಗಳೂರಿನ ಮೊದಲ ಚಿತ್ರಮಂದಿರ ಪ್ಯಾರಾಮೌಂಟ್
೧೯೦೫ರಲ್ಲಿ ಬೆಂಗಳೂರಿನಲ್ಲಿ ಮೊದಲ ಚಿತ್ರಮಂದಿರ ಪ್ಯಾರಾಮೌಂಟ್ ಆರಂಭಗೊAಡಿತು. ಕಳಾಸಿಪಾಳ್ಯದಲ್ಲಿದ್ದ ಈ ಚಿತ್ರಮಂದಿರ ಅದಕ್ಕೂ ಮುನ್ನ ಸಾಂಸ್ಕೃತಿಕ ಚಟುವಟಿಕೆಗಳ ದೊಡ್ಡಣ್ಣ ಹಾಲ್
ಆಗಿತ್ತು. ಮಾತನಾಡುವ ಚಿತ್ರಗಳು ಮೂಡುವ ಮುನ್ನಾ ಮೂಕಿ ಚಿತ್ರಗಳು ಸಿದ್ಧಗೊಂಡವು. ಬಹಳಷ್ಟು ಮೂಕಿ ಚಿತ್ರಗಳು ಕರ್ನಾಟಕದಲ್ಲಿಯೇ ಸಿದ್ಧಗೊಂಡವು ಎಂಬುದು ಗಮನಾರ್ಹ. ಮೋಹನ್ ದಯಾರಾಮ್ ಭವನಾನಿ ಎನ್ನುವ ಮುಂಬೈ ನಿರ್ಮಾಪಕರು ೧೯೨೯ರಲ್ಲಿ ಮೃಚ್ಛಕಟಿಕ
ಮೂಕಿ ಚಿತ್ರವನ್ನು ಬೆಂಗಳೂರಿನಲ್ಲಿ ತಯಾರಿಸಿದರು. ಈ ಚಿತ್ರದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ, ಟಿ.ಪಿ.ಕೈಲಾಸಂ ಮುಂತಾದವರು ಅಭಿನಯಿಸಿದರು. ಗುಬ್ಬಿ ವೀರಣ್ಣನವರು ತಮ್ಮ ಕರ್ನಾಟಕ ಫಿಲಂಸ್ ಮೂಲಕ ಹರಿಮಾಯೆ (೧೯೨೮), ಹಿಸ್ ಲವ್ ಅಫೇರ್ (೧೯೩೦) ಮೂಕಿ ಚಿತ್ರಗಳನ್ನು ನಿರ್ಮಿಸಿದರು. ಕನ್ನಡದ ಖ್ಯಾತ ಸಾಹಿತಿಗಳಾದ ದೇವುಡು ನರಸಿಂಹಶಾಸ್ತಿçಗಳು ಮೂಕಿ ಚಿತ್ರಗಳಿಗಾಗಿಯೇ ಸಾಕಷ್ಟು ಕೆಲಸ ಮಾಡಿದರು. ದೇವುಡು ಅವರ ನೀಳ್ಗತೆಯನ್ನು ಆಧರಿಸಿ ಸಾಂಗ್ ಆಫ್ ಲೈಫ್
ಮೂಕಿ ಚಿತ್ರವನ್ನು ತಯಾರಿಸಲಾಗಿತ್ತು. ಗುಬ್ಬಿ ವೀರಣ್ಣನವರು ನಿರ್ಮಿಸಿದ ಹಿಸ್ ಲವ್ ಅಫೇರ್
ಮೂಕಿ ಚಿತ್ರ ದೇವುಡು ಅವರ ಕಳ್ಳರ ಕೂಟ
ಕಾದಂಬರಿಯನ್ನು ಆಧರಿಸಿತ್ತು. ಈ ಚಿತ್ರದಲ್ಲಿ ಸುಬ್ಬಯ್ಯನಾಯ್ಡು, ಹೆಚ್.ಎಲ್.ಎನ್.ಸಿಂಹ ಅಭಿನಯಿಸಿದರು. ಕನ್ನಡದಲ್ಲಿ ಮಾತನಾಡುವ ಚಿತ್ರಗಳು ಬಿಡುಗಡೆಗೊಂಡ ನಂತರವೂ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ ಲಕ್ಷ್ಮೀಬಾಯಿ ಸುಮಾರು ೧೫ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. ೧೯೩೦ರಲ್ಲಿ ಬೆಂಗಳೂರಿನಲ್ಲಿ ಸಿದ್ಧಗೊಂಡ ಹರಿಮಾಯೆ ಮೂಕಿ ಚಿತ್ರವನ್ನು ಜನಪ್ರಿಯ ನಟಿ ಲಕ್ಷಿö್ಮ ಅವರ ತಂದೆ ಯರಗಡಪತಿ ವರದರಾವ್ ನಿರ್ದೇಶಿಸಿದರು. ಈ ಚಿತ್ರದಲ್ಲಿ ಗುಬ್ಬಿ ವೀರಣ್ಣ, ಸುಬ್ಬಯ್ಯನಾಯ್ಡು, ಬಿ,ಜಯಮ್ಮ, ಜಿ.ಸುಂದರಮ್ಮ ಅಭಿನಯಿಸಿದರು.
ಸೂರ್ಯ ಫಿಲಂ ಸ್ಟುಡಿಯೊ
ಬೆಂಗಳೂರು ಹಾಗೂ ಮೈಸೂರಿನಲ್ಲಿ ೧೯೩೦ರ ವೇಳೆಗೆ ಮೂಕಿ ಚಿತ್ರಗಳನ್ನು ನಿರ್ಮಿಸುವಂತಹ ಸುಸಜ್ಜಿತ ವ್ಯವಸ್ಥೆ ಇತ್ತು. ೧೯೨೯ರಿಂದ ೧೯೩೩ರವರೆಗೆ ೫೫ ಮೂಕಿ ಚಿತ್ರಗಳು ಇಲ್ಲಿ ತಯಾರುಗೊಂಡವು. ಕರ್ನಾಟಕದಲ್ಲಿ ತಯಾರುಗೊಂಡ ಮೂಕಿ ಚಿತ್ರಗಳು ರಾಷ್ಟ್ರದಾದ್ಯಂತ ಪ್ರದರ್ಶನಗೊಳ್ಳುತ್ತಿದ್ದವು ಎಂಬುದೊಂದು ವಿಶೇಷ. ಈ ಚಿತ್ರಗಳು ಹಿಂದಿ ಅಥವಾ ಇಂಗ್ಲಿಷ್ ಹೆಸರುಗಳನ್ನು ಹೊಂದಿರುತ್ತಿದ್ದವು. ೧೯೨೯ರಲ್ಲಿ ತಯಾರಾದ ಮೊದಲ ಮೂಕಿ ಚಿತ್ರ ರಾಜ್‌ಹೃದಯ್ ಅಥವಾ ಹರ‍್ಟ್ ಆಫ್ ಎ ಕಿಂಗ್ ಎಂದಾಗಿತ್ತು. ಬೆಂಗಳೂರಿನ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿದ್ದ ಸೂರ್ಯ ಫಿಲಂ ಸ್ಟುಡಿಯೋದಲ್ಲಿ ಬಹಳಷ್ಟು ಮೂಕಿ ಚಿತ್ರಗಳು ತಯಾರಾದವು. ಇದು ಕರ್ನಾಟಕದ ಮೊದಲ ಸ್ಟುಡಿಯೋ ಸಹ ಹೌದು. ಎಲ್ಲ ರೀತಿಯ ಚಿತ್ರೀಕರಣ ವ್ಯವಸ್ಥೆಯಿದ್ದ ಈ ಸೂರ್ಯ ಫಿಲಂ ಸ್ಟುಡಿಯೋವನ್ನು ಲ್ಯಾಬೊರೇಟರಿಯೊಂದಿಗೆ ಆರಂಭಿಸಲಾಗಿತ್ತು. ಕೈಯಿಂದಲೇ ಚಾಲನೆ ಮಾಡುವಂತಹ ಕ್ಯಾಮರಗಳು ಈ ಸ್ಟುಡಿಯೋದ ವೈಶಿಷ್ಟ್ಯವಾಗಿತ್ತು. ಈ ಸ್ಟುಡಿಯೋ ಫ್ಲೋರ್‌ಗಳಿಗೆ ಮೇಲ್ಛಾವಣಿ ಇರುತ್ತಿರಲಿಲ್ಲ. ಸೂರ್ಯನ ಬೆಳಕನ್ನೇ ಬಳಸಿ ಚಿತ್ರೀಕರಣ ಮಾಡುವ ವ್ವವಸ್ಥೆಗನುಗುಣವಾಗಿ ಸ್ಟುಡಿಯೋ ನಿರ್ಮಿಸಲಾಗಿತ್ತು. ಸೂರ್ಯ ಫಿಲಂ ಕಂಪೆನಿಯನ್ನು ಹರಿಭಾಯ್ ದೇಸಾಯಿ ಹಾಗೂ ಪುರುಷೋತ್ತಮದಾಸ್ ೧೯೨೮ರಲ್ಲಿ ಆರಂಭಿಸಿದರು.
೧೯೧೨ರಿಂದ ೧೯೩೪ರವರೆಗೆ ಭಾರತದಲ್ಲಿ ೧೨೭೯ ಮೂಕಿ ಚಿತ್ರಗಳು ತಯಾರಾಗಿವೆ ಎಂಬುದು ಸೆನ್ಸಾರ್ ಮಂಡಳಿಯಿAದ ದೊರೆತ ದಾಖಲೆಯಾಗಿದೆ. ಈ ಅವಧಿಯಲ್ಲಿ ಕರ್ನಾಟಕದಲ್ಲಿ ತಯಾರಾದ ಮೂಕಿ ಚಿತ್ರಗಳ ಸಂಖ್ಯೆ ಸುಮಾರು ೧೭೫. ಭಾರತದ ಮೂಕಿಚಿತ್ರಗಳ ಬಗ್ಗೆ ಬೆಳಕು ಚೆಲ್ಲಿರುವ ವೀರಚಂದ ಧರ್ಮಸೇ ಅವರು ದಾಖಲಿಸಿರುವಂತೆ ಭಾರತದಲ್ಲಿ ೧೩೦೦ ಮೂಕಿ ಚಿತ್ರಗಳು ಬಿಡುಗಡೆಯಾಗಿದ್ದರೂ ಕೇವಲ ೨೮ ಮೂಕಿ ಚಿತ್ರಗಳು ಮಾತ್ರ ಲಭ್ಯವಾಗಿವೆ ಎಂದಿದ್ದಾರೆ. ೧೯೩೧ರಲ್ಲಿ ಭಾರತದ ಮೊದಲ ಮಾತನಾಡುವ ಚಿತ್ರ ಅಲಂಅರ
ಬಿಡುಗಡೆಗೊಳ್ಳುವವರೆಗೂ, ಅಂದರೆ ೧೮ ವರ್ಷಗಳ ದೀರ್ಘ ಕಾಲದಲ್ಲಿ ಬಿಡುಗಡೆಗೊಂಡ ಭಾರತೀಯ ಮೂಕಿ ಚಿತ್ರಗಳ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ನೂರಾರು ಮೂಕಿ ಚಿತ್ರಗಳು ಪೂರ್ಣಗೊಳ್ಳದೆ ತಯಾರಿಕ ಹಂತದಲ್ಲಿಯೇ ನಿಂತು ಹೋದವು. ೫-೧೦ ನಿಮಿಷಗಳ ಅವಧಿಯ ಬಹಳಷ್ಟು ಕಿರುಚಿತ್ರಗಳೂ ತಯಾರಾಗಿದ್ದವು.
ಎ.ವಿ.ವರದಾಚಾರ್ಯರ ನಾಟಕ ಕಂಪೆನಿ ಪ್ರಸ್ತುತಪಡಿಸುತ್ತಿದ್ದ ನಿರುಪಮಾ
ಇಂಗ್ಲಿಷ್ ನಾಟಕವೊಂದರ ಪ್ರೇರಣೆಯಿಂದ ರಚಿಸಲಾಗಿತ್ತು. ಮೈಸೂರು ಯುವರಾಜರಾಗಿದ್ದ ಕಂಠೀರವ ನರಸಿಂಹರಾಜ ಒಡೆಯರ್ ವಿದೇಶ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಕೈಯಿಂದ ಸುತ್ತುವ ಮೂವಿ ಕ್ಯಾಮರಾ ತಂದಿದ್ದರು. ೧೯೨೧ರಲ್ಲಿ ವರದಾಚಾರ್ಯರ ನಿರುಪಮಾ ನಾಟಕದ ಪ್ರದರ್ಶನವನ್ನು ಅರಮನೆಯಲ್ಲಿ ಸಜ್ಜುಗೊಳಿಸಿ ಪ್ರಾಯೋಗಿಕವಾಗಿ ಈ ಕ್ಯಾಮರದಲ್ಲಿ ನಿರುಪಮಾ ನಾಟಕ ಚಿತ್ರೀಕರಿಸಿದ್ದರು. ವರದಾಚಾರ್ಯರು ನಾಯಕರಾಗಿದ್ದ ನಿರುಪಮಾ
ನಾಟಕದ ವಿಡಿಯೋ ರೂಪಾಂತರವೇ ರಾಜ್ಯದ ಮೊದಲ ಮೂಕಿಚಿತ್ರ ಎಂಬ ವಾದವೂ ಉಂಟಾದರೂ ಇದಕ್ಕೆ ಯಾವುದೇ ಆಧಾರ ಲಭ್ಯವಾಗಿಲ್ಲ.
ಶಿವರಾಮ ಕಾರಂತರ ಎರಡು ಮೂಕಿಚಿತ್ರ
ಪ್ರಸಿದ್ಧ ಸಾಹಿತಿ ಶಿವರಾಮ ಕಾರಂತರ ಕೋಡುಗೆಯೂ ಮೂಕಿ ಚಿತ್ರಗಳ ಸಾಲಿನಲ್ಲಿದೆ. ೧೯೩೦ರ ಸುಮಾರಿಗೆ ತಮ್ಮದೇ ಹ್ಯಾಂಡ್ ಕ್ಯಾಮಾರದಲ್ಲಿ ತಾವೇ ಚಿತ್ರೀಕರಿಸಿ ಎರಡು ಮೂಕಿ ಚಿತ್ರಗಳನ್ನು ತಯಾರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ತಯಾರಾದ ಈ ಚಿತ್ರಗಳಿಗಳಿಗೆ ಭೂತರಾಜ್ಯ
ಮತ್ತು ಡೊಮಿಂಗೊ
ಎಂದು ಹೆಸರಿಡಲಾಗಿತ್ತು. ಈ ಎರಡೂ ಚಿತ್ರಗಳನ್ನು ಮುಂಬೈನಲ್ಲಿ ಸಂಸ್ಕರಣೆ ಮಾಡಿದರು. ಡೊಮಿಂಗೊ
ಚಿತ್ರ ಹರಿಜನರ ಸಮಸ್ಯೆ ಮೇಲೆ ಬೆಳಕು ಚೆಲ್ಲಿತ್ತು. ಭೂತರಾಜ್ಯ
ಹೆಸರೇ ಹೇಳುವಂತೆ ಕೌತುಕಮಯ ಚಿತ್ರ.
ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಮುಂಭಾಗದಲ್ಲಿ ಕಲಾಸಿಪಾಳ್ಯ ಪ್ರದೇಶದಲ್ಲಿದ್ದ ಪ್ಯಾರಾಮೌಂಟ್
ಚಿತ್ರಮಂದಿರದಲ್ಲಿ ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನ
೧೯೩೪ರ ಮಾರ್ಚ್ ೩ರಂದು ಬಿಡುಗಡೆಗೊಂಡಿತು. ಈ ಚಿತ್ರ ಪ್ರದರ್ಶಿಸಿದ ಚಿತ್ರಮಂದಿರ ಬೆಂಗಳೂರಿನಲ್ಲಿ ಈಗಿಲ್ಲವಾದರೂ, ಪ್ಯಾರಾಮೌಂಟ್ ಚಿತ್ರಮಂದಿರವಿದ್ದ ಸ್ಥಳದಲ್ಲಿ ಪರಿಮಳ, ಪ್ರದೀಪ್ ಎಂಬ ಅವಳಿ ಚಿತ್ರಮಂದಿರಗಳು ನಿರ್ಮಾಣವಾಗಿವೆ.
ಮೊದಲ ಕನ್ನಡ ಟಾಕಿ ಚಿತ್ರದ ನಿರ್ಮಾಪಕ ಡುಂಗಾಜಿ
ಕನ್ನಡದ ಮೊದಲ ಚಲನಚಿತ್ರವನ್ನು ನಿರ್ಮಿಸಿದವರು ಕನ್ನಡೇತರರು. ವ್ಯಾಪಾರಿಗಳಾದ ಚಮನ್‌ಲಾಲ್ ಡುಂಗಾಜಿ ಹಾಗೂ ಷಾ ಭೂರ್‌ಮಲ್ ಚಮನ್‌ಮಲ್‌ಜಿ ಅವರು ಸತಿ ಸುಲೋಚನ
ಚಿತ್ರವನ್ನು ನಿರ್ಮಿಸಿದರು. ಷಾ ಚಮಲ್‌ಮಲ್ ಡುಂಗಾಜಿ ರಾಜಾಸ್ಥಾನದ ಅಹೋರ ಎಂಬ ಸ್ಥಳದಿಂದ ಬೆಂಗಳೂರಿಗೆ ಬಂದು ನೆಲೆಸಿ, ೧೯೦೩ರಲ್ಲಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಪಾತ್ರೆ ವ್ಯಾಪಾರವನ್ನು ಆರಂಭಿಸಿದರು. ತಮ್ಮ ವೃತ್ತಿಯಲ್ಲಿನ ಬದ್ಧತೆಯಿಂದ ಕ್ರಮೇಣ ಮೇಲೇರಿ ಬಂದರಲ್ಲದೆ, ವ್ಯಾಪಾರದ ಜೊತೆ ಜೊತೆಯಲ್ಲಿಯೇ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಂಡು ಜೈನ ಸಮಾಜದ ಪ್ರಮುಖರಲ್ಲಿ ಒಬ್ಬರಾದರು. ಚಿಕ್ಕಪೇಟೆಯ ಜೈನ ಶ್ವೇತಾಂಬರ ದೇಗುಲದ ನಿರ್ಮಾಣಕ್ಕಾಗಿ ತನು, ಮನ, ಧನಗಳನ್ನು ಅರ್ಪಿಸಿ, ಜೈನ ಶ್ವೇತಾಂಬರ ಸಂಘದ ಅಧ್ಯಕ್ಷರಾಗಿ ೧೭ ವರ್ಷ ಕಾರ್ಯನಿರ್ವಹಿಸಿದರು. ವಿದ್ಯಾಕ್ಷೇತ್ರದಲ್ಲೂ ಗುರ್ತಿಸಿಕೊಂಡ ಡುಂಗಾಜಿ ಅವರು ಜೈನಧರ್ಮದ ವಿದ್ಯಾರ್ಥಿಗಳಿಗೆ ತಮ್ಮ ಹೆಸರಿನಲ್ಲಿ ಮೈಸೂರು ಮಹಾರಾಜರಿಂದ ಚಿನ್ನದ ಪದಕ ಕೊಡಿಸುವ ವ್ಯವಸ್ಥೆ ಮಾಡಿದ್ದರು.
೧೯೨೯ರಲ್ಲಿ ಶ್ರೀ ಸೌತ್ ಇಂಡಿಯಾ ಫಿಲಂ ಸಪ್ಲೆ ಕಂಪೆನಿ
ಎಂಬ ಹೆಸರಿನಲ್ಲಿ ಚಲನಚಿತ್ರ ವಿತರಣ ಕಚೇರಿ ಆರಂಭಿಸಿದರು. ಆಗ ಬಿಡುಗಡೆಗೊಂಡಿದ್ದ ಸುಮಾರು ೬೦ ಮೂಕಿ ಚಿತ್ರಗಳನ್ನು ಕೊಂಡು ವಿತರಣೆ ಮಾಡುತ್ತಿದ್ದರು. ವಿದೇಶದಲ್ಲಿ ತಯಾರುಗೊಂಡ ಟಾಕಿ ಚಿತ್ರಗಳು ಹಾಗೂ ಭಾರತದ ಇತರ ಭಾಷೆಯ ಹಲವು ಮಾತನಾಡುವ ಚಿತ್ರಗಳನ್ನು ಡುಂಗಾಜಿ ಅವರು ಕೊಂಡು ವಿತರಣೆ ಮಾಡಲಾರಂಭಿಸಿದರು. ಸುಮಾರು ಮೂರು ದಶಕಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿ ಕನ್ನಡಿಗರೇ ಆಗಿದ್ದ, ಡುಂಗಾಜಿ ಅವರಿಗೆ ಒಮ್ಮ ತಾವೇ ಏಕೆ ಕನ್ನಡ ಚಿತ್ರವೊಂದನ್ನು ತಯಾರಿಸಬಾರದೆಂಬ ಯೋಚನೆಯೊಂದು ಮನದಲ್ಲಿ ಸುಳಿಯಿತು. ಅಲ್ಲದೆ, ಡುಂಗಾಜಿ ಅವರ ಮಗ ಷಾ ಭೂರ್‌ಮಲ್ ಚಮನ್‌ಮಲ್‌ಜಿ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದು, ಕನ್ನಡ ನಾಡು ಹಾಗೂ ಭಾಷೆಯ ಮೇಲೆ ಅಭಿಮಾನ ಹೊಂದಿದ್ದರು. ತಂದೆಯ ಆಶಯಕ್ಕೆ ಒತ್ತಾಸೆಯಾಗಿ ನಿಂತರು. ತಂದೆ ಹಾಗೂ ಮಗ ಇಬ್ಬರೂ ಕೂಡಿ ಕನ್ನಡದ ಮೊದಲ ಚಲನಚಿತ್ರ ತಯಾರಿಸುವ ಸಾಹಸಕ್ಕೆ ಕೈ ಹಾಕಿದರು.
- ವಿಮಾನ ಪತನ: ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯ; 179 ಮಂದಿ ದುರ್ಮರಣ!
- 2025ನೇ ಸಾಲಿನ ರೈಲ್ವೆ ಗ್ರೂಪ್-ಡಿ ಹುದ್ದೆಗಳಿಗೆ 32,000ಕ್ಕೂ ಹೆಚ್ಚು ನೇಮಕಾತಿ
- ವಿಚಾರ ಕ್ರಾಂತಿಯ ಯುಗಪುರುಷ ಕುವೆಂಪು
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ