89 ವರ್ಷದ ವೃದ್ಧ, ಕೊಳಲು‌‌‌ ವಾದಕನನ್ನು ಗುಣಪಡಿಸಿದ ಮೈಸೂರು ಕೋವಿಡ್ ಆಸ್ಪತ್ರೆ

Team Newsnap
2 Min Read

ಯಾವುದೇ ವಯಸ್ಸಿನ ಕೋವಿಡ್ ರೋಗಿಗಳನ್ನು ಗುಣಪಡಿಸಬಹುದು ಎಂಬುದನ್ನು ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ ವೈದ್ಯರು ಹಲವಾರು ಪ್ರಕರಣಗಳಲ್ಲಿ ಸಾಬೀತು ಮಾಡಿದ್ದಾರೆ. ಇದಕ್ಕೆ ಇತ್ತೀಚಿನ ನಿದರ್ಶನ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 89 ವರ್ಷದ ವೃದ್ಧ, ಕೊಳಲು ವಾದಕ ಸಿ.ಎಸ್. ನಾಗರಾಜು ಅವರು.

ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದವರು. ಮೂಲತಃ ಕೃಷಿಕರಾದರೂ ಕೊಳಲು ವಾದಕರಾಗಿ 1990ರ ದಶಕದ ವರೆಗೆ‌ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಸೆಪ್ಟೆಂಬರ್ ಮೊದಲ ವಾರ ಜ್ವರ ಬಂದಿತ್ತು. ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದರೂ ಗುಣವಾಗಿರಲಿಲ್ಲ. ಜ್ವರ ತೀವ್ರಗೊಂಡು ಮಾತನಾಡದ ಸ್ಥಿತಿಗೆ ಬಂದಾಗ ಹುಣಸೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿನ ವೈದ್ಯರು ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿ, ಪಾಸಿಟೀವ್ ಬಂದ ಕೂಡಲೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು.

ಸೆಪ್ಟೆಂಬರ್ 10 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಇವರನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಯಿತು. ವೈದ್ಯರು, ನರ್ಸ್ ಗಳು, ಸಿಬ್ಬಂದಿ ಎಲ್ಲರೂ ಇವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡಿದ್ದಾರೆ.

ಐ.ಸಿ.ಯು. ಮಟ್ಟಕ್ಕೆ ಹೋಗುವ ರೋಗಿಯನ್ನು ಗುಣಪಡಿಸುವುದು ಕಷ್ಟಕರವಾದ ಸ್ಥಿತಿ. ಅಂತಹದರಲ್ಲಿ ಇವರು 10 ದಿನಗಳ ಕಾಲ ಐ.ಸಿ.ಯು.ನಲ್ಲಿ ಇದ್ದರು. ಆ ಸ್ಥಿತಿಯಲ್ಲಿ ರೋಗಿಯನ್ನು ಗುಣಪಡಿಸಿ ಐ.ಸಿ.ಯು.ನಿಂದ‌ ಹೊರತರುವುದು ಅತ್ಯಂತ ಸವಾಲಿನ ಕೆಲಸ. ಈ ಸವಾಲನ್ನು ಸ್ವೀಕರಿಸಿ 89 ವರ್ಷದ‌ ವ್ಯಕ್ತಿಯನ್ನು ಗುಣಪಡಿಸಿದ್ದು ಹೆಮ್ಮೆಯಾಗಿದೆ. ನಮ್ಮ ವೈದ್ಯಕೀಯ ತಂಡ ಹಾಗೂ ಸಿಬ್ಬಂದಿಗಳನ್ನು ಅದಕ್ಕಾಗಿ ಅಭಿನಂದಿಸುತ್ತೇನೆ ಎಂದು ಕೋವಿಡ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ. ರಾಜೇಶ್ವರಿ ಅವರು ತಿಳಿಸಿದ್ದಾರೆ.

ಸಿ.ಎಸ್. ನಾಗರಾಜ್ ಅವರಿಗೆ ಪಾರ್ಕಿನ್ಸನ್ ಕಾಯಿಲೆ‌ ಇತ್ತು. ಜೊತೆಗೆ ತೀವ್ರ ಜ್ವರದಿಂದ ಬಳಲಿದ್ದರು. ಇಂತಹ ಪರಿಸ್ಥಿತಿಯಲ್ಲೂ ನಮ್ಮ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ರೋಗಿ ಜೊತೆ ಕೇರ್ ಟೇಕರ್ ಆಗಿ ಇರಲು ಬಹುತೇಕರು ಒಪ್ಪುವುದಿಲ್ಲ. ಅಂತಹದರಲ್ಲಿ ಸಿ.ಎಸ್. ನಾಗರಾಜ್ ಅವರ ಮಗ 53 ವರ್ಷದ ವೆಂಕಟೇಶ್ ಮೂರ್ತಿ ಅವರು ರೋಗಿಯೊಂದಿಗೆ ಆಸ್ಪತ್ರೆಯಲ್ಲೇ ಇದ್ದು ತಂದೆಗೆ ಧೈರ್ಯ ತುಂಬಿದ್ದಾರೆ.

ಇವರು ಗುಣವಾಗಿ ಸೆಪ್ಟೆಂಬರ್ 22 ರಂದು ಆಸ್ಪತ್ರೆಯಿಂದ ಬಿಡುಗಡೆ ಆಗುವಾಗ ಎಲ್ಲರೂ ಸಂಭ್ರಮಿಸಿದ್ದಾರೆ. ಮನೆಗೆ ಬಂದ‌‌ ಮರುದಿನ ಸೆಪ್ಟೆಂಬರ್ 23 ರಂದು ಸ್ವತಂತ್ರವಾಗಿ ಶೌಚಾಲಯಕ್ಕೆ ಹೋಗಿ ಬಂದರು. ಅದನ್ನು ನೋಡಿ ನಮ್ಮ ಕುಟುಂಬದವರಿಗೆಲ್ಲಾ ಸಂತೋಷವಾಗಿದೆ ಎಂದು ಅವರ ಮಗ ವೆಂಕಟೇಶ್ ಮೂರ್ತಿ ಅವರು ತಿಳಿಸಿದ್ದಾರೆ.

ಕೋವಿಡ್ ಬಂದ ಕೂಡಲೇ ಧೈರ್ಯಗೆಡದೆ ವೈದ್ಯರ ಮಾರ್ಗದರ್ಶನ ಹಾಗೂ ಚಿಕಿತ್ಸೆ ಪಡೆದುಕೊಂಡರೆ ಗುಣವಾಗಬಹುದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

TAGGED:
Share This Article
Leave a comment