November 28, 2024

Newsnap Kannada

The World at your finger tips!

deepa1

ಸಾಮಾನ್ಯ ಜನರ ಮನಸ್ಸಿನಲ್ಲಿರುವ ಆಕ್ರೋಶ ಪ್ರೆಂಚ್ ಕಾಂತ್ರಿ‌ಗೂ ಮೀರಿದ್ದು..

Spread the love

ಪ್ರೆಂಚ್ ಕ್ರಾಂತಿಯ ಬಗ್ಗೆ ಎಲ್ಲರೂ ಕೇಳಿರಬಹುದು.

ಮಾನವ ಇತಿಹಾಸದಲ್ಲಿ ಕೆಲವು ಅತ್ಯಮೂಲ್ಯ ತಿರುವುಗಳಿಗೆ ಕಾರಣವಾದ ಅನೇಕ ಮುಖ್ಯ ಘಟನೆಗಳಲ್ಲಿ ಇದು ಸಹ ಒಂದು.

ಅಂದಿನ ಆಡಳಿತಗಾರರು ಮತ್ತು ಶ್ರೀಮಂತರ ಸುಖಲೋಲುಪತೆ, ದೌರ್ಜನ್ಯ, ಶೋಷಣೆ, ಅರಾಜಕತೆ ವಿರುದ್ಧ ‌ಸಾಮಾನ್ಯ ಜನರು ದಂಗೆ ಎದ್ದು ಅವರನ್ನು ಬೀದಿ ಬೀದಿಗಳಲ್ಲಿ ಅಟ್ಟಾಡಿಸಿಕೊಂಡು ಗಿಲೋಟಿನ್ ಎಂಬ ಯಂತ್ರಕ್ಕೆ ಅವರ ತಲೆ ನೀಡಿ ಕ್ರೂರವಾಗಿ ಕೊಲ್ಲುತ್ತಾರೆ.

2005 ರಲ್ಲಿ ಫ್ರಾನ್ಸ್ ದೇಶದ ಆ ಜಾಗಕ್ಕೆ ನಾನು ಭೇಟಿ ಸಹ ಕೊಟ್ಟಿದ್ದೆ. 1789/99 ರ ನಡುವಿನ ಆ ಘಟನೆಯ ಕುರುಹುಗಳು, ಸ್ಮಾರಕ, ಗಿಲೋಟಿನ್ ಈಗಲೂ ಮೂಕ ಸಾಕ್ಷಿಯಾಗಿ, ಪ್ರವಾಸಿ ತಾಣವಾಗಿ ಅನೇಕ ಕಥೆಗಳನ್ನು ಹೇಳುತ್ತದೆ.

ಇದನ್ನು ಇಲ್ಲಿ ಪ್ರಸ್ತಾಪಿಸಲು ಮುಖ್ಯ ಕಾರಣ ಕರ್ನಾಟಕದ ರಾಜಕೀಯ. ಏನೇ ಪ್ರಜಾಪ್ರಭುತ್ವ, ಆ ಪಕ್ಷ, ಈ ಪಕ್ಷ, ಮಣ್ಣು ಮಸಿ ಎಂದು ಸಮರ್ಥನೆ ಮಾಡಿಕೊಂಡರು ಈ ಕ್ಷಣ ಆಡಳಿತ ವ್ಯವಸ್ಥೆ ಅರಾಜಕತೆಯತ್ತ ಸಾಗಿದೆ. ಎಲ್ಲಾ ಪಕ್ಷದ ಜನ ಪ್ರತಿನಿಧಿಗಳ ಪಾಪದ ಕೊಡ ಬಹುತೇಕ ತುಂಬಿ ತುಳುಕುತ್ತಿದೆ.

ಪ್ರೆಂಚ್ ಕ್ರಾಂತಿ ತುಂಬಾ ತುಂಬಾ ಹಿಂಸೆಯನ್ನು ಪ್ರತಿಪಾದಿಸುತ್ತದೆ. ಕರ್ನಾಟಕಕ್ಕೆ ಅದರ ಅವಶ್ಯಕತೆ ಇಲ್ಲ ಮತ್ತು ಅದು ಅಸಾಧ್ಯ. ಆದರೆ‌ ಸಾಮಾನ್ಯ ಜನರ ಮನಸ್ಸಿನೊಳಗಿನ ಆಕ್ರೋಶ ಮಾತ್ರ ಅದೇ ಮಟ್ಟದಲ್ಲಿ ಇದೆ.

ಹಿಂದೊಮ್ಮೆ ಹೇಳಿದಂತೆ ಕರ್ನಾಟಕದ ಮಟ್ಟಿಗೆ ಈಗಲೂ ತಾವು ಬಯಸಿದ ಊಟ ಮಾಡಲು ಬಟ್ಟೆ ತೊಡಲು ಸಾಧ್ಯವಾಗದ ಲಕ್ಷಾಂತರ ಜನರಿದ್ದಾರೆ.
ಹಲವು ಮಾರಣಾಂತಿಕ ಖಾಯಿಲೆಗಳು ಇದ್ದರೂ ಅದಕ್ಕೆ ಚಿಕಿತ್ಸೆ ಪಡೆದು ಕೊಳ್ಳಲು ಹಣವಿಲ್ಲದೆ ಸಾವಿನ ನಿರೀಕ್ಷೆಯಲ್ಲಿರುವವರು ಸಾಕಷ್ಟು ಜನರಿದ್ದಾರೆ.

ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ತಮ್ಮ ಮಕ್ಕಳಿಗೆ ಶಾಲೆಗೆ ಸೇರಿಸಲು ಹಣದ ಕೊರತೆ ಎದುರಿಸಿ ಪರಿಚಿತರ ಬಳಿ ಸಾಲ ಪಡೆಯುವ ಅನೇಕ ಕುಟುಂಬಗಳು ಇವೆ. ಶೇಕಡಾ 95% ಜನ ಜೀವನದಲ್ಲಿ ಒಮ್ಮೆಯೂ ವಿಮಾನದಲ್ಲಿ ಪ್ರಯಾಣಿಸಿಯೇ ಇಲ್ಲ.
ಇನ್ನೂ ಹೇಳುತ್ತಾ ಹೋದರೆ ಇದು ಮುಗಿಯದ ಕಥೆ.

ಇಂತಹ ರಾಜ್ಯದಲ್ಲಿ ಜನರನ್ನು ಪ್ರತಿನಿಧಿಸಿ ಅವರ ಸಮಸ್ಯೆಗಳಿಗೆ ಧ್ವನಿಯಾಗಿ ಅದನ್ನು ನಿವಾರಿಸುವ ಪ್ರಯತ್ನ ಮಾಡದೆ, ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಾ, ಪಂಚತಾರಾ ಹೋಟೆಲ್ ರೆಸಾರ್ಟ್ಸ್ ಗಳಲ್ಲಿ, ವಾಸಿಸತ್ತಾ, ತಮಗೆ ಅನ್ಯಾವಾಗಿದೆ ಎಂದು ಹೇಳಿಕೆ ಕೊಡುತ್ತಾ ಸುಮಾರು 7 ಕೋಟಿ ಜನರನ್ನು ವಂಚಿಸಿ ಆಡಳಿತದ ಅರಾಜಕತೆ ಉಂಟುಮಾಡುವ ಈ ಜನರಿಗೆ ಹೇಗೆ ಬುದ್ದಿ ಕಲಿಸಿವುದು.

ಈ ಜನ ಪ್ರತಿನಿಧಿಗಳು ಇನ್ನೊಂದು ಪಕ್ಷ ಸೇರಿ ಆಡಳಿತ ನಡೆಸಿದರೂ ಅಲ್ಲಿಯೂ ಇದೇ ಹಣೆ ಬರಹ.
ಹೋಗಲಿ ಅಪಾರ ಹಣ ಮತ್ತು ಸಮಯ ಖರ್ಚು ಮಾಡಿ ಮತ್ತೆ ಚುನಾವಣೆ ಮಾಡಿದರೂ ಅಂತಹ ವ್ಯತ್ಯಾಸವಾಗುವುದಿಲ್ಲ.

ಎಂದಿನಂತೆ ಗೌಡ ಜಾತಿಯವರು ಒಂದು ಪಕ್ಷ, ವೀರಶೈವರು ಇನ್ನೊಂದು ಪಕ್ಷ, ದಲಿತ, ಅಲ್ಪಸಂಖ್ಯಾತ, ಹಿಂದುಳಿದವರು ಮತ್ತೊಂದು ಪಕ್ಷಕ್ಕೆ ಮತ ಹಾಕಿ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಮುಂದುವರಿಯುತ್ತದೆ.

ನೋಡಿ, ಜಾತಿ ಎಂಬುದು ನಮ್ಮ ಹೆಮ್ಮೆ ಎನ್ನುವ ಮನೋಭಾವ ಇಡೀ ಆಡಳಿತ ವ್ಯವಸ್ಥೆಯನ್ನು ಹೇಗೆ ಅರಾಜಕತೆಯತ್ತ ತೆಗೆದುಕೊಂಡು ಹೋಗುತ್ತಿದೆ.

ಕೆಲವು ಹೊಟ್ಟೆ ತುಂಬಿದ ಜನರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಅದರ ಅವಶ್ಯಕತೆ ಇಲ್ಲ. ಯಾರೇ ಅಧಿಕಾರಕ್ಕೆ ಬಂದರೂ ಅವರ ವ್ಯವಹಾರಗಳಿಗೆ ತೊಂದರೆ ಆಗುವುದಿಲ್ಲ. ಆದರೆ ಸರ್ಕಾರದ ಅನೇಕ ಯೋಜನೆಗಳ ಮೇಲೆಯೇ ಬದುಕನ್ನು ಅವಲಂಬಿಸಿರುವ ಬಹಳಷ್ಟು ಜನರ ಪಾಡೇನು ?

ದಯವಿಟ್ಟು, ಇನ್ನು ಮುಂದಾದರೂ ಕೇವಲ ನಾವು ಮಾತ್ರ ಜಾಗೃತರಾಗದೆ,ನಮ್ಮ ಸುತ್ತಲಿನ ಜನರಲ್ಲೂ ತಿಳಿವಳಿಕೆ ಮೂಡಿಸಿ ದಕ್ಷ, ಪ್ರಾಮಾಣಿಕ ಜನ ಸೇವೆಯ ಆಸಕ್ತಿ ಇರುವ ಸಾಮಾನ್ಯ ಜನರು ಸಹ ಚುನಾವಣೆಯಲ್ಲಿ ಆಯ್ಕೆಯಾಗುವ ಸನ್ನಿವೇಶ ಸೃಷ್ಟಿಸಬೇಕಿದೆ. ಆಗ ಈ ದೊಂಬರಾಟಗಳಿಗೆ ಕಡಿವಾಣ ಹಾಕಬಹುದು.

ಇಲ್ಲದಿದ್ದರೆ………

ಪ್ರತಿಭಟನೆ – ಮುಷ್ಕರ – ಮುತ್ತಿಗೆ – ಚಳವಳಿ – ಬಂದ್ – ಸತ್ಯಾಗ್ರಹ – ಹರತಾಳ – ಅಮರಣಾಂತ ಉಪವಾಸ – ಜೈಲ್ ಭರೋ ……….

ಬ್ಯಾಂಕ್ ಅಧಿಕಾರಿಗಳು,
” ಬೇಕೆ ಬೇಕು ನ್ಯಾಯ ಬೇಕು “

ಬೇಡಿಕೆಗಳು — ಸಂಬಳ ಜಾಸ್ತಿ ಮಾಡಿ, ರಜಾ ಸೌಕರ್ಯ ಹೆಚ್ಚು ಮಾಡಿ ಇನ್ನೂ ಇನ್ನೂ……

ಶಿಕ್ಷಕರು,
” ಅನ್ಯಾಯ ಅನ್ಯಾಯ,
ಶಿಕ್ಷಕರಿಗೆ ಅನ್ಯಾಯ “

ಬೇಡಿಕೆಗಳು — ಸಂಬಳ ಹೆಚ್ಚು ಮಾಡಿ, ಪರಿಕ್ಷಾ ದಿನ ಭತ್ಯೆ ಜಾಸ್ತಿ ಮಾಡಿ ಇನ್ನೂ ಇನ್ನೂ……..

ಅಂಗನವಾಡಿ ಕಾರ್ಯಕರ್ತೆಯರು…….

” ಧಿಕ್ಕಾರ ಧಿಕ್ಕಾರ ಸರ್ಕಾರಕ್ಕೆ ಧಿಕ್ಕಾರ “

ಬೇಡಿಕೆಗಳು — ಗೌರವಧನ ಹೆಚ್ಚಿಸಿ – ಮೂಲ ಭೂತ ಸೌಕರ್ಯ ಒದಗಿಸಿ ಇನ್ನೂ ಇನ್ನೂ………..

ಕನ್ನಡ ಕಾರ್ಯಕರ್ತರು…..
” ಕನ್ನಡ ಬೆಳೆಸಿ ಕನ್ನಡ ಉಳಿಸಿ “

ಬೇಡಿಕೆಗಳು — ಕರ್ನಾಟಕದಲ್ಲಿ ಕನ್ನಡಕ್ಕೇ ಆದ್ಯತೆ, ಉದ್ಯೋಗದಲ್ಲಿ ಕನ್ನಡಿಗರಿಗೇ ಮೊದಲ ಪ್ರಾಶಸ್ತ್ಯ ಇನ್ನೂ ಇನ್ನೂ……….

ರೈತರು……
” ನ್ಯಾಯ ಕೊಡಿ ಇಲ್ಲ ವಿಷ ಕೊಡಿ “

ಬೇಡಿಕೆಗಳು — ಕೃಷಿ ಉತ್ಪನ್ನಗಳಿಗೆ ಬೆಂಬಲ ಹೆಚ್ಚಿಸಿ, ಸಾಲಾ ಮನ್ನಾ ಮಾಡಿ ಇನ್ನೂ ಇನ್ನೂ……..

ವಿದ್ಯಾರ್ಥಿಗಳು……
” ನ್ಯಾಯ ನಮ್ಮ ಹಕ್ಕು ಅದು ಭಿಕ್ಷೆಯಲ್ಲ “

ಬೇಡಿಕೆಗಳು — ಪ್ರವೇಶ ಶುಲ್ಕ ಕಡಿಮೆ ಮಾಡಿ, ಶಿಕ್ಷಕರ ಸಂಖ್ಯೆ ಹೆಚ್ಚು ಮಾಡಿ ಇನ್ನೂ ಇನ್ನೂ…..

ಕಾರ್ಮಿಕರು…..
” ನ್ಯಾಯ ಕೊಡಿ ಇಲ್ಲವೇ ಅಧಿಕಾರ ಬಿಡಿ “

ಬೇಡಿಕೆಗಳು — ಕನಿಷ್ಠ ಸಂಬಳ ಹೆಚ್ಚಿಸಿ, ಮಾಲೀಕರ ಶೋಷಣೆ ತಡೆಯಿರಿ……

ಸರ್ಕಾರಿ ಅಧಿಕಾರಿಗಳು, ಮಹಿಳೆಯರು, ಅವರು ಇವರು ಎಂದು ಲೆಕ್ಕಾ ಹಾಕುತ್ತಾ ಸಾಗಿದರೆ ಬಹುತೇಕ ಎಲ್ಲರೂ ನೀರಿಗಾಗಿಯೋ, ಬೆಲೆ ಏರಿಕೆಗೋ ಅಥವಾ ಬೇರೆ ಯಾವುದೋ ಕಾರಣಕ್ಕಾಗಿ ಒಂದಲ್ಲಾ ಒಂದು ರೀತಿಯ ಅಸಮಾಧಾನ ಹೊರ ಹಾಕುತ್ತಾರೆ.

ಹಾಗಾದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇ ಚುನಾಯಿಸಿದ ಸರ್ಕಾರ ಮಾಡುತ್ತಿರುವುದಾದರೂ ಏನು ? ಅಥವಾ ನಮ್ಮದೇ ಸರ್ಕಾರದ ವಿರುದ್ಧ ಹೋರಾಡುವ ನಾವೇ ಅವಾಸ್ತವ ಬೇಡಿಕೆಗಳನ್ನು ಇಡುತ್ತಿದ್ದೇವೆಯೇ ? ಅಥವಾ ನ್ಯಾಯ ಅನ್ಯಾಯ, ಬೇಡಿಕೆ ಪೂರೈಕೆ, ವಾಸ್ತವ ಭ್ರಮೆ, ಸರ್ಕಾರ ಸಾರ್ವಜನಿಕ ಕರ್ತವ್ಯಗಳು ಈ ಎಲ್ಲವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೇವೆಯೇ….

ಅಪರೂಪಕ್ಕೆ ಸರ್ಕಾರದ ಕೆಲವು ಅಚಾತುರ್ಯದ ವಿರುದ್ಧ ಹೋರಾಡಬೇಕಾದ ಜನ ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪ್ರತಿಭಟಿಸುತ್ತಾ ಅದನ್ನೇ ವೃತ್ತಿ ಅಥವಾ ಹವ್ಯಾಸ ಮಾಡಿಕೊಳ್ಳುವ ಮಟ್ಟಕ್ಕೆ ಆಡಳಿತ ವ್ಯವಸ್ಥೆ ಕುಸಿಯಲು ಕಾರಣವೇನು?

ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಎಲ್ಲೋ ಕೊಂಡಿ ಕಳಚಿದೆ. ಸಮನ್ವಯ ಸಾಧ್ಯವೇ ಆಗುತ್ತಿಲ್ಲ. ಅವರ ಬೇಡಿಕೆ ಮತ್ತು ಪೂರೈಕೆ ತುಂಬಾ ದೂರದಲ್ಲಿದೆ. ಪ್ರಜಾಪ್ರಭುತ್ವದ ನಿಜ ಯಶಸ್ಸು ಸರ್ಕಾರದ ಜನ ಸ್ಪಂದನೆಯ‌ ಆಧಾರದಲ್ಲಿ ನಿರ್ಧರಿಸಬೇಕಿದೆ. ಅದನ್ನು ಸರಿದೂಗಿಸುವುದೇ ಜನರ ಜೀವನಮಟ್ಟ ಸುಧಾರಣೆಯ ಮೊದಲ ಮೆಟ್ಟಿಲು ಎಂದು ಭಾವಿಸಬಹುದೆ….

ಆ ದಿನಗಳು ಆದಷ್ಟು ಶೀಘ್ರವಾಗಿ ನಮ್ಮ ಜೀವಿತಾವಧಿಯಲ್ಲಿಯೇ ಸಾಧ್ಯವಾಗಲಿ ಎಂದು ಆಶಿಸುತ್ತಾ

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!