ಬದುಕಿನಲ್ಲಿನ ಇಂತಹಾ ಸಂಕೀರ್ಣವಾದ ಹಾದಿಯಲ್ಲಿ ಪಯಣಿಸುವಾಗ ನೀವು ಇಟ್ಟ ಅಥವಾ ಇಡುವ ಹೆಜ್ಜೆಯೆಲ್ಲಾ ಕೆಟ್ಟದಾಗಿಯೇ ಇರುತ್ತೆ, ಮಾಡಿದ್ದೆಲ್ಲವೂ ತಪ್ಪಾಗಿಯೇ ತೋರುತ್ತೆ, ಮಾತಾಡಿದ್ದೆಲ್ಲವೂ ವಿವಾದವಾಗಿಯೇ ಪರಿಣಮಿಸುತ್ತೆ, ಮುಟ್ಟಿದ್ದೆಲ್ಲವೂ ದುರಾದೃಷ್ಟವಾಗಿಯೇ ಎದುರಾಗುತ್ತೆ. ಹೂವೆಂದು ಭಾವಿಸಿದ್ದು ಹಾವಾಗಿ ಬುಸುಗುಟ್ಟುತ್ತೆ, ಹಾಲೆಂದು ಬಾವಿಸಿದ್ದು ಹಾಲಾಹಲವಾಗಿ ಬಿಡುತ್ತದೆ. ಫ಼ೈನಲೀ….ಎಲ್ಲವೂ ನಿರಾಶೆ, ಜುಗುಪ್ಸೆ ಅಥವಾ ಪಶ್ಚಾತ್ತಾಪದಲ್ಲೇ ಕೊನೆಗೊಳ್ಳುವಂತಹ ಭಾವನೆ ಆಳವಾಗಿ ಮನೆಮಾಡಿರುತ್ತೆ.
ಈ ಎಲ್ಲಾ ಯಮಯಾತನೆಗಳಿಂದ ಕೆಲವೊಮ್ಮೆ ಜೀವನೋತ್ಸಾಹ ಕಳೆದುಕೊಂಡು ಹೈರಾಣಾಗಿ ಜೀವನದ ಮೇಲೆ ಕಾನ್ ಫ಼ಿಡೆನ್ಸ್ ಕಳೆದುಕೊಂಡು ಬದುಕಿನ ಭವಿಷ್ಯದ ಭರವಸೆಯೇ ನುಚ್ಚುನೂರಾಗಿ, ಮುಂದೇನು….ಎಂಬಂತೆ ಭವಿಷ್ಯದತ್ತ ಆತಂಕದಿಂದ ನೋಡುವಂತಾಗುತ್ತದೆ ಯಲ್ಲವೇ.!
ಜೀವನದಲ್ಲಿ ಯಾರೂ ಬಯಸದ ಇಂತಹ ದಿಕ್ಕೆಟ್ಟ ದಾರುಣ ಹಂತಗಳಲ್ಲಿ ನಮ್ಮ ಆತ್ಮವಿಶ್ವಾಸ ಯಾವ ಮಟ್ಟದಲ್ಲಿರುತ್ತದೆ, ಕಠಿಣ ಸಂಧರ್ಭಗಳಿಗೆ ನಾವು ಹೇಗೆ ರಿಯಾಕ್ಟ್ ಮಾಡುತ್ತೇವೆ, ಹೇಗೆ ವರ್ತಿಸುತ್ತೇವೆ ಹಾಗೂ ಭವಿಷ್ಯದ ಬದುಕಿನ ಮೇಲೆ ಹೇಗೆಲ್ಲಾ ಭರವಸೆಯನ್ನು ಕಟ್ಟಿಕೊಳ್ಳುತ್ತೇವೆ ಎಂಬ ಮೂಲ ಸಂಗತಿಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ, ಅಂತಃಸತ್ವವನ್ನು ಗಟ್ಟಿಗೊಳಿಸುವಲ್ಲಿ ನಿರ್ಣಾಯಕವಾಗಿರಬಲ್ಲವು !
ಜೀವನದಲ್ಲಿ ಬರಬಹುದಾದ ಇಂತಹ ಕಠಿಣ ಪರಿಸ್ಥಿತಿಗಳನ್ನು ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಎದುರಿಸುತ್ತಾರೆ. ಅದು ಅವರ ವ್ಯಕ್ತಿತ್ವ, ಗುಣ ಸ್ವಭಾವ, ಸಮಸ್ಯೆಯ ಸ್ವರೂಪ ಹಾಗೂ ಕಠಿಣ ಸಂಧರ್ಭಗಳನ್ನೆದುರಿಸಲು ಅವರಿಗಿರಬಹುದಾದ ಅನುಕೂಲ- ಅನಾನುಕೂಲಗಳ ಒಟ್ಟು ಮೊತ್ತದ ಮೇಲೆ ಅವಲಂಬಿತವಾಗಿರಬಲ್ಲದು. ಎಲ್ಲಕ್ಕಿಂತ ಮಿಗಿಲಾಗಿ ವ್ಯಕ್ತಿಯೊಳಗಿನ ಆತ್ಮವಿಶ್ವಾಸ ಲೈಫ಼್ ಸೇವಿಂಗ್ ಮೆಡಿಸಿನ್ ನಂತೆ ಕೆಲಸ ಮಾಡಬಲ್ಲದು.
ಹಾಗೇ ಗಮನಿಸಿ. ತನ್ನ ಸಮಸ್ಯೆಗಳಿಗೆ ಪರಿಹಾರದ ಎಲ್ಲಾ ಬಾಗಿಲುಗಳು ಬಂದ್ ಆಗಿವೆ ಎಂದು ತನ್ನ ಮಿತಿಯೊಳಗೇ ಆಲೋಚಿಸುವ ಕೆಲವು ನಿರಾಶಾವಾದಿಗಳ ಕಣ್ಮುಂದೆ ಧುತ್ತನೇ ಸುಳಿಯುವ ಸುಲಭವಾದ ಆಯ್ಕೆಯೆಂದರೆ ಅದು ಆತ್ಮಹತ್ಯೆ ! ಈ ಆಯ್ಕೆ ಬಹಳ ಸುಲಭ. ಏಕೆಂದರೆ ತನ್ನೆಲ್ಲಾ ಸಮಸ್ಯೆಗಳೂ ತನ್ನ ಸಾವಿನೊಂದಿಗೇ ಕೊನೆಯಾಗುತ್ತವೆಂಬ ನಂಬಿಕೆ ಹಾಗೂ ಇದನ್ನು ಬಿಟ್ಟರೆ ಯಾವುದೇ ಪರಿಹಾರದ ಮಾರ್ಗಗಳು ಕಾಣುತ್ತಿಲ್ಲವೆಂಬ ವೈಚಾರಿಕ ಕುರುಡುತನ.
ಅದೇನೇ ಇದ್ದರೂ ಆತ್ಮಹತ್ಯೆಯ ಪರಿಣಾಮ ಮಾತ್ರ ಘನ ಘೋರ. ಸ್ಯೂಸೈಡ್ ನಂತಹ ಮಹತ್ಸಾಧನೆ ಮಾಡಲಿಕ್ಕೇನಾ ಈ ಭೂಮಿ ಮೇಲೆ ಇಷ್ಟು ವರ್ಷಗಳ ಕಾಲ ತಾನು ಉಸಿರಾಡಿದ್ದು, ಅಥವಾ ತನ್ನ ಸಮಸ್ಯೆಗಳಿಗೆ ಇಷ್ಟು ದೊಡ್ಡ ಪ್ರಪಂಚದಲ್ಲಿ ಪರಿಹಾರವೇ ಇಲ್ಲವೇ… ಎನ್ನುವ ವಾಸ್ತವ ತರ್ಕ ಆತ್ಮಸಾಕ್ಷಿಯನ್ನು ಎಚ್ಚರಿಸಿ ಚುಚ್ಚಿ ಚುಚ್ಚಿ ಕೇಳುತ್ತದೆ. ತನ್ನನ್ನು ತಾನು ಕೊಂದುಕೊಳ್ಳುವುದರಿಂದ ಅಂತಿಮವಾಗಿ ಜೀವನದಲ್ಲಿ ಸಾಧಿಸಿದ್ದಾದರೂ ಏನು ಎಂಬ ಪ್ರಶ್ನೆ ಜೊತೆಗೆ ಆತ್ಮಹತ್ಯೆ ಎಂಬ ಮಹಾಪಾಪದ ಕೂಪಕ್ಕೆ ಬೀಳುವುದು ಜೀವನವನ್ನು ಎದುರಿಸಲಾಗದ ಕೈಲಾಗದ ಹೇಡಿಗಳ ಕೃತ್ಯವೆಂಬ ಮಾತೂ ಇದೆ.
ಯಾಕೋ….ಬರಹ ಗಂಭೀರವಾಯಿತು ಅನಿಸುತ್ತೆ.! ಕೆಲವೊಂದು ಸಬ್ಜೆಕ್ಟಿಗೆ ಕೈಹಾಕಿದಾಗ ಅವು ಇತಿಹಾಸದಂತೆ ಬೋರ್ ಹೊಡೆಸಬಲ್ಲವೆಂಬ ಸೆನ್ಸೂ ಹಾಗೆಯೇ ಇಂತಹ ವಿಚಾರಗಳನ್ನು ಗಂಭೀರ ಸ್ವರೂಪದಲ್ಲೇ ಹಿಡಿದಿಟ್ಟರೆ ಅದಕ್ಕೊಂದು ಗಾಂಭೀರ್ಯ ಬಂದೀತೆಂಬ ಸೈನ್ಸೂ ಇಟ್ಟುಕೊಂಡೇ ನಾಲ್ಕಕ್ಷರ ಗೀಚಿದ್ದೇನೆ.
ಆದರೂ ……ಈ ಆತ್ಮಹತ್ಯೆ ಟಾಪಿಕ್ಕು ಸಿಕ್ಕಾಪಟ್ಟೆ ಸಂಕೀರ್ಣವಾಗಿರೋದರಿಂದ ಆ ಬಗ್ಗೆ ಬೇರೆಯದೇ ಬರಹದಲ್ಲಿ ಚರ್ಚಿಸೋಣ. ನೊಂದ ಜೀವಗಳಿಗೆ ಅದನ್ನು ಬಿಟ್ಟರೆ ಬೇರೇನೂ ಆಯ್ಕೆಗಳಿಲ್ಲವೇ ಎಂಬ ಪ್ರಶ್ನೆಗೆ ಸಾಕಷ್ಟು ಪಾಸಿಟಿವ್ ಉತ್ತರಗಳಿವೆ.
ಒಂದು ಸರಳ ಸತ್ಯವೇನೆಂದರೆ, ಈ ಭೂಮಿ ಮೇಲೆ ಜನಿಸಿರುವ ಪ್ರತಿಯೊಬ್ಬರಿಗೂ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಸಮಾನವಾಗಿ, ಅಷ್ಟೇ ಮುಕ್ತವಾಗಿ ಇದ್ದೇ ಇವೆ. ಆದರೆ ಅಂತಹ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಎಂತಹದೇ ಕಷ್ಟ ಎದುರಾದರೂ ಎದೆಗುಂದದೇ ಗುರಿಸಾಧಿಸುವ ಛಲಗಾರರು ಮಾತ್ರ ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬಲ್ಲವರಾದರೆ, ಜೀವನದಲ್ಲಿ ತನ್ನ ಬಾಗಿಲಿಗೆ ಬಂದ ಸದವಕಾಶಗಳನ್ನು ಸ್ವಯಂಕೃತಾಪರಾಧದಿಂದ ಕೈ ಚೆಲ್ಲುವವರಿಗೆ ನಿರಾಶೆಯೆಂಬುದು ಬೆನ್ನು ಹತ್ತಿ ಸವಾರಿ ಮಾಡುತ್ತದೆ. ಇದು ಜೀವನದ ಸಿಂಪಲ್ ಅರಿಥ್ ಮೆಟಿಕ್ ಅಂತಾದರೆ , ಹಿಂದೆ ಮಾಡಿದ ತಪ್ಪಿನಿಂದ ಪಾಠ ಕಲಿತು ಮುಂದೆ ಎಚ್ಚರಿಕೆವಹಿಸಿ ಹೆಜ್ಜೆ ಇಡುವ ಮನೋಭಾವ ಬೆಳೆಸಿಕೊಂಡಲ್ಲಿ ಅದು ಬದುಕಿನ ಆಲ್ ಜ಼ೀಬ್ರಾ !!
ಪ್ರಪಂಚ ವಿಶಾಲವಾಗಿದೆ. ಕಷ್ಟಗಳನ್ನೆದುರಿಸುವ ಗುಂಡಿಗೆ ಇರುವವರಿಗೆ, ಛಲ, ಶ್ರದ್ಧೆ, ನಿಯ್ಯತ್ತು ಹಾಗೂ ಸ್ಪಷ್ಟ ಗುರಿ- ದಿಟ್ಟ ಹೆಜ್ಜೆ ಇರುವವರಿಗೆ ಸವಾಲುಗಳನ್ನೆದುರಿಸುವುದೇ ಅಭ್ಯಾಸವಾಗಿ ಬಿಡುತ್ತದೆ. ಹಾಗಂತ ಕೇವಲ ಈ ಅಂಶಗಳಿದ್ದರೆ ಸಾಲದು. ಮುಖ್ಯವಾಗಿ ಸವಾಲುಗಳನ್ನೆದುರಿಸಲು ಬೇಕಾದ ಸಂಪನ್ಮೂಲಗಳು, ಆ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಬೇಕಾದ ಜಾಣ್ಮೆ, ತಕ್ಕಮಟ್ಟಿಗೆ ಪ್ರತಿಭೆ ಹಾಗೂ ಸಂಧರ್ಭಕ್ಕನುಸಾರವಾದ ಸಮರ್ಥ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಎಲ್ಲವೂ ಬೇಕು.
ನೆನಪಿಡಿ….ಈ ಎಲ್ಲದಕ್ಕೂ ಕಳಸವಿಟ್ಟಂತೆ ನಿಮ್ಮೊಳಗಿನ ಆತ್ಮವಿಶ್ವಾಸವೆಂಬುದು ಸದಾ ಕ್ರಿಯಾಶೀಲವಾಗಿದ್ದಾಗ ಮಾತ್ರವೇ ಬದುಕಿನ ಸವಾಲುಗಳನ್ನೆದುರಿಸುವ ಪಾಸಿಟಿವ್ ಮೈಂಡ್ ಸೆಟ್ ತಾನೇ ತಾನಾಗಿ ರೂಪುಗೊಳ್ಳಬಹುದು. ಪ್ರಕೃತಿಯ ಮಡಿಲಲ್ಲಿ ಎಲ್ಲವೂ ಸಿಗುವಂತೆ, ಮನುಷ್ಯ ಮನಸ್ಸು ಮಾಡಿದರೆ ತನ್ನೊಳಗೆ ಅಥವಾ ತನ್ನೆದುರಿಗೇ ಇರುವ. ಈ ಎಲ್ಲಾ ಅಂಶಗಳನ್ನು ಒಲಿಸಿಕೊಳ್ಳಬಹುದಾದ್ದರಿಂದ ಇಂದಿನ ಕಡುಕಷ್ಟಗಳಿಗೆ ನಾಳೆಯ ಸುಂದರ ಭವಿಷ್ಯದ ಕನಸೇ ಉತ್ತರವಾಗಬಲ್ಲದು. ಇಂದಿನ ದಿಕ್ಕೆಟ್ಟ ಪರಿಸ್ಥಿತಿ ನಿಮ್ಮದಿರಬಹುದು, ನೋವೇ ಹೆಚ್ಚಾಗಿರಬಹುದು, ಬರೀ ನಿರಾಶೆಯೇ ತುಂಬಿರಬಹುದು…..ಆದರೆ
ಈ ಜಗತ್ತಿನಲ್ಲಿ ಯಾವೊಬ್ಬ ಮನುಷ್ಯನ ಬದುಕೂ ನಿಕೃಷ್ಠವಲ್ಲ, ಯಾವೊಬ್ಬ ಜೀವಿಯ ಜೀವನವೂ ಕೇವಲ ದುರಂತವೂ ಅಲ್ಲ ದೌರ್ಭಾಗ್ಯವೂ ಅಲ್ಲ. ತೀರಾ ಸೊನ್ನೆಯಿಂದ ಬದುಕು ಕಟ್ಟಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಿರುವ ಸಾವಿರಾರು ಉದಾಹರಣೆಗಳು ಜೀವಂತ ಸದೃಶವಾಗಿ ನಮ್ಮೆದುರಿಗೇ ಇರುವಾಗ, ಅದನ್ನು ಪ್ರೇರೇಪಣೆಯೆಂದು ಸ್ವೀಕರಿಸಿ ತಾನೂ ಅದರಂತೆ ಮೇಲೇಳುವ ಯತ್ನವೇಕೆ ಮಾಡಬಾರದು ?
ಕಷ್ಟಗಳು, ನೋವು- ನಿರಾಶೆಗಳು ಸದಾ ಒಂದೆಡೆ ನಿಲ್ಲದೇ ಮೋಡಗಳಂತೆ ಚಲಿಸುತ್ತಲೇ ಇರುತ್ತವೆ. ಇಂದಿನ ಕಷ್ಟ ಕಳೆದು ನಾಳಿನ ಸುಂದರ ಬದುಕಿನ ಮುನ್ನುಡಿಗೆ ಬದುಕು ಮುಖಾಮುಖಿಯಾಗಲೇಬೇಕು. ಈ ಸರಳ ಲಾಜಿಕ್ ಅರ್ಥಮಾಡಿಕೊಂಡರೆ ಅಂಥವರ ಬಾಳಲ್ಲಿ ಎಂತಹದೇ ಕಷ್ಟಗಳು, ಹತ್ತಾರು ಕಗ್ಗಂಟಿನ ಸಮಸ್ಯೆಗಳು ಬಂದರೂ, ಕಣ್ಣೆದುರಿಗೆ ನೇಣಿನ ಹಗ್ಗ, ವಿಷದ ಬಾಟಲ್, ಭೋರ್ಗರೆವ ಸಮುದ್ರ , ರೈಲಿನ ಹಳಿಗಳು, ಎತ್ತರದ ಅಪಾರ್ಟ್ಮೆಂಟ್, ನಿದ್ರೆ ಮಾತ್ರೆ… ಇತ್ಯಾದಿ ಸಾವಿನ ಕದ ತಟ್ಟುವ ನಕಾರಾತ್ಮಕ ಚಿಂತನೆಗಳು ಬಳಿಸಾರವು.
ನಿಮ್ಮ ಬದುಕನ್ನು ನಿಮ್ಮ ಆಶಯದಂತೆ ರೂಪಿಸಿಕೊಳ್ಳುವ ಯೋಚನೆ- ಯೋಜನೆ ನಿಮ್ಮ ಮೆದುಳಲ್ಲೇ ಇದೆ. ಅದಕ್ಕೊಂದಷ್ಟು ಧನಾತ್ಮಕ ಚಿಂತನೆಗಳನ್ನು ತುಂಬಿ ಕ್ರಿಯಾಶೀಲವಾಗಿರಿಸಿ ಸಾಕು ! ಮಿಕ್ಕ ದಾರಿಯನ್ನು ಅದೇ ತೋರಿಸಬಲ್ಲದು.!
ಪ್ರೀತಿಯಿಂದ…..
ಹಿರಿಯೂರು ಪ್ರಕಾಶ್.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು