ಒಬ್ಬ ವ್ಯಕ್ತಿ ಒಂದಿಡೀ ಸಮುದಾಯದ ಶಕ್ತಿಯಾದ. ಇಡೀ ದೇಶದ ಒಕ್ಕೊರಲಿನ ದನಿಗೆ ಕಹಳೆಯಾದ. ಆತನ ಅತಿ ಸಾಧಾರಣ ವಸ್ತ್ರವೊಂದರಲ್ಲೇ ಆತ ಅಸಾಧಾರಣ ಶಕ್ತಿಯಾದ. .ನಿರಾಯುಧನಾಗಿದ್ದ ಈತನಿಗೆ ಸರ್ವಾಯುಧಧಾರಿಗಳು ಶರಣಾದರು. ತೆಳುಕಾಯದ ಈತನ ದನಿಗೆ ಇಡೀ ಬ್ರಿಟಿಷ್ ಸಾಮ್ರಾಜ್ಯ ನಡುಗುತ್ತಿತ್ತು .
ಯಾವುದೀ ಶಕ್ತಿ? ಯಾರು ಈ ವ್ಯಕ್ತಿ? ಖಡ್ಗದ ಝೇಂಕಾರವಿಲ್ಲದ, ಗುಂಡಿನ ಮೊರೆತವಿಲ್ಲದೆ, ಕೇವಲ ಅಹಿಂಸೆಯ ಬಲದಿಂದಲೇ ಸ್ವಾತಂತ್ರ್ಯ ಪಡೆದ ಭಾರತ ದೇಶದ ಹೆಮ್ಮೆಯ ಕುವರ ದಣಿವರಿಯದ ಸಂತ ….ಅವರೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಬಾಪು, ಮಹಾತ್ಮ ಗಾಂಧಿ .
ಕೇವಲ ನಾಮಮಾತ್ರದಿಂದಲೇ ಇಡೀ ದೇಶದಲ್ಲಿ, ದೇಶದ ಜನತೆಯಲ್ಲಿ ರೋಮಾಂಚನ ಹುಟ್ಟಿಸುತ್ತಿದ್ದ ವ್ಯಕ್ತಿ ಗಾಂಧಿ. ಆತನಲ್ಲಿದ್ದ ಶಕ್ತಿ ಯಾವುದು?…ಅಹುದು , ಅದುವೇ ಆತನಲ್ಲಿದ್ದ ಅಂತಸ್ಸತ್ವ, ಸತ್ಯಸಂಧತೆ, ಅಹಿಂಸಾವಾದ ಮತ್ತು ಅಂತಿಮವಾಗಿ ಮಾನಸಿಕ ದೃಢತೆ.
ತುಂಡು ಬಟ್ಟೆಯುಟ್ಟು ಒಂದಿಡೀ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ನಡುಗಿಸಿದ ಗಾಂಧೀಜಿಯವರಿಗಿದ್ದ ಅಂತಶಕ್ತಿಯ ಮೂಲಸೆಲೆ ಯಾವುದು ?ಅಹಿಂಸೆಯ ಮೂಲಕವೇ ದೇಶದ ಜನರನ್ನೆಲ್ಲ ಒಗ್ಗೂಡಿಸಿ ಶಾಂತಿಯ ಕಹಳೆ ಊದಿದ ಗಾಂಧಿ ದೇಶದ ರಾಷ್ಟ್ರಪಿತ ಎನಿಸಿದ್ದು ಯಾವಾಗ ?ಅವರ ಯಾವ ಗುಣಗಳು ಅವರನ್ನು ಮಹಾತ್ಮ ಎನಿಸಿದವು ?ಇವೆಲ್ಲ ನಮ್ಮ ಪ್ರಶ್ನೆಗಳು ಅವುಗಳಿಗೆ ಉತ್ತರ ಹುಡುಕುವ ಪ್ರಯತ್ನವೇ ನನ್ನದು ಮತ್ತು ಆ ನಿಟ್ಟಿನಲ್ಲಿ ನಾನು ಗಾಂಧಿಯವರನ್ನು ಅನುಸರಿಸಲು ಪ್ರಯತ್ನಿಸುವೆ ಎಂದು ನಮ್ರವಾಗಿ ಹೇಳಬಯಸುತ್ತೇನೆ .
ಗಾಂಧೀಜಿಯವರ ಜೀವನವೇ ಒ೦ದು ಗಾಥೆ. ಅವರು ತಮ್ಮನ್ನು ತಾವೇ ಪರೀಕ್ಷೆಗಳಿಗೆ ಒಡ್ಡಿಕೊಂಡರು. ಅತ್ಯಂತ ಕಠಿಣ ಶಿಕ್ಷೆಗಳನ್ನು ವಿಧಿಸಿ ಕೊಂಡರು.ಅವರು ತಪ್ಪು ಮಾಡಿಲ್ಲವೆಂದಲ್ಲ , ಆದರೆ ತಾವು ಮಾಡಿದ ತಪ್ಪನ್ನು ವಿಚಕ್ಷಣ ದೃಷ್ಟಿಯಿಂದ ಪರಿಕಿಸಿ ನೋಡಿದರು.
ಹೇಗೆ ಅಕ್ಕಸಾಲಿಗ ಆಭರಣವನ್ನು ತಯಾರಿಸುವಾಗ ಚಿನ್ನವನ್ನು ಕೆಂಪಾಗಿ ಕಾಯಿಸಿ ಬಡಿದು ಕತ್ತರಿಸಿ ಸುಂದರವಾದ ಆಭರಣಗಳನ್ನು ತಯಾರಿಸುವನೋ , ಹಾಗೆಯೇ ಗಾಂಧಿಯವರು ತಮ್ಮನ್ನು ತಾವು ಹಲ ಕೆಲ ಪರೀಕ್ಷೆಗಳ ಮೂಲಕ ಕೆತ್ತಿ ತಿದ್ದಿ ತೀಡಿ ತಮ್ಮ ವ್ಯಕ್ತಿತ್ವವನ್ನು ಅಪರಂಜಿಯನ್ನಾಗಿಸಿಕೊಂಡರು.
ಸತ್ಯ -ಸತ್ಯಕ್ಕೆ ಅನ್ವರ್ಥನಾಮನಾದ ರಾಜ ಹರಿಶ್ಚಂದ್ರ ಮಹಾರಾಜ ಗಾಂಧಿಯವರ ಆದರ್ಶವಾಗಿದ್ದ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯ ಎನ್ನುವುದು ನೀರಿನಲ್ಲಿರುವ ಎಣ್ಣೆಯಂತೆ ಅದು ಯಾವಾಗಲೂ ತೇಲುತ್ತಿರುತ್ತದೆ. ನೀವು ಅದೆಷ್ಟೇ ಸುಳ್ಳಿನ ನೀರನ್ನು ಸೇರಿಸಿದರೂ ,ಸತ್ಯ ಎನ್ನುವ ಎಣ್ಣೆ ಎಂದೂ ತಳ ಕಾಣುವುದಿಲ್ಲ.ಈ ಸತ್ಯದ ತತ್ತ್ವವೇ ಗಾಂಧಿಯವರಿಗೆ ಮಾನಸಿಕ ದೃಢತೆಯನ್ನು ನೀಡಿತ್ತು .
ಅಹಿಂಸೆ – ಹಿಂಸೆಯಿಂದ ಏನೂ ಸಾಧಿಸಲಾಗುವುದಿಲ್ಲ ಖಡ್ಗಕ್ಕೆ ಖಡ್ಗ ಉತ್ತರವಲ್ಲ ಪ್ರೀತಿಯ ಮಾತು ಎಂತಹ ಬೆಂದ ಹೃದಯಕ್ಕೂ ತಂಪೆರೆಯಬಲ್ಲದು ಎಂಬುದು ಗಾಂಧಿಯವರ ಸಿದ್ಧಾಂತವಾಗಿತ್ತು .ಎಂಥದ್ದೇ ಕಠಿಣ ಪರಿಸ್ಥಿತಿಯಲ್ಲೂ ಅವರು ಹಿಂಸೆಯನ್ನು ಪ್ರಚೋದಿಸಲಿಲ್ಲ. ಅವರು ಅದೆಷ್ಟೇ ಬಾರಿ ಜೈಲು ಸೇರಿದರೂ ಎಂದೂ ಶಾಂತಿಭಂಗವನ್ನು ಸಹಿಸಲಿಲ್ಲ ನುಡಿದಂತೆಯೇ ನಡೆದರು, ಶಾಂತಿಯ ಸಾರ್ವಭೌಮತೆಯನ್ನು ಮೆರೆದರು .
ಸತ್ಯಾಗ್ರಹ -ಶಾಂತಿಯುತ ಸತ್ಯಾಗ್ರಹ ಅವರ ಶಕ್ತಿಯಾಗಿತ್ತು. ಬಂಗಾಳದ ವಿಭಜನೆ ಅವರಿಗೆ ತುಂಬ ನೋವನ್ನುಂಟು ಮಾಡಿತ್ತು. ಸ್ವಯಂ ದಂಡನೆ, ಉಪವಾಸಗಳು ಅವರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಮತ್ತು ತಮ್ಮ ಅಸಹನೆಯನ್ನು ತೋರಿಸಿಕೊಳ್ಳಲು ಉಪಯೋಗಿಸುತ್ತಿದ್ದ ಅಸ್ತ್ರಗಳು. ಅವರೇ ಹೇಳುವಂತೆ ಉಪವಾಸ ಮೈಮನಗಳ ಕೊಳೆಯನ್ನು ಕಳೆಯುವ ಸಾಧನವಾಗಿತ್ತು.
ಪ್ರಾರ್ಥನೆ – ಸಾಮೂಹಿಕ ಪ್ರಾರ್ಥನೆ ಮನುಷ್ಯನನ್ನು ಶಾಂತನನ್ನಾಗಿಸುತ್ತದೆ ಒಂದೇ ಏರಿಳಿತದಲ್ಲಿ ಸರ್ವರೂ ಪ್ರಾರ್ಥನೆ ಮಾಡುವಾಗ ಉಂಟಾಗುವ ಕಂಪನಗಳು ಎಲ್ಲರಲ್ಲೂ ಅಮೂರ್ತ ಭಾವನೆಯನ್ನು ಉಂಟು ಮಾಡುತ್ತವೆ ಎಂಬುದು ಅವರ ಅಭಿಪ್ರಾಯವಾಗಿತ್ತು .ಪ್ರಾರ್ಥನೆ ಎಲ್ಲರನ್ನು ಒಗ್ಗೂಡಿಸುತ್ತದೆ ಎಂಬ ಏಕತ್ವದ ಕಲ್ಪನೆ ಅವರದಾಗಿತ್ತು .
ಸರಳತೆ – ಸರಳತೆ ಅವರ ಶಕ್ತಿಯಾಗಿತ್ತು. ಸದೃಢ ಸಶಕ್ತ ಭಾರತ ನಿರ್ಮಾಣಕ್ಕೆ ಗುಡಿಕೈಗಾರಿಕೆಗಳು ಕೊಡಬಲ್ಲ ಕೊಡುಗೆಗಳ ಅರಿವು ಅವರಿಗಿತ್ತು. ಪ್ರತಿ ಹಳ್ಳಿಯೂ ಸಣ್ಣಪುಟ್ಟ ಕೈಗಾರಿಕೆಗಳನ್ನು ಹೊಂದಿದರೆ ಆರ್ಥಿಕವಾಗಿ ಸದೃಢವಾಗಿ ನಿಲ್ಲಬಹುದು. ರೈತ ನಾಡಿನ ಬೆನ್ನೆಲುಬು, ರೈತನಿಂದಲೇ ಅನ್ನ ಎಂದು ಅವರು ಹೇಳುತ್ತಿದ್ದರು .
ಸಮಾನತೆ -ಗಾಂಧಿಯವರ ಸಾಬರಮತಿ ನದಿಯ ದಂಡೆಯಲ್ಲಿರುವ ಆಶ್ರಮದಲ್ಲಿ ಇದ್ದಾಗ ಒಂದೊಮ್ಮೆ ಕಸ್ತೂರ್ಬಾ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದ ತಮ್ಮ ಮಗನಿಗೆ ಕೆಲವು ರೊಟ್ಟಿಗಳನ್ನು ಮಾಡಿ ಕೊಟ್ಟರು. ಆದರೆ ಅದನ್ನು ಒಪ್ಪದ ಗಾಂಧಿ ಮಗನಿಗೆ ರೊಟ್ಟಿಗಳನ್ನು ಒಯ್ಯದೆ ಇರಲು ತಾಕೀತು ಮಾಡಿದರು .ಇದು ಅವರು ಸರ್ವಜನರನ್ನು ಸಮನಾಗಿ ನೋಡುವ ವಿಶಾಲ ದೃಷ್ಟಿಕೋನ.
ಕೆಲವು ವಿರುದ್ಧ ಮಾಹಿತಿಗಳು ಹೀಗಿವೆ. ಗಾಂಧೀಜಿಯವರು ಮನೆಗೆ ಮಾರಿ ಊರಿಗೆ ಉಪಕಾರಿ ಎಂದು ….ವ್ಯಕ್ತಿ ಸಮುದಾಯದ ಶಕ್ತಿ ಆಗುವಾಗ ಈ ರೀತಿಯ ಸಮಾನ ಮನೋಭಾವವನ್ನು ಹೊಂದುವುದು ಅತ್ಯವಶ್ಯಕ ಎಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು ಅವರು ಹಾಗೆಯೇ ನಡೆದುಕೊಂಡರು ಕೂಡ .
ಅಂತಿಮವಾಗಿ ಗಾಂಧಿಯವರ ಬಗ್ಗೆ ಹೇಳಬೇಕಾದ ಒ೦ದುವಿಷಯವಿದೆ. ಗಾಂಧಿಯವರ ಹತ್ಯೆಯಾದ ಸುದ್ದಿ ವಿಶ್ವಸಂಸ್ಥೆಯನ್ನು ತಲುಪಿದಾಗ ವಿಶ್ವಸಂಸ್ಥೆಯ ಧ್ವಜದ ಜೊತೆಗೆ ಇಡೀ ಜಗತ್ತಿನ ಎಲ್ಲಾ ಸದಸ್ಯ ರಾಷ್ಟ್ರಗಳ ಧ್ವಜಗಳನ್ನು ಅರ್ಧಕ್ಕೆ ಇಳಿಸಲಾಯಿತು.ಯಾವುದೇ ಒಂದು ದೇಶದ ಪ್ರಧಾನಿ ಇಲ್ಲವೇ ಅಧ್ಯಕ್ಷರು ಮಡಿದಾಗ ಮಾತ್ರ ಆ ದೇಶದ ಧ್ವಜ ಮತ್ತು ವಿಶ್ವಸಂಸ್ಥೆಯ ಧ್ವಜವನ್ನು ಅರ್ಧಕ್ಕೆ ಇಳಿಸಲಾಗುತ್ತದೆ …ಆದರೆ ಗಾಂಧಿ ಯಾವುದೇ ದೇಶದ ಪ್ರಧಾನಿಯಾಗಲಿ ಅಧ್ಯಕ್ಷರಾಗಲೀ ಆಗಿರಲಿಲ್ಲ ಆದರೂ ವಿಶ್ವಸಂಸ್ಥೆಯು ಅವರಿಗೆ ಈ ಗೌರವವನ್ನು ನೀಡಿತು. .ಪತ್ರಕರ್ತೆಯರ ಸಮೂಹವೊಂದು ಈ ಬಗ್ಗೆ ಪ್ರಶ್ನೆ ಮಾಡಿದಾಗ ಅವರು ಹೇಳಿದ ಉತ್ತರ “ಇಂದು ಕೇವಲ ಗಾಂಧಿಯವರು ಸಾಯಲಿಲ್ಲ, ಮಾನವೀಯತೆಯೇ ಸತ್ತು ಹೋಯಿತು.ಮುಂದೊಂದು ದಿನ ಜಗತ್ತು ಇಪ್ಪತ್ತನೆಯ ಶತಮಾನದಲ್ಲಿ ಇಂತಹ ಓರ್ವ ಸಂತ ಬದುಕಿದ್ದನೇ ಎಂದು ಅಚ್ಚರಿ ಪಡುವಂತಹ ವ್ಯಕ್ತಿ ಗಾಂಧಿ” ಎಂದು ವಿಶ್ವಸಂಸ್ಥೆಯ ಅಧ್ಯಕ್ಷರು ಹೇಳಿದರು . ಇಷ್ಟು ಸಾಕಲ್ಲವೇ ಗಾಂಧಿಯವರ ಮಹತ್ವ ನಮಗೆ ತಿಳಿಯಲು .
ಗಾಂಧೀಜಿಯವರು ಅತ್ಯಂತ ಆಸ್ತೆಯಿಂದ ಮಾಡುತ್ತಿದ್ದ ಸ್ವಚ್ಛತೆಯನ್ನು, ವಾದ ಮತ್ತು ಸಾಬರಮತಿ ಆಶ್ರಮದಲ್ಲಿ ಅವರು ಸ್ವಚ್ಛತಾ ಕಾರ್ಯಗಳನ್ನು ಖುದ್ದು ತಾವೇ ನಿರ್ವಹಿಸುತ್ತಿದ್ದನ್ನು ನಾವು ಕೇಳಿದ್ದೇವೆ. 1924ರಲ್ಲಿ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿದ್ದು ಪ್ರಸ್ತುತ 2024ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ಆಗಿರುವ ಪ್ರಯುಕ್ತ ಕರ್ನಾಟಕದಲ್ಲಿ ಈ ವರ್ಷದ ಗಾಂಧಿ ಜಯಂತಿಯ ಸಂಭ್ರಮಕ್ಕೆ ಶತಮಾನೋತ್ಸವದ ಸಂಭ್ರಮವೂ ಜೊತೆಗೂಡಿದೆ. ಪ್ರಸ್ತುತ ವರ್ಷ ಗಾಂಧೀಜಿಯವರ 155ನೇ ಹುಟ್ಟುಹಬ್ಬದ ಅಂಗವಾಗಿ ಸ್ವಚ್ಛತಾ ಆಂದೋಲನವನ್ನು ಆಚರಿಸುತ್ತಿದ್ದು, ಕರ್ನಾಟಕದ ಎಲ್ಲೆಡೆ ಶಾಲಾ ಕಾಲೇಜುಗಳ ಮಕ್ಕಳು ಸ್ವಚ್ಛತಾ ಆಂದೋಲನ ಪ್ರತಿಜ್ಞಾವಿಧಿಯನ್ನು ಗಾಂಧಿ ಜಯಂತಿಯ ದಿನ ಮುಂಜಾನೆ 10 ಗಂಟೆಗೆ ಸ್ವೀಕರಿಸಲಿದ್ದಾರೆ.
ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು
ವೀಣಾ ಹೇಮಂತಗೌಡ ಪಾಟೀಲ. ಮುಂಡರಗಿ, ಗದಗ್
More Stories
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ