November 26, 2024

Newsnap Kannada

The World at your finger tips!

deepa1

ಮಾಧ್ಯಮಗಳು ಜವಾಬ್ದಾರಿಯುತ ಹೆಜ್ಜೆ ಹಾಕುವುದು ಯಾವಾಗ ?

Spread the love

ಇಡೀ ವಿಶ್ವ ಮತ್ತು ಪ್ರಖ್ಯಾತ ಔಷಧಿ ಕಂಪನಿಗಳು ಕೊರೋನಾ ವೈರಸ್ ಗೆ ಮದ್ದು ಕಂಡು ಹಿಡಿಯಲು ಹರಸಾಹಸ ಪಡುತ್ತಿರುವಾಗ ಕರ್ನಾಟಕದ ಒಂದಿಬ್ಬರು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಬಳಿ ಅದನ್ನು ಗುಣಪಡಿಸುವ ಔಷಧಿ ಇದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಟಿವಿ ವಾಹಿನಿಗಳು ಸಹ ಬ್ರೇಕಿಂಗ್ ನ್ಯೂಸ್ ಎಂದು ಅವರನ್ನು ಮಾತನಾಡಿಸಿ ಒಂದು ಗಂಟೆಯ ಕಾರ್ಯಕ್ರಮ ಮಾಡಿ ಮರೆತು ಬಿಡುತ್ತಿದ್ದಾರೆ. ಏನಿದರ ಮರ್ಮ…….

ಅವರ ಬಳಿ ಇರುವ ವೈರಸ್ ಗುಣಪಡಿಸುವ ಔಷಧಿಯನ್ನು ಕರ್ನಾಟಕ, ಭಾರತ ಮತ್ತು ಇಡೀ ವಿಶ್ವ ಕಡೆಗಣಿಸಿ‌ ಜನರ ಸಾವನ್ನು ಸ್ವಾಗತಿಸುತ್ತಿದೆ ಎಂದು ಭಾವಿಸಬೇಕೆ,
ಅಥವಾ,
ಇವರ ಈ ಸಂಶೋಧನೆಯ ಔಷಧಿಗಳು ಕನಿಷ್ಠ ಪರಿಶೀಲನೆ ಅಥವಾ ಪ್ರಾಯೋಗಿಕ ಪರೀಕ್ಷೆಗೂ ಅರ್ಹವಲ್ಲದ್ದು ಎಂದು ಸರ್ಕಾರಗಳು ಮತ್ತು ವೈದ್ಯಕೀಯ ಸಂಶೋಧನಾ ಕ್ಷೇತ್ರ ನಿರ್ಧರಿಸಿದೆಯೇ,ಅಥವಾ, ಮಾಧ್ಯಮಗಳು ನಮ್ಮನ್ನೆಲ್ಲಾ ಮೂರ್ಖರಾಗಿಸಿ ಈ ಭಯದ ವಾತಾವರಣದಲ್ಲಿ ಸುಳ್ಳು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಹಣ ಮಾಡಿಕೊಳ್ಳುವ ನೀಚತನವೇ…..

ಕೊರೋನಾ ವೈರಸ್ ಅನ್ನು ಯಾವುದೇ ವೈದ್ಯಕೀಯ ಪ್ರಕಾರವೇ ಆಗಿರಲಿ, ಯಾವುದೇ ಮಾತ್ರೆ ಟಾನಿಕ್ ಗಳೇ ಆಗಿರಲಿ ಕೊನೆಗೆ ಯಾವುದೇ ಮಂತ್ರದಿಂದ ಗುಣಪಡಿಸಿದರೂ ಫಲಿತಾಂಶ ಖಚಿತವಾಗಿದ್ದರೆ ಇಡೀ ವಿಶ್ವ ಅದನ್ನು ಖಂಡಿತ ಒಪ್ಪಿಕೊಳ್ಳುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮನುಷ್ಯ ಜೀವಕ್ಕಿಂತ ದೊಡ್ಡದು ಯಾವುದಿದೆ.

ಈ ಮಾಧ್ಯಮಗಳಿಗೆ ಮುಖ್ಯಮಂತ್ರಿಗಳನ್ನು, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯವರನ್ನು, ಕೊನೆಗೆ ಪ್ರಧಾನ ಮಂತ್ರಿಗಳನ್ನು ಸಂಪರ್ಕಿಸುವುದು ಮತ್ತು ಅವರಿಗೆ ಈ ಬಗ್ಗೆ ಮನವರಿಕೆ ಮಾಡಿ ಕೊಡುವುದು ದೊಡ್ಡ ವಿಷಯವೇ ಅಲ್ಲ. ಇಡೀ ಆಡಳಿತ ವ್ಯವಸ್ಥೆ ಒಂದು ಔಷಧಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದೆ.
.
ಇಲ್ಲಿ ನೋಡಿದರೆ ಕೊರೋನಾಗೆ ಔಷಧಿ ಕಂಡುಹಿಡಿದ ಮಹನೀಯರು ಎಂಬ ಕಾರ್ಯಕ್ರಮ ಟಿವಿಗಳಲ್ಲಿ ಪ್ರಸಾರವಾಗುತ್ತದೆ.

ನಾಚಿಕೆ ಮಾನ ಮರ್ಯಾದೆ ಜವಾಬ್ದಾರಿ ವಿವೇಚನೆ ಈ ಕಾರ್ಯಕ್ರಮ ಪ್ರಸಾರ ಮಾಡುವ ವಾಹಿನಿಗಳು ಮತ್ತು ಅದರ ಭಾಗೀದಾರರಿಗೆ ಇರಬೇಕಲ್ಲವೇ….

ಒಂದು ಸಾಂಕ್ರಾಮಿಕ ಖಾಯಿಲೆಗೆ ಔಷಧಿ ಕಂಡುಹಿಡಿಯಲು ಅನುಸರಿಸುವ ಮೂಲಭೂತ ಅಂಶವೆಂದರೆ ಆ ರೋಗದ ಮೂಲವಾದ ಬ್ಯಾಕ್ಟೀರಿಯಾ ಅಥವಾ ವೈರಸ್ ಅಥವಾ ಬೇರೆ ಯಾವುದು ಕಾರಣ, ಅದರ ಮೂಲ ಸ್ವರೂಪ, ಗುಣಲಕ್ಷಣಗಳು ಮುಂತಾದ ಸಮಸ್ಯೆಯ ಮೂಲವನ್ನು ಸಂಶೋಧಿಸಿ ನಂತರ ಅದಕ್ಕೆ ಪರಿಹಾರ ಕಂಡುಹಿಡಿಯಲಾಗುತ್ತದೆ. ಈಗಾಗಲೇ ವಿಶ್ವದ 100/ಕ್ಕೂ ಹೆಚ್ಚು ಕಂಪನಿಗಳು ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಹಗಲು ರಾತ್ರಿ ಸಂಶೋಧನೆಯಲ್ಲಿ ತೊಡಗಿವೆ. ಮನುಷ್ಯ ಜನಾಂಗದ ಉಳಿವಿನ ಉದ್ದೇಶ ಕೆಲ ಕಂಪನಿಗಳದಾದರೆ, ಇದರಿಂದ ಸಾಕಷ್ಟು ಹಣ ಮಾಡಬಹುದು ಎಂಬ ಮನೋಭಾವ ಕೆಲವು ಕಂಪನಿಗಳಿಗೆ ಇರಬಹುದು.

ಬಹುಶಃ ಕೊರೋನಾ ವೈರಸ್ ಗೆ ಔಷಧಿ ಕಂಡು ಹಿಡಿಯುವ ವಿಜ್ಞಾನಿ ಅಥವಾ ವಿಜ್ಞಾನಿಗಳಿಗೆ ಮುಂದಿನ ವರ್ಷದ ವೈದ್ಯಕೀಯ ನೊಬೆಲ್ ಖಚಿತ ಎನಿಸುತ್ತದೆ.

ಆ ರೀತಿಯ ಪ್ರಶಸ್ತಿ ಕರ್ನಾಟಕದವರಿಗೆ ಬಂದರೆ ನಮಗೂ ಹೆಮ್ಮೆ ಅಲ್ಲದೆ ಮಾನವ ಜನಾಂಗವನ್ನು ಉಳಿಸಿದ ಕೀರ್ತಿಯೂ ಕರುನಾಡಿಗೆ ಬರುತ್ತದೆ.

ಆದರೆ ಖಚಿತವಲ್ಲದ, ಇನ್ನೂ ಪ್ರಾಯೋಗಿಕವಾಗಿ ದೃಡಪಡದ ವಿಷಯಗಳನ್ನು ಪ್ರಸಾರ ಪ್ರಚಾರ ಮಾಡಿ ಜನರನ್ನು ಮೂರ್ಖರಾಗಿಸುವ ಪ್ರಯತ್ನ ತುಂಬಾ ನಾಚಿಕೆಗೇಡು.

ಲಾಕ್ ಡೌನ್ ಸಮಯದಲ್ಲಿ ರಸ್ತೆಯಲ್ಲಿ ಓಡಾಡುವ ಜನರನ್ನು ಬಾಯಿಗೆ ಬಂದಂತೆ ಮಾತನಾಡಿದ ಮಾಧ್ಯಮಗಳನ್ನು ಈ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನಾವು ಹೇಗೆ ಪ್ರತಿಕ್ರಿಯಿಸಬೇಕು.

ಈ ಮಾಧ್ಯಮಗಳಲ್ಲಿ ಪ್ರಸಾರವಾದ ಔಷಧಗಳ ಸಾಮರ್ಥ್ಯದ ಬಗ್ಗೆ ಮಾತನಾಡುವುದಿಲ್ಲ. ಅದನ್ನು ನಿರ್ಧರಿಸುವ ಬುದ್ದಿ ನಮಗಿಲ್ಲ. ಆದರೆ ಅದು ಅಧಿಕೃತವಾಗಿ ಧೃಡಪಟ್ಟಿಲ್ಲ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅದರ ಬಗ್ಗೆ ಚಕಾರವೆತ್ತಿಲ್ಲ ಎಂಬುದಷ್ಟೇ ಇಲ್ಲಿ ಮುಖ್ಯ ವಿಷಯ.

ಔಷಧಿಯನ್ನು ಯಾರೇ ಕಂಡುಹಿಡಿಯಲಿ ಅವರನ್ನು ಮನಃಪೂರ್ವಕವಾಗಿ ಗೌರವಿಸೋಣ, ಪ್ರೀತಿಸೋಣ, ಧನ್ಯವಾದಗಳನ್ನು ಅರ್ಪಿಸೋಣ ಅದು ಧೃಡಪಟ್ಟಾಗ ಮಾತ್ರ….

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!