ಹಣ ಡಬಲ್ ಮಾಡುವ ಆಸೆ ತೋರಿಸಿ 5 ಲಕ್ಷ ರು ದೋಚಿ ದುಷ್ಕರ್ಮಿಗಳು ಎಸ್ಕೇಪ್

Team Newsnap
2 Min Read

5 ಲಕ್ಷ ರೂಪಾಯಿ ಹಣಕೊಟ್ಟರೆ 10 ಲಕ್ಷ ರು ಹಣವನ್ನು ಡಬಲ್ ಮಾಡಿ ಕೊಡಲಾಗುವುದು ಎಂದು ಆಸೆ ತೋರಿಸಿ 5 ಲಕ್ಷ ರು ಹಣವನ್ನು ದೋಚಿಕೊಂಡು ಎಸ್ಕೇಪ್ ಆದ ಘಟನೆ ಮದ್ದೂರು ತಾಲ್ಲೂಕಿನ ಉಪ್ಪಿನಕೆರೆ ಗೇಟ್ ಬಳಿ ನಡೆದಿದೆ.

ಉಪ್ಪಿನಕೆರೆ ಗೇಟ್ ಬಳಿಯ ಶ್ರೀ ಕಬ್ಬಾಳಮ್ಮ ಟೀ ಸ್ವಾಲ್ ಬಳಿ ಮಂಗಳವಾರ ಬೆಳಿಗ್ಗೆ ಸುಮಾರು 12 ಗಂಟೆ ವೇಳೆಗೆ ಕುಣಿಗಲ್ ಮೂಲದ ಪುನೀತ್, ಕಿರಣ್ ಎಂಬ ಇಬ್ಬರು ವ್ಯಕ್ತಿಗಳು ( KA – 06 – Y – 8557 ) ಹೋಂಡಾ ಯೂನಿಕಾರ್ನ್ ಬೈಕ್ ನಲ್ಲಿ ಬಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು ಎನ್ನಲಾಗಿದೆ.

ಸ್ವಲ್ಪ ಸಮಯದ ನಂತರ ಅದೇ ಸ್ಥಳಕ್ಕೆ ಕೋಲಾರ ಮೂಲದ ಇಬ್ಬರು ವ್ಯಕ್ತಿಗಳು ( KA – 01 – 1772 ) ಟೊಯೋಟಾ ಇಟಿಯಾಸ್ ವೈಟ್ ಕಾರ್ ಕಾರಿನಲ್ಲಿ ಬಂದಿದ್ದಾರೆ.

ನಂತರ ಹಣ ವಿನಿಮಯ ಮಾಡಿಕೊಳ್ಳಲು ನಾಲ್ವರು ಕಾರಿನಲ್ಲಿಯೇ ಕುಳಿತು ವ್ಯವಹಾರ ಕುದುರಿಸಲು ಶುರು ಮಾಡಿದ್ದಾರೆ.

ಕಾರಿನಲ್ಲಿ ಕುಳಿತ ನಂತರ ಕುಣಿಗಲ್ ನಿಂದ ಬಂದಿದ್ದ ಪುನೀತ್, ಕಿರಣ್ ಇಬ್ಬರು ವ್ಯಕ್ತಿಗಳಿಂದ 5 ಲಕ್ಷ ರು ಅಸಲಿ ನೋಟುಗಳಿದ್ದ ಬ್ಯಾಗ್ ಅನ್ನು ಅರೋಪಿಗಳು ಪಡೆದುಕೊಂಡು. ಆರೋಪಿಗಳು ತಂದಿದ್ದ ಬ್ಯಾಗ್ ನಲ್ಲಿ ಕೆಳಗೆ ನೋಟ್ ಬುಕ್ ಗಳನ್ನು ತುಂಬಿ ಮೇಲುಗಡೆ ಮಾತ್ರ 100, 200, 500 ರೂಪಾಯಿಯ ಅಸಲಿ ನೋಟುಗಳನ್ನು ಅಂಟಿಸಿ ಇದರಲ್ಲಿ 10 ಲಕ್ಷ ರೂಪಾಯಿ ಹಣವಿದೆ ಹೊರಗಡೆ ಹೋಗಿ ಎಣಿಸಿಕೊಳ್ಳಿ ಎಂದು ಕಾರಿನಿಂದ ಕೆಳಗಿಳಿಸಿ 5 ಲಕ್ಷ ರೂಪಾಯಿ ಅಸಲಿ ಹಣದೊಂದಿಗೆ ಆರೋಪಿಗಳು ಮಳವಳ್ಳಿ ಕಡೆಗೆ ಎಸ್ಕೇಪ್ ಆಗಿದ್ದಾರೆ.

ಕಾರಿನಿಂದ ಕೆಳಗೆ ಇಳಿದು ಹಣ ಎಣಿಸಲು ಮುಂದಾದ ವೇಳೆ ಅಸಲಿ ಸತ್ಯ ಗೊತ್ತಾಗಿದೆ. ಹಣ ಕಳೆದುಕೊಂಡ ವ್ಯಕ್ತಿಗಳು ತಕ್ಷಣವೇ ಮಳವಳ್ಳಿ ಕಡೆಗೆ ಹೋಗುತ್ತಿದ್ದ ಬೇರೊಂದು ಕಾರನ್ನು ಅಡ್ಡಗಟ್ಟಿ ಇಟಿಯಾಸ್ ಕಾರನ್ನು ಕಿರಣ್ ಫಾಲೋ ಮಾಡಿದ್ದಾನೆ. ಆದರೆ ಕಾರು ತುಂಬಾ ವೇಗವಾಗಿ ಹೋದ ಪರಿಣಾಮ ಆರೋಪಿಗಳು ಕ್ಷಣಾರ್ಧದಲ್ಲೇ ಕಣ್ಮರೆಯಾಗಿದ್ದಾರೆ.

ಹಣ ಕಳೆದುಕೊಂಡ ಕಿರಣ್ ಕೆ.ಎಂ.ದೊಡ್ಡಿ ಪೋಲೀಸ್ ಠಾಣೆಗೆ ತೆರಳಿ ನಡೆದ ಘಟನೆ ತಿಳಿಸಿದ್ದಾನೆ.
5 ಲಕ್ಷ ರೂಪಾಯಿ ಹಣದೊಂದಿಗೆ ಪರಾರಿಯಾಗಿರುವ ಆರೋಪಿಗಳಿಗೆ ಮದ್ದೂರು ಪೋಲೀಸರು ಬಲೆ ಬೀಸಿದ್ದಾರೆ.

Share This Article
Leave a comment