ಎಲ್ಲಾ ದೇಶಗಳಲ್ಲಿಯೂ ಭೂಮಿ ಇದೆ. ನದಿ ಇದೆ. ಸಾಗರ ಇದೆ. ಕೆಲವು ದೇಶಗಳಲ್ಲಿ ಪೆಟ್ರೋಲ್ ಇದ್ದರೆ ಇನ್ನು ಕೆಲವು ದೇಶಗಳಲ್ಲಿ ಗಣಿ ಇದೆ. ಆದರೆ ನಮ್ಮ ದೇಶದಲ್ಲಿ ಸಂಸ್ಕೃತಿ ಇದೆ. ಅದೇ ನಿಜವಾದ ಸಂಪತ್ತು
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ…… ( ಶ್ರವಣಬೆಳಗೊಳ – 50 ನೇ ಪಟ್ಟಾಭಿಷೇಕ ಸಮಯದ ಸಂದರ್ಶನದಲ್ಲಿ – ಎರಡು ವರ್ಷಗಳ ಹಿಂದೆ )
ಇದು ನಿಜವೇ ?
ವಾಸ್ತವವೇ ?
ಆತ್ಮವಂಚನೆ ಮಾಡಿಕೊಳ್ಳದೆ ಧೈರ್ಯವಾಗಿ ಹೇಳಬಹುದೇ ?
ಕಳೆದ ಕೆಲವು ವರ್ಷಗಳ ಭಾರತೀಯ ಸಾಮಾಜಿಕ ಜೀವನವನ್ನು, ಜನರ ಮಾನಸಿಕತೆಯನ್ನು ಗಮನಿಸಿರುವ ನನಗೆ ಭಾರತದ ಗತಕಾಲದ ಸಂಸ್ಕೃತಿಯ ಶುದ್ದತೆ ಈಗ ಉಳಿದಿಲ್ಲ ಅಥವಾ ಅಳಿವಿನ ಅಂಚಿನಲ್ಲಿದೆ ಎಂದು ಭಾಸವಾಗುತ್ತಿದೆ.
ಹಿಂದೆ ನಮ್ಮ ಸಂಸ್ಕೃತಿಯಲ್ಲಿ ಮೋಸ ವಂಚನೆ ದ್ರೋಹ ದುಷ್ಟತನ ಇರಲಿಲ್ಲವೆಂದಲ್ಲ. ಆಗಲೂ ಇತ್ತು. ಜೊತೆಗೆ ನಾವೆಲ್ಲರೂ ಈಗ ನಾಚಿಕೆಪಡುವಂತ ಅಸ್ಪೃಶ್ಯತೆ, ಜಾತೀಯತೆ, ಸತಿ ಸಹಗಮನ, ಬಾಲ್ಯವಿವಾಹ ಮುಂತಾದ ಅತ್ಯಂತ ಅಮಾನವೀಯ ಆಚರಣೆಗಳು ಇದ್ದುವು. ಅದನ್ನು ಯಾವುದೇ ರೀತಿಯಲ್ಲಿಯೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.
ಅದೇ ಸಮಯದಲ್ಲಿ ಮಾನವೀಯ ಮೌಲ್ಯಗಳಾದ ಪ್ರೀತಿ ವಿಶ್ವಾಸ ಕರುಣೆ ಪ್ರಾಮಾಣಿಕತೆ ಶುದ್ದತೆ ಸತ್ಯ ಸರಳತೆ ನಂಬಿಕೆ ಮುಂತಾದವುಗಳು ಸಹ ಅತ್ಯಂತ ಹೆಚ್ಚು ಪ್ರಭಾವ ಹೊಂದಿದ್ದವು.
ಒಳ್ಳೆಯತನ ಸಾರ್ವಜನಿಕವಾಗಿಯೂ ದುಷ್ಟತನ ಅಪರೂಪವಾಗಿಯೂ ಕಾಣಬಹುದಿತ್ತು.
ಸ್ವಾತಂತ್ರ್ಯಾನಂತರ ಮೌಲ್ಯಗಳ ಅಧಃಪತನದ ದಾರಿ ನಿಧಾನವಾಗಿ ಚಲಿಸತೊಡಗಿತು. ಕೆಲವು ಗೊಣಗಾಟಗಳ ನಡುವೆಯೂ ಮೌಲ್ಯಗಳ ಬಗ್ಗೆ ಎಚ್ಚರಿಕೆ ಮತ್ತು ಗೌರವ ಹಿರಿಯರಿಂದ ನೆನಪಿಸಲ್ಪಡುತ್ತಿತ್ತು.
ಬಹುಶಃ 1990 ರ ನಂತರ ಜಾಗತೀಕರಣದ ಪ್ರಭಾವದಿಂದಾಗಿಯೇ ಭಾರತೀಯ ಸಮಾಜದಲ್ಲಿ ತೀವ್ರಗತಿಯ ಬದಲಾವಣೆ ಆಗತೊಡಗಿತು.
ಐಟಿ ಬಿಟಿ ಸೇವೆಗಳ ಕ್ರಾಂತಿ, ವಿದೇಶಿ ಕಂಪನಿಗಳ ಸ್ಥಾಪನೆ, ಮಹಿಳೆಯರ ಉದ್ಯೋಗಾವಕಾಶಗಳ ಹೆಚ್ಚಳ, ರಿಯಲ್ ಎಸ್ಟೇಟ್ ಬೂಮ್, ಅವಿಭಕ್ತ ಕುಟುಂಬಗಳು ಶಿಥಿಲವಾಗಿ ಚಿಕ್ಕ ಚಿಕ್ಕ ಕುಟುಂಬಗಳ ಬೆಳವಣಿಗೆ, ಸಂಪರ್ಕ ಕ್ರಾಂತಿ ಇದೆಲ್ಲದರ ಪರಿಣಾಮ ಹಣಕ್ಕೆ ಮತ್ತು ಅದರ ಪ್ರದರ್ಶನಕ್ಕೆ ಅತ್ಯಂತ ಹೆಚ್ಚು ಮಹತ್ವ ದೊರೆತ ಫಲವಾಗಿ ಬಹುತೇಕ ಇಡೀ ವ್ಯವಸ್ಥೆಯನ್ನೇ ಹಣ ಆಕ್ರಮಿಸಿಕೊಂಡಿತು.
ಇದೇ ಸಂದರ್ಭದಲ್ಲಿ ಜಮೀನಗಳು ವಜ್ರಗಳನ್ನು ಬೆಳೆಯತೊಡಗಿದವು. ಅದರ ಬೆಲೆ ಎಷ್ಟು ಸಂಪತ್ತು ಗಳಿಸಿತು ಎಂದರೆ ಶಿಕ್ಷಣ ಕ್ಷೇತ್ರವೇ ( ವಿದ್ಯೆಯೇ ) ಕಡೆಗಣಿಸಲ್ಪಟ್ಟಿತು. ಜಮೀನು ಇದ್ದರೆ ಸಾಕು ಆರಾಮವಾಗಿ ಜೀವನ ಸಾಗಿಸಬಹುದು ಎಂದು ಜನ ಭಾವಿಸತೊಡಗಿದರು.
ಜೊತೆಗೆ ಮಹಿಳೆಯರಿಗೂ ಆಸ್ತಿಯ ಹಕ್ಕು ಮತ್ತು ಅವರ ಬಗ್ಗೆ ಜಾಗೃತಿ ಮೂಡಿತು.
ಅಲ್ಲಿಂದ ಪ್ರಾರಂಭವಾಯಿತು ನೋಡಿ, ಮನೆಗಳು ಮನಸ್ಸುಗಳು ಒಡೆದು ಹೋದವು. ಸಂಬಂಧಗಳು ಛದ್ರವಾದವು. ಅಣ್ಣ ತಮ್ಮ ಅಕ್ಕ ತಂಗಿ ಅಪ್ಪ ಮಕ್ಕಳು ಮುಂತಾದ ಎಲ್ಲವೂ ಆಸ್ತಿಯ ಸುತ್ತಲೇ ಅಸ್ತಿತ್ವ ಸ್ಥಾಪಿಸಿದವು. ಜಮೀನುಗಳಿಗಾಗಿ ಜಗಳಗಳು ಸಾಮಾನ್ಯವಾದವು. ( ಜಮೀನು ಇದ್ದು, ಅದರ ವಾರಸುದಾರರು ಹೆಚ್ಚಾಗಿದ್ದು, ಸರಿಯಾದ ಹಂಚಿಕೆ ಆಗದ ಕುಟುಂಬಗಳಲ್ಲಿ ಮಾತ್ರ )
ಹಣ ಓಡಾಡಲು ಪ್ರಾರಂಭವಾದ ತಕ್ಷಣ ಕೊಳ್ಳುಬಾಕ ಮಾರುಕಟ್ಟೆ ತನ್ನ ಬಲೆ ಬೀಸಿತು. ಹೊಸ ಹೊಸ ಮನೆಗಳು, ವಿಶೇಷ ವಿನ್ಯಾಸದ ಒಳಾಂಗಣ, ಇಟಾಲಿಯನ್ ಕಿಚನ್, ವಾಹನಗಳು, ಪ್ರವಾಸಗಳು, ಒಡವೆಗಳು ಜನರನ್ನು ಆಕರ್ಷಿಸಿದವು. ಅದನ್ನು ಪ್ರದರ್ಶಿಸುವುದು ಒಂದು ಫ್ಯಾಷನ್ ಆಯಿತು.
ಇದರಿಂದಾಗಿ ಭ್ರಷ್ಟಾಚಾರ ಹೆಚ್ಚಾಯಿತು. ಹೇಗಾದರೂ ಮಾಡಿ ಹಣ ಮಾಡುವ ಮನೋಭಾವ ಬೆಳೆಯಿತು. ಮಾನವೀಯ ಮೌಲ್ಯಗಳು ಹಿಂದೆ ಸರಿದು ಕಾಮ ಕ್ರೋದ ಲೋಭ ಮೋಹ ಮದ ಮತ್ಸರಗಳು ವಿಜೃಂಭಿಸಿದವು.
ಅಲ್ಲಿಗೆ ನಿಜವಾದ ಭಾರತೀಯ ಸಂಸ್ಕೃತಿಯ ಮೌಲ್ಯಗಳು ಹೆಚ್ಚು ಕಡಿಮೆ ನಾಶವಾಗಿ ಮನಸ್ಸುಗಳು ಭ್ರಷ್ಟಗೊಂಡವು.
ಆ ದುರಾಸೆಯ ಫಲವಾಗಿ ದೇಹಗಳಿಗೂ ಅನಾರೋಗ್ಯ ಆವರಿಸಿತು. ಆಸ್ಪತ್ರೆಗಳು, ಲ್ಯಾಬೋರೇಟರಿಗಳು, ಸಿಸಿಟಿವಿಗಳು, ಪೋಲೀಸರು, ನ್ಯಾಯಾಲಯಗಳು ಹೆಚ್ಚು ಹೆಚ್ಚು ಸ್ಥಾಪನೆಗೊಂಡು ಜನರಿಂದ ಕಿಕ್ಕಿರಿದು ತುಂಬಿರುವುದನ್ನು ಎಲ್ಲೆಡೆಯೂ ಗಮನಿಸಬಹುದು. ಒಂದು ಸಣ್ಣ ಚುನಾವಣೆಗಾಗಿ ಕೋಟಿ ಕೋಟಿ ಹಣ ಖರ್ಚುಮಾಡಬೇಕಾದ ಪರಿಸ್ಥಿತಿ ತಲುಪಿದ್ದೇವೆ. ಮತದಾರರ ಮನಸ್ಸು ಬಹುತೇಕ ಭ್ರಷ್ಟಗೊಂಡಿದೆ.
ಆಸ್ಪತ್ರೆ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳು, ರಾಜಕೀಯ, ಸಮಾಜ ಸೇವೆ, ಮಾಧ್ಯಮಗಳು ಎಲ್ಲವೂ ವ್ಯಾಪಾರೀಕರಣಗೊಂಡಿವೆ. ಪೋಲೀಸ್ ಮತ್ತು ನ್ಯಾಯಾಲಯಗಳಿಗೆ ಭೇಟಿ ಕೊಟ್ಟು ನೋಡಿ ಯಾವ ರೀತಿಯ ಕೇಸುಗಳು ಯಾರ ಮೇಲೆ ದಾಖಲಾಗಿವೆ ಎಂಬುದನ್ನು ಪರಿಶೀಲಿಸಿದರೆ ನಮ್ಮ ಸಂಸ್ಕೃತಿಯ ಪರಿಚಯ ನಿಮಗಾಗುತ್ತದೆ.
ಹೀಗಿರುವಾಗ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸೇರಿ ಹಲವು ಸ್ವಾಮೀಜಿಗಳು, ಮಹರ್ಷಿಗಳು, ಬಾಬಾಗಳು ಮುಂತಾದವರು, ಆಧ್ಯಾತ್ಮಿಕ ಉಪನ್ಯಾಸಕರರು, ಪ್ರಖ್ಯಾತ ಕ್ರೀಡಾಪಟುಗಳು, ಸಿನಿಮಾ ನಟರು, ಅಧಿಕಾರದಲ್ಲಿರುವ ರಾಜಕಾರಣಿಗಳು ಇತ್ಯಾದಿಗಳು ಈಗಲೂ ಭಾರತದ ಸಂಸ್ಕೃತಿಯ ಶ್ರೀಮಂತಿಕೆಯ ಬಗ್ಗೆ ಮಾತನಾಡುತ್ತಾರೆ. ಅವರುಗಳಿಗೆ ಕುಸಿದ ಮೌಲ್ಯಗಳ ಅರಿವಿಲ್ಲ ಅಥವಾ ಇದ್ದರೂ ಅದನ್ನು ಹೇಳುವ ಪ್ರಾಮಾಣಿಕತೆ ಇಲ್ಲ.ಜನರನ್ನು ಇನ್ನೂ ಭ್ರಮೆಯಲ್ಲಿ ಇಡುವ ಸಂಚು ಇರಬಹುದು.
ನಮ್ಮ ತಪ್ಪುಗಳನ್ನು ಒಪ್ಪಿಕೊಂಡು ಆತ್ಮಾವಲೋಕನ ಮಾಡಿಕೊಂಡಾಗ ಮಾತ್ರ ಅದನ್ನು ಸರಿಪಡಿಸಬಹುದು. ಇಲ್ಲದಿದ್ದರೆ ತಪ್ಪುಗಳನ್ನು ಮರೆಮಾಚುತ್ತಾ ಆತ್ಮವಂಚನೆ ಮಾಡಿಕೊಂಡು ಅದರಲ್ಲೇ ಮುಳುಗಿದರೆ ಬದಲಾವಣೆ ಸಾಧ್ಯವಿಲ್ಲ.
ಈಗಾಗಲೇ ನಮ್ಮ ಮನಸ್ಥಿತಿಗಳು ಒಳ್ಳೆಯದನ್ನು ಕೇಳಿಸಿಕೊಳ್ಳುವ ಸ್ಥಿತಿಯನ್ನು ಮೀರಿ ತಾಳ್ಮೆ ಕಳೆದುಕೊಂಡಿವೆ – ಭ್ರಷ್ಟಗೊಂಡಿವೆ. ಒಳ್ಳೆಯದು – ಕೆಟ್ಟದ್ದರ ನಡುವಿನ ಅಂತರವೇ ಮಾಯಾವಾಗಿದೆ.
ಒಳ್ಳೆಯದನ್ನು ಹುಡುಕಬೇಕಾಗಿದೆ.
ಈ ಹುಡುಕಾಟ, ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆಯ ಪ್ರಯತ್ನವೇ………
- ವಿವೇಕಾನಂದ. ಹೆಚ್.ಕೆ.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!