ಇಂದು ರಾಯರ ಉತ್ತರಾರಾಧನೆ. ರಾಯರ ಆರಾಧನೆ ಎಂದರೆ ಅವರು ಸಶರೀರ ಬೃಂದಾವನ ಪ್ರವೇಶ ಮಾಡಿದ ದಿನ, ಹೀಗಾಗಿ ಆ ದಿನದ ನೆನಪಿಗಾಗಿ ಮೂರು ದಿನಗಳ ಆರಾಧನೆ ಮಾಡುತ್ತಾರೆ ಭಕ್ತಾದಿಗಳು..
ಪೂರ್ವಾರಾಧನೆ, ಮಧ್ಯಾರಾಧನೆ ಹಾಗು ಉತ್ತರಾರಾಧನೆ ಎಂದು ಹೇಳುತ್ತಾರೆ. ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವೇಶಿಸಿದ ದಿನವೇ ಮಧ್ಯಾರಾಧನೆ.
ಶ್ರಾವಣ ಕೃಷ್ಣ ಬಿದಿಗೆಯಂದು ಗುರುವರ್ಯರು ಬೃಂದಾವನ ಪ್ರವೇಶಿಸಿದರು. ಭಕ್ತರ ಅಭೀಷ್ಟೇಯನ್ನು ಪೂರೈಸುತ್ತಾ ಅವರ ಕಷ್ಟ ಕಾರ್ಪಣ್ಯಗಳನ್ನು ಕಳೆಯುತ್ತಾ ಏಳುನೂರು ವರ್ಷಗಳ ಕಾಲ ಬೃಂದಾವನದಲ್ಲಿ ನೆಲೆನಿಂತಿರುತ್ತೇನೆ ಎಂದು ಹೇಳಿದ್ದಾರೆ! ಕಲಿಯುಗವನ್ನು ಉದ್ಧರಿಸಿದ ಮಹಾನುಭಾವರು ನಮ್ಮ ರಾಘವೆಂದ್ರ ಸ್ವಾಮಿಗಳು! ಕೇಳಿಕೊಂಡು ಬಂದವರಿಗೆ ಕಾಮಧೇನುವಂತೆ ವರವನ್ನು ನೀಡುವವರು!
ಕಣ್ಣಿಲ್ಲದವರಿಗೆ ಕಣ್ಣು ನೀಡಿ, ಕಾಲಿಲ್ಲದವರಿಗೆ ಕಾಲು ಕೊಟ್ಟು, ಭಕ್ತರ ಅಭೀಷ್ಟೆ ಪೂರೈಸುವ ಕಲ್ಪತರು ನಮ್ಮ ಗುರುವರ್ಯರು!
ರಾಘವೇಂದ್ರ ಸ್ವಾಮಿಗಳನ್ನು ಭಜಿಸದವರೇ ಇಲ್ಲ ಎಂದು ಹೇಳಬಹುದು! ಜಾತಿ,ಮತಗಳ ಭೇದವಿಲ್ಲದೆ ಎಲ್ಲ ಜನಾಂಗದವರೂ ರಾಯರ ಭಕ್ತರಾಗಿದ್ದಾರೆ! ಕಲಿಯುಗದ ಕಲ್ಪತರು ಇವರು,ಕಾಮಧೇನುವಿನಂತೆ ಭಕ್ತರು ಕರೆದಲ್ಲಿಗೆ ಬರುವರು!
ಮಧ್ವ ಮತದ ಪ್ರಮುಖ ಯತಿಗಳು ಇವರು, ಮಧ್ವಾಚಾರ್ಯರ ಅನುಯಾಯಿಗಳು,
ದ್ವೈತ ಮತವನ್ನು ಪ್ರತಿಪಾದಿಸಿದರು, ದ್ವೈತವೆಂದರೆ ಎರಡು. ದೇಹ, ಬುದ್ಧಿಯಿಂದ ನಾನು ದಾಸ ನೀನು ಈಶ ಎಂದು ಸಾರುವುದು ದ್ವೈತ! ಜಗತ್ತು ಸತ್ಯ, ಜೀವಾತ್ಮ, ಪರಮಾತ್ಮ ಬೇರೆ ಬೇರೆ ಎನ್ನುವದು ಇವರ ಮುಖ್ಯ ತತ್ವ!
ಭಕ್ತರು ಭಗವಂತನನ್ನು ಆರಾಧಿಸಿ ದೇವರ ಅಂಶವನ್ನು ಪಡೆಯಬಹುದು ಹೊರತು ಅವರೇ ದೇವರಾಗಲು ಸಾಧ್ಯವಿಲ್ಲ ಎನ್ನುವುದು ದ್ವೈತ ಮತದ ಸಿದ್ಧಾಂತ…
ದ್ವೈತ ಮತವು ಹದಿಮೂರನೇ ಶತಮಾನದಲ್ಲಿ ದಕ್ಷಿಣ ಭಾರತದ ಕರ್ನಾಟಕದಲ್ಲಿ ಮಧ್ವಾಚಾರ್ಯರಿಂದ ಪ್ರಚಾರಕ್ಕೆ ಬಂದಿತು, ದೇವರು ಬಿಂಬ, ಜೀವ ಅವನ ಪ್ರತಿಬಿಂಬ ಎನ್ನುವುದು ಇವರ ಸಿದ್ಧಾಂತ!
ಕೃತಯುಗದಲ್ಲಿ ಪ್ರಹ್ಲಾದನಾಗಿ ಹುಟ್ಟಿ ಹರಿನಾಮಸ್ಮರಣೆ ಮಾಡುತ್ತಾ, ದ್ವಾಪರದಲ್ಲಿ ಬಾಹ್ಲಿಕ ರಾಜನಾಗಿ ಹುಟ್ಟಿ ಶ್ರೀಕೃಷ್ಣನ ಸೇವೆಗೈದರು. ಕಲಿಯುಗದಲ್ಲಿ ವ್ಯಾಸರಾಯರಾಗಿ ಮೂಲ ಗೋಪಾಲಕೃಷ್ಣನ ಆರಾಧಕರಾಗಿ ತಮ್ಮ ಕೊನೆಯ ಮತ್ತು ನಾಲ್ಕನೆಯ ಅವತಾರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳಾಗಿ ಧರೆಗಿಳಿದು ಭಕ್ತರನ್ನುದ್ಧರಿಸಿದರು..
ಶ್ರೀ ರಾಘವೇಂದ್ರಾ ನೀನೇ ಗತಿ ಎಂದು ಒಂದು ಬಾರಿ ಭಕ್ತಿಯಿಂದ ಕೈಮುಗಿದು ಶರಣಾದರೆ ಸಾಕು ನಮ್ಮ ಸಂಕಷ್ಟವೆಲ್ಲಾ ಹೇಳಿ ಹೆಸರಿಲ್ಲದಂತೆ ದೂರವಾಗಿ ಬಿಡುತ್ತವೆ!
“ರಾ” ಎಂದರೆ ಪಾಪಗಳ ಪರ್ವತವನ್ನೇ ನಾಶ ಮಾಡುತ್ತದೆ, ” ಘ ” ಎಂದರೆ ಅಘವನ್ನು ಕಳೆದು ಆಳವಾದ ಭಕ್ತಿಯನ್ನು ನೀಡುತ್ತದೆ, “ವೇಂ” ಎಂದರೆ ಜೀವನ ಮತ್ತು ಮರಣದ ಚಕ್ರದಿಂದ ತ್ವರಿತ ವಿಮೋಚನೆ ನೀಡುತ್ತದೆ, “ದ್ರ” ಎಂದರೆ ದೃಷ್ಟಿಯನ್ನು ನೀಡಿ ಕಣ್ಣು ತೆರೆಸುತ್ತದೆ ಎಂದು ರಾಯರ ಆಪ್ತ ಶಿಷ್ಯರಾದ ಅಪ್ಪಣ್ಣಾಚಾರರು ತಮ್ಮ ಒಂದು ಗ್ರಂಥದಲ್ಲಿ ತಿಳಿಸಿದ್ದಾರೆ!
ಇದನ್ನು ಓದಿ –ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ಗುರು ರಾಯರ ಹಾಡು
ಬೃಂದಾವನದಿ ಚೆಂದದಿ ಕೃಪೆಮಾಡಿ
ಬಂದ ಭಕ್ತರನುದ್ಧರಿಸುತಲಿ…
ಕಂದ ಪ್ರಲ್ಹಾದನಿಗೆ ನರಸಿಂಹ ರೂಪತಾಳಿ
ದರುಶನ ನೀಡಿದ ಹರಿಯ ಹೃದಯದಿ ಪೊಂದಿ…
||ಪಲ್ಲವಿ ||
ತುಂಗಾ ತಟದಿ ತನು ಮನಗಳನಿರಿಸಿ
ಪಾಪಗಳನು ತೊಡೆದು, ದರುಶನ ನೀಡಿದ
ರಾಯರ ಪಾದಕೆ ನಮಿಸುವೆ ದಿನ ದಿನದಿ
ಕೃಪೆಯ ಗೈಯುತ ಉದ್ಧರಿಸುತಲಿ..
||ಚರಣ ೧||
ದುಷ್ಟ ಶಕ್ತಿಗಳಿಗೆ ಮುಕ್ತಿಯ ಕರುಣಿಸಿ
ಶಿಷ್ಟರ ರಕ್ಷಿಸಿ ಅಭಯವ ನೀಡಿ..
ಮುಟ್ಟಿ ಪಾದವನು, ಧೂಳಿ ದರುಶನದಿ
ಯತಿಗಳ ದಯ ಪಡೆದ ಜನ್ಮವೇ
ಧನ್ಯ… || ಚರಣ ೨ ||
ಪ್ರಾತಃಕಾಲದಲೆದ್ದು ನಿತ್ಯ ಕರ್ಮವ ಮುಗಿಸಿ,
ರಾಯರ ಧ್ಯಾನವ ಮಾಡುತಲಿ…
ಮನ ಮಂದಿರದಿ ಮುರಲಿಯ ಧರಿಸಿ
ಮನ ತುಂಬಿ ಕರೆದಾಗ ಬಾರೋ ತ್ವರಿತದಿ
||ಚರಣ ೩||
ಕಲಿಯುಗದಲಿ ಭಕ್ತರನುದ್ಧರಿಸುತಲಿ
ಸಮೀರನ ಸೇವೆಯ ಗೈಯುತಲಿ
ಪರಿಪರಿ ವಿಧದಿ ಶ್ರೀರಾಮನ ಸೇವೆಯ
ಮಾಡುತ, ಪಾಡುತ ಧ್ಯಾನಸ್ಥರಾಗಿ..
|| ಚರಣ ೪ ||
ಮಂತ್ರಾಲಯದಿ ಮೃತ್ತಿಕೆಯ ನೀಡುತಲಿ
ಮನದ ಬೇಗೆಯನು ದೂರಮಾಡುತಲಿ…
ಹೇಮಗಿರೀಶನ ಪಾದಕೆ ವಂದಿಸುತ
ಸಜೀವ ಬೃಂದಾವನದಿ ಲೀನರಾಗಿ..
|| ಚರಣ ೫ ||
( ರಚನೆ – ಸ್ನೇಹಾ ಆನಂದ್)