November 22, 2024

Newsnap Kannada

The World at your finger tips!

sanskrit

ವಿಶ್ವ ಸಂಸ್ಕೃತ ದಿನ World Sanskrit Day

Spread the love
  • ಇಂದು ಸಂಸ್ಕೃತ ದಿನ.

ಸಂಸ್ಕೃತವು ಭಾರತೀಯ ಪ್ರಾಚೀನ ಆರ್ಯ ಭಾಷೆಗಳ ಪೈಕಿ ಒಂದು. ಇದು ಗೀರ್ವಾಣ ಭಾಷೆ ಎಂದೂ ಖ್ಯಾತಿ ಪಡೆದಿದೆ. ಈ ಭಾಷೆಗೆ ಸುಮಾರು ಐದುಸಾವಿರ ವರ್ಷಗಳ ಸಮೃದ್ಧವಾದ ಇತಿಹಾಸವಿದೆ.

ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಸಂಸ್ಕೃತ, ಪ್ರಾಚೀನ ಪರ್ಷಿಯನ್, ಗ್ರೀಕ್, ಲ್ಯಾಟಿನ್, ಜರ್ಮನ್ ಮತ್ತು ಇಂಗ್ಲಿಷ್ ಮೊದಲಾದ ಭಾಷೆಗಳ ತೌಲನಿಕ ಅಧ್ಯಯನ ನಡೆಯಿತು. ಇದರ ಫಲವಾಗಿ ತೌಲನಿಕ ಭಾಷಾವಿಜ್ಞಾನಿಗಳು ಇವೆಲ್ಲವನ್ನು ಸಮಾನವಾದ ಮೂಲವೊಂದಕ್ಕೆ ಸಂಬಂಧಿಸಬಹುದೆಂದೂ ಅದನ್ನು ಪ್ರೋಟೋ ಇಂಡೊಯೂರೋಪಿಯನ್ ಎಂದು ಕರೆಯಬಹುದೆಂದೂ ತಮ್ಮ ಅಧ್ಯಯನಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಪ್ರಾಚೀನರೂಪ, ಅದರ ಮೊದಲ ಸಂತತಿಗಳಾದ ಸಂಸ್ಕೃತ ಮತ್ತು ಗ್ರೀಕನ್ನು ಬಹುಪಾಲು ಹೋಲುತ್ತಿದ್ದಿರಬಹುದೆಂದು ಊಹಿಸಲಾಗಿದೆ. ಸಂಸ್ಕೃತಭಾಷೆ ಪ್ರೋಟೋ ಇಂಡೊ ಯೂರೋಪಿಯನ್ ಭಾಷೆಯ ಅನೇಕ ಭಾಷಿಕ ಅಂಶಗಳನ್ನು ತನ್ನ ಧ್ವನಿವ್ಯವಸ್ಥೆ ಮತ್ತು ವ್ಯಾಕರಣ ವಿಚಾರದಲ್ಲಿ ಉಳಿಸಿಕೊಂಡಿದೆ.

ಸಂಸ್ಕೃತದದ ಚಾರಿತ್ರಿಕ ಬೆಳೆವಣಿಗೆಯನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಇಂಡೊಯೂರೋಪಿಯನ್ (ಇಂಡೊಆರ್ಯನ್) ಎಂಬ ಮೂರು ಅವಸ್ಥೆಗಳಲ್ಲಿ ಗುರುತಿಸಬಹುದು.

  1. ಪ್ರಾಚೀನಕಾಲ (ಕ್ರಿ.ಪೂ. 2000ದಿಂದ):

ಒಂದು ಸಾವಿರ ಶ್ಲೋಕಗಳ ಸಂಗ್ರಹವಾದ ಋಗ್ವೇದವೇ ಅತ್ಯಂತ ಪ್ರಾಚೀನವಾದ ವೈದಿಕ ಸಾಹಿತ್ಯಭಾಗ. ಅಭಿಜಾತದ ಭಾಷೆ ವೈದಿಕ ಪಾಠಕ್ಕಿಂತ ಭಿನ್ನವಾದ ಅನಂತರದ ರೂಪ.

  1. ಮಧ್ಯಕಾಲೀನ (ಕ್ರಿ.ಪೂ. 500 ರಿಂದ ಕ್ರಿ.ಶ. 1000):

ಪಾಲಿ ಮತ್ತು ಪ್ರಾಕೃತಭಾಷೆಗಳು ಪ್ರಚಲಿತವಾದವು. ಸಂಸ್ಕೃತದ ಕೆಲವು ಸ್ವರಗಳನ್ನು ಲೋಪಗೊಳಿಸುವುದು, ವಿಜಾತೀಯಾಕ್ಷರಗಳನ್ನು ಸಜಾತೀಯವಾಗಿಸುವುದು, ಪಾಲಿ ಮತ್ತು ಪ್ರಾಕೃತಗಳೆರಡಕ್ಕೂ ಇರುವ ಪ್ರಮುಖ ಲಕ್ಷಣ. ಪ್ರಾಕೃತಗಳು ವೈದಿಕ ಭಾಷೆಯ ಸಹಜವಾದ ಮತ್ತು ಪ್ರಾದೇಶಿಕವಾದ ಬೆಳೆವಣಿಗೆಗಳಾಗಿ, ಅಭಿಜಾತ ಸಂಸ್ಕೃತದೊಡನೆ ಸಹಬಾಳ್ವೆ ನಡೆಸಿದವು. ಮಹಾರಾಷ್ಟ್ರೀ (ದಕ್ಷಿಣ), ಶೌರಸೇನಿ(ಮಧ್ಯ), ಮಾಗಧೀ(ಪೂರ್ವ), ಪೈಶಾಚೀ(ಉತ್ತರ)-ಇವು ಕ್ಲಾಸಿಕಲ್ ಪ್ರಾಕೃತ ಭಾಷಾರೂಪಗಳು. ಅರ್ಧಮಾಗಧಿ ಪ್ರಾಕೃತ ಎಂಬುದು ಮತ್ತೊಂದು ಪ್ರಮುಖ ರೂಪ. ಇದು ಮಾಗಧಿ ಮತ್ತು ಶೌರಸೇನಿ ಇವೆರಡರ ಲಕ್ಷಣಗಳನ್ನೂ ಒಳಗೊಂಡಿದೆ. ಸಂಸ್ಕೃತ ನಾಟಕಗಳಲ್ಲಿ ಸ್ತ್ರೀಯರೂ ಸಾಮಾಜಿಕವಾಗಿ ಕೆಳವರ್ಗಕ್ಕೆ ಸೇರಿದ ವ್ಯಕ್ತಿಗಳೂ ಆಡುವ ಮಾತುಗಳಲ್ಲಿ ಪ್ರಾಕೃತವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸೇತುಬಂಧನ, ಗಾಥಾಸಪ್ತಶತಿ ಎಂಬ ಕೃತಿಗಳು ಮಹಾರಾಷ್ಟ್ರೀ ಪ್ರಾಕೃತದಲ್ಲಿ ರಚನೆಗೊಂಡಿವೆ. ಮಹಾರಾಷ್ಟ್ರೀಯಲ್ಲಿ ಸಾಹಿತ್ಯಸೃಷ್ಟಿ ವಿಪುಲವಾಗಿದೆ. ಕರ್ಪೂರ ಮಂಜರೀ ಎಂಬ ಕೃತಿಯ ಗದ್ಯ ಸಂಪೂರ್ಣವಾಗಿ ಶೌರಸೇನಿ ಪ್ರಾಕೃತದಲ್ಲಿದೆ. ಅರ್ಧಮಾಗಧಿಯಲ್ಲಿ ಜೈನರ ಪವಿತ್ರ ಧರ್ಮಗ್ರಂಥಗಳು ರಚಿತವಾಗಿವೆ.

  1. ಆಧುನಿಕ ಕಾಲ (1000 ದಿಂದ):

ಪ್ರತಿಯೊಂದು ಗ್ರಾಂಥಿಕ ಪ್ರಾಕೃತವೂ ಅಪಭ್ರಂಶವೆಂಬ ಆಡುಮಾತಿನ ರೂಪಗಳ ಉಗಮಕ್ಕೆ ಕಾರಣವಾಯಿತು. ಉತ್ತರ ಭಾರತದಲ್ಲಿ ಬಳಕೆಯಲ್ಲಿರುವ ದೇಶಭಾಷಾ ರೂಪಗಳು ಸರಳವಾಗಿ ಆಧುನಿಕ ಇಂಡೊಆರ್ಯನ್ ಭಾಷಾವರ್ಗಕ್ಕೆ ಸೇರಿದವು. ಇವೆಲ್ಲ ಅಪಭ್ರಂಶದಿಂದ ಜನಿಸಿದವು. ಮರಾಠಿ ಭಾಷೆ, ಮಹಾರಾಷ್ಟ್ರೀ ಅಪಭ್ರಂಶದಿಂದ ಉಗಮಗೊಂಡು ವಿಕಾಸ ಪಡೆದಿದೆ.

ಸಂಸ್ಕೃತದ ಪಾಣಿನಿ ವ್ಯಾಕರಣ ಪ್ರಪಂಚ ಪ್ರಸಿದ್ಧಿ ಗಳಿಸಿದೆ. ಸೂತ್ರಶೈಲಿಯ ಅನ್ವೇಷಣೆ, ಭಾಷೆಯ ಅಂತ್ಯಾವಯವ ವಾಕ್ಯವೇ ಹೊರತು ಶಬ್ದವಲ್ಲವೆಂಬ ಸಿದ್ಧಾಂತ, ಶಬ್ದಗಳನ್ನು ಸುಬನ್ತ, ತಿಙನ್ತ, ಅವ್ಯಯಗಳೆಂದು ವಿಭಾಗಿಸಿರುವ ಕ್ರಮ, ಸ್ಥಾನ-ಪ್ರಯತ್ನ ವಿವೇಕ, ಲೌಕಿಕ ಮತ್ತು ಸಂಸ್ಕೃತ ಪದಗಳ ತೌಲನಿಕ ಅಧ್ಯಯನ – ಇವು ಪಾಣಿನಿ ವ್ಯಾಕರಣದ ಕೆಲವು ವೈಶಿಷ್ಟ್ಯಗಳು. ಇವುಗಳಿಂದ ಇಂದಿನ ಭಾಷಾವಿಜ್ಞಾನಕ್ಕೂ ಸ್ಫೂರ್ತಿ ಸಿಕ್ಕಿದೆ. ಪಾಣಿನಿ ಮತ್ತು ಅವನ ವಿಚಾರಗಳನ್ನು ಒಪ್ಪಿದ, ಅನುಮೋದಿಸಿದ ವಿದ್ವಾಂಸರು ಶುದ್ಧವಾದ ಸಂಸ್ಕೃತ ಭಾಷೆ ಹೇಗಿರಬೇಕೆಂದು ನಿಯಮಗಳನ್ನು ಮಂಡಿಸಿದ್ದರೂ ಮುಂದಿನ ತಲೆಮಾರಿನ ತಜ್ಞರ ವ್ಯಾಕರಣ ಚಟುವಟಿಕೆಗಳು ಪಾಣಿನಿಯ ಮಾರ್ಗವನ್ನು ಅತಿಕ್ರಮಿಸುವ ಹಾಗೂ ಅವನ ನಿಯಮಗಳನ್ನು ಅನ್ಯ ರೀತಿಯಲ್ಲಿ ವ್ಯಾಖ್ಯಾನಿಸುವ ರೀತಿಗಳಲ್ಲೇ ತೊಡಗಿದುವು. ಸಂಸ್ಕೃತ ಬರೆಹ ದೇವನಾಗರಿ ಲಿಪಿಯಲ್ಲಿದೆ.

ಸಂಸ್ಕೃತ ಸಾಹಿತ್ಯ ಭಾರತೀಯ ಸಾಹಿತ್ಯದ ಅತ್ಯಂತ ಪ್ರಾಚೀನ ಸಾಹಿತ್ಯ. ಇದರ ಆದಿಭಾಗವೇ ವೈದಿಕ ವಾಙ್ಮಯ. ವೇದಗಳ ಭಾಷೆಯನ್ನು ವೈದಿಕ ಸಂಸ್ಕೃತವೆಂದೂ, ಪಾಣಿನಿಯಿಂದೀಚಿನ ಭಾಷೆಯನ್ನು ಲೌಕಿಕ ಅಥವಾ ಕಾವ್ಯಸ್ಥ ಸಂಸ್ಕೃತವೆಂದೂ ವಿಭಜಿಸಲಾಗಿದೆ. ವೈದಿಕ ಸಂಸ್ಕೃತವೇ ಮುಂದೆ ಬೆಳವಣಿಗೆಯ ಹಂತಗಳಲ್ಲಿ ಕಾವ್ಯಸಂಸ್ಕೃತವಾಗಿ ಪರಿಣಮಿಸಿತು. ವೈದಿಕ ವಾಙ್ಮಯದಿಂದಲೇ ಭಾರತೀಯ ಸಾಹಿತ್ಯ ಚರಿತ್ರೆ ಆರಂಭವಾಗುತ್ತದೆ. ಮುಂದೆ ಹುಟ್ಟಿದ ಎಲ್ಲ ಲೌಕಿಕ-ಧಾರ್ಮಿಕ ಸಾಹಿತ್ಯಗಳೂ ಪ್ರತ್ಯಕ್ಷ ಇಲ್ಲವೆ ಪರೋಕ್ಷವಾಗಿ ಈ ಸಾಹಿತ್ಯರಾಶಿಗೇ ಸಂಬಂಧಪಟ್ಟಂಥವಾಗಿವೆ.

ಸಂಸ್ಕೃತ ಸಾಹಿತ್ಯವನ್ನು ಮುಖ್ಯವಾಗಿ ವೇದಗಳಯುಗ, ಇತಿಹಾಸಗಳಯುಗ, ಮಹಾಕಾವ್ಯ ಅಥವಾ ಅಭಿಜಾತಯುಗ ಎಂದು ಮೂರು ಯುಗಗಳಾಗಿ ವಿಂಗಡಿಸಲಾಗಿದೆ. ವೇದ ಸಾಹಿತ್ಯ ಕ್ರಿ.ಪೂ.1400-500ರ ವರೆಗೆ ವ್ಯಾಪಿಸಿದೆ. ಕೆಲವು ವಿದ್ವಾಂಸರು ಈ ಸಾಹಿತ್ಯದ ಉಗಮ ವನ್ನು ಕ್ರಿ.ಪೂ.2000ಕ್ಕೂ ಹಿಂದಿನದೆಂದು ಗುರುತಿಸಿದ್ದಾರೆ. ಇತಿಹಾಸ ಯುಗ ಕ್ರಿ.ಪೂ.500 ಅಥವಾ ಅದಕ್ಕೂ ಹಿಂದಿನದು. ಮಹಾಕಾವ್ಯ ಅಥವಾ ಅಭಿಜಾತಯುಗ ಪ್ರಸಿದ್ಧ ವೈಯ್ಯಾಕರಣಿ ಪಾಣಿನಿಯ ಕಾಲದಿಂದ ಅಂದರೆ ಕ್ರಿ.ಪೂ. 400ರಿಂದ ಆರಂಭಗೊಳ್ಳುತ್ತದೆಂಬುದು ವಿದ್ವಾಂಸರ ಅಭಿಪ್ರಾಯ.

ಸಾಹಿತ್ಯ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನವಾದ ವೇದಗಳೇ ಆರಂಭದ ಕಾವ್ಯಗಳೂ ಹೌದು. ಎಲ್ಲ ಧರ್ಮಶಾಸ್ತ್ರಗಳಿಗೂ ಎಲ್ಲ ದರ್ಶನಗಳಿಗೂ ಈ ಸಾಹಿತ್ಯವೇ ಮೂಲ. ವೇದಗಳೆಂದರೆ ಸ್ಥೂಲವಾಗಿ ಜ್ಞಾನಪ್ರತಿಪಾದಕ ಗ್ರಂಥಗಳು.

ಇತಿಹಾಸಗಳ ಯುಗದಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವಂತಹವು ರಾಮಾಯಣ ಮತ್ತು ಮಹಾಭಾರತಗಳು. ಇವು ಉದ್ಧಾಮ ಇತಿಹಾಸಗಳೆನಿಸಿದ್ದರೂ ರಾಮಾಯಣವನ್ನು ಆದಿಕಾವ್ಯ ಎಂದು ಕರೆಯುವುದು ಸಂಪ್ರದಾಯವಾಗಿದೆ. ಈ ಎರಡು ಕೃತಿಗಳೂ “ಯುದ್ಧಪ್ರಧಾನವಾದ ಗ್ರಂಥಗಳಾದರೂ ಇವನ್ನು ಕೇವಲ ರಾಜಕೀಯ ಪಕ್ಷ ಪ್ರತಿಪಕ್ಷಗಳ ಹೋರಾಟವೆಂದಾಗಲಿ, ಧರ್ಮಾಧರ್ಮಗಳ ಸಂಘರ್ಷವೆಂದಾಗಲಿ ಭಾವಿಸುವುದು ತಪ್ಪಾಗುವುದು. ವಾಸ್ತವಿಕವಾಗಿ ನೋಡುವುದಾದರೆ ಇವು ಸಮಸ್ತ ಭಾರತವನ್ನು ವ್ಯಾವಹಾರಿಕ ದೆಶೆಯಲ್ಲಿ ಪ್ರದರ್ಶಿಸುವ ಜೀವಂತವಾದ ಭಾರತೀಯ ಸಂಸ್ಕೃತಿಯ ದಿವ್ಯ ಜ್ಯೋತಿಗಳು” ಎಂಬ ಅಭಿಪ್ರಾಯವಿದೆ. ಕಾಲದೃಷ್ಟಿಯಿಂದ ಸಾಹಿತ್ಯ ದೃಷ್ಟಿಯಿಂದಲೂ ಇವುಗಳ ರಚನೆ ಅತ್ಯದ್ಭುತ. ಸಕಲ ಜೀವಿಗಳ ಮೂಲಭೂತ ಆದರ್ಶದ ಅಗತ್ಯತೆಗಳು ಇದರಲ್ಲಿ ಅಡಕಗೊಂಡಿವೆ. ಅನಂತರದ ಅರ್ವಾಚೀನ ಕವಿಗಳೂ ನಾಟಕಕಾರರೂ ಆದ ಅಶ್ವಘೋಷ, ಭಾಸ, ಬಾಣ, ಮುರಾರಿ, ಮಾಘ, ಭಾರವಿ ಮೊದಲಾದ ಅನೇಕರಿಗೆ ಆಕರಗ್ರಂಥಗಳಾಗಿರುವುದು ರಾಮಾಯಣ ಮತ್ತು ಮಹಾಭಾರತಗಳ ವೈಶಿಷ್ಟ್ಯ. ಈ ಮಹಾಕಾವ್ಯಗ ಳನ್ನು ಆಧರಿಸಿ ರಚನೆಗೊಂಡ ಸಾಹಿತ್ಯವೂ ವಿಪುಲವಾಗಿದೆ.“ರಕ್ಷಾಬಂಧನ- ಸಹೋದರತ್ವದ ಪವಿತ್ರ ಹಬ್ಬ”

ಇತಿಹಾಸದಲ್ಲಿ ಪುರಾಣಗಳಿಗೆ ವಿಶೇಷ ಸ್ಥಾನವಿದೆ. ಪ್ರಾಚೀನ ಭಾರತದ ಸಂಸ್ಕೃತಿ, ನಾಗರಿಕತೆಗಳು, ವೇದಗಳ ಮಹತ್ತ್ವ ಈ ಎಲ್ಲವನ್ನೂ ಅರಿಯುವಲ್ಲಿ ಪುರಾಣಗಳು, ಅತ್ಯಂತ ಸಹಕಾರಿಗಳಾಗಿವೆ; 18 ಪುರಾಣಗಳು ಪ್ರಸಿದ್ಧವಾಗಿವೆ. ಹಿಂದುಧರ್ಮಕ್ಕೆ ಅನ್ವಯವಾಗುವ ವಿಗ್ರಹಾರಾಧನೆ, ಈಶ್ವರವಾದ, ವಿಶ್ವದೇವೈಕವಾದ, ನಂಬಿಕೆ, ಹಬ್ಬ ಹರಿದಿನ, ವ್ರತೋತ್ಸವಗಳು, ನೀತಿ ನಿಯಮ, ಹಲವಾರು ರಾಜವಂಶಗಳ ಚರಿತ್ರೆ ಎಲ್ಲವನ್ನೂ ಒಳಗೊಂಡಿರುವ ಇವು ಸಂಸ್ಕೃತ ಸಾಹಿತ್ಯ ಬೆಳೆವಣಿಗೆಯ ಇತಿಹಾಸದಲ್ಲಿ ಮಹತ್ತ್ವದ ಪಾತ್ರವಹಿಸಿವೆ.

tiru shridhar

ತಿರು ಶ್ರೀಧರ

Copyright © All rights reserved Newsnap | Newsever by AF themes.
error: Content is protected !!