ಲಾಕ್ ಡೌನ್ ಕಾರಣದಿಂದಾಗಿ ನಗರ ಪ್ರದೇಶಗಳಲ್ಲಿ ಗಾಬರಿಯಾದ ಪ್ರಾಣಿ – ಪಕ್ಷಿ – ಕೀಟಗಳು……..

Team Newsnap
2 Min Read

ಈ ನೀರವ ಮೌನವನ್ನು ನೋಡಿ ಮನಸ್ಸಿನಲ್ಲಿ ಹೀಗೆ ಭಾವನೆ ವ್ಯಕ್ತಪಡಿಸುತ್ತಿರಬಹುದೆ……

ಮನುಷ್ಯರಿಂದ ತೊಂದರೆಗೆ ಒಳಗಾಗಿರುವ ಜೀವಿಗಳು……..
( ಗುಬ್ಬಚ್ಚಿ – ಕಾಗೆ – ಗಿಣಿ – ಹದ್ದುಗಳು …………)
” ಅರೆ ಇದೇನಿದು ಕಳ್ ನನ್ ಮಕ್ಕಳು ಎಲ್ಲಾ ಮನೆ ಒಳಗೆ ಅಡಗಿಕೊಂಡಿದ್ದಾರೆ. ಏನ್ ರೋಗ ಬಂತೋ ಏನೋ. ಒಬ್ಬನದೂ ಶಬ್ದನೇ ಇಲ್ಲ. ಏನ್ ಮೊನ್ನೆ ಮೊನ್ನೆ ವರೆಗೂ ಮೆರದಿದ್ದೇ ಮೆರದಿದ್ದು. ಪ್ರಪಂಚನೇ ನಮ್ದು, ಪ್ರಕೃತಿ ಇರೋದೆ ನಮ್ಮ ಸುಖಕ್ಕಾಗಿ ಅಂತ ಹೆಂಗಂದ್ರೆ ಹಂಗೆ ಉಪಯೋಗಿಸಿಕೊಂಡ್ರು. ನಾವು ವಾಸ ಮಾಡ್ತಾ ಇದ್ದ ಗಿಡ ಮರ ಬಳ್ಳಿ ಕೆರೆ ಜಾಗ ಎಲ್ಲಾ ಆಕ್ರಮಿಸಿಕೊಂಡು ನಮ್ಮನ್ನ ಕೇರ್ ಮಾಡ್ದೆ ಹೋಡಿಸಿಬಿಟ್ರು. ಊಟಕ್ಕೂ ಪರದಾಡ್ತ ಇದೀವಿ. ಕರುಣೆ ಇಲ್ಲದ ಜನ ಇವರಿಗೆ ಹೀಗೆ ಆಗಬೇಕು, ಸಾಯ್ಲಿ ನನ್ ಮಕ್ಳು “

ಜನರಿಂದ ಹೆಚ್ಚಿನ ತೊಂದರೆ ಆಗದೆ ಅವರು ತಿಂದು ಬಿಸಾಡಿದ ಆಹಾರದ ಮೇಲೆ ಬದುಕುತ್ತಿದ್ದ ಕೆಲವು ಜೀವಿಗಳು…….
( ಜಿರಲೆ ತಿಗಣೆ ಸೊಳ್ಳೆ ಇಲಿ………. )
” ಇದೇನಿದು, ಮನುಷ್ಯರೆಲ್ಲ ಮನೆ ಒಳಗಡೆ ಸೇರಿಕೊಂಡಿದ್ದಾರೆ. ಪಾಪ ಏನಾಯಿತೋ. ಎಷ್ಟೊಂದು ಚಟುವಟಿಕೆಯಿಂದ ನಗುನಗುತ್ತಾ ಇದ್ದರು‌. ಎಷ್ಟೊಂದು ಧೈರ್ಯವಾಗಿ ಓಡಾಡುತ್ತಿದ್ದರು. ಏನೋ ತೊಂದರೆ ಆಗಿದೆ. ಕಾರು ಬೈಕು ಸೈಕಲ್ಲು ಎಲ್ಲಾ ಹಾಗೆ ನಿಲ್ಲಿಸಿದ್ದಾರೆ. ಅವರು ಹೊರಗೆ ಓಡಾಡದಿದ್ದರೆ ನಮ್ಮ ಊಟ ಹೇಗೆ ? ಒಳ್ಳೆ ಕಥೆ ಆಯ್ತಲ್ಲ.”

ಇನ್ನು ಮನುಷ್ಯರ ಪ್ರೀತಿಗೆ ಒಳಗಾಗಿದ್ದ ಪ್ರಾಣಿಗಳು….
( ನಾಯಿ ಬೆಕ್ಕು ಮೊಲ ಪಾರಿವಾಳ……..
” ಅಯ್ಯೋ ಏನಾಯ್ತು ನಮ್ಮ ಅನ್ನದಾತ ಒಡೆಯರಿಗೆ. ಇದೇನು ಇಷ್ಟೊಂದು ಚಿಂತಾಕ್ರಾಂತರಾಗಿ ಮನೆಯೊಳಗೆ ಸೇರಿಕೊಂಡಿದ್ದಾರೆ. ಏನೋ ದೊಡ್ಡ ಅಪಾಯವಾಗಿರಬೇಕು. ಛೆ ಛೆ ಎಂತಾ ಕೆಲಸವಾಯಿತು. ಇಷ್ಟು ದಿನ ನಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ಅವರ ಋಣ ತೀರಿಸಬೇಕಿದೆ. ಆದರೆ ಸಮಸ್ಯೆ ಏನು ಎಂದೇ ಅರ್ಥವಾಗುತ್ತಿಲ್ಲ. ಅವರಿಲ್ಲದೆ ನಾವು ಬದುಕುವುದಾದರೂ ಹೇಗೆ. ಮಕ್ಕಳನ್ನು ನಮ್ಮೊಂದಿಗೆ ಆಡಲು ಹೊರಗೆ ಬಿಡುತ್ತಿಲ್ಲ

ಈ ಪ್ರಕೃತಿಯ ಋತು ಚಕ್ರದಲ್ಲಿ ಬಲಿಷ್ಠರು ದುರ್ಬಲರನ್ನು ನಾಶ ಮಾಡಿ ಅಥವಾ ಶೋಷಣೆ ಮಾಡಿಯೇ ಬದುಕುತ್ತಿದ್ದಾರೆ. ಶಕ್ತಿ ಮತ್ತು ಯುಕ್ತಿಗಳೇ ಉಳಿವಿನ ಮಾರ್ಗಗಳು.‌ ಆದರೂ ಆಗಾಗ ಒಂದಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತದೆ. ದುರ್ಬಲರಿಗೂ ಒಂದು ಒಳ್ಳೆಯ ಕಾಲ ಇದ್ದೇ ಇರುತ್ತದೆ. ನೋಡೋಣ ಮುಂದೆ ಏನೇನಾಗುತ್ತದೆಯೋ…..

  • ವಿವೇಕಾನಂದ. ಹೆಚ್.ಕೆ.
Share This Article
Leave a comment