January 9, 2025

Newsnap Kannada

The World at your finger tips!

Dr K Sudhakar 1581670361

sudhakar picture

ಡೆಲ್ಟಾ ಪ್ಲಸ್ ವೈರಾಣು ಬಗ್ಗೆ ಆತಂಕ ಬೇಡ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌

Spread the love
  • ರಾಜ್ಯದ‌ ಆರು ಕಡೆ ಲ್ಯಾಬ್ ಸ್ಥಾಪನೆ

ಕೋವಿಡ್ ಡೆಲ್ಟಾ ಪ್ಲಸ್ ವೈರಾಣುವಿನ ಬಗ್ಗೆ ಹೆಚ್ಚೇನೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಡೆಲ್ಟಾ ಪ್ಲಸ್ ವೈರಾಣುವಿನ ಒಂದು ಪ್ರಕರಣ ಬೆಂಗಳೂರಿನಲ್ಲಿ ಮತ್ತು ಇನ್ನೊಂದು ಪ್ರಕರಣ ಮೈಸೂರಿನಲ್ಲಿ ಕಂಡುಬಂದಿದೆ. ಇಬ್ಬರೂ ಸೌಮ್ಯ ಲಕ್ಷಣಗಳನ್ನು ಹೊಂದಿದ ರೋಗಿಗಳಾಗಿದ್ದಾರೆ. ಮೈಸೂರಿನ ರೋಗಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಹೊಸ ವೈರಾಣುವಿನಿಂದ ಸೋಂಕಿತರಿಗೆ ಹೆಚ್ಚು ಸಮಸ್ಯೆಯೇನೂ ಆಗಿಲ್ಲ. ಇವರ ಸಂಪರ್ಕಿತರಿಗೂ ಪರೀಕ್ಷೆ ಮಾಡಿಸಿ ನೋಡಿದಾಗಲೂ ನೆಗೆಟಿವ್ ವರದಿ ಬಂದಿದೆ. ಆದ್ದರಿಂದ ಈ ವೈರಾಣು ಬಗ್ಗೆ ವಿಶೇಷವಾಗಿ ಆತಂಕಪಡುವ ಅಗತ್ಯವಿಲ್ಲ. ಪ್ರತಿ ದಿನ ಜೀನೋಮ್ ಸೀಕ್ವೆನ್ಸಿಂಗ್ ಆಗುತ್ತಿರುತ್ತದೆ. ಈ ವೇಳೆ ವೈರಾಣು ಪತ್ತೆಯಾಗುತ್ತದೆ ಎಂದರು.

ಕೇರಳದಲ್ಲಿ ಸೋಂಕು ಹೆಚ್ಚಿದ್ದು, ಪಾಸಿಟಿವಿಟಿ ದರ 10% ಗಿಂತ ಅಧಿಕವಾಗಿದೆ. ನಮ್ಮ ರಾಜ್ಯ ಕೇರಳ ಗಡಿ ಹಂಚಿಕೊಳ್ಳುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಅದೇ ರೀತಿ ಮಹಾರಾಷ್ಟ್ರ ಕೂಡ ಗಡಿ ಹಂಚಿಕೊಂಡಿದೆ. ಗಡಿಭಾಗದ ಜಿಲ್ಲೆಗಳಲ್ಲಿ ಹೆಚ್ಚು ಪರೀಕ್ಷೆ ಮಾಡಬೇಕು, ಮುಂಜಾಗ್ರತಾ ಕ್ರಮ ವಹಿಸಬೇಕು, ಅಲ್ಲಿಂದ ಒಳಬರುವ ಪ್ರಯಾಣಿಕರಿಗೆ ರಾಂಡಮ್ ಪರೀಕ್ಷೆ ಮಾಡಬೇಕು ಎಂದು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದರು.

  • ಗಡಿಭಾಗಗಳನ್ನು ಮುಚ್ಚುವುದು ಸಮಂಜಸವಲ್ಲ. ಆದರೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
  • ಬಸ್, ರೈಲು ಎಲ್ಲಿಂದ ಬಂದರೂ ಆಯಾ ನಿಲ್ದಾಣಗಳಲ್ಲಿ ಎಚ್ಚರ ವಹಿಸಬೇಕು. *
  • ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಹುಬ್ಬಳ್ಳಿಯ ನಾಲ್ಕು ವೈದ್ಯಕೀಯ ಕಾಲೇಜುಗಳು ಹಾಗೂ ಮಂಗಳೂರು ಮತ್ತು ವಿಜಯಪುರ ಜಿಲ್ಲಾಸ್ಪತ್ರೆಗಳಲ್ಲಿ ಒಟ್ಟು 6 ಜೀನೋಮ್ ಸೀಕ್ವೆನ್ಸ್ ಲ್ಯಾಬ್ ಆರಂಭಿಸಲಾಗುತ್ತಿದೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮ ಕುರಿತು ಚರ್ಚೆಯಾಗಲಿದೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಚಿಕಿತ್ಸೆಯಲ್ಲಿ ಕೆಲ ವ್ಯತ್ಯಾಸ ಇದೆ. ಈ ಬಗ್ಗೆ ತಜ್ಞರು ತಿಳಿಸಿದ್ದಾರೆ ಎಂದರು.

500 ಸಾಂದ್ರಕ ಹಸ್ತಾಂತರ:

ಸ್ನೇಹ ಚಾರಿಟೇಬಲ್ ಟ್ರಸ್ಟ್ ವತಿಯಿಂದ 500 ಆಕ್ಸಿಜನ್ ಸಾಂದ್ರಕ, 10 ಸಾವಿರ ಕಾನ್ಸಂಟ್ರೇಟರ್ ಟ್ಯೂಬ್, ಸರ್ಕಾರಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡರು. ಕೋವಿಡ್ ನಿಯಂತ್ರಣಕ್ಕೆ 28 ಕೋಟಿ ರೂ. ಮೊತ್ತದ ಸಹಕಾರ ನೀಡುವುದಾಗಿ ಟ್ರಸ್ಟ್ ತಿಳಿಸಿದೆ. ಪೋಸ್ಟ್ ಕೋವಿಡ್ ಗಾಗಿ ಆಸ್ಪತ್ರೆ ನಿರ್ಮಿಸುವ ಕಾರ್ಯವನ್ನೂ ಮಾಡಲಾಗಿದೆ. ಇದಕ್ಕಾಗಿ ಟ್ರಸ್ಟ್ ಗೆ ಕೃತಜ್ಞತೆಗಳು ಎಂದು ಸಚಿವರು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!