January 12, 2025

Newsnap Kannada

The World at your finger tips!

somshekar

ಈ ವರ್ಷ 30 ಲಕ್ಷ ರೈತರಿಗೆ 20810 ಕೋಟಿ ರು. ಬೆಳೆ ಸಾಲ: ಸಚಿವ ಸೋಮಶೇಖರ್ ಘೋಷಣೆ

Spread the love
  • ರೈತರಿಗೆ ತೊಂದರೆಯಾಗದಂತೆ ಹೆಚ್ಚಿನ ಸಾಲ ನೀಡಲು ಮುಖ್ಯಮಂತ್ರಿಗಳ ಸೂಚನೆ
  • ಕಳೆದ ಸಾಲಿನಲ್ಲಿ 25.93 ಲಕ್ಷ ರೈತರಿಗೆ 17,490 ಕೋಟಿ ರೂಪಾಯಿ ಬೆಳೆ ಸಾಲ ನೀಡಿಕೆ, ಶೇ. 114.70 ಸಾಧನೆ
  • ಲಾಕ್‌ಡೌನ್ ಮುಗಿದ ಬಳಿಕ ಡಿಸಿಸಿ ಬ್ಯಾಂಕ್‌ಗಳಿಗೆ ಭೇಟಿ
  • ರೈತರಿಗೆ ನೂರಕ್ಕೆ ನೂರು ಸಾಲ ಸಿಗಲು ಕ್ರಮ

ಸಚಿವರು ಕಳೆದ ಸಾಲಿನಲ್ಲಿ ಶೇ. 114.70 ರೈತರಿಗೆ ಬೆಳೆಸಾಲ ನೀಡಿಕೆ ಮೂಲಕ ಗುರಿಯನ್ನು ಮೀರಿ ಸಾಧನೆ ಮಾಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಪ್ರಸಕ್ತ ಸಾಲಿನ ಅಂದರೆ, 2021-22ರಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿಯನ್ನು ನೀಡಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಯಾವುದೇ ಕಾರಣಕ್ಕೂ ನಮ್ಮ ರೈತಾಪಿ ವರ್ಗದವರಿಗೆ ತೊಂದರೆಯಾಗಬಾರದು. ಹೀಗಾಗಿ 30 ಲಕ್ಷ ರೈತರಿಗೆ ಹೆಚ್ಚಿನ ಸಾಲ ತಲುಪುವಂತಾಗಬೇಕು ಎಂದು ಮುಖ್ಯಮಂತ್ರಿಗಳು ನೀಡಿದ ಸೂಚನೆಯನ್ವಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಕಳೆದ ಆರ್ಥಿಕ ವರ್ಷವಾದ 2020-21ರಲ್ಲಿ 24.50 ಲಕ್ಷ ರೈತರಿಗೆ 15400 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡಿಕೆಯ ಗುರಿಯನ್ನು ಹೊಂದಲಾಗಿತ್ತು. ನಮ್ಮ ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್ ಗಳು 25,93,982 ರೈತರಿಗೆ 17490 ಕೋಟಿ ರೂಪಾಯಿ ಸಾಲವನ್ನು ನೀಡಿವೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಶೇಕಡಾ 100 ಗುರಿ ಮೀರಿ ಶೇ. 114.70 ಸಾಧನೆಯನ್ನು ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಈ ಸಾಲಿನಲ್ಲಿಯೂ ಇದೇ ರೀತಿಯ ಸಾಧನೆಯನ್ನು ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

*ಲಾಕ್‌ಡೌನ್ ಮುಗಿದ ಬಳಿಕ ಡಿಸಿಸಿ ಬ್ಯಾಂಕ್‌ಗಳಿಗೆ ಭೇಟಿ:
21 ಡಿಸಿಸಿ ಬ್ಯಾಂಕ್ ಗಳಿಗೆ ಈಗಾಗಲೇ ಸೂಚನೆಯನ್ನು ನೀಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 30 ಲಕ್ಷ ರೈತರನ್ನೂ ತಲುಪಬೇಕು, 20810 ಕೋಟಿ ರೂ. ಬೆಳೆ ಸಾಲವನ್ನು ನೀಡಬೇಕು ಎಂದು ಸೂಚಿಸಿದ್ದೇನೆ. ಲಾಕ್‌ಡೌನ್ ಮುಗಿದ ಬಳಿಕ ಡಿಸಿಸಿ ಬ್ಯಾಂಕ್‌ಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ, ಸಲಹೆ-ಸೂಚನೆಗಳನ್ನು ನೀಡಲಿದ್ದೇನೆ. ಕಳೆದ ಬಾರಿ 5-6 ಡಿಸಿಸಿ ಬ್ಯಾಂಕ್ ಗಳು ಶೇ. 100 ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಈ ವೇಳೆ ಅವರಿಗೂ ಸಹ ಗುರಿ ಮುಟ್ಟಲೇಬೇಕು ಎಂದು ತಾಕೀತು ಮಾಡಿದರು.

ರೈತರಿಗೆ ನೂರಕ್ಕೆ ನೂರು ಸಾಲ ಸಿಗಬೇಕು:
ಡಿಸಿಸಿ ಬ್ಯಾಂಕ್ ಗಳು ತಮಗೆ ನೀಡಿರುವ ಗುರಿಯನ್ನು ತಲುಪಲೇಬೇಕು. ಯಾವುದೇ ಕಾರಣಕ್ಕೂ ಇದರಿಂದ ತಪ್ಪಿಸಿಕೊಳ್ಳಬಾರದು. ರೈತರಿಗೆ ನೂರಕ್ಕೆ ನೂರು ಸಾಲ ಸಿಗಬೇಕು. 21 ಡಿಸಿಸಿ ಬ್ಯಾಂಕ್ ಗಳ ಪ್ರಗತಿ ಪರಿಶೀಲನೆಯನ್ನೂ ಮಾಡುತ್ತೇವೆ. 30 ಲಕ್ಷ ರೈತರಿಗೆ 20810 ಕೋಟಿ ರು ಬೆಳೆ ಸಾಲ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದರು

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ಶಾಸಕರಾದ ಬೆಳ್ಳಿ ಪ್ರಕಾಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ನಿಬಂಧಕರಾದ ಜಿಯಾವುಲ್ಲ, ಎಲ್ಲ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!