ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದರುವ ಮಹಿಳಾ ಪೊಲೀಸ್‌ಗಳ ಸೇವಾ ದಕ್ಷತೆ ಉತ್ತಮವಾಗಿದೆ. ಹಾಗಾಗಿ ಮಹಿಳೆಯರಿಗೆ ಪೊಲೀಸ್ ಸೇವೆಗೆ ಸೇರಲು ಇನ್ನೂ ಹೆಚ್ಚು ಉತ್ತೇಜಿಸಬೇಕಿದೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ವಿಪುಲ್ ಕುಮಾರ್ ಹೇಳಿದರು.
ಮಂಗಳವಾರ ಸಿ.ಆರ್ ಕವಾಯತು ಮೈದಾನದಲ್ಲಿ ನಡೆದ ಮೈಸೂರಿನ ಪೊಲೀಸ್ ತರಬೇತಿ ಶಾಲೆಯ ೫ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸ್ಟೇಬಲ್, ರೈಲ್ವೇಸ್ ಮತ್ತು ಕೆಎಸ್‌ಐಎಸ್‌ಎಫ್ ಪ್ರಶಿಕ್ಷಣಾರ್ಥಿಗಳ ಹಾಗೂ ಮೈಸೂರು ನಗರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ೨ ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಲೀಸ್ ಸೇವೆಗೆ ತನ್ನದೇ ಆದ ಹಿರಿಮೆಯಿದೆ. ಎಲ್ಲರಿಗೂ ಜನರ ಸೇವೆ ಮಾಡಲು ಅವಕಾಶ ಸಿಗುವುದಿಲ್ಲ. ಆದರೆ ನಮಗೆ ಅಂತಹ ಅವಕಾಶ ದೊರೆತಿರುವುದನ್ನು ಉತ್ತಮ ಅವಕಾಶ ಎಂದು ಭಾವಿಸಬೇಕು ಎಂದು ಹೇಳಿದರು.
ಪೊಲೀಸ್ ಸೇವೆಗೆ ಸೇರಿದ ಮೇಲೆ ನಾವು ಯಾವ ಹುದ್ದೆಯಲ್ಲಿ ಇದ್ದೇವೆ ಎಂಬುದನ್ನು ಮರೆತು, ಸಮಸ್ಯೆ ಹೊತ್ತು ಬರುವ ಜನರಿಗೆ ಸ್ಪಂದಿಸಬೇಕು. ಜನರ ಸಮಸ್ಯೆ ಪರಿಹರಿಸುವುದೇ ನಮ್ಮ ಗುರಿಯಾಗಿರಬೇಕು ಎಂದರು.
ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಶಿವರಾಜು ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಿರ್ಗಮನ ಪಥ ಸಂಚಲನದಲ್ಲಿ ಶಿಸ್ತಿನ ಹೆಜ್ಜೆ ಹಾಕುವ ಮೂಲಕ ಪ್ರಶಿಕ್ಷಣಾರ್ಥಿಗಳು ನಡೆಸಿದ ಆಕರ್ಷಕ ಫಥ ಸಂಚಲನವು ಎಲ್ಲರ ಮೆಚ್ಚುಗೆ ಪಾತ್ರವಾಯಿತು.
ತರಬೇತಿ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬೆಂಗಳೂರಿನ ಎಂ. ಅನಿತಲಕ್ಷ್ಮಿ ಅವರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ನೀಡಲಾಯಿತು.
ಬಹುಮಾನ ಪಡೆದವರ ಪಟ್ಟಿ ಇಂತಿದೆ:
ಒಳಾಂಗಣ ಪ್ರಶಸ್ತಿ : ಸಿ.ಆರ್. ಆಶಾ (ಪ್ರಥಮ), ಎಂ. ಅನಿತ ಲಕ್ಷ್ಮಿ (ದ್ವಿತೀಯ), ಬಿ.ಎಂ. ಪುಷ್ಪಾವತಿ (ತೃತೀಯ),
ಹೊರಾಂಗಣ ಪ್ರಶಸ್ತಿ: ಸಿ.ಆರ್. ಮಮತ( ಪ್ರಥಮ), ಟಿ.ಎಸ್.ಕುಸುಮ (ದ್ವೀತಿಯ), ಪಿ. ಚೈತ್ರ (ತೃತೀಯ),
ರೈಫಲ್ ಶೂಟಿಂಗ್ ಪ್ರಶಸ್ತಿ : ಸುಷ್ಮಾ ಪಟಗಾರ್ (ಪ್ರಥಮ), ಕವಿತ ಪೂಜಾರಿ (ದ್ವಿತೀಯ), ಕೆ.ಟಿ. ಅಕ್ಷತ (ತೃತೀಯ).
ಈ ವೇಳೆ ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಸಿಪಿ ಪ್ರಕಾಶ್ ಗೌಡ, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣೀದೇವಿ ಮಾಲಗತ್ತಿ ಇತರರು ಉಪಸ್ಥಿತರಿದ್ದರು.
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ