November 19, 2024

Newsnap Kannada

The World at your finger tips!

deepa1

ಭ್ರಷ್ಟತೆ ಕೋಟೆ ಕಟ್ಟಲು ಬಿಟ್ಟು ನಂತರ ದಾಳಿ ಮಾಡಿದರೆ ಏನು ಪ್ರಯೋಜನ ?

Spread the love

ಲೋಕಾಯುಕ್ತ – ಎ ಸಿ ಬಿ –
ಜಾರಿ ನಿರ್ದೇಶನಾಲಯ ( ಇಡಿ ),
ತೆರಿಗೆ ಇಲಾಖೆ ಮುಂತಾದ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ವಿಚಾರಣೆ, ದಾಳಿ ಮಾಡಿದ ನಂತರ ಅಥವಾ ಸಮನ್ಸ್ ನೀಡಿದ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಹೇಗೆ ನಡೆಯುತ್ತದೆ ಎಂಬ ಕುತೂಹಲ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಸಾಮಾನ್ಯ ಜನರಿಗೆ ಇರುತ್ತದೆ.

ಏಕೆಂದರೆ,
ಇತ್ತೀಚಿಗೆ ಮಾಧ್ಯಮಗಳು ದಾಳಿ ಎಂಬುದನ್ನು ಅದೊಂದು ಭಯಂಕರ ವಿದ್ಯಮಾನ ಎಂಬಂತೆ ಬಿಂಬಿಸುತ್ತಿವೆ. ಹಾಗಾದರೆ ವಾಸ್ತವವಾಗಿ ಆ ವಿಚಾರಣೆ ಹೇಗೆ ನಡೆಯುತ್ತದೆ ???????

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಇದು ಕೇವಲ ಆರ್ಥಿಕ ಅಪರಾಧಗಳಾದ ತೆರಿಗೆ ವಂಚನೆ, ಭ್ರಷ್ಟಾಚಾರ, ಸುಳ್ಳು ಲೆಕ್ಕಪತ್ರಗಳು, ತಪ್ಪು ಮಾಹಿತಿಗಳು, ಹಣಕಾಸಿನ ಅಸಮರ್ಪಕ ನಿರ್ವಹಣೆ, ದಾಖಲೆಗಳನ್ನು ತಿದ್ದುವುದು, ಹವಾಲ ಹಣ ವರ್ಗಾವಣೆ, ಲೆಕ್ಕವಿಲ್ಲದ ನಗದು ಹಣ ಸಿಗುವುದು, ಬೇನಾಮಿ ಆಸ್ತಿ , ಅಧಿಕಾರದ ದುರುಪಯೋಗ, ಸ್ವ ಜನ ಪಕ್ಷಪಾತ, ಕಪ್ಪು ಹಣ ಮುಂತಾದ ವಿಷಯಗಳಿಗೆ ಮಾತ್ರ ಈ ಲೇಖನ ಅನ್ವಯಿಸುತ್ತದೆ.

ಆರ್ಥಿಕ ಅಪರಾಧಗಳ ವಿಚಾರಣೆಯಲ್ಲಿ ಎರಡು ರೀತಿಯ ನಡವಳಿಕೆಗಳನ್ನು ಗಮನಿಸಬಹುದು. ಸಾಮಾನ್ಯ ವರ್ಗದ ಜನರು ಮತ್ತು ವಿಐಪಿಗಳು.

ಈ ರೀತಿಯ ತಾರತಮ್ಯ ಕಾನೂನಿನಲ್ಲಿ ಇಲ್ಲ. ಅಲ್ಲಿ ಎಲ್ಲರೂ ಸಮಾನರು. ಆದರೆ ವ್ಯಾವಹಾರಿಕ ಜಗತ್ತಿನಲ್ಲಿ ಖಂಡಿತ ಅಸ್ತಿತ್ವದಲ್ಲಿದೆ.

ಸಾಮಾನ್ಯ ಜನರನ್ನು ಈ ರೀತಿಯ ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಮಾಡುವಾಗ ಕಡಿಮೆ ಸೌಜನ್ಯ, ಹೆಚ್ಚು ದೌರ್ಜನ್ಯ, ಏಕವಚನ ಪದ ಪ್ರಯೋಗ, ದೊಡ್ಡ ಶಿಕ್ಷೆಯ ಬೆದರಿಕೆ, ಅವರ ಕನಿಷ್ಠ ಅವಶ್ಯಕತೆಗಳ ನಿರ್ಲಕ್ಷ್ಯ, ಸಮಯದ ಮಿತಿ ಇಲ್ಲದೆ ಇಷ್ಟ ಬಂದಂತೆ ನಡೆಸಿಕೊಳ್ಳುವುದು ಮುಂತಾದ ನಡವಳಿಕೆ ಕಂಡುಬರುತ್ತದೆ. ಅಲ್ಲದೆ ಕೆಳ ಹಂತದ ಅಧಿಕಾರಿ ವರ್ಗದವರು ಇವರನ್ನು ವಿಚಾರಣೆ ಮಾಡುತ್ತಾರೆ.

ಆದರೆ ವಿಐಪಿಗಳ ವಿಚಾರಣೆಯ ಸಮಯದಲ್ಲಿ ಹೆಚ್ಚು ಜಾಗರೂಕತೆ ಕಂಡುಬರುತ್ತದೆ. ಸೌಜನ್ಯ, ಅವರ ಅವಶ್ಯಕತೆಗಳ ಪೂರೈಕೆ, ವಿಶ್ರಾಂತಿ, ಬಹುವಚನ, ಸಾಕಷ್ಟು ಕಾಲಾವಕಾಶ ನೀಡುವುದು ನಡೆಯುತ್ತದೆ. ಏಕೆಂದರೆ ಈ ವಿಐಪಿಗಳಿಗೆ ಪ್ರಖ್ಯಾತ ಆಡಿಟರ್ ಗಳು, ವಕೀಲರು, ರಾಜಕಾರಣಿಗಳು, ಹಣವಂತರ ಬೆಂಬಲ ಇರುತ್ತದೆ ಮತ್ತು ಮುಂದೆ ಅಧಿಕಾರದ ರಾಜಕೀಯ ಏನಾದರೂ ಬದಲಾವಣೆ ಆದರೆ ತಮಗೆ ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕೆ ಅವರಿಗೆ ಇರುತ್ತದೆ.
ಇವರನ್ನು ಹಿರಿಯ ಅಧಿಕಾರಿಗಳೇ ವಿಚಾರಣೆ ಮಾಡುತ್ತಾರೆ.

ಸಾಮಾನ್ಯವಾಗಿ ಈ ರೀತಿಯ ಪ್ರಕರಣಗಳಲ್ಲಿ ಇದಕ್ಕೆ ಸಂಬಂಧಿಸಿದ ಸಾಧ್ಯವಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿರುತ್ತದೆ. ಬ್ಯಾಂಕಿಂಗ್ ವಹಿವಾಟು, ಆಸ್ತಿಗಳ ವಿವರ, ನಗದು ಹಣ ಚಲಾವಣೆ, ಸ್ನೇಹಿತರು ಸಂಬಂಧಿಗಳ ವಹಿವಾಟು, ಲಾಕರುಗಳು, ಆದಾಯ ತೆರಿಗೆ ವಿವರಗಳು, ಆದಾಯದ ಮೂಲಗಳು, ಅವರಿಗಿರುವ ಲಿಂಕ್ ಗಳು ಮುಂತಾದವು ಸೇರಿರುತ್ತದೆ.

ಇಲ್ಲಿ ದಾಳಿಗೆ ಮೊದಲು ಅಥವಾ ದಾಳಿಯ ನಂತರ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ವಿಚಾರಣೆಗೆ ಕರೆಯಬಹುದು.

ದಾಳಿಯ ಸಮಯದಲ್ಲಿ ಸಿಗುವ ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ಸೀಜ್ ಮಾಡುವುದು ಸಾಮಾನ್ಯ ನಿಯಮ.
ಕೆಲವು ಸಂದರ್ಭಗಳಲ್ಲಿ ಆ ಕ್ಷಣದಲ್ಲೇ ಬಂಧಿಸುವ ಸಾಧ್ಯತೆಯು ಇರುತ್ತದೆ. ಕೆಲವೊಮ್ಮೆ ವಿಚಾರಣೆಗೆ ಕರೆಯಲಾಗುತ್ತದೆ.

ನಿಜವಾದ ವಿಚಾರಣೆ ಹೇಗಿರುತ್ತದೆ…..!!!!!!!

ವಿಚಾರಣೆಗೆ ಕರೆಸಿಕೊಂಡ ವ್ಯಕ್ತಿಯನ್ನು ಮೊದಲಿಗೆ ಅಲ್ಲಿನ ಕಾನೂನಿನ ನಿಯಮಗಳನ್ನು ಹೇಳಿ ಬಹುತೇಕ ಆತ ಅವರ ವಶದಲ್ಲಿ ಇರುವಂತೆ ಮಾಡಿ ಆರೋಪಿಯನ್ನು ಅಪರಾಧಿ ಎಂದೇ ಬಿಂಬಿಸಿ ಅವರನ್ನು ನೈತಿಕವಾಗಿ ಕುಗ್ಗಿಸಲಾಗುತ್ತದೆ. ಇದು ಆರೋಪಿಯಿಂದ ನಿಜ ಬಾಯಿ ಬಿಡಿಸಲು ತುಂಬಾ ಅವಶ್ಯಕ. ಪುಸ್ತಕದಲ್ಲಿ ಅಪರಾಧಗಳ ಕಾನೂನು ತುಂಬಾ ಭಯಂಕರವಾಗಿರುತ್ತದೆ.

ಯಾರು ಏನೇ ಹೇಳಿದರು ಈಗಿನ ಭಾರತದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಯಾರೂ ಶೇಕಡಾ 100% ಖಚಿತ ದಾಖಲೆಗಳನ್ನು ಹೊಂದಿ ಹಣಕಾಸಿನ ವ್ಯವಹಾರ ಮಾಡುವುದು ಸಾಧ್ಯವಿಲ್ಲ. ಅದೂ ಕೋಟಿಗಳ ಲೆಕ್ಕದಲ್ಲಿ ಹಣಕಾಸಿನ ವ್ಯವಹಾರ ನಡೆಯುವಾಗ ನಗದು ರೂಪವೇ ಇರಬಹುದು ಅಥವಾ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಇರಬಹುದು ಕೆಲವೊಮ್ಮೆ ಅಧೀಕೃತ ಲೆಕ್ಕ ಅಥವಾ ಕಾನೂನಿನ ವ್ಯಾಪ್ತಿ ಮೀರಿರುತ್ತದೆ. ಕೊಡು ಕೊಳ್ಳುವಿಕೆಯ ಸಂದರ್ಭದಲ್ಲಿ ಮೇಲ್ನೋಟಕ್ಕೆ ಒಳ್ಳೆಯವರು ಮತ್ತು ಕ್ರಿಮಿನಲ್ ಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಇವತ್ತಿನ ಒಳ್ಳೆಯದು ನಾಳಿನ ಕೆಟ್ಟದ್ದು ಆಗಿರಬಹುದು.

ಅದರಲ್ಲೂ ರಾಜಕಾರಣಿಗಳು ಭ್ರಷ್ಟ ಅಧಿಕಾರಿಗಳು ವ್ಯಾಪಾರಸ್ಥರು ಹಣದ ಮೂಲದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ. ಬಂದ ಹಣವನ್ನು ಯಾರೂ ನಿರಾಕರಿಸುವುದಿಲ್ಲ. ತೀರಾ ಅಪರೂಪದ ಪ್ರಾಮಾಣಿಕರನ್ನು ಹೊರತುಪಡಿಸಿ. ಕಾರ್ಪೊರೇಟ್ ಸಂಸ್ಥೆಗಳು ಇದನ್ನು ಸ್ವಲ್ಪ ಜಾಗರೂಕತೆಯಿಂದ ನಿರ್ವಹಿಸುತ್ತದೆ. ಅಲ್ಲಿಯೂ ವಂಚನೆ ಇದೆ. ಆದರೆ ಅದು ಒಂದು ಮಿತಿಯಲ್ಲಿರುತ್ತದೆ.

ವಿಚಾರಣೆಗೆ ಬಂದ ವ್ಯಕ್ತಿಯ ಹುಟ್ಟಿನಿಂದ ಆತನ ತಂದೆ ತಾಯಿ ಮಕ್ಕಳು, ಊರು, ಬೆಳವಣಿಗೆ, ವಿದ್ಯಾಭ್ಯಾಸ, ಉದ್ಯೋಗ, ಮದುವೆ ಸ್ಥಿರಾಸ್ತಿ ಚರಾಸ್ತಿ ಎಲ್ಲವನ್ನೂ ಆತನ ಹೇಳಿಕೆಯಂತೆಯೇ ಸಂಪೂರ್ಣ ದಾಖಲು ಮಾಡಿಕೊಳ್ಳುತ್ತಾರೆ.

ನಿಜವಾದ ವಿಚಾರಣೆ ಪ್ರಾರಂಭವಾಗುವುದೇ ಇಲ್ಲಿಂದ……..!!!!!

3/5 ಜನ ಅಧಿಕಾರಿಗಳು ದಾಖಲೆ ಮತ್ತು ಆರೋಪಿಯ ಹೇಳಿಕೆ ಇಟ್ಟುಕೊಂಡು ಪ್ರಶ್ನಿಸಲು ಶುರು ಮಾಡುತ್ತಾರೆ.
ಉದಾಹರಣೆಗೆ……

ಆ 5 ಕೋಟಿ ಎಲ್ಲಿಂದ ಬಂದಿದೆ ?
ಈ ವ್ಯಕ್ತಿ ಯಾರು?
ಆ ನಗದು ಹೇಗೆ ಮನೆಯಲ್ಲಿದೆ ?
ಈ ವ್ಯಕ್ತಿಗಳ ಜೊತೆ ವ್ಯವಹಾರ ಏಕೆ ?
ಆ ಆಸ್ತಿ ಯಾರದು ?
ಈ ಷೇರು ಹೇಗೆ ಬಂತು ?
ನೀವು ಹೇಳಿದ್ದು 1 ಕೋಟಿ. ದಾಖಲೆ ಇರುವುದು 5 ಕೋಟಿ. ಈ ವ್ಯತ್ಯಾಸ ಏಕೆ ?

ಹೀಗೆ ಪ್ರಶ್ನೆಗಳ ಸರಮಾಲೆ, ಉಪ ಪ್ರಶ್ನೆಗಳು ತಿರುವುಗಳು ನಿರಂತರವಾಗಿ ನೂರಾರು ಗಂಟೆಗಳು ನಡೆಯಬಹುದು. ಮಧ್ಯೆ ಮಧ್ಯೆ ‌ಕಾಫಿ, ಟೀ, ಊಟ, ವಿರಾಮ, ಹಾಸ್ಯದ ಮಾತುಕತೆ, ವೈಯಕ್ತಿಕ ವಿವರಣೆ, ಬೆದರಿಕೆ ಎಲ್ಲವೂ ಆಯಾ ಸಂದರ್ಭಕ್ಕೆ ತಕ್ಕಂತೆ ಇರುತ್ತದೆ.

ಇಲ್ಲಿ ಆಡಿಟರ್ ಅಥವಾ ವಕೀಲರ ಸಹಾಯ ಇರುವುದಿಲ್ಲ. ಇದೇ ಅತ್ಯಂತ ಮಾನಸಿಕ ಹಿಂಸಾತ್ಮಕ ಸ್ಥಿತಿ. ವ್ಯವಹಾರ ಮಾಡುವುದು ಸುಲಭವಾಗಿರಬಹುದು. ಆದರೆ ಅದನ್ನು ಸಮರ್ಥಿಸಿಕೊಳ್ಳುವುದು ತುಂಬಾ ಕಷ್ಟ. ಸಾಮಾನ್ಯವಾಗಿ ಆರೋಪಿ ಲೆಕ್ಕದಲ್ಲಿ ಪರಿಣತಿ ಹೊಂದಿರುವುದಿಲ್ಲ. ಯಾವುದು ಸರಿ, ಯಾವುದು ತಪ್ಪು, ಏನು ಹೇಳಿದರೇ ಬಚಾವಾಗಬಹುದು, ಗೊತ್ತಿದೆ ಅಥವಾ ಗೊತ್ತಿಲ್ಲ ಎಂದು ಯಾವುದಕ್ಕೆ ಹೇಳುವುದು, ಮೌನವಾಗಿರುವುದು ಯಾವುದಕ್ಕೆ, ತಪ್ಪು ನೇರವಾಗಿ ಕಣ್ಣ ಮುಂದೆಯೇ ಇರುವಾಗ ಅಲ್ಲಗಳೆಯುವುದು ಹೇಗೆ, ಆಡಿಟರ್ ಮತ್ತು ವಕೀಲರ ಸಲಹೆಗಿಂತ ತನಿಖಾಧಿಕಾರಿಗಳು ಭಿನ್ನ ಪ್ರಶ್ನೆ ವಿರುದ್ಧ ದಿಕ್ಕಿನಲ್ಲಿ ಕೇಳಿದಾಗ ಆಗುವ ಗೊಂದಲ ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಹಂತದ ತನಿಖೆಗೆ ಒಳಪಡುವ ವ್ಯಕ್ತಿ ಸಮಾಜದಲ್ಲಿ ಒಂದು ಸ್ಥಾನ, ಶ್ರೀಮಂತಿಕೆ, ಜನಪ್ರಿಯತೆ, ಅಧಿಕಾರ ಗಳಿಸಿರುತ್ತಾನೆ/ತ್ತಾಳೆ. ಅದಕ್ಕೆ ಹೊಡೆತ ಬೀಳುತ್ತದೆ ಮತ್ತು ಭವಿಷ್ಯದಲ್ಲಿ ಹಿಂದಿನ ವೈಭವ ಮರೆಯಾಗಬಹುದು, ತಾನು ಜೈಲಿಗೆ ಹೋಗಬಹುದು, ತನ್ನ ವಿರೋಧಿಗಳು ಮತ್ತು ಹಿತ ಶತ್ರುಗಳು ಇದನ್ನು ದುರುಪಯೋಗ ಪಡಿಸಿಕೊಳ್ಳಬಹುದು, ಕುಹುಕವಾಡಬಹುದು ಮುಂತಾದ ಮಾನವ ಸಹಜ ಭಾವನೆಗಳು ಒಮ್ಮೆಲೇ ಮೂಡಿ ಏಕಾಂತದಲ್ಲಿ ಮನಸ್ಸನ್ನು ಇರಿಯುತ್ತದೆ. ಕುಟುಂಬದ ಪ್ರೀತಿ ಪಾತ್ರರ ನೆನಪುಗಳು ಕಾಡುತ್ತದೆ. ಎಷ್ಟೇ ಗಟ್ಟಿ ಮನಸ್ಸಿನವರಾದರೂ, ಯಾರೇ ಸಮಾಧಾನ ಮಾಡಿದರು ಅದು ಆ ಕ್ಷಣದ ತಾತ್ಕಾಲಿಕ ಸ್ಥಿತಿ ಮಾತ್ರ.

ಕ್ಷಮಿಸಿ, ಈ ರೀತಿಯಲ್ಲಿ ನೂರಕ್ಕೆ ನೂರು ಹೀಗೆ ನಡೆಯದಿರಬಹುದು. ಕೆಲವು ವಿಚಾರಣೆಗಳು ಇದಕ್ಕಿಂತ ಭಿನ್ನವಾಗಿರಬಹುದು. ಕೆಲವು ಫಟಿಂಗರು ವಿಚಾರಣೆಯನ್ನು ಎಂಜಾಯ್ ಮಾಡಬಹುದು. ಅದನ್ನು ದಾಳವಾಗಿ ಉಪಯೋಗಿಸಿಕೊಂಡು ಮೇಲೆ ಬರಬಹುದು. ಆದರೆ ಸಾಮಾನ್ಯ ಪರಿಸ್ಥಿತಿಯಲ್ಲಿ ಮೇಲೆ ವಿವರಿಸಿದ ವಿಚಾರಣೆಯ ರೀತಿ ನೀತಿಗಳು ಬಹುತೇಕ ಇದೇ ಮಾದರಿಯಲ್ಲಿ ಇರುತ್ತದೆ.

ಇದು ಆರ್ಥಿಕ ಅಪರಾಧಗಳ ದಾಳಿಯ ಒಂದು ಮುಖ.
ಇದರ ಇನ್ನೊಂದು ಮುಖ………..

IPS – IRS – KPS ಮುಂತಾದ ಅಧಿಕಾರಿಗಳಿಂದ ಕೂಡಿದ ಅತಿಹೆಚ್ಚು ಸಂಬಳ ಪಡೆಯುವ ಮತ್ತು ಯಾರನ್ನಾದರೂ ವಿಚಾರಣೆಗೆ ಒಳಪಡಿಸುವ ಅಧಿಕಾರ ಹೊಂದಿರುವ ಸಂಸ್ಥೆಗಳಿವು.

ನನ್ನ ಪ್ರಶ್ನೆ ಏನೆಂದರೆ, ಈ ಮೇಲಿನ ದಾಳಿಗೊಳಗಾದ ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿ ಬಹಳ ವರ್ಷಗಳಿಂದಲೂ ಇದ್ದಾರೆ ಮತ್ತು PAN ನಂಬರ್ ಹೊಂದಿ ಸರ್ಕಾರಕ್ಕೆ ಪ್ರತಿವರ್ಷ ಅವರ ಅನುಕೂಲಕ್ಕೆ ತಕ್ಕಂತೆ income tax File ಮಾಡುತ್ತಾ ಇರುತ್ತಾರೆ ಮತ್ತು ಹಾಗೆ ಎಂದಿನಂತೆ ಅವರು ಭ್ರಷ್ಟಾರಾಗಿರುವುದರಿಂದ ಎಷ್ಟು ಸಾಧ್ಯವೋ ಅಷ್ಟು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಕೋಟಿಗಳ ಲೆಕ್ಕದಲ್ಲಿ ಹಣ ದೋಚುತ್ತಲೇ ಇರುತ್ತಾರೆ. ಇದು ಬಹಿರಂಗದ ಸತ್ಯ ಮತ್ತು ಸಾಮಾನ್ಯರೆಲ್ಲರಿಗೂ ತಿಳಿದಿರುವ ವಿಷಯ.

ಇವರೆಲ್ಲರೂ ಇಷ್ಟೊಂದು ಸಂಪತ್ತನ್ನು ಒಂದು ದಿನದಲ್ಲಿ, ಒಂದು ತಿಂಗಳಲ್ಲಿ, ಒಂದು ವರ್ಷದಲ್ಲಿ ಸಂಗ್ರಹಿಸಿರುವುದಿಲ್ಲ. ಕನಿಷ್ಠ 8/10 ವರ್ಷಗಳಿಂದ ಕೋಟಿ ಕೋಟಿಗಳನ್ನು ಬಾಚುತ್ತಾ ಇರುತ್ತಾರೆ. ಇವರೆಲ್ಲಾ ಪ್ರಖ್ಯಾತರೂ ಕುಖ್ಯಾತರೂ ಆಗಿರುವುದರಿಂದ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಇವರ ಬಂಡವಾಳ ತಿಳಿಯದ್ದೇನು ಅಲ್ಲ.

ಬೃಹತ್ ಭ್ರಷ್ಠತೆಯ ಕೋಟೆ ಕಟ್ಟಲು ಅವಕಾಶ ನೀಡಿ ಆಮೇಲೆ ಕೋಟೆಯ ಮೇಲೆ ದಾಳಿ ಮಾಡಿದರೆ ಏನು ಪ್ರಯೋಜನ. ಪ್ರಾರಂಭದಲ್ಲಿ ಕೆಲವೇ ಕೋಟಿಗಳು ಅಕ್ರಮವಾಗಿ ಸಂಗ್ರಹಿಸುವಾಗ ಆಧಿಕಾರಿಗಳು ಇದನ್ನು ತಡೆದಿದ್ದರೆ ಎಷ್ಟೊಂದು ಬೃಹತ್ ಅವ್ಯವಹಾರ ತಡೆದು ದೇಶಕ್ಕೆ ಅಪಾರ ಹಣ ತೆರಿಗೆ ರೂಪದಲ್ಲಿ ಸಂಗ್ರಹಿಸಬಹುದಿತ್ತಲ್ಲವೇ ? ಉದಾಹರಣೆಗೆ 100 ಕೊಲೆ ಅಥವಾ ದರೋಡೆಯ ನಂತರ ಅಪರಾಧಿಯನ್ನು ಹಿಡಿಯುವುದಕ್ಕಿಂತ ಒಂದೆರಡು ಕೊಲೆಗಳು ಅಥವಾ ದರೋಡೆಯಿಂದ ಎಚ್ಚೆತ್ತುಕೊಂಡು ಶ್ರಮ ವಹಿಸಿದರೆ ಉಳಿದ 90 ಕ್ಕೂ ಹೆಚ್ಚು ಅಪರಾಧಗಳನ್ನು ತಡೆಯುವ ಸಾಧ್ಯತೆ ಇರುತ್ತದೆಯಲ್ಲವೇ ?

ರೋಗ ಬಂದ ನಂತರ ವಾಸಿ ಮಾಡುವುದಕ್ಕಿಂತ ಅದನ್ನು ಬರದಂತೆ ತಡೆಯುವುದೇ ಉತ್ತಮ ಮಾರ್ಗವಲ್ಲವೇ‌.
ಬಸ್ಸು ರೈಲಿನಲ್ಲಿ ಟಿಕೆಟ್ ಪಡೆಯದವರನ್ನು – ರಸ್ತೆಗಳಲ್ಲಿ ಟ್ರಾಫಿಕ್ ನಿಯಮ ಮೀರುವವರನ್ನು ಸ್ಥಳದಲ್ಲಿಯೇ ದಂಡ ವಸೂಲಿ ಅಥವಾ ಜೈಲಿಗೆ ಕಳಿಸುವ ವ್ಯವಸ್ಥೆ ಇದೆಯಲ್ಲವೇ. ಇದು ಒಳ್ಳೆಯದೇ.
ಆದರೆ ಸಾಮಾನ್ಯರಿಗೊಂದು ಪರೋಕ್ಷ ಕಳ್ಳರಿಗೊಂದು ನ್ಯಾಯವೇ.?

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!