ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತು ಮತ್ತೆ ಹೊತ್ತಿರುವ ಕಿಡಿ ಇನ್ನಷ್ಟು ಜೋರಾಗುವ ಸಾಧ್ಯತೆ ಕಂಡುಬರುತ್ತಿದೆ.
‘ಕರ್ನಾಟಕದ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಆತ್ಮಸಾಕ್ಷಿಯಾಗಿ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆಯೇ ಹೊರತು ಸಚಿವನಾಗುವುದಕ್ಕೆ ಯಾರದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ. ಅದು ನನ್ನ ಜಾಯಮಾನ ಅಲ್ಲ’ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಉತ್ತರ ಕರ್ನಾಟಕದವರೊಬ್ಬರು ಅಧಿಕಾರಕ್ಕೆ ಏರಲಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಉತ್ತರ ಕರ್ನಾಟಕದವರೇ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಗಾದಿಗೆ ಏರುವುದು ಖಚಿತ. ಉತ್ತರ ಕರ್ನಾಟಕದವರನ್ನೇ ಸಿಎಂ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ಯತ್ನಾಳ್ ಅವರ ಹೇಳಿಕೆಗೆ ಪಕ್ಷದ ಅನೇಕ ನಾಯಕರ ವಿರೋಧವಿದೆ. ನಾಯಕತ್ವದಲ್ಲಿ ಬದಲಾವಣೆ ಮಾಡುವ ಯಾವ ಪ್ರಸ್ತಾಪವೂ ಕೇಂದ್ರದ ನಾಯಕರ ಮುಂದೆ ಇಲ್ಲ. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರೇ ಸಂಪೂರ್ಣ ಅವಧಿಯವರೆಗೆ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ಯತ್ನಾಳ್ ಪುನಃ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸೀಟ್ ಖಾಲಿ ಇಲ್ಲ, ಯತ್ನಾಳ್ ಅವರೇ ನೀವು ಯಡಿಯೂರಪ್ಪ ಅವರನ್ನು ಟೀಕಿಸಿದ ಮಾತ್ರಕ್ಕೆ ಅವರ ವರ್ಚಸ್ಸು ಕಡಿಮೆಯಾಗೊಲ್ಲ, ಬದಲಿಗೆ ನಿಮ್ಮ ವರ್ಚಸ್ಸು ಕಡಿಮೆಯಾಗುತ್ತೆ. ನೀವೊಬ್ಬ ಹಿರಿಯ ನಾಯಕರಾಗಿ ಇಂತಹ ಹೇಳಿಕೆಗಳು ನಿಮಗೆ ಶೋಭೆ ತರುವುದಿಲ್ಲ. ಯಡಿಯೂರಪ್ಪ ಅವರ ನಡೆಯನ್ನು ಬಿಜೆಪಿ ಹೈಕಮಾಂಡ್ ಸಹಿಸಿಕೊಳ್ಳುತ್ತಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ.
ಯತ್ನಾಳ್ ಅವರು ಸ್ವಾರ್ಥಕ್ಕಾಗಿ ಹೇಳಿಕೆ ಕೊಡುತ್ತಿದ್ದಾರೆಯೇ ವಿನಾ ಅದು ಉತ್ತರ ಕರ್ನಾಟಕ ಭಾಗದ ಶಾಸಕರ ಹೇಳಿಕೆ ಅಲ್ಲ. ಅವರು ಮುಖ್ಯಮಂತ್ರಿಯಾಗಲು ಹಗಲುಗನಸು ಕಾಣುತ್ತಿದ್ದಾರೆ. ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಆಲದ ಮರದ ಇದ್ದಂತೆ. ಆಲದ ಮರದ ಕೆಳಗೆ ಇದ್ದು ನಾವು ರಾಜಕಾರಣ ಮಾಡಬೇಕು ಎಂದಿದ್ದಾರೆ.
ಉತ್ತರ ಕರ್ನಾಟಕ ಭಾಗದವರನ್ನು ಸಿಎಂ ಮಾಡುವ ಬಗ್ಗೆ ಚರ್ಚೆಯಾಗಿಲ್ಲ. ಯಾರೇ ಇಂತಹ ಹೇಳಿಕೆ ನೀಡಿದರೂ ಪಕ್ಷ ಸೂಕ್ಷ್ಮವಾಗಿ ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಯತ್ನಾಳ್ ಹೇಳಿಕೆಯಲ್ಲಿ ಬಿಜೆಪಿಯ ಯಾವುದೇ ನಾಯಕರ ಪಾತ್ರ ಇಲ್ಲ. ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಅಭಿವೃದ್ಧಿಯ ವಿಷಯದಲ್ಲಿ ಯಡಿಯೂರಪ್ಪ ಯಾರಿಗೂ ತಾರತಮ್ಯ ಮಾಡಿಲ್ಲ ಎಂದು ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ