December 26, 2024

Newsnap Kannada

The World at your finger tips!

ಅಮ್ಮ

ಅಮ್ಮಂದಿರಿಗೊಂದು ಸೆಲ್ಯೂಟ್….

Spread the love

“ಅಮ್ಮ ಅಂದ್ರೇನು ಪುಟ್ಟಾ..?” ಮಾತು ಕಲಿತಿದ್ದ ನನ್ನ ಪುಟ್ಟ ಕಂದನಿಗೆ ಅಂದು ನಾ ಕೇಳಿದ್ದ ಪ್ರಶ್ನೆ. ಅವನ ಮುಗ್ಧ ಉತ್ತರ “ಅದೂ.. ಅದೂ.. ಹೊಸಬರಿಂದ, ಕೆಟ್ಟವರಿಂದ ಮಕ್ಕಳನ್ನು ಕಾಪಾಡೋಳು ಅಮ್ಮ”
ಅಮ್ಮಾ…
ಈ ಕರೆ ಕಂದನ ಮೊದಲ ಕಲಿಕೆ, ನೋವಿನಲ್ಲಿ ಮತ್ತು ಸಂಭ್ರಮದಲ್ಲಿ ಮೊದಲ ನೆನಪು, ಭಯದಲ್ಲಿ ರಕ್ಷಾಕವಚ. ಅಮ್ಮ ಎಂದರೆ ಪ್ರೀತಿ, ಸಹನೆ, ಕರುಣೆ, ತ್ಯಾಗಗಳ ಪ್ರತಿರೂಪ.
ಅಮ್ಮ ಎಂದರೆ ಸುಖ –
ಅಮ್ಮನ ಸ್ಪರ್ಶಕ್ಕೆ ಕಂದಮ್ಮಗಳು ನೆಮ್ಮದಿ ಕಾಣುವುದು, ಅಮ್ಮನ ಲಾಲಿಗೇ ಮಕ್ಕಳು ನಿದಿರೆಗೈಯ್ಯುವುದು, ಅಮ್ಮ ಉಣಿಸಿದರೇ ಮಕ್ಕಳು ತಣಿವುದು. ಅಮ್ಮನ ಮಡಿಲು ಎಂದರೆ ಸೌಖ್ಯದ ತಾಣ.
ಸಾಮೀಪ್ಯವೇ ಪ್ರೀತಿಯ ಹುಟ್ಟಿಗೆ ಕಾರಣ ಎನ್ನುವುದು ಮನೋವಿಜ್ಞಾನಿಗಳ ಅಭಿಮತ. ಮಗು ಮತ್ತು ತಾಯಿಯ ಸದಾಕಾಲದ ಸಾಮೀಪ್ಯವೇ ಅವರಿಬ್ಬರನ್ನೂ ಅನನ್ಯ ಪ್ರೀತಿಯ ಬಂಧಕ್ಕೆ ತರುವುದು. ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅಮ್ಮನ ‘ಸ್ಪರ್ಶಸುಖ’ವೇ ದಿವ್ಯೌಷಧ ಎನ್ನುತ್ತಾನೆ ಮನೋವಿಜ್ಞಾನಿ ಹ್ಯಾರಿ ಫೆಡರಿಕ್‍ಹಾರ್ಲೊ. ಅಮ್ಮನನ್ನು ಕಂಡೊಡನೆಯೇ ಮಗು ನಗುವುದು, ಕೈಚಾಚಿ ತೆಕ್ಕೆಗೆ ಬೀಳುವುದು, ಸುಖವಾಗಿ ನಲಿವುದು.

ಅಮ್ಮ ಎಂದರೆ ರೋಲ್‍ಮಾಡೆಲ್ –
ಹೆಣ್ಣುಮಕ್ಕಳಂತೂ ಅಮ್ಮ ಮಾಡಿದಂತೆ ಮಾಡುವುದು, ಅಮ್ಮ ನಡೆದಂತೆ ನಡೆವುದು, ಅವಳು ಮಾತನಾಡಿದಂತೆ ಮಾತನಾಡಲು ಕಲಿವುದು ಹೆಚ್ಚು. ಪುಟ್ಟ ಹೆಣ್ಣು ಮಕ್ಕಳು ಅಮ್ಮ ಬಿಚ್ಚಿ ಹಾಕಿದ ಸೀರೆಯನ್ನು ತಾವು ಉಟ್ಟುಕೊಂಡು ‘ನಾನು ಈಗ ಅಮ್ಮ’ ಎನ್ನುವ ಮನಮೋಹಕ ಸಂದರ್ಭ ಸೃಷ್ಟಿಯಾಗುವುದು ಮಕ್ಕಳು ಅಮ್ಮನನ್ನು ಅನುಕರಿಸುವುದರಿಂದಲೇ. ಹೆಣ್ಣು ಮಕ್ಕಳು ಆಡುವ ಆಟಗಳೂ ಅಪ್ಪ ಅಮ್ಮ ಆಟ, ಮದುವೆ ಆಟ, ಅಡುಗೆ ಮಾಡುವ ಆಟಗಳೇ. ಮಕ್ಕಳ ಮೇಲೆ ತಾಯಿ ಬೀರುವ ಪ್ರಭಾವ ಅಂಥದ್ದು. ಅದು ಎದೆಹಾಲಿನೊಟ್ಟಿಗೇ ಬಂದದ್ದು. ಇದಕ್ಕೆ ‘ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸಜ್ಜರೆಯೊಳ್, ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದರ್ಗೆರೆವಟ್ಟಾಗಿರು, ಶಿಷ್ಟರಂ ಪೆÇರೆ ಎನುತ್ತಿಂತೆಲ್ಲಮಂ ಪಿಂತೆ ತಾನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಮಾತ್ಯನಾ’ ಎನ್ನುವ ಶಾಸನದ ಮಾತೇ ಸಾಕ್ಷಿ. ಅದು ಅಮ್ಮ ಕೊಡುವ ಸಂಸ್ಕಾರ.

ಅಮ್ಮ ಮಲ್ಟಿ ಟಾಸ್ಕಿಂಗ್ ಮಾಡ್ಯೂಲ್ –
ಅಮ್ಮನಿಗೆ ಒಂದು ಕೆಲಸ ಮಾಡಿ ಗೊತ್ತಿಲ್ಲ. ಮಕ್ಕಳ ಲಾಲನೆ, ಪೆÇೀಷಣೆ, ಅವರನ್ನು ಸುಧಾರಿಸುವುದು, ಅವರಿಗೆ ಬೇಕಾದ ತಿನಿಸುಗಳನ್ನು ಮಾಡಿಕೊಡುವುದು, ಓದಿಸುವುದು, ಮನೆಗೆಲಸ ಮಾಡುವುದು, ಗಂಡ ಅತ್ತೆ ಮಾವ ಬಂಧುಗಳು, ಬಂದು ಹೋದವರಿಗೆ ಆತಿಥ್ಯ ಮಾಡುವುದು, ಮನೆ ಸಾಮಾನು ಸರಂಜಾಮು ತರುವುದು, ಮನೆಯ ಒಪ್ಪ ಓರಣ, ಹೊರಗೆ ದುಡಿವವಳಾದರೆ ಕಾರ್ಯಕ್ಷೇತ್ರದ ಜೊತೆ ಮನೆಯನ್ನೂ ಬ್ಯಾಲೆನ್ಸ್ ಮಾಡುವ ರೀತಿ ಇದೆಯಲ್ಲಾ…
ಅಮ್ಮಂದಿರನ್ನು ಬೆಳಗ್ಗೇ ನೋಡಿದರೆ ಅವಳಿಗೆ ಇರುವುದು ಎರಡೇ ಕೈಯ್ಯಾ ಎನ್ನುವ ಅನುಮಾನ ಮೂಡದಿರದು. ಪುಟ್ಟಮಗುವಾದರೆ ಅದನ್ನು ಎಬ್ಬಿಸಿ ಬ್ರಷ್, ಸ್ನಾನ, ತಿಂಡಿ ಮಾಡಿ ತಿನಿಸುವುದು, ಬಟ್ಟೆ ಹಾಕಿ, ಬ್ಯಾಗ್ ಸಿದ್ಧಮಾಡಿ, (ಈಗಿನ ಹಲವು ಅಪ್ಪಂದಿರೂ ಮಕ್ಕಳ ಜವಾಬ್ದಾರಿ ಹೊರುತ್ತಿದ್ದಾರೆ ಅನ್ನಿ) ಗಂಡನಿಗೂ ಬುತ್ತಿ ಕೊಟ್ಟು, ಅವರಿಬ್ಬರನ್ನೂ ಕಳಿಸಿದ ಮೇಲೆಯೇ ಉಸ್ಸಪ್ಪಾ ಎನ್ನುವ ನಿಟ್ಟುಸಿರಿನೊಡನೆ ನಿಧಾನವಾಗಿ ಉಸಿರಾಡುವುದು. ತರಾತುರಿಯ ನಡಿಗೆ, ಅತ್ತಿತ್ತ ತಿರುಗುವ ಕತ್ತು, ಚಕಚಕನೆ ಓಡಾಡುವ ಕೈಗಳು, ಮನೆಯ ಎಲ್ಲ ಮೂಲೆಗಳಲ್ಲೂ ಕಣ್ಣು… ಹೀಗೆ ಎಲ್ಲವನ್ನೂ ನೋಡಿದರೆ ಅಮ್ಮನಿಗೆ ಆಯಾಸವೇ ಆಗುವುದಿಲ್ಲವೇ? ಎಂಬ ಅನುಮಾನ ಕಾಡುವುದುಂಟು. ಮಲ್ಟಿ ಟಾಸ್ಕಿಂಗ್ ಶಕ್ತಿ ಅಮ್ಮಂದಿರಿಗೆ ದೇವರು ಕೊಟ್ಟ ಬಳುವಳಿ.

ಅಮ್ಮ ಎನ್ನುವ ಒಂದು ಯೂನಿವರ್ಸಿಟಿ –
ಇದು ಅಪ್ಪ, ಇದು ಅಜ್ಜಿ, ಇದು ತಾತ ಎಂದೆಲ್ಲರನ್ನೂ ಪರಿಚಯ ಮಾಡಿಕೊಡುವವಳು ಅಮ್ಮ. ಮೊದಲಕ್ಷರವ ತಿದ್ದಿಸುವವಳು, ಅ ಆ ಇ ಈ ಇಂದ ಹಿಡಿದು ಎ ಬಿ ಸಿ ಡಿ ಒಂದು ಎರಡು, ಮಗ್ಗಿ, ರಾಮನ ಕಥೆ, ಕೃಷ್ಣನ ಕಥೆ, ಚಂದಮಾಮಾ, ರಾಕ್ಷಸ, ರಾಜಾ ರಾಣಿ ಎಲ್ಲ ಕಥೆಗಳನ್ನು ಹೇಳುವ ಅಮ್ಮ ಹಾಗೆ ಹೇಳುತ್ತಲೇ ನೀತಿ ಬೋಧಿಸುತ್ತಾಳೆ, ನಾವು ಒಳ್ಳೆಯ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತಾಳೆ. ಅಮ್ಮನಿಗೆ ಗೊತ್ತಿರದ ವಿಷಯವೇ ಪ್ರಪಂಚದಲ್ಲಿ ಇಲ್ಲ ಎನ್ನುವುದು ಮಗುವಿನ ಭಾವ. ಅಪ್ಪ ಅಮ್ಮನನ್ನು ನೋಡಿಯೇ ಮಕ್ಕಳು ಅನುಕರಿಸುವುದು. ಅತಿ ಹೆಚ್ಚು ಸಮಯ ಕಳೆವ ಅಮ್ಮನ ನಡೆ ನುಡಿಯೇ ಮಕ್ಕಳ ಮಾದರಿ. ಮನೆಯಲ್ಲಿರುವ ಅಮ್ಮಂದಿರಿಗೂ ಹೊರಗೆ ದುಡಿವ ಅಮ್ಮಂದಿರಿಗೂ ವ್ಯತ್ಯಾಸವಿದೆ. ದುಡಿವ ಅಮ್ಮಂದಿರು ಮನೆಗೆಲಸ ಬೊಗಸೆಗಳಲ್ಲಿ ತುಸು ಹಿಂದೆಬಿದ್ದರೂ, ಮಕ್ಕಳಿಗೆ ತನ್ನ ಅನುಭವದ ಮೂಲಕ ಹೊರ ಪ್ರಪಂಚದಲ್ಲಿ ಬದುಕಲು ಬೇಕಾದ ಆತ್ಮವಿಶ್ವಾಸ ತುಂಬುತ್ತಾಳೆ. ಆಕೆ ದಿಟ್ಟ ಹೆಜ್ಜೆ ನೋಡಿ ಬೆಳೆದ ಮಕ್ಕಳು ತಾವೂ ದಿಟ್ಟತನವನ್ನು ಕಲಿತುಬಿಡುತ್ತಾರೆ. ತಾ ಮೊದಲು ಕಲಿತ ತಾಂತ್ರಿಕತೆಯನ್ನು ಪುಟ್ಟ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಲಿಸುವ ಸಾಧ್ಯತೆ ಹೆಚ್ಚು. ಮಕ್ಕಳಿಗೆ ಅಮ್ಮನೇ ಸರ್ವಸ್ವ. ಬೆಳೆದ ಮೇಲೂ ಕಷ್ಟದ ಸಮಯದಲ್ಲಿ ಸರಿ ದಾರಿ ತೋರುವ ಅಮ್ಮ ಒಂದು ವಿಶ್ವವಿದ್ಯಾಲಯ.

ಅಮ್ಮ ಇದಾಳಲ್ಲಾ ಎನ್ನುವ ಧೈರ್ಯ –
ಬಹುತೇಕ ಮಕ್ಕಳು ಏನಾದರೂ ಕಷ್ಟ ಎಂದರೆ ಅಮ್ಮ ಇದಾಳಲ್ಲಾ ಬಿಡು ಸರಿ ಮಾಡ್ತಾಳೆ, ಹಸಿದರೆ ಅಮ್ಮ ಇದಾಳಲ್ಲ ಮಾಡಿಕೊಡ್ತಾಳೆ, ಹೊರಗೆ ಹೋಗಲು ದುಡ್ಡು ಬೇಕಾದರೆ ಅಪ್ಪನ ಬಳಿ ಕೇಳಲು ಅಮ್ಮ ಇದಾಳಲ್ಲಾ ಕೇಳಿ ಕೊಡಿಸುತ್ತಾಳೆ, ಹುಷಾರಿಲ್ಲ ಎಂದರೆ ಅಮ್ಮ ಇದಾಳಲ್ಲ ನನ್ನ ನೋಡ್ಕೋತಾಳೆ, ಭಯವಾದರೆ ಅಮ್ಮ ಇದಾಳಲ್ಲ ತಬ್ಬಿ ಸಮಾಧಾನ ಮಾಡ್ತಾಳೆ… ಈ ಧೈರ್ಯಕ್ಕೆ ಕಾರಣ ಅಮ್ಮ ಎನ್ನುವ ಪ್ರೀತಿಯ ಶಕ್ತಿ. ಆಕೆ ಮಕ್ಕಳ ಮೇಲೆ ತೋರುವ ಅಂಥ ನಿವ್ರ್ಯಾಜ ಪ್ರೀತಿ. ಮಕ್ಕಳು ಬೆಳೆದು ದೊಡ್ಡವರಾದ ಮೇಲೂ ಅದು ಮಾನಸಿಕಸ್ಥೈರ್ಯದ ಸಂಕೇತವಾಗಿಯೇ ಉಳಿದು ಕಷ್ಟಕಾಲವನ್ನು ದಾಟಿಸಿಬಿಡುತ್ತದೆ.

ಅಮ್ಮ ಎಂದರೆ….
ಅಮ್ಮ ಎಂದರೆ ಮಡಿಲು, ಅಮ್ಮ ಎಂದರೆ ನಿಸ್ವಾರ್ಥ, ಅಮ್ಮ ಎಂದರೆ ಮಮಕಾರ, ಅಮ್ಮ ಎಂದರೆ ವಾತ್ಸಲ್ಯ, ಅಮ್ಮ ಎಂದರೆ ಎದೆಬಿರಿವ ಪ್ರೀತಿ. ಕೇಳದೆಯೂ ಕೊಡುವ ಅಮ್ಮ ಕಣ್ಣಿಗೆ ಕಾಣುವ ದೇವರು.
ಯಾವುದೇ ಚಲನಚಿತ್ರವಿರಲಿ, ಧಾರಾವಾಹಿಯಿರಲಿ, ಹಾಡಿರಲಿ, ಲೇಖನವಿರಲಿ ಅಮ್ಮನ ಬಗ್ಗೆ ಬರೆದವು ಶಾಶ್ವತವಾಗಿ ಉಳಿದುಬಿಟ್ಟಿದೆ. ಅದಕ್ಕೆ ಕಾರಣ ಅದರಲ್ಲಿ ತುಂಬಿದ ಅನನ್ಯ ಭಾವಸ್ಪರ್ಶ ಮತ್ತು ಅಮ್ಮ ತೋರುವ ಅಗಾಧ ಮಮತೆಯ ನೆನಪು ಅಚ್ಚಹಸಿರಾಗಿ ನೆನಪನ್ನು ತುಂಬುವುದು.
ನಮ್ಮ ಕಣಕಣವೂ ಅಮ್ಮನಿತ್ತ ದಾನ. ಅಮ್ಮಂದಿರ ದಿನಕ್ಕೆ ಮಾತ್ರವೇ ಈ ನಮನವಲ್ಲ. ಉಸಿರಿರುವ ತನಕ ಒಲವುಣಿಸುವ ಅಮ್ಮಂದಿರಿಗೆ ನಮ್ಮೆಲ್ಲರ ಸೆಲ್ಯೂಟ್..

IMG 20180306 WA0008 1 edited

ಡಾ.ಶುಭಶ್ರೀಪ್ರಸಾದ್, ಮಂಡ್ಯ 9483531777, 9844498432

Copyright © All rights reserved Newsnap | Newsever by AF themes.
error: Content is protected !!