ಕೇಂದ್ರ ಸರ್ಕಾರಿ ನೌಕರರಿಗೆ ಶೇ.3 ತುಟ್ಟಿ ಭತ್ಯೆ (DA) ಹೆಚ್ಚಳ- ವಾರ್ಷಿಕ 9544 ಕೋಟಿ ರು ಹೊರೆ

Team Newsnap
1 Min Read

ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆಯನ್ನು (DA) ಶೇ.3 ರಷ್ಟು ಹೆಚ್ಚಿಸಿದೆ.

ನೌಕರರು ಹಾಗೂ ಪಿಂಚಣಿದಾರರಿಗೆ ಇದರ ಲಾಭ ದೊರೆಯಲಿದೆ. ಡಿಎ ಹೆಚ್ಚಳವು ಕೇಂದ್ರ ಸರ್ಕಾರದ 47.68 ಲಕ್ಷ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ 2022ರ ಜನವರಿ 1ರಿಂದಲೇ ಅನ್ವಯವಾಗಲಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಶೇ.3 ಡಿಎ ಹೆಚ್ಚಳಕ್ಕೆ ಬುಧವಾರ ಅನುಮೋದನೆ ನೀಡಲಾಯಿತು.

ಡಿಎ ಮತ್ತು ಡಿಆರ್‌ನ ಹೊಸ ಭತ್ಯೆ 2022ರ ಜ.1ರಿಂದಲೇ ಜಾರಿಗೆ ಬರಲಿದೆ. ಪ್ರಸ್ತುತ ಮೂಲ ವೇತನದ ಶೇ.31ರಷ್ಟು ಮೊತ್ತವನ್ನು ತುಟ್ಟಿ ಭತ್ಯೆ ಅಥವಾ ಪರಿಹಾರವಾಗಿ ನೀಡಲಾಗುತ್ತಿದ್ದು, ಸರ್ಕಾರದ ಅನುಮೋದನೆಯ ಬಳಿಕ ಡಿಎ ಶೇ.34ಕ್ಕೆ ಏರಿಕೆಯಾದಂತಾಗಿದೆ.

ಈ ಹೆಚ್ಚಳವು 7ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿದೆ. ತುಟ್ಟಿ ಭತ್ಯೆ ಹೆಚ್ಚಿಸುವ ನಿರ್ಧಾರದಿಂದಾಗಿ ಸರ್ಕಾರಕ್ಕೆ ವಾರ್ಷಿಕ 9,544.50 ಕೋಟಿ ರೂ. ಹೊರೆಯಾಗಲಿದೆ ಎಂದು ತಿಳಿಸಿದೆ.

Share This Article
Leave a comment