November 16, 2024

Newsnap Kannada

The World at your finger tips!

deepa1

ಈ ಮಾಧ್ಯಮ ಮಂದಿ ಆತ್ಮಾವಲೋಕನ ಮಾಡಿಕೊಳ್ಳುವುದು ಯಾವಾಗ?

Spread the love

ಕಾರ್ಯಕ್ರಮಗಳ ಆಯ್ಕೆಯಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ದಿವಾಳಿತನ ಪ್ರದರ್ಶಿಸಿದ ಕನ್ನಡ ಸುದ್ದಿ ಮಾಧ್ಯಮ ಲೋಕ…….

ಹೊಸ ವರ್ಷ ಎಂಬುದು ಕೇವಲ ‌ಬಣ್ಣದ ಲೋಕವಲ್ಲ, ಕೇವಲ ಮನರಂಜನೆ ಮಾತ್ರವಲ್ಲ, ಕೇವಲ ಕುಣಿದು ಕುಪ್ಪಳಿಸುವುದಲ್ಲ, ಕೇವಲ ಸಿನಿಮಾ ಟಿವಿ ನಟನಟಿಯರಿಗೆ ಸೀಮಿತವಲ್ಲ, ಕೇವಲ ನಿರೂಪಕರ ಕಪಿ ಚೇಷ್ಟೆಯಲ್ಲ, ಕೇವಲ ಕೂಗಾಟ ಅರಚಾಟವಲ್ಲ……

ಹೊಸ ವರ್ಷ ಹೊಸ ಬದುಕಿಗೆ ಮುನ್ನುಡಿಯಾಗಬೇಕು, ಹೊಸ ವರ್ಷ ಜೀವನೋತ್ಸಾಹ ಹೆಚ್ಚಿಸಬೇಕು, ಹೊಸ ವರ್ಷದಲ್ಲಿ ಅರಿವಿನ ವಿಕಾಸವಾಗಬೇಕು, ಹೊಸ ವರ್ಷ ಸುಸ್ಥಿರ ಅಭಿವೃದ್ಧಿ ಕಡೆಗೆ ಯೋಚಿಸುವಂತೆ ಮಾಡಬೇಕು,
ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಎಚ್ಚರಿಸಬೇಕು…….

ಇಲ್ಲಿ ದೇಶದ ಬೆನ್ನುಲುಬಾದ ಅನ್ನದಾತರೆಂಬ ರೈತರಿದ್ದಾರೆ. ಅವರಿಗೂ ನಿಮ್ಮ ಹೊಸ ವರ್ಷದಲ್ಲಿ ಒಂದಷ್ಟು ಸಮಯ ನೀಡಿ. ಪ್ರೋತ್ಸಾಹಿಸಿ, ಮಾರ್ಗದರ್ಶನ ಮಾಡಿ, ಅವರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವರ ಸಾಧನೆಗಳನ್ನು ಗುರುತಿಸಿ. ಅವರ ಮನೋ ಸ್ಥೈರ್ಯ ಹೆಚ್ಚಿಸಿ.

ಇಲ್ಲಿ ಬೆವರು ಸುರಿಸುವ ಕೂಲಿ ಕಾರ್ಮಿಕರಿದ್ದಾರೆ. ಅವರಿಗೂ ಆಸೆ ಕನಸುಗಳು ಇವೆ. ಹೊಸ ವರ್ಷದ ಸಂಭ್ರಮದಲ್ಲಿ ಕನಿಷ್ಟ ಅವರ ಕನಸುಗಳು ವಾಸ್ತವ ನೆಲೆಯಲ್ಲಿ ಚಿಗುರೊಡೆಯುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ. ಭ್ರಮೆಗಳನ್ನು ಸೃಷ್ಟಿ ಮಾಡದಿರಿ….

ಇಲ್ಲಿ ದೇಶ ಕಾಯುವ ಸೈನಿಕರಿದ್ದಾರೆ. ಅವರಿಗೂ ಕುಟುಂಬಗಳಿವೆ. ಪ್ರೀತಿ ಪ್ರೇಮಗಳಿವೆ. ತಂದೆ ತಾಯಿ ಹೆಂಡತಿ ಮಕ್ಕಳುಗಳಿದ್ದಾರೆ. ಇದರ ನಡುವೆ ಅವರ ತ್ಯಾಗ ಅವಿಸ್ಮರಣೀಯ. ಅದರ ಬಗ್ಗೆ ಕಾರ್ಯಕ್ರಮಗಳನ್ನು ಮಾಡಿ ಹೊಸ ವರ್ಷದಲ್ಲಿ ಯುವಕರಲ್ಲಿ ದೇಶಪ್ರೇಮದ ಬಗ್ಗೆ ಅಭಿಮಾನ ಮೂಡಿಸಬಹುದಲ್ಲವೇ….

ವೈದ್ಯರು ವಕೀಲರು ಪೋಲೀಸರು ವಾಹನ ಚಾಲಕರು ಸೇರಿ ಅನೇಕ ವೃತ್ತಿನಿರತರು ಇದ್ದಾರೆ. ಅವರಿಗೂ ಹೊಸ ವರ್ಷದ ಕಾರ್ಯಕ್ರಮದಲ್ಲಿ ಒಂದಷ್ಟು ಅವಕಾಶ ನೀಡಬೇಕಲ್ಲವೇ……

ಕೇವಲ ಸ್ಪರ್ಧೆ ಟಿಆರ್ಪಿ ಹಣ ಮಾಡುವುದೇ ನಿಮ್ಮ ವಾಹಿನಿಗಳ ಮುಖ್ಯ ಉದ್ದೇಶವಾಗಿದ್ದರೆ ದಯವಿಟ್ಟು ಅದನ್ನಾದರೂ ಪ್ರಾಮಾಣಿಕವಾಗಿ ಸ್ಪಷ್ಟಪಡಿಸಿ.

ಆಗ ಓಟಿಗಾಗಿ ಜಾತಿ ಹೆಸರೇಳುವ, ಮತಕ್ಕಾಗಿ ಹಣ ಪಡೆಯುವ, ಜನರ ಆಕರ್ಷಣೆಗಾಗಿ ಕೊಲೆ ಅತ್ಯಾಚಾರ ಕ್ಯಾಬರೆ ಸಿನಿಮಾ ಮಾಡುವ, ದುಡ್ಡಿಗಾಗಿ ಶಾಲೆ ಆಸ್ಪತ್ರೆ ತೆರೆಯುವ, ಸರ್ಕಾರದ ಸಂಬಳ ಪಡೆದು ಭ್ರಷ್ಟಾಚಾರ ಮಾಡುವ, ಹೊಟ್ಟೆಪಾಡಿಗಾಗಿ ಸಂಘ ಸಂಸ್ಥೆ ಮಾಡುವ ಎಲ್ಲರಂತೆ ನಾವು ಸಹ ಎಂಬುದನ್ನು ಒಪ್ಪಿಕೊಳ್ಳಿ,
ಕನಿಷ್ಠ ಆ ಮಟ್ಟದ ಪ್ರಾಮಾಣಿಕತೆಯನ್ನಾದರೂ ಪ್ರದರ್ಶಿಸಿ……….

ಸಮತೋಲಿತ ಕಾರ್ಯಕ್ರಮಗಳು ಎಂಬ ಪರಿಕಲ್ಪನೆಯನ್ನೇ ಸುದ್ದಿ ವಾಹಿನಿಗಳು ಮರೆತಿವೆ. ಒಂದು ಸಮಾಜ ಎಂದರೆ ಅಲ್ಲಿ ಎಲ್ಲಾ ರೀತಿಯ ಜನರು ಇರುತ್ತಾರೆ. ಎಲ್ಲರ ಬಗ್ಗೆ ಕನಿಷ್ಠ ಕಾಳಜಿ ವಹಿಸುವ ಜವಾಬ್ದಾರಿ ಪತ್ರಕರ್ತರಿಗೆ ಇರಬೇಕು. ಅದು ಅವರ ಕರ್ತವ್ಯ. ಕೇವಲ ಸಿನಿಮಾ ಸಂಗೀತ ಪ್ರಸಾರ ಮಾಡಲು ಅವು ಮನರಂಜನಾ ವಾಹಿನಿಗಳಲ್ಲ. ಸುದ್ದಿ ವಾಹಿನಿಗಳು. ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರು. ಅದಕ್ಕಾಗಿ ಅವರಿಗೆ ಒಂದಷ್ಟು ಸಂವಿಧಾನಾತ್ಮಕ ಸೌಕರ್ಯಗಳನ್ನು ಪಡೆದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಕರು ಅವರು……

ಎಷ್ಟೊಂದು ಉತ್ತಮ ಮತ್ತು ಆಕರ್ಷಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸಾಧ್ಯತೆ ಇದೆ ಅಲ್ಲವೇ…

ಉದಾಹರಣೆಗೆ…….

ಗ್ಯಾಜೆಟ್ ಗಳಲ್ಲಿ ಮುಳುಗಿ, ಬಾರ್ ಮಾಲ್ ಸಂಸ್ಕೃತಿಯಲ್ಲಿ ತೇಲಾಡುತ್ತಿರುವ ಯುವ ಜನಾಂಗಕ್ಕೆ ಕನಿಷ್ಠ ಓದುವ ಬರೆಯುವ ವಿಮರ್ಶಿಸುವ ಪ್ರತಿಕ್ರಿಯಿಸುವ ಒಂದಷ್ಟು ಅರ್ಹ ಮತ್ತು ಜನಪ್ರಿಯ ವ್ಯಕ್ತಿಗಳಿಂದ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ರೂಪಿಸಬಹುದಲ್ಲವೇ…

ಯುವ ಶಕ್ತಿಯ ನಿಜವಾದ ಸಾಮರ್ಥ್ಯ ಹೊರ ಚೆಲ್ಲವುದೇ ಅವರ ಕ್ರೀಡಾ ಮನೋಭಾವದಿಂದ. ಅದನ್ನು ಉದ್ದೀಪನ ಗೊಳಿಸಲು ಮತ್ತಷ್ಟು ಆಕರ್ಷಕ ಕಾರ್ಯಕ್ರಮ ಮಾಡಬಹುದಲ್ಲವೇ…

ಭ್ರಷ್ಟ ಮುಕ್ತ ಸಮಾಜ, ಜಾತಿ ಮುಕ್ತ ವ್ಯವಸ್ಥೆ, ಪರಿಸರ ಸ್ನೇಹಿ ಕರ್ತವ್ಯಗಳು ಇವುಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಆಗಬಹುದಲ್ಲವೇ…..

ಅನೇಕ ಯುವ ಪ್ರೇಮಿಗಳ ವಿರಹ ವೇದನೆಗಳಿಗೆ, ಸಾಂಸಾರಿಕ ಬಂಧನದ ಹಿಂಸೆಯಲ್ಲಿ ಬಳಲುತ್ತಿರುವವರಿಗೆ, ಖಿನ್ಬತೆಗೆ ಒಳಗಾಗಿರುವ ಮಾನಸಿಕ ರೋಗಿಗಳಿಗೆ ಸಾಂತ್ವನ ನೀಡುವ ಕಮರ್ಷಿಯಲ್ ಅಲ್ಲದ ತಿಳಿವಳಿಕೆ ಮೂಡಿಸಬಹುದಲ್ಲವೇ….

ಅಷ್ಟೇ ಏಕೆ…

ಭಾರತದ ನೆಲದ ಈ ಸ್ಪೂರ್ತಿದಾಯಕ ಜನರುಗಳನ್ನು ಹೊಸವರ್ಷದ ಸಂದರ್ಭದಲ್ಲಿ ಇಡೀ ಜನ ಸಮೂಹಕ್ಕೆ ಪರಿಚಯ ಮಾಡಿಕೊಡಬಹುದಲ್ಲವೇ….

ಧ್ಯಾನಕ್ಕೊಂದ ಅರ್ಥ ನೀಡಿದ ಬುದ್ದ……

ಮೌನಕ್ಕೊಂದು ಮಾತು ಕಲಿಸಿದ ಮಹಾವೀರ…….

ಸಮಾಜವನ್ನೇ ಸಾಹಿತ್ಯವಾಗಿಸಿದ ವ್ಯಾಸ…..

ಯೋಗವನ್ನೇ ಆರೋಗ್ಯವಾಗಿಸಿದ ಪತಂಜಲಿ…….

ಆಕಾಶ ಅಲೆದಾಡಿದ ಆರ್ಯಭಟ……

ತಂತ್ರಕ್ಕೊಂದು ಶಕ್ತಿ ನೀಡಿದ ಚಾಣಕ್ಯ…..

ಸಾಮ್ರಾಜ್ಯದ ಸರದಾರನಾದರೂ ಪ್ರಾಣಹಾನಿಗೆ ಮಿಡಿದ ಅಶೋಕ…….

ಪ್ರೇಮ ಪತ್ರಗಳಿಗೆ ಜೀವ ತುಂಬಿದ ಕಾಳಿದಾಸ….

ಸಮಾನತೆಗೊಂದು ಸ್ಪರ್ಶ ಕೊಟ್ಟ ಬಸವಣ್ಣ…..

ಸ್ಥಿತ ಪ್ರಜ್ಞೆಗೆ ಉದಾಹರಣೆಯಾದ ಅಕ್ಕ ಮಹಾದೇವಿ…..

ಮನುಷ್ಯ ಜನ್ಮ ಜಾಲಾಡಿದ ಅಲ್ಲಮ………….

ಮಾತನ್ನೊಂದು ಮಂತ್ರವಾಗಿಸಿದ ವಿವೇಕಾನಂದ…….

ಭಕ್ತಿಯ ಪರಾಕಾಷ್ಠೆ ತಲುಪಿದ ಪರಮಹಂಸ……

ಗುರುಗಳಿಗೆ ಗುರುವಾದ ರಮಣ…..

ಭಜನೆಗಳಿಗೆ ಭಾವ ತುಂಬಿದ ಮೀರಾ ಬಾಯಿ……

ಕವಿತ್ವವನ್ನು ಜನಪರವಾಗಿಸಿದ ರವೀಂದ್ರನಾಥ ಟಾಗೋರ್ …….

ಸಸ್ಯಗಳ ಭಾವನೆಗಳಿಗೆ ಕಿವಿಯಾದ ಜಗದೀಶ್ ಚಂದ್ರ ಬೋಸ್…..

ಹೋರಾಟಕ್ಕೊಂದು ನೆಲೆ ನೀಡಿದ ಗಾಂಧಿ……

ಮಾನವೀಯತೆಯನ್ನೇ ಉಸಿರಾಡಿದ, ಅಧ್ಯಯನವನ್ನೇ ಬೆಳಕಾಗಿಸಿದ ಅಂಬೇಡ್ಕರ್……..

ದೇಶ ಭಕ್ತಿಗೆ ಸ್ಫೂರ್ತಿಯಾದ ಭಗತ್ ಸಿಂಗ್……

ಸ್ವಾತಂತ್ರ್ಯಕ್ಕೇ ಸಮರ್ಪಿತನಾದ ಸುಭಾಷ್……..

ಸೇಡನ್ನು ಸಹ್ಯವಾಗಿಸಿದ ಉದಮ್ ಸಿಂಗ್………

ಉದ್ಯಮವನ್ನೇ ಅಭಿವೃದ್ಧಿಯಾಗಿಸಿದ ಜೆಮ್ ಶೆಡ್ ಜೀ ಟಾಟಾ…..

ಸರಳತೆಗೆ ಸಂಕೇತವಾದ ಶಾಸ್ತ್ರಿ……..

ಚಿಂತನೆಗೆ ಚಿಗುರೊಡೆಸಿದ ಲೋಹಿಯಾ……

ಪ್ರಕೃತಿಯನ್ನೇ ಅಕ್ಷರಕ್ಕಿಳಿಸಿದ ಕುವೆಂಪು………

ಸೇವೆಯನ್ನೇ ಬದುಕಾಗಿಸಿದ ತೆರೇಸಾ………..

ಅತಿರೇಕದ ಆನಂದವನ್ನು ಉಣಬಡಿಸಿದ ಓಶೋ…….

ದೇವರನ್ನು ಕಲ್ಲಾಗಿಸಿದ ಪೆರಿಯಾರ್…..

ಅಧಿಕಾರವನ್ನೇ ಸಾಮಾನ್ಯವಾಗಿಸಿದ ಮಾಣಿಕ್ ಸರ್ಕಾರ……

ಮುಗ್ದತೆಯನ್ನೇ ಮಾತನಾಡಿಸಿದ ಕಲಾಂ……..

ಆಧ್ಯಾತ್ಮವನ್ನೇ ಕಾಯಕವಾಗಿಸಿ ಸಾವಿಗೆ ಸವಾಲಾದ ಸಿದ್ದಗಂಗೆಯ ಶಿವಣ್ಣ………….

ಈ ಕ್ಷಣದಲ್ಲಿ ನೆನಪಾದ ಕೆಲವು ವಿಶಿಷ್ಟ ವಿಶೇಷ ಮಾನವರು…..

ಭಾರತದ ಮಟ್ಟಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅದ್ಭುತ ಸಾಧನೆ ಮಾಡಿದ ಅನೇಕರಿದ್ದಾರೆ. ಇದು ಕೇವಲ ಸಾಂಕೇತಿಕ……

ನಿಮ್ಮ ನೆನಪುಗಳಲ್ಲಿ ಮೂಡುವ ಇನ್ನೂ ಕೆಲವು ಸಾಧಕರನ್ನು ಇಲ್ಲಿ ಸ್ವಾಗತಿಸುತ್ತಾ……..

ಇದು ಪ್ರಾರಂಭದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸದಿರಬಹುದು, ಸಿನಿಮಾ ನಟ ನಟಿಯರ ಕಾರ್ಯಕ್ರಮದಷ್ಟು ಟಿಆರ್ಪಿ ಬಂದಿರಬಹುದು. ಆದರೆ ಇದು ಒಂದು ನಾಗರಿಕ ಸಮಾಜದ ಜವಾಬ್ದಾರಿ ಮತ್ತು ಕರ್ತವ್ಯ. ನಿಧಾನವಾಗಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮಾಡಿದರೆ ಈ ಮಣ್ಣಿನ ಋಣ ಸಂದಾಯ ಮಾಡಿದಂತಾಗುತ್ತದೆ.

ತಿಳಿವಳಿಕೆ ನಡವಳಿಕೆ ಆಗಬೇಕು. ಒಳ್ಳೆಯತನ ಕೇವಲ ನುಡಿಯಲು ಅಲ್ಲ ನಡೆಯಲು……

ಇನ್ನಾದರೂ ಮಾಧ್ಯಮ ಲೋಕ ಆತ್ಮಾವಲೋಕನ ಮಾಡಿಕೊಂಡು ಎಚ್ಚೆತ್ತುಕೊಳ್ಳಲಿ ಎಂದು ಆಶಿಸುತ್ತಾ……

ವಿವೇಕಾನಂದ. ಹೆಚ್. ಕೆ

Copyright © All rights reserved Newsnap | Newsever by AF themes.
error: Content is protected !!