December 26, 2024

Newsnap Kannada

The World at your finger tips!

26 PND P2

ನನಗೆ ಶಕ್ತಿ ತುಂಬಿ‌ ಉಸಿರಿರುವ ತನಕ‌ ಕಾವೇರಿಗಾಗಿ ಹೋರಾಟ – ಮಾಜಿ ಪ್ರಧಾನಿ‌

Spread the love

ಈ ದೇವೇಗೌಡ ಇನ್ನೂ ಜೀವಂತ ವಾಗಿದ್ದಾನೆ.‌ ರೈತರಿಗೋಸ್ಕರ ಹಾಗೂ ರಾಜ್ಯದ ಜನರಿಗೋಸ್ಕರ ಜೀವ ಇಟ್ಟುಕೊಂಡಿದ್ದೇನೆ. ಕಾವೇರಿ ನೀರು ವಿಚಾರದಲ್ಲಿ ರಾಜ್ಯಕ್ಕೆ ದೊಡ್ಡ ಗಂಡಾಂತರ ಎದುರಾಗಿಬಿಟ್ಟಿದೆ. ರಾಜ್ಯದ ರೈತರು ಹಾಗೂ ಮಂಡ್ಯ ಜಿಲ್ಲೆಯ ಜನತೆ ನನಗೆ ಶಕ್ತಿ ತುಂಬಿದರೆ, ನನ್ನ ಶರೀರದಲ್ಲಿ ಉಸಿರು ಇರುವವರೆಗೂ ಕಾವೇರಿ ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡ್ತೀನಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಶುಕ್ರವಾರ ಸ್ವಾಭಿಮಾನದಿಂದ ಘೋಷಿಸಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದ ಮುಂಭಾಗದಲ್ಲಿ ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷ ಹಾಗೂ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಆಯೋಜಿಸಿದ್ದ ಮೇಲುಕೋಟೆ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾಗಿರುವ ಜೆಡಿಎಸ್ ಪಕ್ಷದ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ಅಭಿನಂದನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಗಾಟಿಸಿ, ನಂತರ ಮಾತನಾಡಿದರು.

HD devegowda
ಕಾವೇರಿಗಾಗಿ ಹೋರಾಟ ಅನಿವಾರ್ಯ:

ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಸಾಕಷ್ಟು ತಾರತಮ್ಯ ಉಂಟಾಗಿದೆ. ಕರ್ನಾಟಕ ರಾಜ್ಯದ ರೈತರಿಗೋಸ್ಕರ ಕಾವೇರಿ ನೀರಿಗಾಗಿ ಏನಾದರೂ ಸಮಸ್ಯೆ ಉಂಟಾದಾಗ ಎಲ್ಲಾ ರೀತಿಯ ಹೋರಾಟ ಮಾಡಲು ನಾವು ಸಿದ್ದರಾಗಿರುತ್ತೇವೆ.
ಕಾವೇರಿ ನೀರಿನ ಸಮಸ್ಯೆ ಬಂದಾಗ ದೆಹಲಿ ಸಂಸತ್‌ನಲ್ಲಿ ರಾಜ್ಯದ ಪರ ಸಾಕಷ್ಟು ಚರ್ಚೆ ನಡೆಸಿ ನ್ಯಾಯ ಒದಗಿಸಿಕೊಟ್ಟಿದ್ದೇನೆ. ಇದೀಗ ರಾಜ್ಯಕ್ಕೆ ಕಾವೇರಿ ಸಮಸ್ಯೆ ಉಂಟಾಗಿದೆ. ಕಾವೇರಿ ನೀರು ಉಳಿಸಿಕೊಳ್ಳಬೇಕಾದರೆ ಹೋರಾಟ ಅನಿವಾರ್ಯತೆ ಉಂಟಾಗಿದೆ ಎಂದರು.

ಪುಟ್ಟರಾಜುಗೆ ಹೋರಾಟದ ನಾಯಕತ್ವ :

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಆಗಿದ್ದ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಮೇಕೆದಾಟು ಡ್ಯಾಂ ನಿರ್ಮಿಸಲು ಸರ್ವೇ ಮಾಡಿಸಲಾಗಿತ್ತು. ನಂತರ ಸರ್ಕಾರ ಪತನವಾದ ನಂತರ ಕಾರ್ಯ ಸಂಪೂರ್ಣವಾಗಲಿಲ್ಲ.
ಮಾಜಿ ಪ್ರಧಾನಿಯಾಗಿರುವ ನನಗೆ 88 ವರ್ಷ ವಯಸ್ಸಾಗಿದೆ. ಇನ್ನು ಜಿಲ್ಲೆಯ ಹೋರಾಟಗಾರರಾದ ಎಸ್.ಎಂ.ಕೃಷ್ಣ, ಎಚ್.ಡಿ.ಚೌಡಯ್ಯ, ಜಿ.ಮಾದೇಗೌಡ ಸೇರಿದಂತೆ ಕೆಲವರಿಗೂ ವಯಸ್ಸಾಗಿದೆ. ಬೀದಿಗಿಳಿದು ಹೋರಾಟ ಮಾಡುವವರು ಯಾರು, ನಮ್ಮ ವಯಸ್ಸಿನ ಕಾಲದಲ್ಲಿ ಎಷ್ಟು ಅಂತಾ ಹೋರಾಟ ಮಾಡೋದು, ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು, ಹೋರಾಟಗಾರರು ಕಾವೇರಿ ನೀರಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರಬೇಕಾಗಿದೆ. ಮಂಡ್ಯ ಜಿಲ್ಲೆಯ ನಾಯಕತ್ವವನ್ನು ಸಿ.ಎಸ್.ಪುಟ್ಟರಾಜು ವಹಿಸಿಕೊಳ್ಳಲಿ ಎಂದು ಸೂಚಿಸಿದರು.

ಕಾವೇರಿ ನೀರು ಕೇವಲ ಮಂಡ್ಯ ಜನರಿಗಷ್ಟೇ ಅಲ್ಲ, ಮಂಡ್ಯ, ಬೆಂಗಳೂರು ನಗರ ಸೇರಿದಂತೆ ಎಂಟು ಜಿಲ್ಲೆಯ ಜನರಿಗೆ ಕಾವೇರಿ ನೀರು ಉಪಯೋಗವಾಗುತ್ತಿದೆ. ಜೊತೆಗೆ ಕಾವೇರಿ ನೀರನ್ನು ನಂಬಿಕೊAಡಿರುವ ಏತಾ ನೀರಾವರಿ ಯೋಜನೆ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಕ್ಕೆ ಸಾಕಷ್ಟು ಅನುಕೂಲವಾಗುತ್ತಿದೆ. ಆದ್ದರಿಂದ ಕಾವೇರಿ ನೀರಿಗಾಗಿ ಹೋರಾಟ ನಡೆಸಲು ಸಿದ್ದರಾಗಿರಿ ಎಂದು ಕರೆ ನೀಡಿದರು.

ರೈತಸಂಘದಲ್ಲಿ ಎರಡು ತರಹ ಇದ್ದಾರೆ, ಒಬ್ಬರು ನನ್ನ ಹೋರಾಟವನ್ನು ಬೆಂಬಲಿಸುತ್ತಾರೆ, ಆದರೆ ಮತ್ತೊಂದು ರೈತಸಂಘದ ಬಣ ನನ್ನ ಬಗ್ಗೆ ಮಾತಾಡ್ತಾರೆ, ಮಾತಾಡ್ಲಿ ಬಿಡಿ, ಏನ್ ಮಾಡೋಕ್ಕೆ ಆಗುತ್ತೆ, ರೈತಸಂಘದವರು ನನ್ನ ಬಗ್ಗೆ ನಿಂದನೆ ಮಾಡಿದರೆ ನನಗೇನೂ ಬೇಜಾರಿಲ್ಲ, ಸಂಸತ್‌ನಲ್ಲಿ ನಾನು ಏನು ಮಾಡಿದ್ದೀನಿ, ಎಷ್ಟು ಚರ್ಚೆ ನಡೆಸಿದ್ದೀನಿ ಎಂದು ಅಂಕಿ ಅಂಶ ಪಡೆದುಕೊಳ್ಳಲಿ ಎಂದರು.

ಕಾಂಗ್ರೆಸ್ ವರಿಷ್ಟ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗ ನನ್ನನ್ನು ಬಿಜೆಪಿ ಬಿ ಟೀಮ್ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ನನ್ನ ಮನಸ್ಸಿಗೆ ತುಂಬಾ ನೋವುಂಟಾಗಿತ್ತು. ಈಗಲೂ ನೋವಿದೆ. ಆದರೆ ಯಾರ ಬಗ್ಗೆಯೂ ನಾನು ಮಾತನಾಡಲ್ಲ.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ನನ್ನ ಹಂಬಲ ಇಲ್ಲ ಅಥವಾ ನಾನು ಹೇಳಿದರೆ ಮಗನ ಮೇಲೆ ವ್ಯಾಮೋಹದಿಂದ ಹೇಳಬೇಕು ಅಷ್ಟೇ, ಆದರೆ ಕರ್ನಾಟಕ ರಾಜ್ಯದ ಜನರು ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಎಲ್ಲೆಡೆ ಜೋರಾಗಿ ಕೂಗುತ್ತಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ನಿಗೆ ಛಾಟಿ ಬೀಸಿದ ಗೌಡರು:

ಅಯ್ಯೋ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಹೇಳೋರು ಇದ್ದಾರೆ, ಯಾರ ಹೆಸರು ಹೇಳಿ ಅಗೌರವ ತರೋದಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಮಾತಿನಲ್ಲೇ ಚಾಟಿ ಬೀಸಿದರು.

ಜೆಡಿಎಸ್ ನಾಶ ಯಾರಿಂದಲೂ ಸಾಧ್ಯವಿಲ್ಲ:

ನಮ್ಮಲ್ಲೇ ಇದ್ದು, ನಮ್ಮ ಬಳಿಯೇ ಅಧಿಕಾರ ಪಡೆದು, ನಮ್ಮ ಶಕ್ತಿಯನ್ನು ಕುಗ್ಗಿಸಲು ಸಂಚು ರೂಪಿಸುವವರು ತುಂಬಾ ಜನ ನೋಡಿದ್ದೀನಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಇರೋತನಕ ಜೆಡಿಎಸ್ ಪಕ್ಷವನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಕೇವಲ ಒಕ್ಕಲಿಗರಿಗೋಸ್ಕರ ಅಲ್ಲಾ ಅಥವಾ ಲಿಂಗಾಯತಗೋಸ್ಕರ ಅಲ್ಲಾ, ಜೆಡಿಎಸ್ ಪಕ್ಷ ಎಲ್ಲಾ ಜಾತಿ, ಎಲ್ಲಾ ವರ್ಗದವರನ್ನು ಒಗ್ಗೂಡಿಸಿ ಜೊತೆಯಲ್ಲೇ ಕರೆದುಕೊಂಡು ಹೋಗುತ್ತದೆ ಎಂದು ವಿರೋಧಿಗಳಿಗೆ ಮಾತಿನಲ್ಲೇ ಎಚ್ಚರಿಸಿದರು.

ಸಮಾರಂಭದ ವೇದಿಕೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣ, ಶಾಸಕ ಸಿ.ಎಸ್. ಪುಟ್ಟರಾಜು, ಶಾಸಕ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮಾಜಿ ಸಂಸದ ಎಲ್.ಆರ್.ಶೀವರಾಮೇಗೌಡ, ಮೈಸೂರು ಮಹಾನಗರ ಪಾಲಿಕೆ ಅಧ್ಯಕ್ಷೆ ರುಕ್ಮಿಣಿ ಮಾದೇಗೌಡ, ಜೆಡಿಎಸ್ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಜೆಡಿಎಸ್ ರಾಜ್ಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ ರಾಮಯ್ಯ, ಮನ್ ಮುಲ್ ಅಧ್ಯಕ್ಷ ರಾಮಚಂದ್ರ, ಕೆ.ಆರ್.ಪೇಟೆ ದೇವರಾಜು, ಜೆಡಿಎಸ್ ಮಂಡ್ಯ ಜಿಲ್ಲಾಧ್ಯಕ್ಷ ರಮೇಶ್, ಜೆಡಿಎಸ್ ಮುಖಂಡರಾದ ಜಿ.ಬಿ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರಿದ್ದರು.

Copyright © All rights reserved Newsnap | Newsever by AF themes.
error: Content is protected !!