January 29, 2026

Newsnap Kannada

The World at your finger tips!

deepa1

ಕಾಲ್ನಡಿಗೆ ಎಂಬ ತಪಸ್ಸಿನ ಯಾತ್ರೆ,ಮಾನವೀಯತೆ ಎಂಬ ಮೋಕ್ಷ ಹುಡುಕುತ್ತಾ……….

Spread the love

ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ ವಿಷಯವಾಗಬೇಕಿದೆ.

ಅಭಿವೃದ್ಧಿಯ, ಆಧುನಿಕತೆಯ, ತಾಂತ್ರಿಕ ಪ್ರಗತಿಯ ಲಾಭಗಳನ್ನು ನಾವು ಪಡೆಯಬೇಕಾದರೆ ಮಾನವೀಯ ಮೌಲ್ಯಗಳ ಉಳಿವು ಮತ್ತು ಬೆಳವಣಿಗೆ ಬಹುಮುಖ್ಯ ಅಂಶ. ಇಲ್ಲದಿದ್ದರೆ ಎಲ್ಲಾ ಪ್ರಗತಿಯು ನಮ್ಮನ್ನು ನಿಧಾನವಾಗಿ ವಿನಾಶದ ಅಂಚಿಗೆ ಕೊಂಡೊಯ್ಯಬಹುದು. ಬಹುಶಃ ಈಗ ಆ ಹಂತದಲ್ಲಿ ನಾವಿದ್ದೇವೆ.

ಆಹಾರದ ಕಲಬೆರಕೆ ಹಣಕ್ಕಾಗಿ,
ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಹಣಕ್ಕಾಗಿ, ಮೌಲ್ವಿ ಫಾದರ್ ಸ್ವಾಮಿಗಳ ವೇಷ ಹಣಕ್ಕಾಗಿ,ಡಾಕ್ಟರುಗಳು, ಮೇಷ್ಟ್ರುಗಳ ಆಧ್ಯತೆ ಹಣಕ್ಕಾಗಿ,
ರಾಜಕಾರಣಿಗಳು, ಸಮಾಜ ಸೇವಕರ ಮುಖವಾಡ ಹಣಕ್ಕಾಗಿ,
ಅಧಿಕಾರಿಗಳ ಓದು ಬರಹ ಹಣಕ್ಕಾಗಿ,
ಸಾಹಿತಿಗಳ ಹೋರಾಟಗಾರ ಮಾತು ಅಕ್ಷರಗಳು ಹಣಕ್ಕಾಗಿ,

ಕೊನೆಗೆ ಹೆಣ್ಣು ಗಂಡಿನ ಮದುವೆ ಸಂಬಂಧಗಳು ಸಹ ಹಣಕ್ಕಾಗಿ ಎಂಬಲ್ಲಿಗೆ ಈ ಸಮಾಜ ಬಂದು ನಿಂತಿದೆ,

ಮುಂದೆ………

ಅಭಿವೃದ್ಧಿಯೊಂದಿಗೆ, ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಮಾನವೀಯ ಮೌಲ್ಯಗಳ – ನೈತಿಕ ಮೌಲ್ಯಗಳ ಬೆಳವಣಿಗೆಗೂ ಶ್ರಮಿಸಬೇಕಾಗುತ್ತದೆ. ಇಲ್ಲದಿದ್ದರೆ ಜೀವವಿಲ್ಲದ ಯಂತ್ರಮಾನವರಾಗುವ ಅಥವಾ ಅನೈತಿಕತೆಯೇ ಸಮಾಜದ ಮುಖ್ಯ ಗುಣಲಕ್ಷಣಗಳಾಗುವ ಸಾಧ್ಯತೆ ಇದೆ.

ಗಾಳಿ ನೀರು ಆಹಾರ ‌ಆಡಳಿತ ವ್ಯವಸ್ಥೆಯ ಜೊತೆಗೆ ಮನಸ್ಸು ಮಲಿನವಾದರೆ ಇಡೀ ಬದುಕಿನ ಗುಣಮಟ್ಟವೇ ಕುಸಿಯುತ್ತದೆ. ಈಗಾಗಲೇ ಅತೃಪ್ತಿ ಅಸಮಾಧಾನ ಅಸಹನೆಗಳೇ ಹೆಚ್ಚಾಗಿ ಕಾಡುತ್ತಿರುವ ಯುವ ಸಮೂಹ ಮುಂದೆ ಇನ್ನಷ್ಟು ಆತಂಕಕಾರಿ ಬೆಳವಣಿಗೆಗೆ ಕಾರಣವಾಗಬಹುದು.

ಆದ್ದರಿಂದ ವ್ಯಕ್ತಿಯ ನೈತಿಕತೆಯ ಪಾಠ ಮನಗಳಲ್ಲಿ – ಮನೆಗಳಲ್ಲಿ – ಶಾಲೆಗಳಲ್ಲಿ – ಉದ್ಯೋಗಗಳಲ್ಲಿ – ವ್ಯವಹಾರಗಳಲ್ಲಿ – ಸಮಾಜದಲ್ಲಿ ನಿಧಾನವಾಗಿ ಪುನರ್ ಸ್ಥಾಪಿಸಬೇಕಾದ ಅವಶ್ಯಕತೆ ಇದೆ.

ಅದಕ್ಕಾಗಿಯೇ ಮನಸ್ಸುಗಳ ಅಂತರಂಗದ ಚಳವಳಿಯ ಪಾದಯಾತ್ರೆ ಸಾಗುತ್ತಿದೆ………….

ಸಾಮೂಹಿಕ ಬದಲಾವಣೆಯ ಆಶಯ ಹೊತ್ತು,
ಸಮಾಜ ಪರಿವರ್ತನೆಯ ಕನಸಿನೊಂದಿಗೆ,
ಜನರ ಮನಸ್ಸಿನಾಳದಲ್ಲಿ ಹುದುಗಿರುವ ಮಾನವೀಯ ಮೌಲ್ಯಗಳನ್ನು ಬಡಿದೆಬ್ಬಿಸಲು,
ದೀರ್ಘ, ನಿರಂತರ ಕಾಲ್ನಡಿಗೆ………..

ಮಾನವೀಯತೆ ಎಂಬ ಮೋಕ್ಷವ ಹುಡುಕುತ್ತಾ

  • ವಿವೇಕಾನಂದ. ಹೆಚ್.ಕೆ.
error: Content is protected !!