December 23, 2024

Newsnap Kannada

The World at your finger tips!

deepa1

ಕೊರೋನಾ ನಿನಗೆ ನಾವು ಹೆದರುವುದಿಲ್ಲ,ಸಾವಿಗೂ ಕೂಡ……..

Spread the love

ಸಾವಿನ ಭಯ ಗೆಲ್ಲದಿದ್ದರೆ ಒಂದು ವೈರಸ್ ಸಹ ಸಾವಾಗಿ ಕಾಡಬಹುದು………..

ನಾನೇನು ಮನಃಶಾಸ್ತ್ರಜ್ಞನಲ್ಲ ಅಥವಾ ವೈದ್ಯನೂ ಅಲ್ಲ. ಆದರೆ ಬದುಕಿನ ಅನುಭವದ ಆಧಾರದ ಮೇಲೆ ಹೇಳುವುದಾದರೆ ಸಾವಿನ ಭಯವೇ ಒಂದು ರೋಗ ಮತ್ತು ಆ ರೋಗ ಸಾವನ್ನು ಮತ್ತಷ್ಟು ಹತ್ತಿರಗೊಳಿಸುತ್ತದೆ.

ಕೊರೋನಾ ವೈರಸ್ ಒಂದು ಸ್ವಾಭಾವಿಕ ಪ್ರಾಕೃತಿಕ ಮತ್ತು ಸಾಂಕ್ರಾಮಿಕ ರೋಗ. ‌( ಕೃತಕ ನಿರ್ಮಿತ ಎಂಬ ಆರೋಪವೂ ಇದೆ.) ಅದು ಈಗ ವಿಶ್ವವನ್ನೇ ಕಾಡುತ್ತಿದೆ. ಇಲ್ಲಿಯವರೆಗೆ ಯಾವುದೇ ಪರಿಣಾಮಕಾರಿ ಔಷಧಿ ಇಲ್ಲ. ವೈಯಕ್ತಿಕ ಅಂತರ, ಮಾಸ್ಕ್, ಸ್ಯಾನಿಟೈಸರ್, ಲಾಕ್ ಡೌನ್ ಮುಂತಾದ ಕ್ರಮಗಳು ಕೂಡ ಅಷ್ಟಾಗಿ ಪರಿಣಾಮ ಬೀರದೆ ರೋಗ ಪೀಡಿತ ಜನಸಂಖ್ಯೆ ‌ಮತ್ತಷ್ಟು ಹೆಚ್ಚಾಗುತ್ತಲೇ ಇದೆ.

ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಇದು ನಮ್ಮ ಬದುಕನ್ನು ಸಾವಿನ ಭಯದಿಂದ ನರಳುವಂತೆ ಮಾಡುತ್ತಿದೆ. ನಮ್ಮೆಲ್ಲರ ಮನಸ್ಸನ್ನೇ ಹಿಂಡುತ್ತಿದೆ.

ವೈದ್ಯಕೀಯ ಲೋಕಕ್ಕೇ ಸವಾಲಾಗಿರುವಾಗ ಸಾಮಾನ್ಯ ಜನರಾದ ನಾವು ಇದನ್ನು ಎದುರಿಸುವುದು ಹೇಗೆ….

ನನಗೆ ತಿಳಿದಿರುವ ಸರಳ ಉಪಾಯ ಸಾವಿನ‌ ಭಯವನ್ನು ಗೆಲ್ಲುವುದು. ಹದಿನಾಲ್ಕು ತಿಂಗಳ ಅನುಭವದ ಆಧಾರದ ಮೇಲೆ ಹೇಳುವುದಾದರೆ ಕೊರೋನಾ ವೈರಸ್ ಭಾರತದಲ್ಲಿ ಈಗ ಸಾಮಾನ್ಯ ಖಾಯಿಲೆಯಾಗಿ ಮಾತ್ರ ಉಳಿದಿದೆ. ಪ್ರಾರಂಭದಲ್ಲಿ ಊಹಿಸಿದಂತೆ ಮರಣ ಮೃದಂಗ ಸೃಷ್ಟಿಸುತ್ತದೆ ಎಂಬುದು ಅತಿರೇಕದ ಪ್ರತಿಕ್ರಿಯೆ ಎನಿಸುತ್ತದೆ. ಇತರೆ ಅನೇಕ ಖಾಯಿಲೆಗಳಷ್ಟು ತೀವ್ರತೆ ಪಡೆದಿಲ್ಲ. ರೋಗ ಹರಡುವುದು ಹೆಚ್ಚಾಗುತ್ತಿದ್ದರು ಸಾವಿನ ಪ್ರಮಾಣ ಸಹಜ ಸ್ಥಿತಿಯಲ್ಲಿಯೇ ಇದೆ. ಆದರೆ ಸರ್ಕಾರ ಮತ್ತು ಮಾಧ್ಯಮಗಳ‌ ಅತಿರಂಜಿತ ಹೇಳಿಕೆಗಳು ಮಾನಸಿಕ ಆತಂಕವನ್ನು ಹೆಚ್ಚಿಸಿ ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತಿದೆ.

ಸಾಮಾನ್ಯವಾಗಿ ಬಿಪಿ ಶುಗರ್ ಆಸ್ತಮಾದಂತ ಸ್ವಯಂಕೃತ ಅಪರಾಧದ ಖಾಯಿಲೆಗಳು ಮಾನಸಿಕ ಒತ್ತಡದಿಂದಲೇ ಹೆಚ್ಚಾಗುತ್ತದೆ. ಕೊರೋನಾ ಬಂತು ಎಂಬ ರಿಪೋರ್ಟ್ ಮತ್ತು ವೈದ್ಯಕೀಯ ಸೌಲಭ್ಯ ದೊರೆಯುವುದು ಕಷ್ಟ ಎಂಬ ಭಾವನೆ ಜೊತೆಗೆ ನಮ್ಮ ಜೊತೆಗಿನ ಜನರ ವರ್ತನೆಗಳು ನಮ್ಮನ್ನು ಸಂಪೂರ್ಣ ಕುಸಿಯುವಂತೆ ಮಾಡಿ ಆ ರೋಗಗಳು ಮತ್ತಷ್ಟು ಹೆಚ್ಚಾಗುತ್ತದೆ. ಅದನ್ನು ನಿಯಂತ್ರಿಸಲು ನೀಡುವ ಹೆಚ್ಚಿನ ಡೋಸ್ ಇರುವ ಔಷಧಗಳು ಇನ್ನೂ ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಇದು ಬಹು ಅಂಗ ವೈಫಲ್ಯಕ್ಕೆ ಕಾರಣವಾಗುತ್ತದೆ. ಅಲ್ಲಿಗೆ ದೇಹ ನಿಯಂತ್ರಣ ತಪ್ಪುತ್ತದೆ. ಡಾಕ್ಟರುಗಳು ಕೈ ಚೆಲ್ಲುತ್ತಾರೆ.

ಕೆಲವು ವಿಶೇಷ ವ್ಯಕ್ತಿಗಳನ್ನು ಹೊರತುಪಡಿಸಿ ಸಾಮಾನ್ಯ ಜನರಾದ ನಾವು ಈಗ ಮಾಡಬಹುದಾದದ್ದು…..

ಹೇಗಿದ್ದರು ಸಾವೇ ಅಂತಿಮ ಮತ್ತು ಅದರಾಚೆ ಏನೂ ಇಲ್ಲ. ಸಾವನ್ನು ನಾವಾಗಿ ಬರಮಾಡಿಕೊಳ್ಳುವುದಿಲ್ಲ ಅದು ತಾನಾಗಿಯೇ ಬರುತ್ತದೆ. ನಾವು ಅನವಶ್ಯಕ ನಿರ್ಲಕ್ಷ್ಯ ಮಾಡದೆ ಎಲ್ಲಾ ಎಚ್ಚರಿಕೆಯನ್ನು ವಹಿಸಬೇಕು. ಅದರ ನಂತರ ನಮಗೆ ಉಳಿದಿರುವ ದಾರಿ ಸಾವನ್ನು ಘನತೆಯಿಂದ ಸ್ವೀಕರಿಸುವುದು.

ಸೃಷ್ಟಿಯ ಕೋಟ್ಯಾನುಕೋಟಿ ಜೀವಿಗಳಲ್ಲಿ ನಾವು ಸಹ ಒಬ್ಬರು. ಒಂದೊಂದು ಕ್ಷಣಕ್ಕೂ ಕೋಳಿ ಕುರಿ ಹಂದಿ ಹಸು ತಿಗಣೆ ಇರುವೆ ಸೊಳ್ಳೆಗಳು ಸೇರಿ ಅನೇಕ ಜೀವಿಗಳು ಸಾಯುತ್ತಲೇ ಇರುತ್ತವೆ ಮತ್ತು ಹೊಸ ಜೀವಗಳು ಹುಟ್ಟುತ್ತಲೇ ಇರುತ್ತವೆ. ಹಾಗೆಯೇ ನಾವು ಕೂಡ. ಶಾಶ್ವತವಾಗಿ ಯಾವ ಜೀವಿಯು ಉಳಿಯುವುದಿಲ್ಲ. ಸ್ವಲ್ಪ ಸಮಯದ ವ್ಯತ್ಯಾಸ ಆಗಬಹುದಷ್ಟೆ.

ಇಂತಹ ವಾಸ್ತವ ನಮ್ಮ ಕಣ್ಣ ಮುಂದಿನ ಅನುಭವದ ಸತ್ಯವಾಗಿರುವಾಗ ನಾವು ಒಂದು ವೈರಸ್ ಭಯದಿಂದ ಅನೇಕ ತಿಂಗಳು – ವರ್ಷಗಳ ಕಾಲ ಸಾವಿನ ಭಯದಿಂದ ನರಳುತ್ತಾ ಇರುವ ಬದುಕನ್ನು ಕಳೆದುಕೊಳ್ಳುವುದು ಉತ್ತಮ ನಡೆಯಲ್ಲ.

ಬರಲಿ ಬಿಡಿ ಸಾವು. ಹೇಗಿದ್ದರೂ ಸಾವು ನಮ್ಮ ಅರಿವಿಗೆ ಬರುವುದೇ ಇಲ್ಲ. ಗಂಡ ಹೆಂಡತಿ ಮಕ್ಕಳು ನಮ್ಮೊಂದಿಗೆ ಬರುವುದಿಲ್ಲ. ಸ್ವಲ್ಪ ನಿಧಾನವಾಗಿ ಬರಬಹುದು. ನಾವಿಲ್ಲದೆಯೂ ಅವರು ಬದುಕಬಲ್ಲರು ಮತ್ತು ಬದುಕಲೇ ಬೇಕು. ಅವರ ಕಷ್ಟ ನಷ್ಟಗಳು ನಮಗೆ ಅರಿವಾಗುವುದು ಇಲ್ಲ.

ಈಗಾಗಲೇ ನಾನು ಸತ್ತಿದ್ದೇನೆ ಉಳಿದಿರುವುದು ಒಂದು ದೊಡ್ಡ ಬೋನಸ್ ಎಂದು ನಿಮ್ಮ ಮನಸ್ಸಿಗೆ ಒಪ್ಪಿಸಿ. ಮೂರ್ಖ ಮಾಧ್ಯಮಗಳ ನಿರೂಪಕರು ಜೋಕರ್ ಗಳು ಎಂದು ಭಾವಿಸಿಕೊಳ್ಳಿ. ಆ ಹಸಿ ಹಸಿ ಸುದ್ದಿಗಳನ್ನು ಕೇರ್ ಮಾಡಬೇಡಿ. ಆ್ಯಂಬುಲೆನ್ಸ್ ಬೆಡ್ ವೆಂಟಿಲೇಟರ್ ಸಿಗುವುದಿಲ್ಲ ಎಂಬ ಆತಂಕಕ್ಕೆ ಒಳಗಾಗಬೇಡಿ.

ಇಲ್ಲಿಯವರೆಗೆ ಭಾರತದಲ್ಲಿ ಕೊರೋನಾ ವೈರಸ್ ಸಾವಿನ ಪ್ರಮಾಣ ಶೇಕಡಾ ಒಂದಕ್ಕಿಂತ ಕಡಿಮೆ ಇದೆ. ಆ ಒಂದರಲ್ಲಿ ನಾವಾಗಬಹುದು ಅಥವಾ ನಮ್ಮಂತೆ ಇತರರು ಆಗಬಹುದು.

ವೈರಸ್ ಬಂದ ತಕ್ಷಣ ಸಾವಿಗೆ ಸಿದ್ದರಾಗಿ. ಬದುಕಿದರೆ ಬೋನಸ್ ಸತ್ತರೆ ಮುಕ್ತಿ……

ಮತ್ತೇನು ಮಾಡುವುದು. ನಮ್ಮ ನಿಯಂತ್ರಣದಲ್ಲಿ ಇಲ್ಲದ ವಿಷಯದ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಎಷ್ಟು ದಿನ ಈ ಆತಂಕದಲ್ಲಿ ಬದುಕಿ ಜೀವನ ನರಕ ಮಾಡಿಕೊಳ್ಳುವುದು. ಅದಕ್ಕಾಗಿ ಮಾಡಬಹುದಾದ ಎಲ್ಲಾ ಜಾಗೃತಿ ವಹಿಸಿ. ನಂತರವೂ ಅದು ಕಾಡಿದರೆ ನಗುನಗುತ್ತಾ ಸಾವಿನ ಮನೆ ಪ್ರವೇಶಿಸೋಣ……

ಇಲ್ಲದಿದ್ದರೆ ಪ್ರತಿ ನಿತ್ಯ ಕೊರೋನಾ ವೈರಸ್ ಜಪ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ಅನುಭವಿಸಬೇಕಾಗುತ್ತದೆ.

ಇದು ಹೇಳಿದಷ್ಟು ಸುಲಭವಲ್ಲ. ಆದರೆ ವಾಸ್ತವ ಮತ್ತು ಅನಿವಾರ್ಯ. ಸಾವಿನ ಭಯವೇ ಒಂದು ರೋಗ. ಅದನ್ನು ಗೆಲ್ಲಲೇಬೇಕು. ಗೆದ್ದು ಇರುವ ಸಮಯದಲ್ಲಿ ಒಂದಷ್ಟು ಆತ್ಮತೃಪ್ತಿಯ ಸಾಧನೆ ಮಾಡೋಣ…….

ಕೊರೋನಾ ನಿನಗೆ ನಾವು ಹೆದರುವುದಿಲ್ಲ,
ಸಾವಿಗೂ ಕೂಡ…..

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!