ಉಪ ಚುನಾವಣೆ ಬಳಿಕ ಬಂಡೆ ಛಿದ್ರ, ಹುಲಿಯಾ ಕಾಡಿಗೆ: ಕಟೀಲ್

Team Newsnap
1 Min Read

ಶಿರಾ ಮತ್ತು ಆರ್‌.ಆರ್‌. ನಗರ ಚುನಾವಣೆ ಮುಗಿದ ಬಳಿಕ ‘ಬಂಡೆ’ ಛಿದ್ರವಾಗುತ್ತದೆ, ‘ಹುಲಿಯಾ’ ಕಾಡಿಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಲೇವಡಿ ಮಾಡಿದ್ದಾರೆ.

ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೊರೇಟರ್‌ಗಳು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೆರೆಮರೆಗೆ ಸರಿಯುತ್ತಾರೆ. ಇವರಿಬ್ಬರ ಮಧ್ಯೆ ತಾಳಮೇಳವಿಲ್ಲದೆ ಕಾಂಗ್ರೆಸ್‌ ದಿಕ್ಕೆಟ್ಟು ಹೋಗಿದೆ ಎಂದು ತಿಳಿಸಿದರು.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಿಗುತ್ತಿರುವ ಜನ ಬೆಂಬಲದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ತಳಮಳ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಈ ಎರಡೂ ಪಕ್ಷಗಳ ಪ್ರಮುಖ ನಾಯಕರು ಬಿಜೆಪಿ ಸೇರಲಿದ್ದು, ಅವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಬಹುಮತ ಇದ್ದಾಗ ಅಭಿವೃದ್ಧಿ ಕಾರ್ಯಗಳಲ್ಲಿ ಜಾತಿ ರಾಜಕಾರಣ ಮಾಡಿದರು. ಟಿಪ್ಪು ಜಯಂತಿ ಮೂಲಕ ಸಮಾಜ ಒಡೆಯುವ ಪ್ರಯತ್ನ ಮಾಡಿದರೆ, ವೀರಶೈವ–ಲಿಂಗಾಯತ ಸಮಾಜವನ್ನೂ ಒಡೆಯುವ ಕೆಲಸ ಮಾಡಿದರು. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಇನ್ನಿಲ್ಲದಂತೆ ತೊಂದರೆ ನೀಡಿದರು ಎಂದು ಕಟೀಲ್‌ ಹೇಳಿದರು.

ಮತ್ತೊಂದೆಡೆ ಜೆಡಿಎಸ್‌ ಅಧಿಕಾರದಲ್ಲಿ ಒಂದು ರೀತಿ, ಅಧಿಕಾರದಲ್ಲಿ ಇಲ್ಲದಾಗ ಮತ್ತೊಂದು ರೀತಿ ವರ್ತಿಸುತ್ತಿದೆ. ಇವರು ಅಧಿಕಾರಕ್ಕಾಗಿ ಇನ್ನೊಂದು ಪಕ್ಷದ ಜತೆ ‘ಪ್ರೇಮ ವಿವಾಹ’ ಆಗುತ್ತಾರೆ. ಆ ಬಳಿಕ ಬೈದಾಡಿಕೊಳ್ಳುತ್ತಾರೆ. ಅಪ್ಪ ಒಂದು ಪಕ್ಷದ ಪರ ಮಾತನಾಡಿದರೆ, ಮಗ ಇನ್ನೊಂದು ಪಕ್ಷದ ಪರ ಮಾತನಾಡುತ್ತಾರೆ ಎಂದು ನಳಿನ್ ಲೇವಡಿ ಮಾಡಿದರು.

ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ಮುಸುಕಿನ ಗುದ್ದಾಟವೇ ಕಾರಣ. ಗಲಭೆಯ ಸೂತ್ರಧಾರ ಸಂಪತ್‌ರಾಜ್‌ ಅವರನ್ನು ಬಂಧಿಸಿ, ನ್ಯಾಯಾಂಗ ತನಿಖೆ ನಡೆಸಿ ಎಂದು ಹೇಳುವ ತಾಕತ್ತು ಇಬ್ಬರಿಗೂ ಇಲ್ಲ ಎಂದು ಅವರು ಹೇಳಿದರು.

TAGGED: ,
Share This Article
Leave a comment