November 23, 2024

Newsnap Kannada

The World at your finger tips!

childMother

love of mother ಏನದು ಅಮ್ಮ !

ಮಗುವನರಸುತ್ತಾ

Spread the love
IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್, ಮಂಡ್ಯ.

`ಅಯ್ಯೋ… ನನ್ ಮಗು ಕಾಣ್ತಿಲ್ಲ, ನನ್ ಮಗೂ, ನನ್ ಮಗೂ…’ ಅಂತ ಅಳುತ್ತ ವಸುಧಾ  ರಸ್ತೆಯಲ್ಲಿ ಓಡುತ್ತಿದ್ದಳು.  ಮದುವೆಯಾಗಿ ಎಂಟು ವರ್ಷಗಳ ಮೇಲೆ ಬಯಸೀ ಬಯಸೀ ಪಡೆದ ಒಂದು ವರ್ಷದ ಒಂದೇ ಒಂದು ಗಂಡು ಮಗು. ಅವಳ ಎದುರಿಗೆ ಬಂದ ಎಂಬತ್ತು ವಯಸ್ಸಿನ ರಾಮಚಂದ್ರ `ಯಾಕಮ್ಮ ವಸುಧಾ ಏನಾಯ್ತು, ಯಾಕಿಷ್ಟು ಗಾಬರಿ?’ ಆಂದರು. ಅವರಿಗೆ ಉತ್ತರ ಕೊಡುವಷ್ಟು ಶಕ್ತಿಯೂ ಇರಲಿಲ್ಲ ಅವಳಿಗೆ. ಅವಳ ಜೊತೆಗೇ ಬರುತ್ತಿದ್ದ ಅವಳ ಪಕ್ಕದ  ಮನೆಯ ಪುಷ್ಪ `ಅಂಕಲ್.. ದೈವಿಕ್ ಕಳೆದುಹೋಗಿದ್ದಾನೆ. ಒಂದು ಗಂಟೆಯಿಂದ ಹುಡುಕುತ್ತಾನೇ ಇದೀವಿ. ರಸ್ತೆಯಲ್ಲಿರೋ ಎಲ್ಲರ ಮನೆಗೂ ಹೋಗಿ ನೋಡಾಯ್ತು. ಎಲ್ಲೂ ಕಾಣ್ತಿಲ್ಲ’ ಅಂದಳು. ರಾಮಚಂದ್ರ ಅವರಿಗೂ ಗಾಬರಿಯಾಯಿತು. ಯಾಕೆಂದರೆ ಆ ಮಗು ಇಡೀ ರಸ್ತೆಯವರ ಮುದ್ದಿನ ಕಣ್ಮಣಿ. ಅದು ತೊಟ್ಟಿಲಿನಲ್ಲಿ ಆಡುತ್ತಿದ್ದ ದಿನದಿಂದ ಅದು ಪುಟ್ಟ ಪುಟ್ಟ ಹೆಜ್ಜೆ ಇಡುವ ತನಕ ಎಲ್ಲರೂ ಸಂಭ್ರಮದ ಕಣ್ಣುಗಳಿಂದ ಆನಂದ ಪಟ್ಟಿದ್ದರು. ಅದು ಹೊಸ್ತಿಲು ದಾಟಿದ ದಿನ ರಸ್ತೆಯವರೆಲ್ಲರೂ ವಸುಧನ ಮನೆಯಲ್ಲೇ. ಅಂದು ಅಲ್ಲಿ ಗಸಗಸೆ ಪಾಯಸ. ಆ ಬೀದಿಗೆ ಅದೊಂದೇ ಪುಟ್ಟ ಕೂಸು.  ಆ ಬೀದಿಯೊಂದು ನಿವೃತ್ತರ ಸ್ವರ್ಗ. ಅಲ್ಲಿನವರೆಲ್ಲ ತಮ್ಮ ಜವಾಬ್ದಾರಿಗಳನ್ನು ಮುಗಿಸಿಕೊಂಡು ನಿರಾಳವಾಗಿ ಕಾಲ ಕಳೆಯುತ್ತ, ತಮ್ಮ ಮಕ್ಕಳು, ಮೊಮ್ಮಕ್ಕಳು ಯಾವಾಗ ಬರುವರೋ ಎಂದು ಆಸೆಗಣ್ಣಿನಿಂದ ಕಾಯುವ ಜೀವಗಳೇ. ನಿರಾಳದ ಜೊತೆ ನಿರಾಸೆಯನ್ನು ತುಂಬಿಕೊಂಡಿದ್ದ ವೃದ್ಧರಿಗೆ ಹೊಸತಾಗಿ ಬಂದ ವಸುಧಾ, ಸಾತ್ವಿಕ್ ಅವರ ಮಗ ಪುಟಾಣಿ ದೈವಿಕ್ ದೇವರು ಕೊಟ್ಟ ವರವಾಗಿದ್ದ. ಅಂಥಾ ಮಗು ಕಾಣುತ್ತಿಲ್ಲ ಎಂದಾಗ ರಸ್ತೆಗೆ ರಸ್ತೆಯೇ ಸ್ತಬ್ಧವಾಯಿತು. ವಯಸ್ಸಾದ ಹೆಂಗಸರು ದೇವರಿಗೆ ತುಪ್ಪದ ದೀಪ ಹಚ್ಚಿ ಕೈಮುಗಿದು ಕುಳಿತಿದ್ದರೆ, ವಯೋವೃದ್ಧ ಗಂಡಸರು ರಸ್ತೆ ಬದಿಯ ಅರಳೀಕಟ್ಟೆಯ ಮೇಲೆ ಕಣ್ಕಣ್ಣು ಬಿಟ್ಟುಕೊಂಡು ಕುಳಿತು ತಮಗೆ ಗೊತ್ತಿದ್ದ ಅಕ್ಕಪಕ್ಕದ ಬೀದಿಯವರಿಗೆ ಫೋನ್ ಮಾಡಿ ಹುಡುಕುವ ಪ್ರಯತ್ನದಲ್ಲಿ ಇದ್ದರು.
ವಿಷಯ ತಿಳಿದು ಇಪ್ಪತ್ತು ಕಿಲೋಮೀಟರ್ ದೂರದಲ್ಲಿದ್ದ ತನ್ನ ಆಫೀಸಿನಿಂದ ಧಾವಿಸಿ ಬಂದ ಸಾತ್ವಿಕ್ಗೆ ಕಂಗೆಟ್ಟು ಕಣ್ಣೀರು ಸುರಿಸುತ್ತಿರುವ ಹೆಂಡತಿಯನ್ನು ಸಂತೈಸಬೇಕೋ, ಪೊಲೀಸ್ಗೆ ಕಂಪ್ಲೇಂಟ್ ಕೊಡಬೇಕೋ, ಮಗುವನ್ನು ಹುಡುಕಬೇಕೋ ಒಂದೂ ತೋರದಾಯಿತು. ಅಷ್ಟರಲ್ಲಿ ಅದೇ ಊರಿನಲ್ಲಿದ್ದ ವಸುಧಾ ಅವರ ತಾಯಿ, ತಂದೆ, ತಮ್ಮ ಬಂದರು. ಸದ್ಯ ವಸುಧಾಳನ್ನು ಅವರು ನೋಡಿಕೊಳ್ಳುತ್ತಾರೆ ಎಂದು ಒಂದು ಸಮಾಧಾನ. ಒಬ್ಬಳೇ ಮಗಳು ಎಂದು ವಸುಧಾಳನ್ನು ಅತಿ ಅಕ್ಕರೆಯಿಂದ ಬೆಳೆಸಿದ್ದರು. ಅವಳು ಓದಿದ್ದು, ಬೆಳೆದದ್ದೆಲ್ಲ ಈ ಮಹಾನಗರದಲ್ಲೇ. ಹಳ್ಳಿಯೆಂದರೆ ಕೆ.ಜಿಗೆ ಎಷ್ಟು ಎನ್ನುವಂತೆ ಬೆಳೆದಾಕೆ. ಹಾಗಾಗಿ ಸಣ್ಣ ಪುಟ್ಟದ್ದಕ್ಕೂ ವಸುಧಾ ಅವರ ಮೇಲೆಯೇ ಅವಲಂಬಿಸಿದ್ದಳು. ಒಂದೋ ಅವರು ಬರುತ್ತಿದ್ದರು, ಇಲ್ಲಾ ಇವಳು ಹೋಗುತ್ತಿದ್ದಳು. ಹಾಗಾಗಿ ತಾನು ಮಗುವನ್ನು ಹುಡುಕಲು ಹೊರಡಬಹುದು ಎಂದು ಸಾತ್ವಿಕ್ ಪೊಲೀಸ್ ಕಂಪ್ಲೇಂಟ್ ಕೊಡುವಂತೆ ವಸುಧಾ ತಮ್ಮನಿಗೆ ಹೇಳಿ ಗಾಡಿಯನ್ನು ಹತ್ತಿ ಸುತ್ತಮುತ್ತಲಿನ ರಸ್ತೆಗಳನ್ನು ನೋಡಲು ಹೊರಟ. ರಸ್ತೆಯ ಮೂಲೆಗೆ ಬರುವಷ್ಟರಲ್ಲಿ ಅದೇ ತಾನೇ ಪೇಟೆಗೆ ಹೋಗಿ ಸಾಮಾನು ತರುತ್ತಿದ್ದ ಸೂರ್ಯನಾರಾಯಣ ಅವರು ಇವನನ್ನು ತಡೆದರು. `ಯಾಕಪ್ಪಾ ಸಾತ್ವಿಕ್ ಇವತ್ತು ಆಫೀಸ್ ಇಲ್ವಾ?’ ಎಂದರು. `ಅಂಕಲ್, ದೈವಿಕ್ ಕಳೆದುಹೋಗಿದ್ದಾನೆ. ಅದಕ್ಕೆ ಹುಡುಕೋಕೆ ಹೋಗ್ತಿದೀನಿ’ ಎಂದು ಪೆಚ್ಚಾದ ಮುಖದಲ್ಲಿ ಹೇಳಿದ. `ಈಗೊಂದು ಗಂಟೆ ಮುಂಚೆ ಈ ರಸ್ತೆಯಲ್ಲಿ ಯಾರೋ ವಯಸ್ಸಾದ ಗಂಡ ಹೆಂಡತಿ ಒಂದು ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಹೋಗುತ್ತಿದ್ದರು. ನಾ ಸ್ವಲ್ಪ ದೂರದಲ್ಲಿದ್ದ ಆಟೋ ಹತ್ತುತ್ತಿದ್ದೆ. ಮಗು ಮುಖ ಸರಿಯಾಗಿ ಕಾಣಲಿಲ್ಲ. ಆ ಹೆಂಗಸು ಕೈತುಂಬ ಹಸಿರು ಬಳೆ, ದೊಡ್ಡ ಬೊಟ್ಟಿನಗಲ ಪುಡಿಕುಂಕುಮ ಇಟ್ಟುಕೊಂಡಿದ್ರಂತೆ, ಆ ವೃದ್ಧನೂ ಅಷ್ಟೇ. ಗರಿಗರಿ ಬಿಳಿಪಂಚೆ, ಬಿಳಿ ಷರ್ಟು ಹಾಕಿಕೊಂಡು ಹಣೆಗೆ ವಿಭೂತಿ, ಗಂಧ ಇಟ್ಟುಕೊಂಡಿದ್ರಂತೆ. ನೋಡಿದ್ರೆ ಮತ್ತೆ ನೋಡ್ಬೇಕೂ ಅನ್ನೋವಷ್ಟು ಲಕ್ಷಣ, ಹಳ್ಳಿಜನದ ಥರಾ ಇದ್ರೂ ಅಂತಾ ಆಟೋದವನು ಹೇಳ್ತಿದ್ದ. ಏನೋಪ್ಪಾ ಇರೋದೊಂದು ಮಗು, ಅದ್ನೂ ಸರ್ಯಾಗಿ ನೋಡ್ಕೊಳ್ಳೋಕಾಗೋಲ್ವಾ?’ ಅಂತ ಅಂದು ಸೂರ್ಯನಾರಾಯಣ ಅವರು ತಮ್ಮ ಮನೆಯ ಕಡೆ ನಿಧಾನ ಹೆಜ್ಜೆ ಹಾಕಿದರು.
ಸಾತ್ವಿಕ್ ತಲೆಯಲ್ಲಿ ಹುಳು ಹೊಕ್ಕಿತು. ಅವರು ಯಾರಿರಬಹುದು? ಈ ರಸ್ತೆಯಲ್ಲಿ ಎಲ್ಲರಿಗೂ ಎಲ್ಲರೂ ಪರಿಚಿತರೇ. ಅಂಥಾದ್ರಲ್ಲಿ ಯಾರಿಗೂ ಗೊತ್ತಾಗಲಿಲ್ಲವೇಕೇ? ಆ ಮಗು ದೈವಿಕ್ ಇರಬಹುದಾ? ಎಂಬೆಲ್ಲ ಪ್ರಶ್ನೆಗಳು. `ಆಟೋದವನು ಹೇಳಿದ ಲಕ್ಷಣ ಕೇಳಿದರೆ ನನ್ನಪ್ಪ ಅಮ್ಮನ ಥರಾ ಇದೆ, ಅವರೇನಾದ್ರೂ ಬಂದಿದ್ರಾ? ಬಂದಿದ್ರೂ ಅವರ್ಯಾಕೆ ಕದ್ದು ನನ್ನ ಮಗುವನ್ನು ಎತ್ತಿಕೊಂಡು ಹೋಗುತ್ತಾರೆ? ಏನಾದ್ರೂ ಆಗ್ಲಿ ವಯಸ್ಸಾದ ಅಪ್ಪ ಅಮ್ಮನಿಗೆ ಫೋನ್ ಮಾಡಿ ಗಾಬರಿ ಮಾಡೋ ಬದಲು ನಾನೇ ಈ ವಿಷಯ ಹೇಳಿದ ಹಾಗಾಗುತ್ತೆ, ಹಾಗೇ ನನ್ನ ತಲೇಲಿ ಹೊಕ್ಕಿರೋ ಅನುಮಾನ ಪರಿಹಾರ ಆದ್ರೂ ಆಗುತ್ತೆ’ ಎಂದು ಗಾಡಿಯನ್ನು ತನ್ನ ಹಳ್ಳಿಯತ್ತ ತಿರುಗಿಸಿದನು. ಅವನು ಹುಟ್ಟಿ ಬೆಳೆದ ಗೋಪನಹಳ್ಳಿ ಆ ಮಹಾನಗರದಿಂದ ಸುಮಾರು ಒಂದೂವರೆ ಗಂಟೆಯ ಪ್ರಯಾಣವಷ್ಟೇ.
ಸಿಗ್ನಲ್ನಲ್ಲಿ ನಿಂತು, ಸಾವಿರಾರು ವಾಹನಗಳ ಹೊಗೆ, ಧೂಳು ಕುಡಿದು ಒಂದು ಗಂಟೆಯ ಪ್ರಯಾಣದ ನಂತರ ತನ್ನ ಹಳ್ಳಿಗೆ ಹೋಗುವ ಹಾದಿಯ ಕಡೆ ಗಾಡಿ ತಿರುಗಿಸಿದ್ದೇ ದಾರಿಯ ಇಕ್ಕೆಲಗಳಲ್ಲಿ ಬೆಳೆದಿದ್ದ ಹೊಂಗೆ ತಂಪು ಬೀರಿ ಜೀವ ಹಾಯೆನಿಸಿತು. ಹಿಂದಿನ ದಿನ ಮಳೆ ಹೊಯ್ದು ಗಿಡಮರಗಳೆಲ್ಲ ಸ್ವಚ್ಛವಾಗಿ ಗಾಳಿಗೆ ತಲೆದೂಗುತ್ತಿದ್ದವು. ಪುಟ್ಟ ಪುಟ್ಟ ಹಕ್ಕಿಗಳು ಟುವ್ವಿ ಟುವ್ವಿ ಶಬ್ದ ಮಾಡುತ್ತಿದ್ದವು. ಗದ್ದೆಬದಿಯಲ್ಲಿ ನಿಂತ ಮಳೆನೀರಿನಲ್ಲಿ ಕಪ್ಪೆಗಳು ವಟರ್ ವಟರ್ ಅನ್ನುತ್ತಿದ್ದವು. ಹದಿನೈದು ನಿಮಿಷ ಕ್ರಮಿಸಿದ್ದೇ ತಿಳಿಯಲಿಲ್ಲ. ಅಷ್ಟರಲ್ಲಿ ಹೊಲಗದ್ದೆಗಳು ಮುಗಿದು ಹಳ್ಳಿ ಶುರುವಾಗಿತ್ತು. `ಅಯ್ಯಾವ್ರೇ ನಿಂತ್ಕಳಿ’ ಅನ್ನೋ ಸದ್ದಿಗೆ ಸರಕ್ಕನೆ ಬ್ರೇಕ್ ಹಾಕಿ ನೋಡಿದರೆ ನಿಂಗ. ಅಪ್ಪ ದೇವಸ್ಥಾನಕ್ಕೆ ಪೂಜೆಗೆಂದೋ, ನಾಡಕಛೇರಿಗೆ ಕೆಲಸಕ್ಕೆಂದೋ ಹೋದಾಗ ತನ್ನನ್ನು ಎತ್ತಿಕೊಂಡು ಹೊಲ ಗದ್ದೆ ತೋಟಗಳನ್ನು ಸುತ್ತಿಸಿದ ಅದೇ ನಿಂಗ. ಅಂದು ಕಟ್ಟುಮಸ್ತಾಗಿದ್ದ ನಿಂಗ ಈಗ ಸೊರಗಿದ್ದ. `ಅಯ್ಯಾವ್ರೇ ಸಂದಾಗಿದೀರಾ? ಏಟ್ ವರ್ಸ ಆತು ನಿಮ್ ನೋಡಿ. ಬಿಸ್ಲಲ್ಲಿ ದಣ್ದು ಬಂದಿದೀರಾ. ಎಳ್ನೀರು ಕೊಚ್ಕೊಡ್ತೀನಿ ಇರಿ’ ಅಂದವನೇ ಸರಸರಾಂತ ತೆಂಗಿನಮರ ಏರಿ ಹತ್ತು ಎಳನೀರನ್ನು ಜಾರಿಸಿ ಇಳಿದ. ಅವನು ಕೊಚ್ಚಿ ಕೊಟ್ಟ ಎಳನೀರು ಬಿಸಿಲಿನಲ್ಲಿ ಬಂದವನಿಗೆ ಅಮೃತಸಮಾನವಾಗಿತ್ತು. ಮೂರು ಎಳನೀರು ಹೇಗೆ ಹೊಟ್ಟೆ ಸೇರಿತೋ ಗೊತ್ತಾಗಲೇ ಇಲ್ಲ. `ಬತರ್ೀನಿ ನಿಂಗ’ ಅಂದವನೇ ಮುಂದೆ ನಡೆದ. ಎರಡು ಫರ್ಲಾಂಗ್ ಹೋಗುವಷ್ಟರಲ್ಲಿ `ಬುದ್ಧೀ’ ಅಂತ ತಾಯಮ್ಮ ಕೂಗಿದಳು. ಮನೆಯಿಂದ ಸ್ಕೂಲಿಗೆ, ಸ್ಕೂಲಿನಿಂದ ಮನೆಗೆ ದಿನವೂ ಕರ್ಕೊಂಡುಹೋಗಿ ಬರುತ್ತಿದ್ದ ತಾಯಮ್ಮ. `ನಿಂತ್ಕಳಿ ಬುದ್ದೀ, ಏಟ್ ಸಂದಾಗ್ ಆಗಿದೀರಾ… ನಾ ಇಸ್ಕೂಲ್ಗೆ ಕರ್ಕೋ ಓಗುವಾಗ ಮಗೀ’ ಆಂತ ಅಕ್ಕರೆಯಿಂದ ಗೊನೆಯಿಂದ ಒಂದು ಚಿಪ್ಪು ಬಾಳೆಹಣ್ಣು ಕತ್ತರಿಸಿಕೊಟ್ಟು ಮಾತಾಡಿಸಿ ಕಳಿಸಿದಳು. ತಾನು ಹಳ್ಳಿಗೆ ಬಂದದ್ದೇಕೆ ಎಂಬುದನ್ನೇ ಮರೆತವನಂತೆ ಅವರ ಪ್ರೀತಿಗೆ ಸೋತು ಮೂಕನಾಗಿ ಗಾಡಿ ಹತ್ತಿದ. ರಸ್ತೆಯ ಬದಿಯಲ್ಲಿಯೇ ಗೋಪನಹಳ್ಳಿ ಕೆರೆ. `ಅದೇ ಕೆರೆಯಲ್ಲಿ ಅಪ್ಪ ತನ್ನನ್ನು ಬೋರಲು ಹಿಡಿದು ಈಜಲು ಕಲಿಸಿದ್ದು. ಅಲ್ಲಿ ತಾನೂ ತನ್ನ ಸ್ನೇಹಿತರೂ ದಿನವೂ ಆಡಲು, ಪುಟ್ಟ ಪುಟ್ಟ ಮೀನುಗಳಿಗೆ ಕಡ್ಲೇಪುರಿ ಹಾಕಲು ಬರುತ್ತಿರಲಿಲ್ಲವೇ. ಆ ದಿನಗಳೆಷ್ಟು ಚಂದ ಎನಿಸಿತು. ಒಬ್ಬನೇ ಮಗ ಕೆರೆಯಲ್ಲಿ ಈಜಲು ಹೋದಾಗ ಹೆಚ್ಚುಕಡಿಮೆಯಾದರೆ ಗತಿ ಏನು ಎಂದು ತನಗೆ ಕಾಣದಂತೆ ನಿಂಗನನ್ನು ಕಾವಲಿಗೆ ಕಳಿಸುತ್ತಿರಲಿಲ್ಲವೇ? ಅಪ್ಪಾ ನನ್ನ ಕಂಡರೆ ನಿನಗೆ ಎಷ್ಟು ಪ್ರೀತಿ, ದೊಡ್ಡವನಾದ ಮೇಲೆ ನಾನೇ ಬದಲಾದೆನೇನೋ’ ಎನಿಸಿತು.
ಕೆರೆಯ ದಂಡೆ ದಾಟಿದರೆ ಈಶ್ವರನ ಗುಡಿ. `ತನಗೆ ಕಾಮಾಲೆಯಾಗಿದ್ದಾಗ ದಿನಾಗಲೂ ಅಮ್ಮ ಚಳಿಯಲ್ಲಿ ಕೆರೆಯಲ್ಲಿ ತಣ್ಣೀರು ಸ್ನಾನ ಮಾಡಿ, ಇದೇ ಈಶ್ವರನ ಗುಡಿಯಲ್ಲಿ ಸೂರ್ಯೋದಯಕ್ಕೆ ಮೊದಲೇ ಉರುಳುಸೇವೆ ಮಾಡಿ, ತನ್ನನ್ನು ಎತ್ತಿಕೊಂಡು ಪಂಡಿತರ ಮನೆಗೆ ಹೋಗಿ ಅದ್ಯಾವುದೋ ಕಹಿ ಔಷಧಿ ಕುಡಿಸಿಕೊಂಡು ಬರುತ್ತಿದ್ದಳು. ತನಗೆ ಹುಷಾರಾದ ಮೇಲೆ ಊರಲ್ಲಿದ್ದ ಗುಡಿಗಳನ್ನೆಲ್ಲ ಸುತ್ತಿ ಹರಕೆ ತೀರಿಸಿದ್ದಳು. ಇದೇ ಈಶ್ವರ ಪಾರ್ವತಿಗೆ ತಾನೇ ಕೈಯಾರೆ ಕುಟ್ಟಿ ಪುಡಿ ಮಾಡಿದ ಅರಿಶಿನದಿಂದ ಅಭಿಷೇಕ ಮಾಡಿಸಿದ್ದಳಂತೆ. ನಾನು ಪೂರ್ತಿ ಚೇತರಿಸಿಕೊಳ್ಳುವ ತನಕ ಅಮ್ಮ ಒಪ್ಪತ್ತು ಉಣ್ಣುತ್ತಿದ್ದಳಂತೆ. ಅಷ್ಟರ ಹೊತ್ತಿಗೆ ಅಮ್ಮ ಅರ್ಧ ಆಗಿದ್ದಳು ಅಂತ ಗುಡಿಯ ಪುರೋಹಿತರು ಹೇಳುತ್ತಿದ್ದುದು ಈಗ ನೆನಪಾಗುತ್ತಿದೆ. ಅಮ್ಮನ ಪ್ರೀತಿಯನ್ನೂ ನಾನು ಮರೆತೆನೇ?’ ಎನಿಸಿತು.
ಹಳ್ಳಿಯ ಒಳಗೆ ಗಾಡಿ ಕಾಲಿಡುತ್ತಿದ್ದಂತೆಯೇ ತಾ ಓದಿದ ಶಾಲೆ ಕಾಣಿಸಿತು ಸಾತ್ವಿಕನಿಗೆ.  `ತಾನು ಮೊದಲ ದಿನ ಶಾಲೆಗೆ ಹೋಗುವಾಗ ಅಪ್ಪ ಅಮ್ಮನ ಸಂಭ್ರಮ ಹೇಳತೀರದು. ಯೂನಿಫಾರಂ ಹಾಕಿ, ಸ್ಲೇಟು ಬಳಪವನ್ನು ತಾವೇ ಕೈಲಿಟ್ಟುಕೊಂಡು ಬಂದು ಬಿಟ್ಟಿದ್ದರು. ವಾರಕ್ಕೊಮ್ಮೆ ಹರಳೆಣ್ಣೆ ನೀರು, ಗಸಗಸೆ ಪಾಯಸ ಖಾಯಂ. ರಜದಲ್ಲಿ ಅಜ್ಜಿಯೂರಿಗೆ ಅಮ್ಮನ ಜೊತೆ. ದೊಡ್ಡಮ್ಮ, ಚಿಕ್ಕಮ್ಮಂದಿರು, ಅವರ ಮಕ್ಕಳೊಡನೆ ಆಟ, ಓಟ, ಜಿಗಿದಾಟ…. ಹತ್ತನೇ ಕ್ಲಾಸಿನಲ್ಲಿ ತಾಲೂಕಿಗೇ ಮೊದಲನೆಯವನಾಗಿ ಪಾಸಾದಾಗ ಹಳ್ಳಿಯವರಿಗೆಲ್ಲ ಹಬ್ಬದೂಟ ಹಾಕಿಸಿದ್ದರು. ತಾನು ಬೇಕು ಎಂದದ್ದನ್ನು ಇಲ್ಲ ಎನ್ನದೆ ತೆಗೆದುಕೊಟ್ಟಿದ್ದರು. ಕಾಲೇಜಿಗೆಂದು ಬೆಂಗಳೂರಿಗೆ ಸೇರಿದ್ದೇ ಸೇರಿದ್ದು. ತಾನು ಬದಲಾಗಿಬಿಟ್ಟೆ’ ಎಂದು ಈಗ ಅನಿಸಿತು. `ಓದು ಮುಗಿದು ಕೆಲಸಕ್ಕೆ ಸೇರಿದ ಮೇಲೆ ತಿಂಗಳಿಗೋ, ಎರಡು ತಿಂಗಳಿಗೋ ಒಮ್ಮೆ ಹಳ್ಳಿಗೆ ಬರುತ್ತಿದ್ದೆ. ನಾ ಬರುವುದನ್ನೇ ಕಾದವರಂತೆ ತನ್ನ ಬೇಕು ಬೇಡಗಳನ್ನು ಪೂರೈಸಲು ಕಾಯುತ್ತಿದ್ದರು. ಹೇಗೆ ಮರೆತೆ ನಾನು ಅವನ್ನೆಲ್ಲಾ’ ಎಂಬುದೇ ಪ್ರಶ್ನೆಯಾಯಿತು ಸಾತ್ವಿಕನಿಗೆ. ವಸುಧಾಳ ಫೋಟೋವನ್ನು ಅಪ್ಪ ಅಮ್ಮ ತೋರಿಸಿದ ತಕ್ಷಣ ಒಪ್ಪಿದ್ದ ಸಾತ್ವಿಕ, ಮದುವೆಯಾದ ಮೇಲೆ ಹೆಂಡತಿಯೊಡನೆ ಅಲ್ಲಿ ಇಲ್ಲಿ ಸುತ್ತುವುದರಲ್ಲೇ ವರ್ಷ ಕಳೆದ. ಮೊದಲ ವರ್ಷದ ಯುಗಾದಿಗೆಂದು ಹಳ್ಳಿಗೆ ಬಂದಾಗ ವಸುಧಾ ಹಳ್ಳಿಯ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಚಡಪಡಿಸುತ್ತಿದ್ದುದು ಕಂಡಿದ್ದ. `ಬಾಮ್ಮಾ ಅರಳಿಕಟ್ಟೆ ಸುತ್ತಿ ಬರೋಣ, ಬರೋ ವರ್ಷದೊಳಗೆ ನಮಗೆ ಮೊಮ್ಮಗು ಕೊಡಬಹುದು’ ಎಂದು ನಮ್ಮಮ್ಮ ಹೇಳುತ್ತಿದ್ದಳು. ಎಂಟು ವರ್ಷ ಮಕ್ಕಳಾಗದಿದ್ದರೂ ಒಂದು ದಿನವೂ ಅಂದು ಹಂಗಿಸದೆ ಮೆದುವಾಗಿಯೇ `ಈ ಪೂಜೆ ಮಾಡು.. ಈ ವ್ರತ ಮಾಡು’ ಎಂದಷ್ಟೇ ಅಮ್ಮ ಹೇಳುತ್ತಿದ್ದಳು. ಆದರೆ ವಸುಧಾನೇ ಇವಕ್ಕೆಲ್ಲ ಬೇಸರ ಮಾಡಿಕೊಳ್ಳುತ್ತಿದ್ದಳು. `ಸಾತ್ವಿಕ ನೀನೂ ಡಾಕ್ಟರ್ ಹತ್ರ ಒಂದ್ಸಲ ಹೋಗೋ’ ಎಂದ ಅಮ್ಮ ಎಂದೂ ಯಾರನ್ನೂ ನೋಯಿಸಿದ್ದೇ ಇಲ್ಲವಾ? ಮತ್ತೆ ನಾ ಐದು ವರ್ಷಗಳಿಂದ ಅವರಿಂದ ದೂರ ಉಳಿದಿದ್ದೇಕೆ? ವಸುಧಾಕೆ ಹಿಂಸೆ ಆಗುತ್ತೆ ಎಂತಲಾ’ ಎಂದು ಪ್ರಶ್ನಿಸಿಕೊಂಡ.
`ವಸುಧನ ಸೀಮಂತ, ತೊಟ್ಟಿಲಶಾಸ್ತ್ರದಲ್ಲಿ ಅಪ್ಪ ಅಮ್ಮನ ಸಂಭ್ರಮ ನಮಗಿಂತ ಹೆಚ್ಚಾಗಿತ್ತು. ಅವಳು ಕೇಳಿದ ಸೀರೆ ಒಡವೆಗಳನ್ನು ಕೊಡಿಸಿದ್ದರು. ಮಗುವಿಗೂ ಚಿನ್ನದ ಉಡುದಾರ, ಸರ, ಮುರು, ಬೆಳ್ಳಿ ಒಳಲೆಗಳನ್ನು ಕೊಟ್ಟು ಆಶೀರ್ವದಿಸಿದ್ದರು. ಅಷ್ಟೇ ಮತ್ತೆ ಅವರು ಇಲ್ಲಿಗೂ ಬಂದಿರಲಿಲ್ಲ, ನಾವೂ ಹೋಗಿಲ್ಲ. ಒಂಬತ್ತು ತಿಂಗಳು ತುಂಬುವ ತನಕ ವಸುಧಾ ತಾಯಿಯ ಮನೆಯಲ್ಲೇ ಇದ್ದಳಲ್ಲಾ, ಅವಳಿಗೆ ತಾಯಿ ತಂದೆ ಬೇಕು, ನನಗೆ ಬೇಕಾಗಿರಲಿಲ್ಲವಾ?’ ಪ್ರಶ್ನೆಗಳು ಜೇನಿನಂತೆ ಮುತ್ತಿಕೊಂಡು ಹಿಂಸಿಸಹತ್ತಿದವು. ಮೊದಲ ಬಾರಿಗೆ ತಪ್ಪಿತಸ್ಥ ಮನೋಭಾವ ಜಾಗೃತವಾಯಿತು.
ಮನೆ ತಲುಪಿದ ಕೂಡಲೇ ಅದೇ ತಾನೇ ಸುಸ್ತಾಗಿ ಮನೆಗೆ ಬಂದಿದ್ದ ಶಂಕರಪ್ಪ, ಸಾವಿತ್ರಮ್ಮನ ಮುಖದಲ್ಲಿ ಇವನನ್ನು ನೋಡಿ ಬೆಳದಿಂಗಳು ಚೆಲ್ಲಿತು. ಎಲ್ಲ ಆಯಾಸವನ್ನೂ ಮರೆತು `ಬಾರೋ ಬಾರೋ.. ಸಾತ್ವಿಕಾ, ನೀನ್ ಮನೆಗೆ ಬಂದು ಎಷ್ಟು ವರ್ಷ ಆಗಿತ್ತೋ? ನಮಗೆ ದಿನಾಗ್ಲೂ ನಿಮ್ದೇ ಕನವರಿಕೆ. ವಸು, ಮಗು ಎಲ್ಲಾ ಚೆನ್ನಾಗಿದಾರೆ ತಾನೇ?’ ಎಂದು ಒಂದೇ ಸಮ ಸಡಗರದಿಂದ ಮಾತಾಡಿದರು. ಅವನಿಗೆ ಇಷ್ಟ ಅಂತ ಅವಲಕ್ಕಿಗೆ ಒಗ್ಗರಣೆ ಮಾಡೋಕಂತ ಅಡುಗೆ ಮನೆಗೆ ಓಡಿದರು. `ಅಮ್ಮ, ಅಪ್ಪಾ ಬೆಳಿಗ್ಗೆಯಿಂದ ಮಗು ಕಾಣ್ತಿಲ್ಲ’ ಅನ್ನುವಷ್ಟರಲ್ಲಿ ಸಾತ್ವಿಕನ ಕಣ್ಣು ತುಂಬಿ ಬಂದಿತು. ಅಮ್ಮನ ಮಡಿಲಿನಲ್ಲಿ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅತ್ತ ಮೇಲೆಯೇ ಸಮಾಧಾನವಾದದ್ದು. ಅಮ್ಮನ ಮಡಿಲು ಎಷ್ಟು ಸುರಕ್ಷಿತ ಎಂಬುದು ಆಗ ಅವನಿಗೆ ಅರಿವಾಯಿತು. `ಸುಮ್ನಿರೋ ಅಳ್ಬೇಡಾ. ಏನೂ ಆಗಲ್ಲ. ನಾವಾಗ್ಲೀ, ನೀನಾಗ್ಲೀ ಯಾವತ್ತೂ ಯಾರ್ಗೂ ಕೆಟ್ಟದ್ದು ಬಯಸಿಲ್ಲ, ದೇವರಿಗೆ ಮುಡಿಪು ಕಟ್ಟಿಡ್ತೀನಿ. ಮಗು ಸಿಗುತ್ತೆ ನೋಡು’ ಎಂದು ತಾವೂ ಕಣ್ಣೊರೆಸಿಕೊಂಡು ಓಡಿ ಹೋಗಿ ಸಾವಿತ್ರಮ್ಮನವರು ತಲೆಗೊಂದು ಚೊಂಬು ನೀರು ಸುರಿದುಕೊಂಡು ಬಂದು ಅರಿಶಿನಮೆತ್ತಿದ ಬಿಳಿಬಟ್ಟೆಯಲ್ಲಿ ಒಂದು ರೂಪಾಯಿಯ ನಾಣ್ಯವನ್ನು ಕಟ್ಟಿ ದೇವರ ಮುಂದಿಟ್ಟು, ದೀಪ ಹಚ್ಚಿದರು. ಇಂಥಾ ತಂದೆ ತಾಯಿಯ ಮೇಲೆಯಾ ತಾನು ಅನುಮಾನ ಪಟ್ಟಿದ್ದು ಎಂದು ನಾಚಿಕೆಯಿಂದ ತಲೆತಗ್ಗಿಸಿದ. `ಎರಡು ಗಂಟೆಯಿಂದ ತನ್ನ ಒಂದು ವರ್ಷದ ಮಗು ಸಿಗದಕ್ಕೆ ತಾನು ಇಷ್ಟು ಸಂಕಟ ಪಡುತ್ತಿದ್ದೀನಿ. ಇನ್ನು ಮುವ್ವತ್ತು ವರ್ಷ ಪ್ರೀತಿಯಿಂದ ಬೆಳೆಸಿದ ಮಗ ಐದು ವರ್ಷಗಳಿಂದ ಒಮ್ಮೆಯೂ ತಮ್ಮ ಮನೆಗೆ ತಮ್ಮನ್ನು ನೋಡಲು ಬಂದಿಲ್ಲವಲ್ಲಾ ಎಂದು ಅಪ್ಪ ಅಮ್ಮ ಅದೆಷ್ಟು ನೋವು ತಿಂದಿರಬಹುದು? ನಾವು ತಂದೆ ತಾಯಿಯಾದ ಮೇಲೆಯೇ ನಮ್ಮ ತಂದೆ ತಾಯಿಯ ಪ್ರೀತಿಯ ಆಳ ತಿಳಿಯುವುದು’ ಎಂದುಕೊಂಡ. ಇನ್ನು ಮುಂದೆ ಹೀಗಾಗದ ಹಾಗೆ ಅವರಿಗೆ ವೃದ್ಧಾಪ್ಯದಲ್ಲಿ ಮತ್ತೆ ತಾ ಅವರ ಮಗುವಾಗಿ, ಅವರಿಗೆ ಮಾನಸಿಕ ಆಸರೆಯಾಗಬೇಕು ಎಂದುಕೊಂಡ. ಸಾವಿತ್ರಮ್ಮನವರು `ಸಾತ್ವಿಕಾ ನಿಮ್ಮನ್ನು ನೋಡ್ಬೇಕು ಅಂತ ಆಸೆಯಾಗಿ, ನಮ್ ಪಾತು ಮೊಮ್ಮಗೂನೂ ಕರ್ಕೊಂಡು ನಿಮ್ ಮನೆಗೆ ಬೆಳಿಗ್ಗೆ ಬಂದಿದ್ವಿ. ಮನೆ ಬೀಗ ಹಾಕಿತ್ತು. ಅದಕ್ಕೇ ವಾಪಸ್ ಬಂದ್ವಿ ಕಣೋ’ ಆಂದ್ರು. `ಅಪ್ಪಾ ಅಮ್ಮಾ ಕ್ಷಮಿಸಿ, ನಿಮಗೆ ಇನ್ನೆಂದೂ ನೋವು ಕೊಡುವುದಿಲ್ಲ. ನಾ ಸದಾ ಬರ್ತಿರ್ತೀನಿ. ನೀವೂ ಬರ್ತಿರ್ಬೇಕು ಪ್ಲೀಸ್’ ಎಂದ. ಶಂಕರಪ್ಪ, ಸಾವಿತ್ರಮ್ಮನವರ ಮುಖದಲ್ಲಿ ವಿಶ್ವವನ್ನೇ ಗೆದ್ದ ನಲಿವಿತ್ತು. ತಮ್ಮ ಮಗು ತಮಗೆ ಸಿಕ್ಕ ಸಂಭ್ರಮ ಒಂದೆಡೆ, ಮೊಮ್ಮಗು ಕಾಣುತ್ತಿಲ್ಲ ಎಂಬ ನೋವು ಮತ್ತೊಂದೆಡೆ.
ಅಷ್ಟರಲ್ಲಿ ಸಾತ್ವಿಕನ ಫೋನು ಗುಣುಗುಣಿಸಿತು. ಆ ಕಡೆಯಿಂದ ವಸುಧಾ `ರೀ. ಮಗು ಸಿಕ್ತು. ಇಲ್ಲೇ ಮಂಚದಡಿ ನಿದ್ದೆ ಮಾಡ್ಬಿಟ್ಟಿತ್ತು. ಈಗ ಎದ್ದು ಅಳ್ತಿದೆ. ಅದರ ಸದ್ದಿನಿಂದ ಎಲ್ಲಿದೆ ಅಂತ ಗೊತ್ತಾಯ್ತು. ಬೇಗ ಬನ್ಬಿಡ್ರೀ’ ಎಂದಳು. ಇಲ್ಲಿ ಮೂವರೂ ಒಟ್ಟಿಗೇ `ಹೌದು ಮಗು ಮತ್ತೆ ಸಿಕ್ಕಿದೆ’ ಎಂದರು.

Copyright © All rights reserved Newsnap | Newsever by AF themes.
error: Content is protected !!