ಮಹಿಳಾ ಸಮಾಜದ ಮೀಟಿಂಗ್ ಮುಗಿಸಿ ಮನೆಗೆ ಬಂದ ಸರಸು ದೀಪಾವಳಿ ಹಬ್ಬಕ್ಕೆ ಏನೇನು ಕೊಂಡುಕೊಳ್ಳಬೇಕೆಂದು ಪಟ್ಟಿ ತಯಾರಿಸುತ್ತಿದ್ದಳು….
ಅವಳ ಪತಿ ಮಹಾಶಯ ಬಸವ….
ಒಂದು ಕೈಯಲ್ಲಿ ಟಿವಿ ರಿಮೋಟು ಮತ್ತೊಂದು ಕೈಯಲ್ಲಿ ಮೊಬೈಲು ಹಿಡಿದು ಹಾಲಿನಲ್ಲಿರುವ ಈಸಿ ಛೇರಿನಲ್ಲಿ ಪವಡಿಸಿದ್ದ.ಲೇ…ಇವಳೇ ಒಂದ್ ತೊಟ್ಟು ಕಾಫಿ ಕೊಡೇ….. ಎಂದು ಎಂದಿನಂತೆ ಕೂಗಿ ಹೇಳಿದ.
ಪಟ್ಟಿ ಬರೆಯುತ್ತಿದ್ದ ಸರಸು ಅಯ್ಯೋ ಇವರದಂತೂ ಮುಗಿಯೋದೇ ಇಲ್ಲ ಎಂದು ಸಣ್ಣಗೆ ಗೊಣಗಿ…ರೀ…ನಾನು ಹಬ್ಬದ ಶಾಪಿಂಗ್ ಪಟ್ಟಿ ಮಾಡ್ತಾ ಇದೀನಿ…ನೀವೇ ಒಂಚೂರು ಕಾಫಿ ಬಿಸಿ ಮಾಡಿಕೊಳ್ರೀ…ಡಿಕಾಕ್ಷನ್ನು ರೆಡಿ ಇದೆ…ಹಾಗೇ ನಂಗೂ ಸ್ವಲ್ಪ ಇರಲಿ ಎಂದಳು.
ಇವಳು ಯಾವಾಗಲೂ ಹೀಗೇ….. ಎಂದು ಸ್ವಲ್ಪ ಜೋರಾಗಿ ಗೊಣಗುತ್ತಾ ಬಸವ ಅಡುಗೆ ಮನೆಗೆ ತೆರಳುತ್ತಾ…ಈ ಸಲ ಹಬ್ಬಕ್ಕೆ ಏನೇನು ತರಬೇಕೂಂತಿದೀಯಾ….? ಎಂದ.
ಹಾಲಿನಲ್ಲಿ ಟೀಪಾಯಿಯ ಕೆಳಗೆ ಹಾಕಲು ಚೆಂದದೊಂದು ಮ್ಯಾಟ್ ಬಿಗ್ ಬಜಾರಿನಿಂದ ತರೋಣ ಅಲ್ವಾ? ಎಂದಳು ಸರಸು. ಅಲ್ವೇ ಕಳೆದ ವರ್ಷ ತಂದ ಮ್ಯಾಟು ಹಾಗೇ ಕಟ್ಟಿ ಇಟ್ಟಿದೀಯಲ್ಲ….ಇನ್ನೊಂದ್ ಮ್ಯಾಟ್ ಯಾಕೆ? ಬಸವನ ಪ್ರಶ್ನೆ.
ಅದಕ್ಕೆ ಕಣ್ಣರಳಿಸಿದ ಸರಸು ನಿಮಗ್ಯಾಕಿಷ್ಟೊಂದ್ ಮರೆವು?..ಕಳೆದೊರಷ ನಾವು ಶಾಪಿಂಗೇ ಮಾಡಿಲ್ಲ…ಕರೋನಾ…ಹಾಗಾಗಿ ಬಿಗ್ ಬಜಾರಿಗೆ ಹೋಗೋದೇ ಬೇಡಾಂತ. ನಾವು ಮ್ಯಾಟ್ ತಂದಿದ್ದು ಎರಡೊರಷದ ಹಿಂದೆ ಕಣ್ರೀ. ಅದು ಹಬ್ಬದ ದಿನ ಹಾಕಿ ನೀವೇ ತಾನೆ ಅದರ ಮೇಲೆ ಟೀ ಬೀಳಿಸಿ ಕಲೆ ಮಾಡಿಟ್ಟಿದೀರಿ.ಅದಕ್ಕೆ ಎತ್ತಿ ಮಡಿಸಿಟ್ಟಿದೀನಿ.ಈಗಲೇ ಹೇಳ್ತೀನಿ ಈ ಸಲ ಮ್ಯಾಟ್ ಹಾಕಿದ್ಮೇಲೆ ನೀವು ಹಾಲಿನಲ್ಲಿ ಕೂತು ಕಾಫಿ ಟೀ ಕುಡಿಯಂಗೇ ಇಲ್ಲ.ಬೇಕಾದ್ರೆ ಅಡುಗೆ ಮನೇಲಿ ನಿಂತು ಕುಡೀರಿ ಅಥವಾ ತುಳಸಿಕಟ್ಟೆ ಹತ್ರ ಕೂತು ಕುಡೀರಿ.
ತನ್ನ ಬುಡಕ್ಕೇ ತಿರುಗಿಸಿದಳಲ್ಲ ಇವಳು ಎಂದುಕೊಳ್ಳುತ್ತಾ ಬಸವ ಆಯ್ತು ಮಹರಾಯ್ತಿ ಈ ಸಲ ಬಿಗ್ ಬಜಾರ್ ನಲ್ಲೇ ತೆಗೆದುಕೊಳ್ಳೋಣ ಸರೀನಾ? ಎನ್ನುತ್ತಾ ಕಾಫಿ ಲೋಟ ಹೆಂಡತಿಗೂ ಕೊಟ್ಟ.
ಮಾಲ್ ನಲ್ಲಿ ಹೊಸ ರೀತಿ ಸೀರಿಯಲ್ ಸೆಟ್ ಲೈಟ್ ಗಳು ಬಂದಿವೆಯಂತೆ. ಒಂದೆರಡು ಸೆಟ್ ತರಬೇಕು. ಆಕಾಶದೀಪ ನಮ್ಮನೇಲಿರೋದು ಒಂದ್ ಕಡೆ ಹರಿದುಹೋಗಿದೆ. ಅದೂ ತರಬೇಕು ಗಾಂಧಿ ಬಜಾರಿನಿಂದ ಎಂದಳು ಕಾಫಿ ಗುಟುಕರಿಸುತ್ತಾ.
ಅಲ್ವೇ ನೀನೇ ತಾನೆ ಹೇಳಿದ್ದು ಗಾಂಧಿ ಬಜಾರಿಗೆ ಹೋಗೋದ್ ಬೇಡ. ಕರೋನಾ ಮಾರಿ ಹೋಗೋ ತನಕ ಅಂತ? ಎಂದ ಬಸವ.
ಅದು ಆಗ ಹೇಳಿದ್ದು ಕಣ್ರೀ….ಈಗ ಹಾಗೇನಿಲ್ಲಪ್ಪ.ಕರೋನಾ ಕರೋನಾ ಅಂತ ಜಪ ಮಾಡ್ತಾ ಕೂತ್ರೆ ನಂ ಕೆಲಸ ಆಗುತ್ತಾ? ಸರಸೂದು ಮರುಪ್ರಶ್ನೆ. ಮತ್ತೇ ಮೊನ್ನೆಯಷ್ಟೇ ನಾನು ಗಾಂಧಿಬಜಾರಿಗೆ ಹೋಗಿ ಅಡಿಕೆಪುಡಿ ತರ್ತೀನೀಂದ್ರೆ ನೀನೇ ತಾನೆ ಬೇಡಾ ಅಂದಿದ್ದು!!! ಬಸವ ಅಲವತ್ತುಕೊಂಡ.
ಅಡಿಕೆ ಪುಡಿ ತಿನ್ನದೆ ಇದ್ರೆ ಏನೂ ಆಗಲ್ಲ….ಮನೇಲಿ ಅಡಿಕೆ ಇಲ್ವಾ? ಬೇಕಾದ್ರೆ ಅದನ್ನೇ ತಿನ್ನಿ ಸರಸು ಮುಖ ಸಿಂಡರಿಸಿದಳು.
ಮ್ಯಾಟು, ಸೀರಿಯಲ್ ಸೆಟ್ಟು, ಆಕಾಶದೀಪ..ಆಮೇಲೆ ಒಂದ್ ಟೀವೀನೂ ತರೋಣ್ವಾ? ಸರಸು ಮೆಲ್ಲಗೆ ಕೇಳಿದಳು. ಹಾಂ…ಟೀವೀನಾ….ಈ ಟೀವಿ ಚೆನಾಗಿದೆಯಲ್ವೆ…? ಬಸವ ತಡವರಿಸುತ್ತಾ ಕೇಳಿದ. ಸರಸು ಕೂತಲ್ಲಿಂದ ಎದ್ದು ಬಸವನ ಹತ್ತಿರವಿದ್ದ ಕುರ್ಚಿಯಲ್ಲಿ ಕೂತು ಪಿಸುಗುಡುವ ಧನಿಯಲ್ಲಿ ಹೇಳಿದಳು:
ಈ ಟೀವಿ ಚೆನಾಗಿದ್ರೂ ನಮಗೆ ಹೊಸಾ ಟೀವಿ ಬೇಕೂರಿ.ಮತ್ತೇ…ನಿನ್ನೆ ಆಚೆಮನೆ ಅಕ್ಕಮ್ಮ ಹೇಳ್ತಾ ಇದ್ರು…ಅವರು ಈ ಸಲ ಸಂಕ್ರಾಂತಿಗೆ ಹೊಸಾ ಟೀವಿ ತಗೋಬೇಕೂಂತಿದಾರಂತೆ. ಅದಕ್ಕೇ ನಾವು ಈಗಲೇ ತಗೊಂಡು ಬಿಡೋಣ.ಈಗಿರೋ ಟೀವಿಗೆ ಎಕ್ಸ್‌ಚೇಂಜ್ ಆಫರಿದೆಯಂತೆ. ಸ್ವಲ್ಪ ದೊಡ್ ಟೀವೀನೆ ತರೋಣ…
ಅದ್ಸರಿ …ಹಬ್ಬಕ್ ಸ್ಪೆಷಲ್ ಅಡುಗೆ ಏನ್ ಮಾಡ್ತೀಯ? ಬಸವ ನಿಧಾನಕ್ಕೇ ಕೇಳಿದ.
ಚಕ್ಲಿ, ನಿಪ್ಪಟ್ಟು, ಕೋಡುಬಳೆ, ಹೋಳಿಗೆಗೆ ಆರ್ಡರ್ ಕೊಟ್ಟಿದೀನಿ.ಚತುರ್ದಶಿ ದಿನ ಎಣ್ಣೆ ನೀರು ಹಾಕ್ಕೊಂಡ್ ಮೊಸರವಲಕ್ಕಿ ಆಮೇಲೆ ಮದ್ಯಾಹ್ನಕ್ಕೆ ಚೀನೀಕಾಯ್ ಕಡುಬು.ಲಕ್ಷ್ಮೀಪೂಜೆಗೆ ಮಾಮೂಲಿ ಎರೆಡಯ ಕೋಸುಂಬ್ರಿ, ಎರಡು ಪಲ್ಯ, ತಿಳಿ- ಹುಳಿ, ಗೊಜ್ಜನ್ನ…..ಗಿಲಗಿಚ್ಚಿ ಪಾಯಸ. ಗೋಪೂಜೆಗೆ ಬಿಸಿಬೇಳೆ ಬಾತು, ಏರಿಯಪ್ಪ, ಮೆಣಸಿನಕಾಯಿ ಬೋಂಡ…ಸಾಕಾ? ಇಷ್ಟೆಲ್ಲ ಕೇಳಿದ್ದೇ ಪ್ರಸನ್ನನಾದ ಬಸವ ನಡೀ ಹೋಗೋಣ ಶಾಪಿಂಗ್ ಮುಗಿಸಿ ಬರೋಣ ಎಂದ ಹುಮ್ಮಸ್ಸಿನಿಂದ.
ನಂಗೆಷ್ಟು ಮರೆವು ನೋಡ್ರೀ…ಲಕ್ಷ್ಮೀ ಪೂಜೆಗೆ ಹಾಕಲು ಬಾಜೂಬಂದಿ ತೆಗೋಬೇಕಲ್ವಾ….? ನೀವು ಪಾಪ ಬೋನಸ್ ಬಂದಾಗಲೇ ಕೊಡಿಸ್ತೀನಿ ಅಂದಿದ್ರಿ…ಆಗ ಕರೋನಾ ಎರಡನೇ ಅಲೆ ಜೋರಾಗಿತ್ತೂಂತ ನಾನೇ ಬೇಡಾ ಅಂದಿದ್ದೆ ಸರಸ ವ್ಯಾನಿಟಿ ಬ್ಯಾಗು ಹೆಗಲಿಗೇರಿಸುತ್ತಾ ಹೇಳಿದಳು.
ಈಗೇನಾದರೂ ಹೇಳಿದರೆ ರಂಪಾಟ ಮಾಡುತ್ತಾಳೆ ಎಂದರಿತಿದ್ದ ಬಸವ ಸುಮ್ಮನೆ ಕಾರು ಹತ್ತಿದ. ಮೊದಲು ಚಿನ್ನದಂಗಡಿಗೆ ಹೋಗೋಣ….ಅಲ್ಲಿ ಕೆಲಸ ಮುಗಿಸಿದ ಮೇಲೆ ಮಾಲು, ಬಜಾರಿಗೆ ಹೋದ್ರಾಯ್ತು ಎಂದಳು ಸರಸು. ದಾರಿಯುದ್ದಕ್ಕೂ ರಿಪೇರಿ ನೆವದಲ್ಲಿ ರಸ್ತೆ ಉದ್ದಕ್ಕೂ ಹೊಂಡಗಳೇ ಹೊಂಡಗಳು. ಅಂತೂ ಚಿನ್ನದಂಗಡಿ ತಲುಪಿ ಅಲ್ಲಿ ಮೂರ್ತಾಸು ಕಳೆದು ಬಾಜೂಬಂದಿ( ತೋಳಬಂಧಿ) ಕೊಂಡುಕೊಂಡು ಹೊರಬರುವಷ್ಟರಲ್ಲಿ ಸರಸಳ ಮೊಬೈಲ್ ಕೂಗಿತು. ಸರಸಳ ಗೆಳತಿ ಸರಳಾ ತಾನು ತೆಗೆದುಕೊಂಡಿರುವ ನೆಕ್ಲೇಸ್ ಬಗ್ಗೆ ಹೇಳುತ್ತಾ…ಊರ ತುಂಬೆಲ್ಲ ರಸ್ತೆ ಕಿತ್ ಹಾಕಿದಾರೆ ಕಣೆ.ಪಾಪ ನಂ ಮನೆಯವರಿಗೆ ಗಾಡಿ ಓಡಿಸಲೂ ಕಷ್ಟ.ಹಾಗಾಗಿ ಬೇರೆಲ್ಲೂ ಹೋಗೋದು ಬೇಡಾಂತ ಮನೆಗೆ ಮರಳ್ತಾ ಇದೀವಿ ಎಂದಳು.
ಅದನ್ನು ಕೇಳಿದ್ದೇ ತಡ ಸರಸ ಬಸವನ ಕಡೆ ತಿರುಗಿ ರೀ ಸರಳಾ ಹೇಳಿದಳು ರಸ್ತೆ ಎಲ್ಲಾ ಕಡೆ ಕಿತ್ ಹಾಕಿದಾರಂತೆ.ಪಾಪ ನಿಮಗೂ ತೊಂದ್ರೆ..ಮನೆಗೆ ಹೋಗೋಣ ನಡೀರಿ ಎಂದಳು.
ಅಂತೂ ನಿನಗೆ ಬೇಕಾಗಿದ್ ಕೊಂಡ್ಕೊಂಡ್ ಆಯ್ತಲ್ಲ ಎಂದ ಬಸವ. *ಏನ್ರೀ ಇಷ್ಟು ವರುಷದಲ್ಲಿ ನೀವು ಬರೀ ಬಳೆ ಕೊಡಿಸಿದ್ರಿ, ಬರೀ ಸರ, ಬರೀ ಓಲೆ ….ಮಾತ್ರ ಕೊಡಿಸಿದ್ರಿ. ಬಾಜೂಬಂದಿ ಕೊಡಿಸಿರೋದು ಇದೇ ಮೋದಲು.ನಂಗೆ ಲೇವಡಿ ಮಾಡ್ತೀರಲ್ಲ…ಅಂತ ಗೊಳೋ ಅಂತ ಅಳು ಶುರುಮಾಡಿದಳು.
ವಾತಾವರಣ ತಿಳಿಯಾಗಿಸಲು ಬಸವ ಯೂಟ್ಯೂಬಿನಲ್ಲಿ ನಿನ್ನಿಂದಲೇ….ನಿನ್ನಿಂದಲೇ ಕನಸೊಂದು ಶುರುವಾಗಿದೆ ಹಾಡು ಟ್ಯೂನ್ ಮಾಡ್ತಾ ಹೇಳಿದ ಈ ರಸ್ತೇಲಿ ಟೂ ವೀಲರ್ ನಲ್ಲಿ ಓಡಾಡಕ್ಕಾಗಲ್ಲ….ಕಾರು ಓಡಸಕ್ಕಾಗಲ್ಲ ಸುಮ್ಮನೆ ಒಂದ್ ಎತ್ತಿನ್ ಬಂಡಿ ಕೊಂಡ್ಕೊಳ್ಳೋದ್ ವಾಸಿ
ಹಾಡನ್ನು ಮೆಲ್ಲಗೆ ಗುನಗುತ್ತಾ ಸರಸು
ಹೌದೂರಿ…..ಹಾಗೇ ಮಾಡೋಣ ಬಸರೀಕಟ್ಟೇಲಿರೋ ನಂ ಪದ್ದಕ್ಕನ ಎತ್ತಿನ ಬಂಡಿ ಶೋ ರೂಮ್ನಲ್ಲಿ ಇವತ್ತೇ ನಮಗೊಂದು ಎತ್ತಿನ್ ಬಂಡಿ ಬುಕ್ ಮಾಡೋಣ. ಎಂದಳು.
ಆಂ…ಎತ್ತಿನ್ ಬಂಡಿ ಶೋರೂಮಾ? ಅಚ್ಚರಿಯಿಂದ ಬಸವನ ಪ್ರಶ್ನೆ. ಹೂಂ…ನಮ್ಮ ಮುತ್ತಾತನ ಮನೆಯಿಂದ, ನಂ ಸೋದರತ್ತೆ ಮನೆಯಿಂದ ಆಮೇಲೆ ನಂ ಚಿಕ್ಕಿ ಮನೆಯಿಂದ ಸುಮಾರು ಮೂರ್ನಾಲ್ಕು ಎತ್ತಿನ ಬಂಡಿಗಳೂ ಉಪಯೋಗಿಸದೆ ಪದ್ದಕ್ಕನ ಮನೆ ಹಿತ್ತಲಲ್ಲಿ ಇಟ್ಟಿದಾರೆ ಕಣ್ರೀ…..ಈಗಲೇ ಹೇಳಿದ್ರೆ ಹೇಗೂ ರೆಡಿ ಮಾಡಿಸಕ್ಕೆ ಎರಡು ತಿಂಗಳು ಬೇಕು.ನಾವು ಜನವರಿಯಲ್ಲಿ ತರೋಣ ಎಂದಳು ಸರಸು ನಸುನಗುತ್ತಾ.ಜನವರಿಯಲ್ಯಾಕೆ?ಮುಂದಿನ ವಾರ ತಂದ್ರಾಗೋಲ್ವಾ ಬಸವನ ಪ್ರಶ್ನೆ.ಅಷ್ಟೂ ತಿಳಿಯಲ್ವಲ್ಲ ನಿಮಗೆ…ಜನವರಿಯಲ್ಲಿ ತಂದ್ರೆ ೨೦೨೨ ಮಾಡೆಲ್ಲು ಅಂತ ಹೇಳ್ಕೋಬಹುದು ರೀ. ಆಮೇಲೆ ನಾನೇ ಗಾಡಿ ಓಡಿಸ್ತೀನಿ.ಡ್ರೈವಿಂಗ್ ಲೈಸೆನ್ಸ್ ರಗಳೆ ಇಲ್ಲ ಎಂದಳು.
ಸರಿ ಬಿಡು ಒಳ್ಳೆಯದೇ ಆಯ್ತು.ಹೆಲ್ಮೆಟ್ಟೂ ಹಾಕೋಬೇಕೂಂತಿಲ್ಲ.ನೀ ಮುಂದ್ ಕೂತು ಗಾಡಿ ಓಡ್ಸು.ನಾ ಹಿಂದ್ ಕೂರ್ತೀನಿ ಎಂದ ಬಸವ.
ಹಗಲೇನೋ ಪರ್ವಾಗಿಲ್ಲ….ರಾತ್ರಿ ಎತ್ತಿನ್ ಬಂಡಿಗೆ ಜೋತಾಡಿಸಲು ಲಾಟೀನು ಬೇಕು. ಲಾಟೀನೇನೋ ಇದೆ….ಆದರೆ ಲಾಠಿ ಬೇಕು ಕಣ್ರೀ.ತೀರ ಅದನ್ನೂ ಪದ್ದಕ್ಕನ ಹತ್ರ ಕೇಳೋದ್ ಚೆನಾಗಿರಲ್ಲ ಅಲ್ವಾ? ಎಂದಳು ಸರಸು.
ಈ ವೀಕೆಂಡ್ ಶಾಪಿಂಗ್ ಲಾಠಿಗೇ ಮೀಸಲಿಡೋಣ ಏನಂತಿಯಾ? ಎನ್ನುತ್ತಾ ಕಣ್ಣು ಹೊಡೆದ ಬಸವ.
ಹೊಸದಾಗಿ ಕೊಂಡು ತಂದ ಬಾಜು ಬಂದಿಯನ್ನು ತೊಟ್ಟುಕೊಂಡು ತಾನು ಎತ್ತಿನಬಂಡಿ ಓಡಿಸುವ ದಿನವನ್ನು ಕಲ್ಪಿಸಿಕೊಳ್ಳುತ್ತಾ ಮನೆಯೊಳಗೆ ನಡೆದಳು ಸರಸು.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)