December 25, 2024

Newsnap Kannada

The World at your finger tips!

sudhakar1

ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಿದ ನಂತರವೇ ಕಾಲೇಜು ಆರಂಭ: ಸಚಿವ ಸುಧಾಕರ್

Spread the love

18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಿ ನಂತರ ಕಾಲೇಜು ಆರಂಭಿಸುವ ಕುರಿತು ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಲೇಜು ಆರಂಭದ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಈ ಬಗ್ಗೆ ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳೆಲ್ಲರಿಗೂ ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭಿಸಬಹುದು ಎಂದು ತಾಂತ್ರಿಕ ಸಲಹಾ ಸಮಿತಿಯು ಮುಖ್ಯಮಂತ್ರಿಗಳ ಸಭೆಯಲ್ಲಿ ಸಲಹೆ ನೀಡಿತ್ತು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಮತ್ತೆ ಚರ್ಚಿಸಲಾಗುವುದು. ವಿದ್ಯಾರ್ಥಿಗಳ ಕ್ಷೇಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಆದ್ದರಿಂದ ಲಸಿಕೆ ಕೊಟ್ಟೇ ಕಾಲೇಜು ಆರಂಭಿಸಬೇಕೆಂದರೆ ಯಾವ ರೀತಿ, ಎಷ್ಟು ದಿನದೊಳಗೆ ಲಸಿಕಾ ಕಾರ್ಯಕ್ರಮ ಮಾಡಬೇಕೆಂದು ಚರ್ಚಿಸಲಾಗುವುದು ಎಂದರು.

ಮೊದಲು ಉನ್ನತ ಶಿಕ್ಷಣ, ನಂತರ ಪ್ರೌಢಶಾಲೆ ಆರಂಭಿಸಬೇಕಾಗುತ್ತದೆ. ಹೀಗೆ ಹಂತಹಂತವಾಗಿ ಆರಂಭಿಸಬೇಕಾಗುತ್ತದೆ. ಸಣ್ಣ ಮಕ್ಕಳಿಗೆ ಮೊದಲೇ ಶಾಲೆ ಆರಂಭಿಸಲಾಗುವುದಿಲ್ಲ. ಇದರಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿದೆ ಎಂದರು.

ಟ್ಯಾಬ್ ವಿತರಣೆ

ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಟ್ಯಾಬ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಉನ್ನತ ಶಿಕ್ಷಣಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಯುವಜನರು ಉನ್ನತ ಶಿಕ್ಷಣ ಪಡೆಯಲು ಆದ್ಯತೆ ನೀಡಬೇಕು. ಚಿಕ್ಕಬಳ್ಳಾಪುರದಲ್ಲಿ ಕೋವಿಡ್ ಮಹಾ ಅಭಿಯಾನದ ಮೊದಲ ದಿನ 40 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಬೇಕಿದೆ ಎಂದರು.

ಕಾಲೇಜಿಗೆ ಒಟ್ಟು 6.67 ಕೋಟಿ ಅನುದಾನ ನೀಡಲಾಗಿದೆ. ಸರ್ಕಾರಿ ಮಹಿಳಾ ಕಾಲೇಜಿಗೆ 3.20 ಕೋಟಿ ನೀಡಲಾಗಿದೆ. ಶೀಘ್ರದಲ್ಲೇ ಹೆಣ್ಣುಮಕ್ಕಳಿಗಾಗಿ ಕಾಲೇಜು ಆರಂಭಿಸಿ ಈ ವರ್ಷದಲ್ಲೇ ಉದ್ಘಾಟನೆ ಮಾಡಬೇಕಿದೆ. ಹೊಸ ಮೆಡಿಕಲ್ ಕಾಲೇಜು 2022 ರ ಜೂನ್ ಅಥವಾ ಸೆಪ್ಟೆಂಬರ್ ವೇಳೆಗೆ ಆರಂಭವಾಗಲಿದ್ದು, ಉತ್ಕೃಷ್ಟ ಆರೋಗ್ಯ ಸೇವೆ ಸಿಗಲಿದೆ ಎಂದರು.

ಇತರೆ ಅಂಶಗಳು:
  • ರಾಜ್ಯದಲ್ಲಿ 2 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ದಕ್ಷಿಣ ಭಾರತದಲ್ಲೇ ರಾಜ್ಯ ನಂ.1 ಆಗಿದೆ. ಲಸಿಕೆ ಪಡೆದವರು ಸೋಂಕಿಗೊಳಗಾಗಿರುವುದು ತೀರಾ ಕಡಿಮೆ.
  • ಜಿನೋಮಿಕ್ ಸೀಕ್ವೆನ್ಸ್ ನಿಂದ ರೂಪಾಂತರಿ ವೈರಾಣು ಪತ್ತೆ ಮಾಡಲಾಗುತ್ತಿದೆ. ಸಂಪರ್ಕಿತರಿಗೆ ವೈರಾಣು ಹರಡಿಲ್ಲ. ಸೀಕ್ವೆನ್ಸ್ ಗೆ 6 ಲ್ಯಾಬ್ ರೂಪಿಸಲಾಗುತ್ತಿದೆ.
  • ಸರ್ಕಾರಿ ಆಸ್ಪತ್ರೆಗಳಲ್ಲೇ ಹಾಸಿಗೆ ಖಾಲಿ ಇದೆ. ಖಾಸಗಿಯಲ್ಲಿ ನಾನ್ ಕೋವಿಡ್ ರೋಗಿ ಬಂದರೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. 3 ನೇ ಅಲೆ ಬಂದರೆ ಆಗ ಹಾಸಿಗೆ ಕೇಳಲಾಗುವುದು.
  • ಎತ್ತಿನಹೊಳೆ ಯೋಜನೆ ಬೇಗ ಅನುಷ್ಠಾನವಾಗಲು ಒತ್ತಡ ಹೇರಲಾಗುವುದು. ಈ ಭಾಗದ ಪ್ರತಿನಿಧಿಗಳು ಸೇರಿ ಸಿಎಂಗೆ ಮನವರಿಕೆ ಮಾಡಿಕೊಡಲಾಗಿದೆ. ಕೋವಿಡ್ ನಿಂದಾಗಿಯೂ ಸ್ವಲ್ಪ ಸಮಸ್ಯೆಯಾಗಿದೆ.
  • ಕೇಂದ್ರ ಸರ್ಕಾರ ಒಂದೇ ದಿನ 80 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿರುವುದನ್ನು ಕಾಂಗ್ರೆಸ್ ಮುಖಂಡರು ಸ್ವಾಗತಿಸಬೇಕಿತ್ತು. ರಾಜಕೀಯದಲ್ಲಿ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು.
Copyright © All rights reserved Newsnap | Newsever by AF themes.
error: Content is protected !!