ಒಲಿಂಪಿಕ್ ಕ್ರೀಡಾ ಪದಕಗಳನ್ನು ಹೊತ್ತು ಬಾ ಇಂಡಿಯಾ ಇಂಡಿಯಾ ಇಂಡಿಯಾ…….ಅಹಹಹಹಹಾ……
ಎಲ್ಲೆಲ್ಲೂ ಮೊಳಗುತ್ತಿದೆ ದೇಶ ಪ್ರೇಮದ ಕೂಗು…
ಯುದ್ದ ಕಾಲೇ ಶಸ್ತ್ರಾಭ್ಯಾಸ….
ಸ್ವಲ್ಪ ತಾಳ್ಮೆಯಿಂದ ಯೋಚಿಸಿ ನೋಡಿ….
ಭಾವನೆಗಳನ್ನು ಬದಿಗಿಡಿ….
ಎಲ್ಲಿದೆ ನಮ್ಮಲ್ಲಿ ಕ್ರೀಡಾ ಸಂಸ್ಕೃತಿ,
ಎಲ್ಲಿದೆ ನಮ್ಮಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ,
ಎಲ್ಲಿದೆ ನಮ್ಮಲ್ಲಿ ವಿಶ್ವದರ್ಜೆಯ ಆಹಾರದ ಗುಣಮಟ್ಟ,
ಎಲ್ಲಿದೆ ನಮ್ಮಲ್ಲಿ ಆಧುನಿಕ ತರಬೇತಿಯ ತಂತ್ರಜ್ಞಾನ,
ಎಲ್ಲಿದೆ ನಮ್ಮಲ್ಲಿ ಕ್ರೀಡೆಗೆ ಪೂರಕ ವಾತಾವರಣ………
ಜಾತಿ ವ್ಯವಸ್ಥೆ ದೇಶದ ಬಹುತೇಕ ಜನರ ರಕ್ತದಲ್ಲಿ ಸೇರಿ ಹೋಗಿದೆ,
ಭ್ರಷ್ಟಾಚಾರ ನರನಾಡಿಗಳಲ್ಲಿ ಬೆರೆತು ಹೋಗಿದೆ.
ಕ್ರೀಡೆ ಎಂಬುದು ರಾಜಕೀಯವಲ್ಲ. ಅಲ್ಲಿ ಸಂಖ್ಯೆಗೆ ಭಾವನೆಗಳಿಗೆ ಮಾತುಗಳಿಗೆ ಬೆಲೆ ಇಲ್ಲ. ಅದು ದೇಹ ಮತ್ತು ಮನಸ್ಸುಗಳ ಅತ್ಯುತ್ತಮ ಸಮನ್ವಯದ ಕ್ರಿಯೆ.
ಕೇವಲ ಆ ಕ್ಷಣದ ಪ್ರೋತ್ಸಾಹದಿಂದ ಯಾವುದೇ ಕ್ರೀಡೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಅದೊಂದು ನಿರಂತರ ತಪಸ್ಸು. ಅದೊಂದು ಸಂಸ್ಕೃತಿ. ಅದೊಂದು ಜೀವನ ವಿಧಾನ.
ಇಡೀ ಸಮಾಜ ಅದಕ್ಕೆ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ.
ಗೆದ್ದು ಬಾ ಎಂಬುದು ಕೇವಲ ನಮ್ಮ ಆಶಯ ಮತ್ತು ಆಸೆ.
ಗೆದ್ದು ಬಾ ಎಂದು ಇಂದು ಘೋಷಣೆ ಕೂಗುವವರು ಗೆಲ್ಲದಿರಲು ಈ ದೇಶದ ಸಾಮಾಜಿಕ ಅಸಮಾನತೆ ಕಾರಣ ಅದಕ್ಕೆ ನಾವು ಕೂಡ ಹೊಣೆ ಎಂಬುದನ್ನು ಮರೆತಿರುತ್ತಾರೆ. ಹಾಗೆ ಶುಭ ಹಾರೈಸುವವರು ಗೆಲ್ಲದಿರಲು ನಮ್ಮ ಭ್ರಷ್ಟಾಚಾರದ ಮನೋಭಾವ ಬಹುಮುಖ್ಯ ಕಾರಣ ಎಂಬುದನ್ನು ಮರೆತಿರುತ್ತಾರೆ.
2016 ವರೆಗೆ ಅಂದರೆ ಈಗಿನ ಟೋಕಿಯೋ ಒಲಿಂಪಿಕ್ ಗೆ ಮೊದಲು ಇಡೀ ಒಲಿಂಪಿಕ್ ಇತಿಹಾಸದಲ್ಲಿ ಅಮೆರಿಕ ಒಟ್ಟು 2553 ಪದಕಗಳನ್ನು ಗಳಿಸಿದೆ. ನಂತರದಲ್ಲಿ ರಷ್ಯಾ ಬ್ರಿಟನ್ ಸ್ಥಾನ ಗಳಿಸಿವೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಭಾರತ ಇಲ್ಲಿಯವರೆಗೆ ಕೇವಲ 28 ಪದಕಗಳನ್ನು ಮಾತ್ರ ಗಳಿಸಿದೆ. ಇದು ನಮ್ಮ ಸಾಧನೆ. ಬಹುಶಃ 2021 ರ ಟೋಕಿಯೋ ಒಲಿಂಪಿಕ್ ನಲ್ಲಿ ಚಿನ್ನದ ಬೇಟೆಯಲ್ಲಿ ಚೀನಾ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಹಿಂದಿಕ್ಕುವ ಸಾಧ್ಯತೆ ಇದೆ.
ಇದಕ್ಕೆಲ್ಲ ಕಾರಣ ಆ ದೇಶದ ಜನರ ಒಟ್ಟು ದೈಹಿಕ ಮತ್ತು ಮಾನಸಿಕ ವ್ಯಕ್ತಿತ್ವ ಹಾಗು ಇಲ್ಲಿನ ಆಡಳಿತ ವ್ಯವಸ್ಥೆ.
ಭಾರತದಲ್ಲಿ ಕೇವಲ ಕ್ರೀಡೆ ಮಾತ್ರವಲ್ಲ ಯಾವುದೇ ಕ್ಷೇತ್ರದಲ್ಲಿ ವಿಶಾಲ ಮನೋಭಾವದ ಕೊರತೆ ಎದ್ದು ಕಾಣುತ್ತದೆ. ಸಣ್ಣ ತನ ಅಸೂಯೆ ಬಹುತೇಕ ಜನರನ್ನು ಆಕ್ರಮಿಸಿದೆ. ಫಲಿತಾಂಶಗಳ ಆಧಾರದ ಮೇಲೆ, ಹಣ ಅಧಿಕಾರ ಪ್ರಚಾರದ ಆಧಾರದ ಮೇಲೆ ಯಶಸ್ಸನ್ನು ಅಳೆಯುವ ಮನಸ್ಥಿತಿಯೇ ಹೆಚ್ಚಾಗಿದೆ. ನಿಜವಾದ ಒಳ್ಳೆಯ ಗುಣಮಟ್ಟದ ವ್ಯಕ್ತಿತ್ವವನ್ನು ಗುರುತಿಸುವ ಪ್ರೋತ್ಸಾಹಿಸುವ ಬೆಳೆಸುವ ವ್ಯವಸ್ಥೆ ಇಲ್ಲದಂತಾಗಿದೆ.
ಗೆದ್ದು ಬಾ ಎಂದು 130 ಕೋಟಿ ಜನ ಅಲ್ಲ 700 ಕೋಟಿ ಜನ ಒಟ್ಟಿಗೆ ಕೂಗಿದರು ಹಾರೈಸಿದರು ಗೆಲ್ಲಲು ಸಾಧ್ಯವಿಲ್ಲ. ಅದಕ್ಕೆ ಅನೇಕ ವರ್ಷಗಳ ನಿರಂತರ ಕ್ರೀಡಾ ಸಂಸ್ಕೃತಿಯ ಮತ್ತು ಒಟ್ಟು ವ್ಯವಸ್ಥೆಯ ಪರಿಶ್ರಮ ಮತ್ತು ಪ್ರಾಮಾಣಿಕತೆ ದಕ್ಷತೆಯ ಅವಶ್ಯಕತೆ ಇದೆ.
ಚುನಾವಣಾ ರಾಜಕೀಯದಲ್ಲಿಯೇ ತಮ್ಮ 5/10/ ವರ್ಷಗಳ ಆಡಳಿತ ಅವಧಿಯನ್ನು ಮುಗಿಸಲು ತಮ್ಮೆಲ್ಲಾ ಸಾಮರ್ಥ್ಯ ಉಪಯೋಗಿಸುವ ಈ ಜನರಿಂದ ಪದಕ ಗೆಲ್ಲುವ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟ ಕಾಪಾಡಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಹಣ ಹಂಚಿ ಜಾತಿ ಧರ್ಮದ ಹೆಸರೇಳಿ ಗೆಲ್ಲುವವರಿಂದ, ಗೆದ್ದ ನಂತರ ಮತ್ತೆ ಹಣ ಮಾಡುವ, ವಿರೋಧಿಗಳನ್ನು ತುಳಿಯುವ ನಿರಂತರ ಕೆಲಸಗಳನ್ನೇ ಮಾಡುವ ಜನರಿಂದ ಪದಕಗಳನ್ನು ನಿರೀಕ್ಷಿಸುವುದು ಮೂರ್ಖತನ.
ಭಾರತದ ನಿಜವಾದ ಸಾಮರ್ಥ್ಯ ಉಪಯೋಗವಾದರೆ ಖಂಡಿತ ಇನ್ನು 10 ವರ್ಷಗಳಲ್ಲಿ ಒಲಿಂಪಿಕ್ ಪದಕ ಪಟ್ಟಿಯಲ್ಲಿ 10 ರ ಒಳಗಿನ ಸ್ಥಾನ ಪಡೆಯುವುದು ಕಷ್ಟವೇನಲ್ಲ. ಆದರೆ ಅದಕ್ಕಾಗಿ ಇಡೀ ವ್ಯವಸ್ಥೆಯ ಶುದ್ದೀಕರಣ ಕ್ರಿಯೆ ಆಗಬೇಕಿದೆ.
ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಒಂದು ಸಣ್ಣ ಕ್ರೀಡಾ ಸಂಕೀರ್ಣ, ತಾಲ್ಲೂಕು ಮಟ್ಟದಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಕ್ರೀಡಾಂಗಣ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ನಿರ್ಮಿಸಿ ಅತ್ಯುತ್ತಮ ತರಬೇತಿ ನೀಡುವ ಅಂದರೆ ಆಹಾರದಿಂದ ವಿಶ್ರಾಂತಿಯ ವರೆಗೆ, ಪ್ರಾರಂಭದಿಂದ ಪದಕದವರೆಗೆ, ವ್ಯಕ್ತಿಯಿಂದ ವ್ಯವಸ್ಥೆಯ ವರೆಗೆ ಎಲ್ಲವನ್ನೂ ಸರಿಪಡಿಸಬೇಕು. ಕ್ರೀಡಾ ಪಟುವಿನ ಕೌಟುಂಬಿಕ ಮಾನಸಿಕ ಆರೋಗ್ಯವನ್ನು ಸಹ ಅತ್ಯುತ್ತಮ ಮಟ್ಟದಲ್ಲಿ ಇರುವಂತೆ ವೈಯಕ್ತಿಕ ಆಸಕ್ತಿ ವಹಿಸಬೇಕು.
ಎಳವೆಯಿಂದಲೇ ಮಕ್ಕಳ ಆಸಕ್ತಿ ಮತ್ತು ಪ್ರತಿಭೆ ಗುರುತಿಸಿ ಕ್ರೀಡೆಯನ್ನೇ ಬದುಕಾಗಿಸುವ, ಅದರಿಂದ ಭವಿಷ್ಯದಲ್ಲಿ ಯಾವುದೇ ತೊಂದರೆ ಆಗದಿರುವ ಅನುಕೂಲ ವಾತಾವರಣ ನಿರ್ಮಿಸಬೇಕು. ಕೇವಲ ಉದ್ಯೋಗಕ್ಕಾಗಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿವ ಮನೋಭಾವ ಬೆಳೆಸಬಾರದು.
ಇಷ್ಟೆಲ್ಲಾ ಸಾಧ್ಯವಾದರೆ ಮಾತ್ರ ಏನಾದರೂ ಒಂದಷ್ಟು ಬದಲಾವಣೆ ಸಾಧ್ಯವಾಗಬಹುದು. ಇಲ್ಲದಿದ್ದರೆ ಗೆದ್ದು ಬಾ ಎನ್ನುವ ಕೂಗು ಒಂದು ಹಾಸ್ಯಾಸ್ಪದ ಭಾವನೆಯಾಗಬಹುದು.
ಏಕೆಂದರೆ ಕ್ರೀಡೆಗಳಲ್ಲಿ ಯಾವುದೇ ಅಡ್ಡ ದಾರಿ ಇರುವುದಿಲ್ಲ. ಕೆಟ್ಟ ರಾಜಕೀಯ ಪ್ರಭಾವ ಇರುವುದಿಲ್ಲ. ದೇಹ ಮನಸ್ಸುಗಳ ಸಮನ್ವಯ ಮಾತ್ರ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಲು ಸಾಧ್ಯ.
ನಮಗೂ ಭಾರತದ ಮಾನವ ಸಂಪನ್ಮೂಲ ಅತ್ಯುತ್ತಮ ರೀತಿಯಲ್ಲಿ ಉಪಯೋಗವಾಗಲಿ ಎಂಬ ಮಹದಾಸೆ ಇದೆ. ಆದರೆ ಅದು ಕೇವಲ ಭಾವನಾತ್ಮಕವಾಗದೆ ವಾಸ್ತವವಾಗಲಿ ಎಂಬ ಕಳಕಳಿಯಿಂದ….
- ವಿವೇಕಾನಂದ ಹೆಚ್ ಕೆ
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ