ಸರಿಸುಮಾರು ಮುವ್ವತ್ತು ಸುದೀರ್ಘ ವರ್ಷಗಳ ಕನಸು ನನಸಾಗುವ ಸಮಯ ಹತ್ತಿರವಾದಂತೆ ಅದೇನೋ ಪುಳಕ.
ರಾಮಕೃಷ್ಣ ಪರಮಹಂಸ, ವಿವೇಕಾನಂದ, ಶಾರದಾದೇವಿ ಎಂದರೆ ಬಾಲ್ಯದಿಂದಲೂ ಏನೋ ಆಕರ್ಷಣೆ. ಬಹುಶಃ ಬಾಲಗೋಕುಲದ ಪ್ರಭಾವ ಇರಬೇಕು. ಅಲ್ಲಿ ಹಿರೇಮಗಳೂರು ಕಣ್ಣನ್ ಅವರ ಹಿರಿಯ ಸಹೋದರ ಚಕ್ರವರ್ತಿತಿರುಮಗನ್ ನಮಗೆಲ್ಲ ರಾಷ್ಟ್ರ ಭಕ್ತರ ಕತೆಗಳನ್ನೇ ಹೇಳುತ್ತಿದ್ದುದು, ಹೇಳಿಸುತ್ತಿದ್ದುದು. ಮೊದಲ ಬಾರಿ ನಾ ಬಣ್ಣ ಹಚ್ಚಿದ್ದು ಭಾರತಾಂಬೆಯ ಪಾತ್ರಕ್ಕೆ. ಇಡೀ ಮಂಡ್ಯದಂತಹ ಮಂಡ್ಯದಲ್ಲಿ ದೇಶಭಕ್ತರ ವೇಷದ ನಮ್ಮ ಮೆರವಣಿಗೆ. ರಬೀಂದ್ರನಾಥ ಟಾಕೂರ್, ಕನ್ನಗಿ, ಸತ್ಯವಾನ್‌ಸಾವಿತ್ರಿ, ಭಕ್ತ ಮಾರ್ಕಂಡೇಯ, ಏಕಲವ್ಯ, ರಾಣಿ ಅಬ್ಬಕ್ಕ, ಕಿತ್ತೂರಿನ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದ ನೂರಾರು ‘ಭಾರತ-ಭಾರತಿ’ ಪುಟ್ಟಪುಟ್ಟ ಕತೆ ಪುಸ್ತಕಗಳು ನನ್ನ ಮಸ್ತಕದೊಳಗೆ ವಿಶಿಷ್ಟ ಛಾಪನ್ನು ಒತ್ತಿದ್ದವು.
‘ರಾಮಕೃಷ್ಣರು ಮತ್ತು ಅವರ ಶಿಷ್ಯರು’ ಕೃತಿಯಲ್ಲಿ ಪರಮಹಂಸರ ಮಾತುಗಳು, ಗುರು-ಶಿಷ್ಯರ ಸಂಭಾಷಣೆ ಓದುವಾಗ ನನಗರಿವಿಲ್ಲದೆಯೇ ಕಣ್ಣುಗಳು ಕೊಳವಾಗಿದ್ದು ಇನ್ನೂ ನೆನಪಿದೆ. ಪ್ರೌಢಶಾಲೆ ಮತ್ತು ಕಾಲೇಜು ವ್ಯಾಸಂಗದಲ್ಲಿದ್ದಾಗ ನನ್ನ ಓದಿನ ಕೋಣೆಯಲ್ಲಿ ವಿವೇಕಾನಂದರ ಮಣ್ಣಿನ ಮೂರ್ತಿ ಪ್ರತಿಷ್ಟಾಪನೆಗೊಂಡಿತ್ತು. ನಾನೂ ಸನ್ಯಾಸಿಯಾಗಿಬಿಡುತ್ತೇನೇನೋ ಎಂದೇ ಬಂಧುಗಳಲ್ಲಿ ಅನೇಕರು ಭಾವಿಸಿದ್ದರು-ಭಯಪಟ್ಟಿದ್ದರು.
ನನ್ನಲ್ಲಿ ಅಂತಹ ಪ್ರಭಾವ ಬೀರಿದ ವಿವೇಕಾನಂದರು ಇಡೀ ವಿಶ್ವವೇ ಭಾರತದ ಸಂಸ್ಕೃತಿಯತ್ತ ಕಣ್ಣುಹಾಯಿಸುವಂತೆ ಮಾಡಿದ ಚಿಕಾಗೋದ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗುವ ಮುನ್ನ ‘ಭರತಮಾತೆಯ ಪಾದ’ ಎನಿಸಿಕೊಂಡಿರುವ ಕನ್ಯಾಕುಮಾರಿಗೆ ಭೇಟಿ ನೀಡಿ ಸುಮಾರು ಎರಡು ಕಿಲೋಮೀಟರ್ ದೂರ ಸಮುದ್ರದ ಅಲೆಗೆ ವಿರುದ್ಧವಾಗಿ ಈಜಿ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡಿ ಆಧ್ಯಾತ್ಮಿಕ ಶಕ್ತಿಯನ್ನು ಪಡೆದ ‘ವಿವೇಕಾನಂದ ರಾಕ್’ನ್ನು ಒಮ್ಮೆಯಾದರೂ ನೋಡಬೇಕೆಂಬ ಬಯಕೆ ಅನೇಕರಂತೆಯೇ ನನ್ನದೂ.
ನಾನು, ನನ್ನ ಪತಿ, ನಮ್ಮ ಮಗ-ಮೂವರೂ ಮಂಡ್ಯದಿಂದ ಕಾರಿನಲ್ಲಿ ಹೊರಟು ಮೊದಲ ದಿನ ಮಧುರೆಯ ಮೀನಾಕ್ಷಿಯ ದರ್ಶನ ಮಾಡಿದೆವು. ನೂರಾರು ವರುಷಗಳನ್ನು ತೆಗೆದುಕೊಂಡಿರಬೇಕು ಶಿಲ್ಪಿಗಳು. ಕಣ್ಣು ಹಾಯಿಸಿದಷ್ಟು ದೂರ ಒಂದೇ ತೆರನಾದ ಕಲ್ಲಿನ ಕೆತ್ತನೆಯ ಶಿಲ್ಪಗಳು. ಹಾಗೇ ಸುಮ್ಮನೆ ಒಂದು ಸುತ್ತು ಬರಲು ಗಂಟೆಗಳೇ ಬೇಕು. ಇಡಿಯ ದೇವಸ್ಥಾನದ ಮೂಲೆ ಮೂಲೆ ನೋಡಲು ಒಂದು ದಿನವದರೂ ಬೇಕು. ಅರಸರ ಭಕ್ತಿ ಮತ್ತು ರಸಿಕತೆ, ಶಿಲ್ಪಿಗಳ ಕೈವಾಡ, ನೈಪುಣ್ಯತೆಗೆ ಸಾಕ್ಷಿ ಎಂಬಂತೆ ಮಧುರೆಯ ದೇಗುಲ ತಲೆಯೆತ್ತಿ ನಿಂತಿದೆ. ಇದನ್ನು ದೇವಾಲಯಗಳ ನಗರ, ನಿದ್ದೆ ಮಾಡದ ನಗರ, ಪೂರ್ವದ ಅಥೆನ್ಸ್ ಎಂದೂ ಕರೆಯುತ್ತಾರೆ.
ದರ್ಶನ ಮುಗಿಸಿ ವಿಶಾಲ ಮತ್ತು ಪ್ರಶಾಂತವಾದ ಹಳೆಯಕಾಲದ ಕಪ್ಪು ಕಲ್ಲುಹಾಸಿನ ಮೇಲೆ ಮೂವರೂ ಕುಳಿತೆವು. ಅಲ್ಲಿದ್ದ ಅರಳೀವೃಕ್ಷಕ್ಕೆ ಸಂತಾನ ಪ್ರಾಪ್ತಿಯಾಗಲೆಂದು ಹಗಲಲ್ಲಿ ಕಟ್ಟಿದ ಕೃಷ್ಣನ ಹೊತ್ತ ಹಳದಿತೊಟ್ಟಿಲುಗಳನ್ನು ತೊಟ್ಟಿಲು ಮಾರುವಾಕೆ ಮರುದಿನದ ವ್ಯಾಪಾರಕ್ಕೆಂದು ಮರುಬಳಕೆಮಾಡಲು ಕತ್ತರಿ ಹಾಕಿ ಕತ್ತರಿಸಿಡುತ್ತಿದ್ದಳು. ಹರಕೆಯೆಂದು ಕಟ್ಟಿದವರು ಆ ದೃಶ್ಯವನ್ನು ನೋಡಿದ್ದರೆ ದೇವರೇ ಕಾಪಾಡಬೇಕಿತ್ತು.
ಎರಡನೆಯ ದಿನ ಬೆಳಿಗ್ಗೆ ಮೀನಾಕ್ಷಿಯ ಮಧುರೆಯಿಂದ ಹೊರಟು, ಸಾಗರಕ್ಕೆ ಸೇತುವೆಯಾದ ಪಾಂಬನ್ ಸೇತುವೆಯ ಅಮೋಘ ನೋಟವನ್ನು ಕಣ್ತುಂಬಿಕೊAಡು ರಾಮೇಶ್ವರ ದ್ವೀಪವನ್ನು ಹೊಕ್ಕೆವು. ೧೨ನೆಯ ಶತಮಾನದ-ದ್ರಾವಿಡ ಶೈಲಿಯ ರಾಮೇಶ್ವರಂ ನ ದೇವಾಲಯ ಕಲಾತ್ಮಕವಾಗಿದೆ. ಕಣ್ತುಂಬುವ ಚೆಲುವಿಗೆ ಮನಸೋತು ಧನುಷ್ಕೋಟಿಯ ಕಡೆ ನಮ್ಮ ಪಯಣ. ಬತ್ತಿದ ಸಾಗರದ ನಡುವೆ ಕಿರಿದಾದ ರಸ್ತೆಯನ್ನು ಹಾದು ಧನುಷ್ಕೋಟಿ ಸಮೀಪದ ಕೋದಂಡರಾಮನ ದೇಗುಲ, ಮತ್ತೆ ಧನುಷ್ಕೋಟಿಯ ತುಂಬು ಸಾಗರವನ್ನು ಸ್ಪರ್ಶಿಸಿ, ಅಲ್ಲೆಲ್ಲಿಯಾದರೂ ಶ್ರೀಲಂಕಾ ಕಣ್ಣಿಗೆ ಕಾಣುವುದೇನೋ ಎಂದು ಸಾಗರದುದ್ದಕ್ಕೂ ಕಣ್ಣು ಹಾಯಿಸಿ ನಿರಾಸೆಗೊಂಡು ಬರುವ ದಾರಿಯಲ್ಲಿ ಡಾ.ಅಬ್ದುಲ್ ಕಲಾಂ ಅವರು ಓದಿದ ಶಾಲೆಯನ್ನು ಕಂಡೆವು. ಅತ್ಯಂತ ಪ್ರಾಮಾಣಿಕ ರಾಷ್ಟçಪತಿಗಳೂ, ದೊಡ್ಡ ವಿಜ್ನಾನಿಯೂ ಆಗಿದ್ದ ಕಲಾಂ ಅವರು ಓದಿದ ಶಾಲೆಯನ್ನು ಕಂಡು ಒಂದು ಬಗೆಯ ಧನ್ಯತಾಭಾವ. ಒಂದೆರೆಡು ಕಿಲೋಮೀಟರ್ ದೂರದಲ್ಲೇ ಗ್ರಾನೈಟ್ ನೆಲಹಾಸಿನ ಆಧುನಿಕ ಕಟ್ಟಡವೊಂದು ಕಂಡಿತು. ಅದು ಕಲಾಂ ಅವರ ಸಮಾಧಿ. ಶಾಲಾ ಮಕ್ಕಳು, ಕಾಲೇಜು ಮಕ್ಕಳು ನಾಲ್ಕಾರು ಬಸ್ಸಿನಲ್ಲಿ ಬಂದಿದ್ದರು. ಆ ದೊಡ್ಡ ಕ್ಯೂ ನೋಡಿ, ಒಳಹೊಕ್ಕುವ ಸಮಯವಿಲ್ಲದೆ, ಜನಸಾಗರದ ನಡುವೆ ತುಂಬಿದ ಕಣ್ಣಿನಿಂದ ನೋಡಿ ಕನ್ಯಾಕುಮಾರಿಯತ್ತ ನಮ್ಮ ಪಯಣ.
ಕನ್ಯಾಕುಮಾರಿಯನ್ನು ಸೇರುವ ಹತ್ತಿರದ ಹಾದಿಯುದ್ದಕ್ಕೂ ಉಪ್ಪಿನ ಗದ್ದೆಗಳು. ಬಯಲುಸೀಮೆಯ ನಮಗೆ ಭತ್ತ, ರಾಗಿ, ಕಬ್ಬಿನ ಗದ್ದೆಗಳನ್ನಷ್ಟೇ ನೋಡಿ ಗೊತ್ತು. ಅಲ್ಲಿನ ಉಪ್ಪಿನ ಗದ್ದೆಗಳು ನಮ್ಮ ಸೋಜಿಗದ ಕಣ್ಣುಗಳಿಗಾಹಾರವಾಗಿತ್ತು. ನಾವೇ ತೂರಾಡುವಂತಹ ಗಾಳಿಯ ರಭಸ. ಅದರ ಆನಂದವೇ ಬೇರೆ. ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ಬೃಹದಾಕಾರದ ಗಾಳಿಯಂತ್ರಗಳನ್ನು ನೋಡುವ ಸೊಗಸು ಒಂದು ಕಡೆ. ಅಚ್ಚರಿಯಮೇಲಚ್ಚರಿ.
ಕನ್ಯಾಕುಮಾರಿಯ ನೆಲವನ್ನು ಸ್ಪರ್ಶಿಸಿದಾಗ ರಾತ್ರಿಯಾಗಿತ್ತು. ಇಡೀ ದಿನದ ಓಡಾಟ ನಮ್ಮನ್ನು ಹೈರಾಣಾಗಿಸಿತ್ತು. ದಿಂಬಿಗೆ ತಲೆಕೊಟ್ಟಿದ್ದೊಂದೇ ನೆನಪು, ನಿದ್ರಾದೇವಿ ಮೈಮನವನ್ನು ಆವರಿಸಿದ್ದಳು.
ಕನ್ಯಾಕುಮಾರಿ ಅರಬ್ಬೀ ಸಮುದ್ರ, ಬಂಗಾಳಕೊಲ್ಲಿ ಸಮುದ್ರ ಮತ್ತು ಹಿಂದೂಮಾಹಾಸಾಗರದಂತಹ ಸುತ್ತುವರಿದ ಪೆನಿನ್ಸುಲಾ. ಇದಕ್ಕೆ ಕೇಪ್ ಕೊಮೆರೆಯನ್ ಎಂಬ ಹೆಸರೂ ಇತ್ತು.
ನನ್ನ ಕಲ್ಪನೆಯಲ್ಲಿ ನಮ್ಮ ಮಾತೆಯ ಪಾದವನ್ನು ಈ ಮೂರೂ ಶರಧಿಗಳು ನೀರಿನಿಂದ ತೊಳೆಯುತ್ತ ಪಾವನವಾಗುತ್ತಿರುತ್ತವೆ, ಕಿಲೋಮೀಟರ್ ಗಟ್ಟಲೆ ದೂರದಿಂದಲೇ ಈ ದೃಶ್ಯವನ್ನು ನಾವು ಕಾಣುತ್ತ ಹತ್ತಿರ ಹೋಗಬಹುದೆಂದಿತ್ತು. ಎರಡೂ ಕಡೆ ಸಮುದ್ರ ಇರುವುದರಿಂದ ಸೂರ್ಯೋದಯ ಮತ್ತು ಸೂರ್ಯಾಸ್ತಗಳೆರೆಡೂ ಇಲ್ಲಿ ಲಭ್ಯ ಮತ್ತು ಸೊಗಸು ಎಂದು ಕೇಳಿ ತಿಳಿದಿದ್ದೆ. ಹಾಗಾಗಿ ಮೂರನೆಯ ಬೆಳ್ಳಂಬೆಳಿಗ್ಗೆ ಐದಕ್ಕೆಲ್ಲಾ ನಾವು ಹೊಟೆಲಿನ ರೂಮನ್ನು ಬಿಟ್ಟು ಸಾಗರದಂಚಿಗೆ ಹೊರಟೆವು. ರೂಮಿನಿಂದ ಸೂರ್ಯೋದಯದ ಸಾಗರದಂಚು ಸುಮಾರು ೪೦೦ ಮೀಟರ್ ಇರಬಹುದು. ಹಾಗಾಗಿ ನಡೆದೇ ಹೊರಟೆವು. ಹಾದಿಯುದ್ದದ ಇಕ್ಕೆಲಗಳಲ್ಲೂ ಕಟ್ಟಡಗಳೇ. ಅವೂ ಹೊಟೆಲುಗಳೇ. ಅವನ್ನು ದಾಟಿದರೆ ಅಲ್ಲೆಲ್ಲೋ ತಮಿಳು ಭಾಷೆಯಲ್ಲಿ ದೇವರ ಹಾಡು ಒಂದಿಡೀ ಕಿಲೋಮೀಟರಿನ ಮನೆಯವರನ್ನು ನಿದಿರೆಯಿಂದ ಎಬ್ಬಿಸುವಂತಿತ್ತು. ಗೂಗಲ್ ಮ್ಯಾಪ್ ಹಾಕಿಕೊಂಡು ಅದು ತೋರಿದ ಸಂದುಗೊಂದುಗಳ ನಡುವೆ ಕನ್ಯಾಕುಮಾರಿಯ ಸಾಗರದಂಚನ್ನು ತಲುಪಿದೆವು. ಸೂರ್ಯೋದಯದ ಚೆಲುವನ್ನು ಹೀರಲು ಮೂವರೂ ತಟದ ಕಲ್ಲುಬಂಡೆಗಳ ಮೇಲೆ ಕುಳಿತು ಕಾದದ್ದಷ್ಟೇ ಭಾಗ್ಯ. ಮೇಘರಾಜ ಸೂರ್ಯತೇಜನನ್ನು ಮುತ್ತಿಕ್ಕಿ ಉದಯರವಿಯ ದರ್ಶನವನ್ನು ನಮ್ಮಾರಿಗೂ ಮಾಡಿಸಲೇ ಇಲ್ಲ. ಬೆಳ್ಳಗಿನ ಸೂರ್ಯನನ್ನೇ ನೋಡಿ ಸಮಾಧಾನಪಟ್ಟಿಕೊಂಡದ್ದಾಯ್ತು.
ಅಲ್ಲಿಂದ ವಿವೇಕಾನಂದ ಬಂಡೆಯ ಕಡೆ ಪುಟ್ಟ ಹಡಗಿನಲ್ಲಿ ನಮ್ಮ ಪಯಣ. ಸಾಗರದ ಮೇಲೆ ತೇಲುತ್ತ ಬಾಗುತ್ತ ಸಾಗುವುದೊಂದು ಚಂದ. ಕುಳಿತುಕೊಳ್ಳುವ ಮುನ್ನವೇ ಎಲ್ಲರಿಗೂ ಲೈಫ್ ಜಾಕೆಟ್ ಕೊಟ್ಟರು. ವಿವೇಕಾನಂದ ಬಂಡೆಯ ಮೇಲೆ ಯಾವುದೂ ವಿಗ್ರಹ ಕಾಣಲಿಲ್ಲ. ಕಿಲೋಮೀಟರ್ ದೂರದಿಂದಲೇ ವಿವೇಕಾನಂದ ಭಾರೀ ಗಾತ್ರದ ವಿಗ್ರಹ ಕಾಣುವುದೆಂದು ಕಲ್ಪಿಸಿಕೊಂಡಿದ್ದ ನನಗೆ ನಿರಾಸೆ ಆದದ್ದು ಸುಳ್ಳಲ್ಲ. ಏಕೆಂದರೆ ಅವರು ಭಾರತದ ಸಂಸ್ಕೃತಿಯ ಪ್ರತಿನಿಧಿಯಾದವರು. ಇಡೀ ದೇಶ ಹೆಮ್ಮೆ ಪಡುವ ವ್ಯಕ್ತಿತ್ವ. ಹಾಗಾಗಿ ಅಲ್ಲಿ ದೇಶವೇ ಕಣ್ಣರಳಿಸಿ ನೋಡುವಂಥ ವಿಗ್ರಹ ಇರುತ್ತದೆಂದು ಭಾವಿಸಿದ್ದೆ. ಅಲ್ಲಿದ್ದುದು ಒಂದು ಮಂದಿರದಂತಹ ಕಟ್ಟಡ. ಪಕ್ಕದ ಬಂಡೆಯಲ್ಲೊಂದು ದೊಡ್ಡ ವಿಗ್ರಹ ಕಂಡಿತು. ಅದರ ಬಗ್ಗೆ ಕೇಳಿಲ್ಲದ ನನಗೆ ಆಶ್ಚರ್ಯ. ಅದು ಕವಿ ತಿರುವಳ್ಳವರ್ ಪ್ರತಿಮೆಯಂತೆ. ಇಪ್ಪತ್ತು ನಿಮಿಷಗಳಲ್ಲಿ ನಮ್ಮ ಪುಟ್ಟ ಹಡಗು ವಿವೇಕಾನಂದ ಬಂಡೆಯ ಬುಡಕ್ಕೆ ಬಂದು ನಿಂತಿತು. ಇಳಿದರೆ ಅಲ್ಲೂ ತಿರುಪತಿಯಂತೆ ಸರದಿಸಾಲಿಗಾಗಿ ರೈಲಿಂಗ್‌ಗಳು. ಒಮ್ಮೆ ಬಂಡೆ ಹತ್ತಿ ಮಂದಿರದ ಹೊಸ್ತಿಲು ತುಳಿವಾಗ ಜೀವ ಝಲ್ಲೆಂದಿತು. ಕನಸು ನನಸಾಗುವ ಕಾಲ. ಒಳಗೆ ನಿಶ್ಶಬ್ದ. ಒಳಕೊಕ್ಕ ಒಡನೆಯೇ ಎದುರಿಗೇ ವಿವೇಕಾನಂದರ ಶಾಂತಮೂರ್ತಿ. ಮಾತಿಗೆ ನಿಲುಕದ ಭಾವಸಂಗಮ. ಒಂದರ್ಧ ಗಂಟೆಯಾದರೂ ಅಲ್ಲಿಯೇ ಆವರನ್ನು ನೋಡುತ್ತಾ ಕುಳಿತಿರಬೇಕು. ನಮ್ಮನ್ನು ಹೊತ್ತ ಹಡಗು ಮತ್ತೆ ಮುಂದಿನ ಗುಂಪಿನವರನ್ನು ಇಲ್ಲಿಗೆ ಕರೆತರಬೇಕು. ಸಮಯ ಮೀರುವ ಮುನ್ನ ಹೊರಡಲೇಬೇಕಾದ ಅನಿವಾರ್ಯತೆ. ಮಂದಿರದಿಂದ ಹೊರಗೆ ಬಂದಮೇಲೆ ಸಾಗರದ ಮೇಲಿಂದ ಬೀಸುವ ಕುಳಿರ್ಗಾಳಿಯ ಹೀರುತ್ತ ಮಂದಿರದ ಸುತ್ತ ಒಂದು ಸುತ್ತು ಹಾಕಿದೆವು. ಕೆಳಗಡೆ ವಿವೇಕ ಪುಸ್ತಕಾಲಯ ಇದೆ ನೋಡಿಬನ್ನಿ ಎಂದು ಯಾರೋ ಹೇಳಿದರು. ಅಲ್ಲಿ ಸೂಜಿಬಿದ್ದರೂ ಕೇಳುವ ಮೌನ. ಒಂದಿಷ್ಟು ಹೊತ್ತು ಎಲ್ಲರೊಂದಿಗೆ ಧ್ಯಾನ. ತಿರುಗಿ ಬರುವ ಮನಸ್ಸಿಲ್ಲದಿದ್ದರೂ ಹಡಗಿನವನು ಬನ್ನಿ ಬನ್ನಿ ಎಂದು ಕೂಗಿಕೊಳ್ಳುತ್ತಿದ್ದನು. ಹಾಗಾಗಿ ಮತ್ತೆ ಮತ್ತೆ ತಿರುಗಿ ನೋಡುತ್ತಾ (ಬಾಣಂತಿತನ ಮುಗಿಸಿ ಹೊರಟ ಹೆಣ್ಣುಮಗಳು ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ತಿಟ್ ಹತ್ತಿ ತಿರುಗಿ ನೋಡ್ಯಾಳು ಎನ್ನುವ ಜನಪದ ಗೀತೆಯಂತೆ) ಇದ್ದುದನ್ನೇ ಕಣ್ತುಂಬಿಕೊಳ್ಳುತ್ತಾ ಬಂದ ದಡಕ್ಕೇ ಹಿಂದಿರುಗಿದೆವು.
ಅಲ್ಲಿಂದ ದೇಶದ ತುತ್ತತುದಿಯ ಭಾಗವನ್ನು ನೋಡಲುತ್ಸುಕರಾಗಿ ಹೊರಟರೆ ಅಲ್ಲೂ ನಿರಾಶೆಯೇ. ಬಂಡೆಗಳ ನಡುವೆ ಹತ್ತಾರು ಮೆಟ್ಟಿಲು ಇಳಿದರೆ ಕನ್ಯಾಕುಮಾರಿಯ ತುತ್ತತುದಿ. ಮೂರೂ ಸಾಗರಗಳು ಸೇರುವೆಡೆ ಒಂದು ಪುಟ್ಟ ಕಲ್ಲಿನ ಮಂಟಪವಷ್ಟೇ ಸಾಕ್ಷಿ ತಾನದಕ್ಕೆ ಎನ್ನುವಂತೆ ಮೌನವಾಗಿ ನಿಂತಿತ್ತು. ಆ ಮಂಟಪದ ಮೇಲೊಂದು ಕೇಸರಿ ಧ್ವಜ ಹಾರುತ್ತಿತ್ತು. ಭೋರ್ಗರೆವ ಸಾಗರವಲ್ಲ ಆ ತುತ್ತತುದಿ. ಎಲ್ಲ ನೋವನ್ನೂ ಒಡಲೊಳಗೆ ನುಂಗಿ ತಣ್ಣಗೆ ನಗುವ ನಿಂತ ನೀರಿನಂತಿತ್ತು. ಎದುರೇ ಒಂದು ದೊಡ್ಡ ಚರ್ಚು. ಚರ್ಚಿನ ಮುಂದೆಯಿಂದ ಇಪ್ಪತ್ತು ಹೆಜ್ಜೆ ನಡೆದರೆ ಭಗವತಿಯ ದೇಗುಲ. ಹಿಂದೆ ಭಗವತಿಯ ಮೂಗು ನತ್ತಿನ ಹರಳಿನ ಹೊಳಪನ್ನು ನೋಡಿಯೇ ದೂರದಿಂದ ಬರುವ ಹಡಗಿನ ಪ್ರಯಾಣಿಗರು ಇಲ್ಲಿ ತೀರ ಇದೆ ಎಂದು ಬಂದು ಇಳಿಯುತ್ತಿದ್ದರಂತೆ. ಈಗ ಆ ಭಗವತಿಗೂ ಕಲ್ಲುಕಟ್ಟಡ. ಸುತ್ತಮುತ್ತಲೂ ಬರೀ ಅಂಗಡಿಗಳ ಸಾಲೇ. ವ್ಯಾಪಾರವೇ ಪ್ರಧಾನವಾಗಿ ಭಾವನೆಗಳು ಸಾಗರದಂಚಿನ ಅಲೆಗಳಲಿ ತೇಲುತ್ತ ಸೋಲುವುದ ಕಂಡು ಮತ್ತೇನೂ ಹೇಳಲಾರದೆ ಕಂಡ ಅಂಗಡಿಯೊಂದರಲ್ಲಿ ಅಲ್ಲಿನ ನೆನಪಿಗಾಗಿ ನಮ್ಮತನವನೇ ಬಿಂಬಿಸುವ ಚಿತ್ತಾರದ ಕನ್ನಡಿಗಳನ್ನು ಕೊಂಡು ಊರಿಗೆ ಹಿಂದಿರುಗಿದೆವು…
-ಡಾ.ಶುಭಶ್ರೀಪ್ರಸಾದ್, ಮಂಡ್ಯ
9844498432, 9483531777
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ