November 24, 2024

Newsnap Kannada

The World at your finger tips!

muddan manorame

ಮುದ್ದಣ ಮನೋರಮೆ ಮುದ್ದೆ ತಿರುವಿದ್ದು (ಲಲಿತ ಪ್ರಬಂಧ)

Spread the love

“ಕಂದಾ.. ಮುದ್ದಣ ಏನ್ ಮಾಡ್ತಿದ್ಯೋ?” ಅಂತಾನೋ, “ಎಲ್ಲಿ ಏಡಿ? ಏನ್ ಮಾಡ್ತಿದಾರೇ? ” ಅಂತಾನೋ ಪಪ್ಪ ಫೆÇೀನ್ ಮಾಡಿದಾಗಲೆಲ್ಲಾ ‘ನಮ್ಮ ಇವರನ್ನು’ ವಿಚಾರಿಸಿಕೊಳ್ತಾ ಇರ್ತಾರೆ. ನಮ್ಮಿಬ್ಬರನ್ನು ರೇಗಿಸೋದು ಅಂದ್ರೆ ಪಪ್ಪಂಗೆ ಬಲು ಇಷ್ಟ. ಗಾಬರಿಯಾಗ್ಬೇಡಿ. ಏಡಿ ಅನ್ನೋದು ಕನ್ನಡದ ಏಡಿ ಅಲ್ಲ. ಇಂಗ್ಲೀಷ್‍ನ ಎ.ಡಿ. ಅಂದರೆ ಅಳಿಯ ದೇವರು.
ಪಪ್ಪ ಹಾಗನ್ನೋಕೂ ಒಂದು ಕಾರಣ ಇದೆ. ನಾನು ನನ್ನ ಗಂಡ ಒಬ್ಬರನ್ನೊಬ್ಬರು ರೇಗಿಸಿಕೊಳ್ತಾ ಸದಾ ಏನೋ ಹರಟೆ ಹೊಡೀತಾನೇ ಇರ್ತೀವಿ. ಬೆಳಿಗ್ಗೆ ಎದ್ದಾಗಿನಿಂದ ಗಡಿಯಾರ 8.30 ತೋರಿಸುವ ತನಕ ಕಾಫಿ ಹೀರುತ್ತ, ಪೇಪರ್ ಓದುತ್ತ, ನ್ಯೂಸ್ ನೋಡುತ್ತ, ಹರಟೆ ಹೊಡೆಯುತ್ತ, ಮಧ್ಯೆ ಮಧ್ಯೆ ಮೊಬೈಲ್ ತಿವಿಯುತ್ತ ಕಾಲ ಕಳೆಯುತ್ತೀನಿ. ‘ಟೈಮ್ ನೋಡಿದ್ಯಾ?’ ಅಂತ ಅವರು ಎಚ್ಚರಿಸುವ ತನಕ ಕಾಲದ ಎಚ್ಚರವೇ ಇಲ್ಲದೆ ಆಮೆಯ ಗತಿಯಿಂದ ಇರುತ್ತೇನೆ. ಹಾಗಂದ ತಕ್ಷಣ ಗಡಬಡಿಸಿ ಎದ್ದು ಜಿಂಕೆಮರಿಯಂತೆ ಛಂಗನೆ ಜಿಗಿಯುತ್ತ, ಓಡುತ್ತ ಗಡಿಯಾರಕ್ಕೆ ಕಾಂಪಿಟೇಟರೇನೋ ಅನ್ನೋ ಹಾಗೆ ದಡಬಡಿಸುತ್ತೇನೆ. ಪ್ರತಿದಿನ ಗಂಟೆಗಟ್ಟಲೆ ಅದೇನು ಹರಟುತ್ತೇವೋ ಗೊತ್ತಿಲ್ಲ. ಯೋಚಿಸಿದರೆ ನನಗೇ ಅಚ್ಚರಿ.
ಅದೊಂದು ದಿನ ರಜನಿ ಮೇಡಂ ಕೂಡ ನಮ್ಮ ಹರಟೆಯ ವಿಷಯಕ್ಕೆ ‘ನೀವು ದಂಪತಿಗಳು ಮುದ್ದಣ ಮನೋರಮೆಯರ ಹಾಗೆ’ ಇರಿ ಅಂತ ಹಾರೈಸಿದರು.
ಅರೆ.. ಎರಡೆರಡು ಬಾರಿ ಮುದ್ದಣ ಮನೋರಮೆಯರ ಪ್ರಸ್ತಾಪ ಬಂದಮೇಲೆ ನಾವು ಹಾಗೆಯೇ ಏನೋ ಅಂತ ನಂಗೇ ಡೌಟ್ ಬಂತು, ನಗೂನೂ… ಡೌಟೇನೂ ಇಲ್ಲ ಬಿಡೀ. ಹಾಗೇ ಇರ್ತೀವಿ. ಒಂದೊಂದು ಸಲ ಮಾತ್ರ ಬೆಕ್ಕು ನಾಯಿಗಳಾಗೋದು. ಅದು ಹೇಗೋ ಮಾತಿನಲ್ಲಿ ನನ್ನ ಗೆಳತಿ ಸ್ವಾತಿಗೂ ಮುದ್ದಣಮನೋರಮೆ ಅನ್ನೋ ಬಿರುದು ಗೊತ್ತಾಗಿಹೋಗಿತ್ತು. ಹೆಣ್ಣುಮಕ್ಕಳ ಬಾಯಲ್ಲಿ ಮಾತು ನಿಲ್ಲುವುದೇ? ಅವರಿಂದ ಅವರ ಪತಿ ಸುರೇಶ್ ಅವರಿಗೂ ಮುದ್ದಣಮನೋರಮೆ ಎಂಬ ಬಿರುದು ಗೊತ್ತಾಯಿತು ಅಂತ ಬೇರೆ ಹೇಳಬೇಕೇ?
ನನ್ನ್ ಗಂಡನ್ನ ನಾನು ರೀ ಅಂತಾನೂ ಕರೀತೀನಿ, ಕೋಪ ಬಂದಾಗ ‘ಅರಿ’ ಅಂತಾನೂ ಕರೀತೀನಿ. ಪ್ರೀತಿ ಉಕ್ಕಿದಾಗ ‘ಗುಬ್ಬಿ’ ಅಂತೀನಿ. ಅದು ‘ಹಬ್ಬಿ’ಯ ಮತ್ತೊಂದು ವರ್ಷನ್ ಅನ್ನೋದು ನನ್ನ ಮುದ್ದುವಾದ. ‘ಗುಬ್ಬಚ್ಚಿ ಗೂಡಿನಲ್ಲಿ ಕದ್ದೂ ಮುಚ್ಚೀ, ಆಡೋಣ ನಾನೂ ನೀನೂ ಕುಚಿಕುಚಿ’ ಹಾಡನ್ನು ಗುಬ್ಬಿ ಜೊತೆ ಇದ್ದಾಗ ಹಾಡಿದರೆ ಅದರ ಇಂಪ್ಯಾಕ್ಟೇ ಬೇರೆ ಅನ್ನಿ.ಮುದ್ದೆ ವಿಷಯ ಕೈಬಿಟ್ಟು ಮುದ್ದಿನ ವಿಷಯಾನೇ ಹೇಳ್ತಿದೀನಲ್ಲಾ…..
ಮಂಡ್ಯ ಹೇಳೀ ಕೇಳೀ ರೈತರ ಭೂಮಿ. ಮೈಮುರಿದು ದುಡಿಯುವ ಮಂದಿಗೆ ಚೂಪುಗಾರಿಕೆಯ ಅನ್ನ, ಸಾರು ಸರಿಹೊಂದುವುದಿಲ್ಲ. ಅವರಿಗೆ ಗಟ್ಟಿ ರಾಗಿ ಮುದ್ದೆ, ಉಪ್ಪೆಸ್ರು, ತಂಗಳನ್ನ, ತಂಪಾದ ಮಜ್ಜಿಗೆ ಬೇಕು. ಬೆಳ್ಳಂಬೆಳಿಗ್ಗೆಯೇ ಪಟ್ಟಾಗಿ ರಾಗಿ ಮುದ್ದೆ ಬಾರಿಸಿ ಹೊಲ ಗದ್ದೆಗೆ ಹೋದರೆ, ಸಂಜೆಯ ತನಕ ಉಂಡ ಮುದ್ದೆ ಕರಗಲ್ಲ. ರಟ್ಟೆತುಂಬ ಶಕ್ತಿಯೂ ಇರುತ್ತಂತೆ. ನಮ್ಮಜ್ಜಿ ಹೇಳ್ತಿದ್ರು ‘ರಟ್ಟೆ ಮುರಿಯಾ ದುಡೀಬೇಕು; ಹೊಟ್ಟ್ ತುಂಬಾ ತಿನ್ಬೇಕು’ ಅಂತ. ಈಗ ನಾವು ಹೊಟ್ಟೆ ತುಂಬಾ ತಿನ್ನೋದೂ ಇಲ್ಲ, ರಟ್ಟೆ ಮುರಿಯೋ ಹಾಗೆ ದುಡಿಯೋದೂ ಇಲ್ಲ. ನಾಲಿಗೆ ರುಚಿಗೆ ತಿನ್ನೋದು, ಶೋಕಿ ಮಾಡೋದು, ಎ.ಸಿ ಕೆಳಗೆ ತಣ್ಣಗೆ ಕಂಪ್ಯೂಟರ್ ಎದುರು ಕೂತೂ ಕೂತೂ ಕಣ್ಣು ತೂತು ಮಾಡ್ಕೊಂಡು ‘ಮಧ್ಯಪ್ರದೇಶ’ಕ್ಕೆ ಕೊಬ್ಬು ಸೇರಿಸ್ತಾ, ಖಾಯಿಲೆ ಕಸಾಲೆ ಬಂದಮೇಲೆ ಬೆವರು ಸುರಿಸೋಕೆ ಅಂತ ನಾಲ್ಕು ಗೋಡೆಗಳ ಒಳಗೆ ಮಿಷಿನ್ ತುಳೀತಾ ಬದುಕನ್ನು ಸವೆಸ್ತೀವಿ.
ಆದ್ರೆ ರೈತಾಪಿ ವರ್ಗದವರು ಹಾಗಲ್ಲ. ಬಿಸಿಲೋ, ಮಳೆಯೋ, ಚಳಿಯೋ ನಮಗೆ ಅನ್ನ ಕೊಡೋಕೆ, ಅವರ ಅನ್ನ ಹುಟ್ಟಿಸಿಕೊಳ್ಳೋಕೆ ದುಡೀತಾರೆ. ಅವರ ಮುದ್ದೆಯ ಹಾಗೆ ಅವರೂ ಗಟ್ಟಿಮುಟ್ಟು. ರಾಗಿಮುದ್ದೆ ಗೋಡೆಗೆ ಹೊಡೆದರೆ ಚೆಂಡಿನಹಾಗೆ ಪುಟಿಯಬೇಕು ಅನ್ನೋದು ಹಿಂದಿನವರ ಮಾತು.
ನಮ್ಮನೆಗಳಲ್ಲಿ ರಾಗಿಮುದ್ದೆ ಹೆಚ್ಚು ಜನಪ್ರಿಯವಲ್ಲ. ಅಕ್ಕಿರೊಟ್ಟಿ, ಚಪಾತಿ, ದೋಸೆ, ಇಡ್ಲಿ, ಶ್ಯಾವಿಗೆ ಅಂತ ಕಣ್ಣು, ನಾಲಗೆಗೆ ತಂಪಾಗುವ ರುಚಿ ರುಚಿ ತಿಂಡಿಗಳನ್ನು ಮಾಡ್ಕೊಂಡು ತಿನ್ತೀವಿ.
ಆದ್ರೆ ಒಂದು ದಿನ ಇದ್ದಕ್ಕಿದ್ದ ಹಾಗೆ ‘ರೀ ನಾವೂ ರಾಗಿ ಮುದ್ದೆ ತಿನ್ನೋಣ್ವಾ ಇನ್ಮೇಲೆ? ತುಂಬಾ ಒಳ್ಳೇದಂತೆ, ಡೆಲ್ಲಿಯ ಫೈವ್ ಸ್ಟಾರ್ ಹೊಟೆಲಲ್ಲೂ ಪಿ.ಎಂ. ದೇವೇಗೌಡ್ರ ಪ್ರಭಾವದಿಂದರಾಗಿ ಬಾಲ್ ಮಾಡ್ತಿದಾರಂತೆ’ ಅಂತ ಹೊಸ ರಾಗ ತೆಗೆದೆ. ಇವರಿಗೆ ನನ್ನ ವಿಷಯ ಗೊತ್ತು. ಹೊಸತರಲ್ಲಿ ಶಸ್ತ್ರಾಭ್ಯಾಸ ಮಾಡಿ ಯುದ್ಧದ ಹೊತ್ತಿಗೆ ಸುಸ್ತಾಗಿ ಮರೆಯೋ ಪ್ರಾಣಿ ನಾನೂ ಅಂತ. ಆದರೂ ನನ್ನ ಉತ್ಸಾಹಕ್ಕೆ ತಣ್ಣೀರೆರೆಚಬಾರದು ಅಂತ ಅವರಿಗೆ ಗೊತ್ತು. ಇಲ್ದಿದ್ದ್ರೆ ಜನ್ಮ ಪೂರ್ತಿ ‘ನೀವು ಹೂಂ ಅನ್ಲಿಲ್ಲ ಅದಕ್ಕೇ ನಾನು ಕಲಿಯಕ್ಕಾಗ್ಲಿಲ್ಲ. ಇಲ್ಲ್ದಿದ್ದ್ರೆ ನಾನೂ ರಾಗಿಮುದ್ದೆ ಮಾಡಿ, ತಿಂದು ಸಣ್ಣಕೂ, ಗಟ್ಟಿಮುಟ್ಟಾಯೂ ಇರ್ತಿದ್ದೆ, ನಾ ಹೀಗೆ ಡುಮ್ಮ್ ಆಗಿರೋದಕ್ಕೆ ನೀವೇ ಕಾರಣ’ ಅಂತ ಅವರ ತಲೆಯ ಮೇಲೆ ಸುಲಭವಾಗಿ ಗೂಬೆ ಕೂರಿಸಿ ಬಿಡ್ತೀನಿ ಅನ್ನೋ ಭಯವೂ, ಎಚ್ಚರಿಕೆಯೂ ಅವರಿಗಿದೆ. ಅದಕ್ಕೇ ‘ಮಾಡಮ್ಮಾ ತಾಯಿ ಅದೇನ್ಬೇಕೋ ನಿಂಗೆ ಅದನ್ನು’ ಅಂತ ಜಾರಿಕೊಂಡರು.
ಸರಿ ಎರಡು ದಿನ ಅದಕ್ಕೆ ಸಂಶೋಧನೆ ಆಯ್ತು. ಬ್ಯಾಂಕಿಗೆ ಬಂದ ಹಳ್ಳಿ ಹೆಂಗಸರನ್ನು ಮುದ್ದೆ ಮಾಡುವ ಬಗೆಯನ್ನು ಕೇಳಿದ್ದೂ ಆಯ್ತು, ಅವರು ನನ್ನನ್ನು ಝೂ ಪ್ರಾಣಿಯ ತರಹ ನೋಡಿದ್ದೂ, ಪಾಪ ಬ್ಯಾಂಕ್ ಮೇಡಮ್ಮು ಅಂತ ಪಾಠ ಹೇಳಿಕೊಟ್ಟಿದ್ದೂ ಆಯ್ತು. ದಿನಕ್ಕೆ ಮುವ್ವತ್ತು-ನಲವತ್ತು ಮುದ್ದೆ ಮಾಡುವ ಅವರು ಎರಡು ತಲೆಯ ಒಂದು ಮರದ ಕವಲನ್ನು ಬಳಸಿ ದೊಡ್ಡ ಪಾತ್ರೆ ಅಲುಗಾಡದಂತೆ ಹಿಡಿದು ದಪ್ಪ ಕೋಲಿನಿಂದ ಮುದ್ದೆ ತಿರುವುತ್ತಾರೆ. ನಾನೆಲ್ಲಿಂದ ತರಲಿ ಅದನ್ನು? ಯಜಮಾನರಿಗೆ ದುಂಬಾಲುಬಿದ್ದು ಕಲ್ಲು ಹೊಡೆಯುವ ಕ್ಯಾಟರ್ ಪಿಲ್ಲರ್ ತರಿಸಿ ಯುದ್ಧಕ್ಕೆ ಹೋಗುವ ಹೊಸ ಬಿಲ್ಲಾಳಿನಂತೆ ತಯಾರಾದೆ. ಮುದ್ದೆ ಮಾಡಲು ಬಾರದ ನನ್ನ ಸಿಟಿಯ ಗೆಳತಿಯರಿಗೆಲ್ಲ ವ್ಯಾಟ್ಸಪ್‍ನಲ್ಲಿ ನಾ ಮುದ್ದೆ ಮಾಡುವ ಚಿತ್ರ-ವಿಡಿಯೋ ಕಳಿಸಿ ಸೈ ಅನಿಸಿಕೊಳ್ಳುವ ಹುಚ್ಚುಬಯಕೆ ಹತ್ತಿತ್ತು.
ಅಂದು ಬೆಳಿಗ್ಗೆಯಿಂದಲೇ ಹೊಸ ಉತ್ಸಾಹ. ಉಪ್ಪೆಸ್ರು, ಬೆಳ್ಳುಳ್ಳಿ, ನಂಗೆ ಸೇರದು. ಹಾಗಾಗಿ ನಮ್ಮ ಮಾಮೂಲಿನ ದಂಟಿನಸೊಪ್ಪಿನ ಹುಳಿಗೇ ಮುದ್ದೆ ಮಾಡುವುದೆಂದು ಹಿಂದಿನ ರಾತ್ರಿಯೇ ನಿರ್ಧಾರವಾಗಿತ್ತು. ಹತ್ತಕ್ಕೆ ಬ್ಯಾಂಕಿಗೆ ಹೊರಡಬೇಕು. ಒಂಭತ್ತಕ್ಕೆ ಗಟ್ಟುಹೊಡೆದ ಪಾಠವನ್ನು ಒಪ್ಪಿಸುವವಳಂತೆ ಮುದ್ದೆ ಶುರುಮಾಡಿದೆ. ನೀರು ಕುದಿಯುವಾಗ ರಾಗಿಹಿಟ್ಟು ಹಾಕಿ, ಕೋಲಿನಲ್ಲಿ ತಿರುವಲು ಆರಂಭಿಸಿದೆ. ಅಯ್ಯೋ ನೀರಿನಲ್ಲೆಲ್ಲ ನೂರಾರು ಪುಟ್ಟ ಪುಟ್ಟ ಗಂಟುಗಳು ಸಿಡುಬಿನಂತೆ ಜನ್ಮತಾಳಿದವು. ದಿಗ್ಭ್ರಾಂತಳಾಗಿ ‘ರೀ’ ಆಂತ ಕೂಗಿಕೊಂಡೆ. ಅವರೂ ಬಂದರು. ಏನು ಮಾಡಿದರೂ ಗಂಟು ಕರಗಲಿಲ್ಲ. ಮುದ್ದೆ ಆಗುತ್ತೋ ಇಲ್ವೋ ಅನ್ನೋದೇ ಅನುಮಾನವಾಯ್ತು. ಒಬ್ಬರು ಇಕ್ಕಳದಿಂದ ಪಾತ್ರೆಯನ್ನು ಗಟ್ಟಿಯಾಗಿ ಹಿಡಿದುಕೊಂಡ್ರೆ, ಇನ್ನೊಬ್ರು ಎರಡೂ ಕೈಯಿಂದ ಕೋಲನ್ನು ರಾಗಿಗಂಟುಗಳ ಮೇಲೆ ಪ್ರಹಾರ ಮಾಡುತ್ತ ಇಬ್ಬರೂ ಏದುಸಿರು ಬಿಡುತ್ತ ಅದನ್ನು ಸಂಹಾರ ಮಾಡಲು ಪ್ರಯತ್ನ ಮಾಡುತ್ತಿದ್ದೆವು.
ಈ ಗಡಿಬಿಡಿಯಲ್ಲಿ ಬಾಗಿಲ ಚಿಲುಕ ಹಾಕಿರಲಿಲ್ಲವಲ್ಲಾ. ಗೃಹಪ್ರವೇಶಕ್ಕೆ ಕರೆಹೇಳಲು ಬಂದ ಶ್ರೀನಿವಾಸ್ ಅವರೂ, ಅವರನ್ನು ಕರೆತಂದ ಸುರೇಶ್ ಸರ್ ಅವರೂ ನೇರ ಅಡುಗೆಮನೆಗೇ ಬರಬೇಕೇ? ‘ಏನೂ ಇಬ್ರೂ ಸೇರಿ ಮುದ್ದೆ ತಿರುವ್ತಿದೀರಾ? ಸಾರ್ಥಕ ಆಯ್ತು ನಿಮ್ಗೆ ಮುದ್ದಣಮನೋರಮೆ ಅಂತ ಬಿರುದು ಕೊಟ್ಟಿದ್ದು. ಮುದ್ದೆ ಮಾಡೋ ಮುದ್ದಣ್ಣ, ಕೈ ತಿರುವೋ ಮನೋರಮೆ’ ಅಂತ ಹಾಸ್ಯ ಮಾಡಿದ್ರು. ಅವರನ್ನು ಕೂರಿಸಿ ಮುದ್ದೆ ಮಾಡುತ್ತಾ ಕುಳಿತುಕೊಳ್ಳೋಕಾಗುತ್ಯೇ? ಒಲೆ ಆರಿಸಿ ಹೊರಬಂದು ಅವರ ಆಹ್ವಾನಪತ್ರಿಕೆ ಪಡೆದು, ಕಾಫಿ ಕೊಟ್ಟು ಕಳಿಸುವ ಹೊತ್ತಿಗೆ ಅರ್ಥ ಗಂಟೆಯಾಯಿತು. ಅಷ್ಟರಲ್ಲಿ ಅವನ ಕಡೆ ನಾವು ಗಮನ ಕೊಡಲಿಲ್ಲವೇಂದು ನಮ್ಮ ಮುದ್ದೆ ಮಹಾಶಯ ಸೆಟೆದು ಮುಖ ಮೈಯ್ಯೆಲ್ಲಾ ಗಂಟುಮಾಡಿಕೊಂಡು ಕೂತಿದ್ದ. ಆವತ್ತಿಗೆ ಮುದ್ದೆ ಪ್ರಕರಣ ಮುಕ್ತಾಯವಾಯಿತು. ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಅನ್ನುವ ಹಾಗೆ ಕೇಳಿ, ನೋಡಿ, ಮಾಡೀ ಮಾಡೀ ಈಗ ಈಗ ನಾನು ರಾಗಿ ಮುದ್ದೆ ಕಲಿಸೋ ಶಾಲೆ ತೆರೆಯುವಷ್ಟು ಎಕ್ಸ್ಪರ್ಟ್ ಆದರೂ, ಆ ಪ್ರಸಂಗದಿಂದ ನನ್ನ ಗೆಳತಿಯರ ಗುಂಪಿನಲ್ಲಿ ‘ಮುದ್ದಣ ಮನೋರಮೆ ಮುದ್ದೆ ತಿರುವೋ ಹಾಗೆ’ ಅಂತ ಹೊಸ ಮಾತು ಹುಟ್ಟಿಕೊಂಡು ರೆಕ್ಕೆ ಪುಕ್ಕ ಪಡೆದಿದೆ.

IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್, ಮಂಡ್ಯ
Copyright © All rights reserved Newsnap | Newsever by AF themes.
error: Content is protected !!