ಜಿಯೋದಿಂದ ಟೂ ಪ್ಲಾಟ್‌ಫಾರ್ಮ್‌ನಲ್ಲಿ 15 ಮಿಲಿಯನ್ ಡಾಲರ್ ಹೂಡಿಕೆ

Team Newsnap
1 Min Read

ಮುಂಬೈ, ಫೆಬ್ರವರಿ 4: ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (ಜಿಯೋ), ಪ್ರಣವ್ ಮಿಸ್ತ್ರಿ ಸ್ಥಾಪಿಸಿದ ಸಿಲಿಕಾನ್ ವ್ಯಾಲಿ ಮೂಲದ ಟೆಕ್ ಸ್ಟಾರ್ಟಪ್ ಟೂ ಪ್ಲಾಟ್‌ಫಾರ್ಮ್ಸ್‌ನಲ್ಲಿ (TWO) 15 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯನ್ನು ಘೋಷಿಸಿದೆ. ಅದು ಕಂಪೆನಿಯ ಶೇ 25ರಷ್ಟು ಸಾಮಾನ್ಯ ಈಕ್ವಿಟಿ ಷೇರುಗಳನ್ನು ಖರೀದಿಸುತ್ತಿದೆ.

ಟೂ ಒಂದು ಆರ್ಟಿಫಿಷಿಯಲ್ ರಿಯಾಲಿಟಿ ಕಂಪೆನಿಯಾಗಿದ್ದು, ಕೃತಕ ಬುದ್ಧಿಮತ್ತೆಯ ಅನುಭವಗಳನ್ನು ನಿರ್ಮಿಸುವ ಕೆಲಸ ಮಾಡುತ್ತದೆ.

ಹೊಸ ತಂತ್ರಜ್ಞಾನಗಳ ಅಳವಡಿಕೆಯನ್ನು ಹಾಗೂ ಕೃತಕ ಬುದ್ಧಿಮತ್ತೆ, ಮೆಟಾವರ್ಸ್ ಮತ್ತು ಮಿಕ್ಸ್ಡ್ ರಿಯಾಲಿಟಿಗಳಂತಹ ತಂತ್ರಜ್ಞಾನಗಳ ನಿರ್ಮಾಣವನ್ನು ಚುರುಕುಗೊಳಿಸಲು ಜಿಯೋದೊಂದಿಗೆ ಜತೆಗೂಡಿ ಟೂ ಕಾರ್ಯನಿರ್ವಹಿಸಲಿದೆ.

ಹೂಡಿಕೆ ಬಗ್ಗೆ ಮಾತನಾಡಿದ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, ‘ಎಐ/ ಎಂಎಲ್, ಎಆರ್, ಮೆಟಾವರ್ಸ್ ಮತ್ತು ವೆಬ್ 3.0 ಕ್ಷೇತ್ರಗಳಲ್ಲಿನ ಟೂ ತಂಡದ ದೊಡ್ಡ ಅನುಭವ ಹಾಗೂ ಸಾಮರ್ಥ್ಯಗಳಿಂದ ನಾವು ಪ್ರಭಾವಿತರಾಗಿದ್ದೇವೆ. ಇಂಟರ್ಯಾಕ್ಟೀವ್ ಎಐ, ಇಮ್ಮರ್ಸಿವ್ ಗೇಮಿಂಗ್ ಮತ್ತು ಮೆಟಾವರ್ಸ್‌ ವಿಭಾಗಗಳಲ್ಲಿ ಹೊಸ ಉತ್ಪನ್ನಗಳ ಅಭಿವೃದ್ಧಿಯನ್ನು ನಡೆಸಲು ನೆರವಾಗಲು ಟೂ ಜತೆಗೂಡಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದರು.

‘ಭಾರತದ ಡಿಜಿಟಲ್ ಪರಿವರ್ತನೆಗೆ ಜಿಯೋ ಒಂದು ಬುನಾದಿಯಾಗಿದೆ. ಎಐನ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಗ್ರಾಹಕರು ಹಾಗೂ ಉದ್ಯಮಗಳಲ್ಲಿ ಆರ್ಟಿಫಿಷಿಯಲ್ ರಿಯಾಲಿಟಿಯ ಆಪ್ಲಿಕೇಷನ್‌ಗಳನ್ನು ಪರಿಚಯಿಸಲು ಜಿಯೋ ಜತೆ ಪಾಲುದಾರಿಕೆ ಹೊಂದಲು ಟೂ ಕಂಪೆನಿ ಉತ್ಸುಕವಾಗಿದೆ’ ಎಂದು ಟೂ ಸಿಇಒ ಪ್ರಣವ್ ಮಿಸ್ತ್ರಿ ಹೇಳಿದರು.

Share This Article
Leave a comment