December 22, 2024

Newsnap Kannada

The World at your finger tips!

Bankers dairy

ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)

Spread the love

ಆ ಅಜ್ಜಿ ಕೋಲೂರಿಕೊಂಡು ಬ್ಯಾಂಕಿನೊಳಗೆ ಬಂದು ಆ ಕಡೆ ಈ ಕಡೆ ಹುಡುಕಾಡುತ್ತಿದ್ದರು. ಅದೇನೆನಿಸಿತೋ ನನ್ನ ಕಕ್ಷೆಗೆ ಬಂದು ನಿಂತರು. “ಏನು ಬೇಕಜ್ಜೀ?” ಎಂದು ಕೇಳುವುದರೊಳಗೆ “ಮಗಾ ಇಕಾ ನನ್ ಪಾಸ್ ಪುಸ್ತ್ಕ, ಇದ್ರಾಗ್ ಅಕ್ಕಿ ಕಾಸು, ಲಕ್ಸ್ಮಿ ಕಾಸು ಬಂದೈತಾ ನೋಡು” ಎಂದು ಹೇಳಿದರು. ನೋಡಿದರೆ ಅವರು ಇಟ್ಟಿದ್ದ ಠೇವಣಿಯ ಬಡ್ಡಿ ಮಾತ್ರ ಬಂದಿತ್ತು. “ಅಜ್ಜೀ ಬಡ್ಡಿ 1200 ಬಂದಿದೆ. ಇನ್ಯಾವುದೂ ಬಂದಿಲ್ಲ” ಎಂದು ಹೇಳಿದೆ.

ಅದಕ್ಕೆ ಆಕೆ “ಅಯ್ಯೋ ಏನ್ಮಾಡ್ಲಪ್ಪಾ ಆಪಾಟಿ ದೂರದಿಂದ ಆಟೋ ಮಾಡ್ಕಂಡ್ ಬಂದೀವ್ನಿ, ನಮ್ ಅಳ್ಳಿಯಿಂದ ಇಲ್ಲಿಗ್ ಬರಕ್ ಆಟೋದವ್ನು ಇನ್ನೂರ್ ರೂಪಾಯ್ ಇಸ್ಕಂಡ. ಈಗ್ ಓಗಾಕ್ ಇನ್ನೂರು. ಒಂದೊಂದ್ಕಿಟಾ ಗೊತ್ತಿರೋ ಆಟೋದವ್ರು ಬಿಟ್ಟಿ ಕರ್ಕಂಡ್ ಬತ್ತಾರೆ, ಒಬ್ಬೊಬ್ಬು ನಿಮ್ಗೆ ಎಶ್ಟ್ ಕೊಡಕ್ಕಾಯ್ತದೆ ಅಷ್ಟ್ ಕೊಡಿ ಅಂತಾರೆ ಎಲ್ರೂ ಅಂಗೇ ಇರ್ತಾರಾ? ಬರೋ ಓಗಕ್ ನಾನೂರು ಕರ್ಚಾದ್ರೆ ನಾ ಏನಾ ಮಾಡ್ನಿ” ಎಂದು ಪೆಚ್ಚಾಗಿ ನಿಂತರು. “ಹೋಗ್ಲಿ ಬಿಡಿ ಅಜ್ಜಿ, ಇರೋ ದುಡ್ಡು ತೊಗೊಂಡು ಹೋಗಿ. ನಿಮ್ಮನೆಯವರು ಯಾರಾದ್ರೂ ಈ ಕಡೆ ಬರೋರು ಇದ್ದರೆ ಪಾಸ್ ಪುಸ್ತಕ ಕಳಿಸಿ.

ದುಡ್ಡು ಬಂದಿದ್ರೆ ಆಮೇಲೆ ಬಂದು ತೊಗೊಂಡು ಹೋಗೋರಂತೆ” ಎಂದೆ. “ಅಕ್ಕಿ ಕಾಸು, ಲಕ್ಸ್ಮಿ ಕಾಸು ತಗಂಡ್ ಓಗ್ದಿದ್ರೆ ಅವ್ನು ಊಟ ಆಕಕ್ಕಿಲ್ಲ ಕನವ್ವಾ” ಎಂದು ಬೆದರಿ ನಿಂತರು. “ಅವ್ನು ಅಂದ್ರೆ? ನಿಮ್ಮ ಮಗಾನಾ?” ಎಂದು ಕೇಳಿದೆ. “ಅಲ್ಲಾ ಕನವ್ವಾ, ನನ್ ಅಣ್ಣನ್ ಮಗ. ನನ್ ಮಗ್ಳು ವಸಿ ದೂರದ್ ಊರ್ನಾಗ್ ಅವ್ಳೆ. ಅವ್ಳಿಗೆ ನಾನ್ ಬ್ಯಾಡ್ವಂತೆ. ನಿನ್ನ ನನ್ ಮನ್ಯಾಗ್ ಮಡಿಕಳಕ್ಕಾಗಕ್ಕಿಲ್ಲ ಅಂದ್ಬುಟ್ಳು. ಅಣ್ಣನ್ ಮಗ ನೋಡ್ಕಾತಾ ಅವ್ನೆ. ಆದ್ರೆ ಅಕ್ಕಿ ಕಾಸು, ಲಕ್ಸ್ಮಿ ಕಾಸು ಅವ್ನಿಗೆ ಕೊಟ್ರೇನೇ ಅವ್ನು ಇಟ್ಟ್ ಆಕಾದು. ಕೊಟ್ರೂನೂ ಏಟೋ ಕಿಟ ತಂಗ್ಳನ್ನ ಹಳ್ಸಿದ್ದು ಪಳ್ಸಿದ್ದು ಇಕ್ತಾಳೆ ಅವ್ನ್ ಎಡ್ತಿ. ಅವ್ರು ಮಾತ್ರ ಬಿಸಿಬಿಸಿಯಾಗ್ ಮಾಡ್ಕಂಡ್ ತಿಂತಾರೆ. ಎಂಥದ್ದೋ ದೇವಸ್ಥಾನದ ಬಾಗ್ಲಲ್ಲಿ ಮಲ್ಗಾಕಿಂತ ಇಲ್ಲಿ ಏಟೋ ವಾಸಿ ಅಂತ ಮೂಗು ಮುಚ್ಕಂಡ್ ಇದೀನಿ” ಎಂದು ನಿಟ್ಟುಸಿರು ಬಿಟ್ಟರು. “ಅಜ್ಜೀ ಮತ್ತೆ ಹುಷಾರು ತಪ್ಪಿದ್ರೆ ಔಷಧಿ ಪಥ್ಯ ಹೇಗೆ?” ಎಂದು ಕುತೂಹಲದಿಂದ ಕೇಳಿದೆ. “ಬರತ್ತಲ್ಲಾ 1200 ಬಡ್ಡಿ ದುಡ್ಡು ಅದ್ರಲ್ಲೇ ನೋಡ್ಕಾಬೇಕು. ಸದ್ಯ ನನ್ಗೆ ಇಸ್ಟಾದ್ರೂ ಅನ್ಕೂಲ ಐತೆ. ಅದೇ ಮಂಡ್ಯದ ಸಾಕಮ್ಮಂಗೆ ಏನೂ ಆದಾಯ ಇಲ್ಲ. ಲಕ್ಸ್ಮೀ ಕಾಸು ಅಕ್ಕಿ ಕಾಸು ಬರಾದಕ್ಕೆ ರೇಸನ್ ಕಾಲ್ಡು ಇರ್ಬೇಕಲ್ವಾ ಅವಳ ಅತ್ರ ಅದೂ ಇಲ್ಲ. ಮಾಡ್ಸೋರ್ ಯಾರೂ ಇಲ್ಲ. ಅವ್ಳ ಮಗ್ಳು ಬಟ್ಟೆ ಇಸ್ತ್ರಿ ಮಾಡಾ ಅಂಗ್ಡಿ ಇಟ್ಕಂಡವ್ಳೆ. ಸಾಕಮ್ಮ ದಿನಾ ರಸ್ತೆ ರಸ್ತೆ ತಿರುಗಿ ಮನೆ ಮನೆಗೆ ಓಗಿ ಬಟ್ಟೆ ಇಸ್ಕಂಡ್ ಬಂದ್ರೇನೇ ಅವ್ಳ ಮಗ್ಳು ಅವ್ಳಿಗೆ ಊಟ ಆಕಾದು. ಬಟ್ಟೆ ಕಡ್ಮೆ ಆದ್ರೆ ಅರ್ಧ ಊಟ ಆಕ್ತಾಳಂತೆ. ಔಸ್ದಿ ಪೌಸ್ದಿ ಅಂದ್ರೂ ಮಗ್ಳು ಸಿಣಿಸಿಣಿ ಅಂತಾಳಂತೆ. ಬತ್ತಾ ಬತ್ತಾ ಅವ್ಳು ಬತ್ತೋಗ್ತಾ ಅವ್ಳೆ. ಅವ್ಳು ನನ್ಗೆ ದೂರದ್ ನೆಂಟಸ್ಥನ. ಅದೇನ್ ಎಣ್ ಮಕ್ಳೋ ಏನೋ. ಇಂದೆಲ್ಲಾ ಎಣ್ ಮಕ್ಳ್ ಅಂದ್ರೆ ತುಂಬ ಅಲವತ್ ಕೊಳ್ತಾರೆ, ಅಯ್ಯೋ ಪಾಪ ಅಂತಾರೆ ಅಂತಿದ್ರು. ಈಗ ಕಣ್ ಎದ್ರೂಗೆ ಇರೋ ನಾವೇ ಎತ್ತಿರೋ ಎಣ್ ಮಕ್ಳೂ ಕಲ್ಲಾಗ್ತಿದಾರೆ. ಇನ್ನು ದೇವ್ರು ಕಲ್ಲಾಗೋದ್ರಲ್ಲಿ ಏನು ಆಸ್ಚರ್ಯ?” ಎಂದು ಮೆಲ್ಲಗೆ ನಡೆದರು.

ಅಲ್ಲೇ ಕುಳಿತು ಈ ಪ್ರಸಂಗವನ್ನು ನೋಡುತ್ತಿದ್ದ ಸರ್ಕಾರೀ ಇಲಾಖೆಯಲ್ಲಿ ಜವಾನರಾಗಿದ್ದ ಮತ್ತು ನನಗೆ ಬ್ಯಾಂಕಿನಲ್ಲೇ ಕೆಲ ವರ್ಷಗಳಿಂದ ಪರಿಚಿತರಾಗಿದ್ದ ಶ್ರೀನಿವಾಸ್ ಅವರು “ಆ ಅಜ್ಜಿ ಹೇಳೋದು ನಿಜಾ ಮೇಡಂ. ಈಗಿನ ಹೆಣ್ಣು ಮಕ್ಕಳು ತುಂಬಾ ಬದಲಾಗಿದ್ದಾರೆ. ನನ್ ಅಕ್ಕ ತಂಗೀರನ್ನೇ ತೊಗೊಳಿ. ಒಂದು ಅಕ್ಕ ಎರಡು ತಮ್ಮಂದಿರು, ಒಂದು ತಂಗಿಯರನ್ನು ಓದಿಸಿ ಅವರನ್ನು ಸೆಟಲ್ ಮಾಡಿಸಬೇಕೆಂದು ನಾನು ಮದುವೆಯಾಗದೇ ಉಳಿದೆ. ನಾನು ದುಡಿದದ್ದೆಲ್ಲವನ್ನೂ ಅವರಿಗೇ ಖರ್ಚು ಮಾಡಿದೆ. ಎಲ್ಲರೂ ಈಗ ಸುಖವಾಗಿದ್ದಾರೆ. ಈಗ ನನ್ನ ಕಷ್ಟ ಸುಖವನ್ನು ಯಾರೂ ಕೇಳುವುದಿಲ್ಲ. ಇನ್ನು ತಮ್ಮಂದಿರ ಮಕ್ಕಳೇ ದುಡಿಯುತ್ತಿರುವುದರಿಂದ ವರ್ಷಕ್ಕೆರಡೋ ಮೂರೋ ಬಾರಿ ಫೆÇೀನ್ ಮಾಡುತ್ತಾರೆ, ಸಿಕ್ಕಾಗ ಮುಖ ನೋಡಿ ನಗುತ್ತಾರೆ ಅಷ್ಟೇ. ನನ್ನ ಅವಶ್ಯಕತೆ ಈಗ ಅವರಿಗೆ ಇಲ್ಲವಲ್ಲಾ.


ನನ್ನ ಭಾವಂದಿರಿಗೂ ಒಳ್ಳೆಯ ಸಂಪಾದನೆ ಇದೆ. ನನಗೆ ಯಾವುದಾದರೂ ಅರಿಯರ್ಸ್ ಬರೋ ವಿಚಾರ ಗೊತ್ತಾದ್ರೆ ನನ್ನ ಅಕ್ಕ ಮತ್ತು ತಂಗಿ ಫೆÇೀನ್ ಮಾಡಿ, ಹೇಗಿದ್ದೀಯಾ ತುಂಬಾ ದಿನ ಆಯ್ತು ನೋಡಿ ಮನೆಗೆ ಬರೋದು ತಾನೇ? ಅಂತ ಕರೆಯುತ್ತಾರೆ. ಈಗಲೂ ಅವರಿಬ್ಬರೂ ನಾನು ತಿಂಗಳು ತಿಂಗಳೂ ಹಣ ಕಳಿಸಿದರೆ ಆಗಾಗ ಫೆÇೀನ್ ಮಾಡಿ ವಿಚಾರಿಸಿಕೊಳ್ಳುತ್ತಾರೆ. ಒಂದು ತಿಂಗಳು ಹಣ ಕಳುಹಿಸದಿದ್ದರೆ ಆ ತಿಂಗಳೆಲ್ಲಾ ಅವರು ಮುನಿಸಿಕೊಂಡು ಫೆÇೀನ್ ಮಾಡುವುದಿಲ್ಲ. ನನ್ನನ್ನು ಹಣದ ಮಿಷಿನ್ ಎಂದುಕೊಂಡಿದ್ದಾರೆ. ಹಣ ಇಲ್ಲದಿದ್ದರೆ ನಾನೂ ಅವರ ಪಾಲಿಗೆ ಒಂದು ಕಟ್ಟಿಗೆಗೆ ಸಮಾನ. ನೀವು ಅಪರಿಚಿತ ಆ ಅಜ್ಜಿಯ ಜೊತೆ ಅಷ್ಟು ಪ್ರೀತಿಯಿಂದ ಮಾತನಾಡಿದ್ದು ನೋಡಿ ನೀವೇ ನನ್ನ ತಂಗಿ ಆಗಬಾರದಿತ್ತಾ ಎಂದು ಒಂದು ಕ್ಷಣ ಅನಿಸಿಬಿಟ್ಟಿತು. ಮೇಡಂ ನೀವು ತಪ್ಪು ತಿಳಿಯದಿದ್ದರೆ ಒಂದು ಮಾತು ಹೇಳಲಾ?” ಎಂದು ಕೇಳಿದರು. ನಾನು “ಅಯ್ಯೋ ಅದಕ್ಕೇನು ಹೇಳಿ” ಎಂದೆ. ಮುಂದಿನ ವಾರ ಗೌರಿ ಹಬ್ಬ ಇದೆಯಲ್ಲಾ ನನ್ನ ಅಕ್ಕನಿಗೆ ತಂಗಿಗೆ ಕೈತುಂಬಾ ಹಣ ಕೊಟ್ಟು ಸೀರೆ ಬಳೆ ಕೊಳ್ಳಲು ಹೇಳಿದ್ದೇನೆ. ನೀವೂ ದಯವಿಟ್ಟು ಬಳೆ ತೆಗೆದುಕೊಳ್ಳಬೇಕು. ನಮ್ ಇಲಾಖೆಯಲ್ಲಿ ಛೀಫ್ ಆಗಿದ್ದರಲ್ಲಾ ಮಂಗಳಾ ಮೇಡಂ ನಿಮಗೂ ಅವರು ಗೊತ್ತಲ್ಲಾ ಅವರೂ ನನಗೆ ಸಹೋದರಿ ಇದ್ದ ಹಾಗೆ. ಈಗ ಬೇರೆ ಊರಿಗೆ ವರ್ಗ ಆಗಿದ್ದಾರಲ್ಲಾ ಅವರಿಗೂ ಬಳೆಗೆ ಎಂದು ಕಳುಹಿಸಿದ್ದೇನೆ” ಎಂದು ಹೇಳಿ ಐನೂರರ ನೋಟೊಂದನ್ನು ತೆಗೆದರು. ನಾನು ಗಾಬರಿಯಾಗಿ “ಅಯ್ಯೋ ಇಷ್ಟೆಲ್ಲಾ ಬೇಡ. ನೀವು ಇಷ್ಟು ವಿಶ್ವಾಸದಿಂದ ಹೇಳುತ್ತಿದ್ದೀರಂತ ಇಪ್ಪತ್ತು ರೂಪಾಯಿ ಕೊಡಿ ಸಾಕು ಅಷ್ಟೇ ಆಗೋದು ಬಳೆಗೆ” ಎಂದೆ. ಆತ ತನ್ನ ಪರ್ಸ್ ಪೂರಾ ತೆಗೆದು “ನೀವೇ ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳಿ” ಎಂದರು. ಇದ್ದುದರಲ್ಲಿ ಚಿಕ್ಕ ನೋಟು ತೆಗೆದುಕೊಳ್ಳೋಣವೆಂದು ಹತ್ತರ ನೋಟಿಗಾಗಿ ನೋಟ ಹರಿಸಿದೆ. ಇರಲಿಲ್ಲ, ಇಪ್ಪತ್ತರಕ್ಕೆ ನೋಟ ಹರಿಸಿದೆ ಇರಲಿಲ್ಲ. ಕೊನೆಗೆ ವಿಧಿ ಇಲ್ಲದೇ ಐವತ್ತರ ನೋಟನ್ನು ನೋಡಿ ಅದನ್ನೇ ಕೊಡಿ” ಎಂದೆ. ಕಣ್ಣಿಗೊತ್ತಿಕೊಂದು ನನಗೆ ಕೊಟ್ಟು “ಗೌರಿ ಹಬ್ಬ ಒಳ್ಳೆದಾಗಲಿ ಮೇಡಂ” ಎಂದು ಹೇಳಿ ಹೊರಟರು.
ನಮ್ಮ ಹೆಣ್ಣು ಮಕ್ಕಳು ಯಾಕೆ ಹೀಗೆ ಬದಲಾಗುತ್ತಿದ್ದಾರೆ ಎಂಬ ಯೋಚನೆ ನನ್ನನ್ನು ಸದಾ ಕಾಡುತ್ತದೆ.ಹಾಗಂತ ಎಲ್ಲ ಹೆಣ್ಣು ಮಕ್ಕಳೂ ಹೀಗೇನಲ್ಲ.

ಅವರು ಕೊಟ್ಟ ಆ ಐವತ್ತರ ನೋಟಿಗೆ ಅವರ ಹೆಸರು ಬರೆದ ಬಿಳಿ ಚೀಟಿಯನ್ನು ಪಿನ್ ಮಾಡಿ ಹಾಗೆಯೇ ಪರ್ಸಿನಲ್ಲಿ ಇಟ್ಟಿರುವೆ. ಪರ್ಸ್ ತೆಗೆದಾಗಲೆಲ್ಲಾ ನೆನಪು ತೇಲಿ ಬರುತ್ತದೆ.

IMG 20180306 WA0008 1 edited

-ಡಾ. ಶುಭಶ್ರೀಪ್ರಸಾದ್, ಮಂಡ್ಯ.

Copyright © All rights reserved Newsnap | Newsever by AF themes.
error: Content is protected !!