ಈ ಹಿನ್ನೆಲೆಯಲ್ಲಿ ಭಾರತೀಯ ಮಹಿಳೆಯರು……
ಮಹಿಳೆಯರಿಗೆ ವಿಶ್ವದಲ್ಲಿ ಅತ್ಯಂತ ಹೆಚ್ಚು ಗೌರವ ಕೊಡುವ ದೇಶ ಭಾರತ ನಿಜವೇ ?…….
ಮಹಿಳೆಯರಿಗೆ ಭಾರತ ಸುರಕ್ಷಿತವೇ ?………
ಇಲ್ಲಿ ಆರೋಗ್ಯಕರ ವಾತಾವರಣ ಇದೆಯೇ ?……….
ಯಾವುದೋ ಯಾರದೋ ವರದಿಯನ್ನು ಕೇಳಿ ನಾವು ತಿಳಿದುಕೊಳ್ಳಬೇಕಿಲ್ಲ. ವಿಮರ್ಶೆ ಮಾಡಿಕೊಳ್ಳಬೇಕಿಲ್ಲ.
ಈ ಮಾಧ್ಯಮ ಕ್ರಾಂತಿಯ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದಿನನಿತ್ಯದ ಘಟನೆಗಳ ಮಾಹಿತಿ ನಮಗೆ ಸಿಗುತ್ತದೆ. ಅದರ ಆಧಾರದಲ್ಲಿ ನಾವುಗಳೇ ಸ್ವಯಂ ವಿಮರ್ಶೆ ಮಾಡಿಕೊಳ್ಳೋಣ…….
ಸುರಕ್ಷತೆ ಎಂದರೆ ವಿಶ್ವದ ಇತರೆ ದೇಶಗಳ ಸುರಕ್ಷತೆ ಅಥವಾ ಅಸುರಕ್ಷತೆಯ ಆಧಾರದಲ್ಲಿ ನಾವು ಇದನ್ನು ಅಳತೆ ಮಾಡಬೇಕೆ ? ಅಥವಾ,
ಭಾರತದ ಸಂಸ್ಕೃತಿ ಜೀವನ ಶೈಲಿ ಮತ್ತು ಇಲ್ಲಿ ಮಹಿಳೆಯರಿಗೆ ಇರುವ ಗೌರವ – ಪೂಜ್ಯ ಭಾವನೆಗಳನ್ನು ಅಳತೆಗೋಲಾಗಿ ಈ ವಿಷಯ ವಿಮರ್ಶಿಸಬೇಕೆ ?
ಸದ್ಯಕ್ಕೆ ಇತರ ದೇಶಗಳ ಮಹಿಳೆಯರ ಪರಿಸ್ಥಿತಿಯನ್ನು ಪಕ್ಕಕ್ಕಿಟ್ಟು ಭಾರತೀಯ ಸಮಾಜದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ನೋಡೋಣ……
ಮೇಲ್ನೋಟಕ್ಕೆ ಭಾರತದ ಮಹಿಳೆಯರು ಖಂಡಿತ ಸುರಕ್ಷಿತ….
ಶಾಲಾ ಕಾಲೇಜುಗಳು, ಉದ್ಯೋಗ ಸ್ಥಳಗಳು, ಸಂತೆ, ಜಾತ್ರೆ, ಮಾರ್ಕೆಟ್ ಮುಂತಾದ ಜನಜಂಗುಳಿ ಪ್ರದೇಶಗಳು, ಪಾರ್ಕ್, ಗೃಹಿಣಿಯರು ಇತ್ಯಾದಿ ಎಲ್ಲವನ್ನೂ ಗಮನಿಸಿದಾಗ ನಿಜಕ್ಕೂ ಸುರಕ್ಷತೆಯ ಭಾವ ಉಂಟಾಗುತ್ತದೆ. ಅತ್ಯಾಚಾರದ ಬಗ್ಗೆ ಭಾರತೀಯರ ಮನಸ್ಸುಗಳಲ್ಲಿ ಅತ್ಯಂತ ಆಕ್ರೋಶದ ಮತ್ತು ಅಸಹ್ಯದ ಭಾವನೆ ಇದೆ.
ಜೈಲಿನಲ್ಲೂ ಕೂಡ ಬೇರೆ ಅಪರಾಧಿಗಳಿಗಿಂತ ಅತ್ಯಾಚಾರದ ಆರೋಪಿಯನ್ನು ಜೈಲಿಗೆ ಮೊದಲು ಪ್ರವೇಶಿಸಿದಾಗ ಇತರ ಖೈದಿಗಳು ಹೊಡೆಯುವರಂತೆ. ಕಾರಣ ಆತ ಅತ್ಯಂತ ಹೀನಾಯ ಕೆಲಸ ಮಾಡಿದ್ದಾನೆ ಎಂದು. ಕೊಲೆ ಕಳ್ಳತನ ಸಹಿಸಬಹುದು ಆದರೆ ಅಮಾಯಕ ಮಹಿಳೆಯ ಅತ್ಯಾಚಾರ ಖೈದಿಗಳಿಗೂ ಸಹ ಸಹಿಸಲು ಸಾಧ್ಯವಿಲ್ಲ.
ಇತ್ತೀಚಿನ ಆಧುನಿಕ ಮತ್ತು ಚಿಕ್ಕದಾದ ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೇ ಹೆಚ್ಚು ಅಧಿಕಾರ ಇದೆ ಎಂಬುದು ಸಹ ಮೇಲ್ನೋಟಕ್ಕೆ ಕಂಡುಬರುತ್ತದೆ. ಹಾಸ್ಯ ಲೇಖನಗಳು ಮತ್ತು ಸಿನಿಮಾ – ನಾಟಕ – ಧಾರವಾಹಿಗಳಲ್ಲಿ ಇದನ್ನು ಪ್ರತಿನಿತ್ಯ ಗಮನಿಸುತ್ತೇವೆ.
ಈ ರೀತಿಯ ವ್ಯವಸ್ಥೆಯಲ್ಲಿ ನಮ್ಮ ಮಹಿಳೆಯರು ಸಾಮಾನ್ಯ ಸ್ಥಿತಿಯಲ್ಲಿ ಸುರಕ್ಷಿತ ಎಂದು ಹೇಳಬಹುದು.
ಆದರೆ,…….
ಭಾರತದಲ್ಲಿ ಮಹಿಳೆಯರಿಗೆ ಇರುವ ಪೂಜನೀಯ ಸ್ಥಾನ, ತಾಯಿ, ತಂಗಿ, ಅಕ್ಕ, ಅತ್ತಿಗೆ, ಹೆಂಡತಿ ಮುಂತಾದ ಭಾವನಾತ್ಮಕ ಸಂಬಂಧಗಳ ಆಧ್ಯಾತ್ಮಿಕ ಹಿನ್ನೆಲೆಯ ಸಂಸ್ಕಾರದಲ್ಲಿ ನಿಜಕ್ಕೂ ಮಹಿಳೆ ಆ ಗೌರವ ಪಡೆಯುತ್ತಿದ್ದಾಳೆಯೇ ? ಆಕೆ ಅತ್ಯಂತ ಸುರಕ್ಷಿತ ಎಂದು ಧೈರ್ಯವಾಗಿ ಹೇಳಬಹುದೆ ?…….
ಈ ಪ್ರಶ್ನೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು……..
ಸಿನಿಮಾ – ರಾಜಕೀಯ ಕ್ಷೇತ್ರಗಳನ್ನು ಬಿಡಿ. ಅಲ್ಲಿ ಕೆಲವು ಮಹಿಳೆಯರು ಬಲವಂತದ, ಅನಿವಾರ್ಯ ಮತ್ತು ಆಕರ್ಷಣೆಯ ಶೋಷಣೆಗೆ ಒಳಗಾಗುತ್ತಾರೆ ಎಂಬುದು ಬಹಿರಂಗ ಸತ್ಯ. ಅದು ನೇರ ಅತ್ಯಾಚಾರವಾಗದೆ ಪರೋಕ್ಷ ಅತ್ಯಾಚಾರವಾಗುವುದರಿಂದ ಅದಕ್ಕೆ ಅಧೀಕೃತತೆ ಇರುವುದಿಲ್ಲ ಆ ಕೆಲವು ಘಟನೆಗಳ ಬಗ್ಗೆ ಚರ್ಚೆ ಅನಾವಶ್ಯಕ.
ನಾವು ಸಮಾಜದ ಸಾಮಾನ್ಯ ಮಹಿಳೆಯರ ಸ್ಥಿತಿ ಗಮನಿಸೋಣ. ಈಗಲೂ ಒಟ್ಟು ಭಾರತದಲ್ಲಿ ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರವೇ ದಿನನಿತ್ಯ ಹತ್ತಾರು ಅತ್ಯಾಚಾರದ ಪ್ರಕರಣಗಳು ದಾಖಲಾಗುತ್ತವೆ. ದಾಖಲಾಗದ ಅಷ್ಟೇ ಪ್ರಕರಣಗಳು ಮುಚ್ಚಿ ಹೋಗುತ್ತವೆ……
ಈಗಲೂ ಒಂಟಿ ಮಹಿಳೆಯರು ದೂರದ ಪ್ರಯಾಣ ಅಥವಾ ರಾತ್ರಿಯ ಪ್ರಯಾಣ ಆತಂಕಕಾರಿ ಎಂಬುದು ನಮಗೆಲ್ಲಾ ತಿಳಿದಿದೆ. ಗಾರ್ಮೆಂಟ್ಸ್, ಮನೆಗೆಲಸ, ಕೂಲಿ ಮುಂತಾದ ಆರ್ಥಿಕವಾಗಿ ಕೆಳ ದರ್ಜೆಯ ಕೆಲಸಗಳಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ನಿರಂತರವಾಗಿರುವುದನ್ನು ಕಾಣಬಹುದು.
ಕಾಲೇಜುಗಳಿಗೆ, ಪ್ರವಾಸಗಳಿಗೆ, ಹಾಸ್ಟಲ್ ಗಳಿಗೆ ಮುಂತಾದ ಕಡೆ ಪುರುಷರಷ್ಟು ಸಹಜವಾಗಿ ಮಹಿಳೆಯರನ್ನು ಕಳಿಸಲು ಪೋಷಕರು ಒಪ್ಪುವುದಿಲ್ಲ. ಅದಕ್ಕೆ ಕಾರಣ ಆಕೆಯ ಸುರಕ್ಷತೆ. Social media ಗಳಲ್ಲಿ ಸಹ ಮಹಿಳೆಯರ ಫೋಟೋಗಳನ್ನು ದುರುಪಯೋಗ ಮಾಡಿಕೊಂಡು ಅವರಿಗೆ ಬ್ಲಾಕ್ ಮೇಲ್ ಮಾಡಲಾಗುವುದು ಎಂದು ಹೇಳಲಾಗುತ್ತದೆ.
ಬಸ್ಸು ಮತ್ತು ರೈಲುಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗಳು ದಿನನಿತ್ಯ ವರದಿಯಾಗುತ್ತಲೇ ಇದೆ.
ಈ ವಿಷಯಗಳನ್ನು ನೋಡಿದಾಗ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೇಲ್ನೋಟಕ್ಕೆ ಇರುವ ಗೌರವಾಧರಗಳು ವಾಸ್ತವದಲ್ಲಿ ಇಲ್ಲ.
ಅದರಲ್ಲೂ ಅಸಹಾಯಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ಸಾಮಾನ್ಯವಾಗಿದೆ.
ವಿಕೃತ ಮನಸ್ಸುಗಳು ಕೆಲವು ಅತಿಕಾಮಿಗಳನ್ನು ಹೊರತುಪಡಿಸಿದರು ಸಾಮಾನ್ಯ ಜನರ ಮನಸ್ಥಿತಿಯೂ ಕೂಡ ಬದಲಾಗಬೇಕಿದೆ.
ಕೊನೆಯದಾಗಿ ದಯವಿಟ್ಟು ಅರ್ಥಮಾಡಿಕೊಳ್ಳಿ. ಭಾರತದಲ್ಲಿ ಮಹಿಳೆ ಅತ್ಯಂತ ಪೂಜನೀಯ ಸ್ಥಾನ ಹೊಂದಿದ್ದಾಳೆ ನಿಜ. ಅದು ಕೇವಲ ತನ್ನ ತಾಯಿ, ತಂಗಿ, ಅಕ್ಕ, ಮಗಳು, ಹೆಂಡತಿ, ಪ್ರೇಯಸಿ ಮತ್ತು ಇತರ ರಕ್ತ ಸಂಬಂಧಿ ಹೆಣ್ಣು ಮಕ್ಕಳು ಮಾತ್ರ. ಇದನ್ನು ಹೊರತುಪಡಿಸಿ ಇತರರನ್ನು ನಾವು ಹೇಗೆ ನೋಡುತ್ತೇವೆ ಎಂದು ನಮ್ಮ ಮನಃಸಾಕ್ಷಿಗೆ ಕೇಳಿಕೊಂಡು ಉತ್ತರ ಹುಡುಕಬೇಕಿದೆ.
ನಮ್ಮ ಪರಿಚಿತ ಹೆಣ್ಣು ಮಕ್ಕಳಿಗೆ ಅದರಲ್ಲೂ ಕೆಳಹಂತದಲ್ಲಿರುವವರಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವವರಿಗೆ, ಉದ್ಯೋಗ ಮಾಡುವವರಿಗೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆಯಿಂದ ಇರುವವರಿಗೆ ಕೇಳಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ.
ವ್ಯವಸ್ಥೆ ತೀರಾ ಹದಗೆಟ್ಟಿಲ್ಲದಿದ್ದರೂ ಸಂಪೂರ್ಣ ಸುರಕ್ಷತೆಯೂ ಇಲ್ಲ.
ಆದ್ದರಿಂದ ಕನಿಷ್ಠ ನಮ್ಮ ಸಮಕಾಲೀನ ಸಂದರ್ಭದಲ್ಲಿಯಾದರೂ ಮಹಿಳೆಯರ ಸುರಕ್ಷತೆಯ ಮಟ್ಟವನ್ನು ಇನ್ನಷ್ಟು ಉತ್ತಮ ಪಡಿಸಲು ನಾವುಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಮ್ಮ ಕೈಲಾದ ಪ್ರಯತ್ನ ಮಾಡೋಣ. ಈ ವಿಷಯದಲ್ಲಿ ಪಕ್ಷ ಪಂಥ ಧರ್ಮ ಜಾತಿ ಭಾಷೆಗಳನ್ನು ಮೀರಿ ಮಾನವೀಯತೆ ಮೆರೆಯೋಣ ಎಂದು ಆಶಿಸುತ್ತಾ…
ವಿವೇಕಾನಂದ ಹೆಚ್ ಕೆ
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ