ವೇಗದಿಂದ ಸ್ಥಭ್ದತೆಗೆ ಬಂದು ನಿಂತಿರುವಾಗ……
ಕೊರೋನಾ ವೈರಸ್ ಹಾವಳಿ ಇನ್ನಷ್ಟು ದೀರ್ಘಕಾಲ ಮುನ್ನಡೆಯುವ ಎಲ್ಲಾ ಸೂಚನೆಗಳು ಇರುವಾಗ….
ಜೊತೆಗೆ ವೈಯಕ್ತಿಕ, ಕೌಟುಂಬಿಕ ಮತ್ತು ಔದ್ಯೋಗಿಕ ಆರ್ಥಿಕ ಪರಿಸ್ಥಿತಿ ವಿಷಮಿಸುವುದು ಬಹುತೇಕ ಖಚಿತವಾಗಿರುವಾಗ……
ಇವುಗಳ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳು ನಮ್ಮ ಮೇಲೆ ಬೀರುವುದು ನಿಶ್ಚಿತವಾಗಿರುವಾಗ…..
ಬದಲಾವಣೆಗೆ ನಿಧಾನವಾಗಿ ನಾವು ಮಾನಸಿಕವಾಗಿ ಸಿದ್ದರಾಗಬೇಕಿದೆ……
ನಮ್ಮ ವಯಸ್ಸು, ಆರ್ಥಿಕ ಪರಿಸ್ಥಿತಿ, ಜೀವನ ವಿಧಾನ ಅವಲಂಬಿಸಿ ಇದನ್ನು ಸ್ವಯಂ ಅರ್ಥಮಾಡಿಕೊಳ್ಳಬೇಕಿದೆ……
ಕೊರೋನಾ ಮತ್ತು ಆರ್ಥಿಕ ಕುಸಿತದಿಂದ ಈಗ ಹೆಚ್ಚು ವ್ಯಾವಹಾರಿಕ ಲಾಭಗಳನ್ನು ತರುತ್ತಿರುವ ಕೆಲವು ಕ್ಷೇತ್ರಗಳು ಒಂದಷ್ಟು ನಷ್ಟವನ್ನು ಅನುಭವಿಸಬಹುದು ಮತ್ತು ಕೆಲವು ಹೊಸ ಕ್ಷೇತ್ರಗಳು ಲಾಭದಾಯಕವಾಗಿ ಬೆಳೆಯಬಹುದು.
ಸೇವಾವಲಯ ಮುಂದಿನ ಕೆಲವು ವರ್ಷಗಳು ಒಂದಷ್ಟು ಕಳೆಗುಂದಬಹುದು. ಉತ್ಪಾದನಾ ವಲಯ ಚೇತರಿಸಿಕೊಳ್ಳಬಹುದು.
ಬಹುಮುಖ್ಯವಾಗಿ ಈಗಾಗಲೇ ಹಿನ್ನಡೆಯಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮವು ಮತ್ತಷ್ಟು ಬೆಲೆ ಕಳೆದುಕೊಳ್ಳುತ್ತವೆ. ಶಿಕ್ಷಣ ಕ್ಷೇತ್ರ ಸಾಧಾರಣ ಪ್ರಗತಿ ಸಾಧಿಸಬಹುದು. ಮನರಂಜನಾ ಉದ್ಯಮವೂ ಸಾಧಾರಣ ಮಟ್ಟದಲ್ಲಿಯೇ ಉಳಿಯಬಹುದು. ಪ್ರವಾಸೋದ್ಯಮ ಜೊತೆಗೆ ಸಾರಿಗೆ ಮೊದಲಿನಂತೆ ಚಟುವಟಿಕೆ ಆರಂಭಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೋಟೆಲ್ ಉದ್ಯಮ ಎಂದಿನಂತೆ ಇರುತ್ತದೆ. ಸಾಪ್ಟ್ ವೇರ್ ವ್ಯವಹಾರದಲ್ಲಿ ಕೆಲವು ತಿಂಗಳು ಉದ್ಯೋಗ ನಷ್ಟದ ಸಾಧ್ಯತೆ ಇದೆ. ಗಾರ್ಮೆಂಟ್ಸ್ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ವಾಹನಗಳ ಮಾರಾಟ ಸಹ ಹೆಚ್ಚು ಸಮಯ ಬೇಡುತ್ತದೆ. ಬ್ಯಾಂಕಿಂಗ್ ಸೆಕ್ಟರ್ ಸ್ವಲ್ಪ ತೊಂದರೆಗೆ ಸಿಲುಕಬಹುದು.
ಪ್ರಗತಿ ದಾಖಲಿಸಬಹುದಾದ ಕ್ಷೇತ್ರಗಳಲ್ಲಿ ಕೃಷಿ, ಕೃಷಿ ಅವಲಂಬಿತ ಇತರ ಉದ್ಯಮಗಳು, ಸಂಗ್ರಹ ಮತ್ತು ಮಾರುಕಟ್ಟೆ ಈಗ ಇರುವುದಕ್ಕಿಂತ ಉತ್ತಮ ಮಟ್ಟ ತಲುಪುವ ಎಲ್ಲಾ ಸಾಧ್ಯತೆ ಇದೆ.
ಶಿಥಲತೆಗೆ ತಲುಪಿದ್ದ ಸಣ್ಣ ಉದ್ದಿಮೆ, ವ್ಯಾಪಾರ ವ್ಯವಹಾರ ಚೇತರಿಸಿಕೊಳ್ಳುವ ಲಕ್ಷಣಗಳಿವೆ. ಜೊತೆಗೆ ಈಗಲೇ ಊಹಿಸಲಾಗದ ಕೆಲವು ಅನಿರೀಕ್ಷಿತ ಉದ್ಯಮಗಳು ಲಾಭ ಕಂಡುಕೊಳ್ಳಬಹುದು.
ಸರ್ಕಾರಿ ಅಧಿಕಾರಿಗಳು ಮತ್ತು ಈಗಾಗಲೇ ಒಂದು ಲಕ್ಸುರಿ ಜೋನ್ ನಲ್ಲಿರುವವರಿಗೆ ಇದರ ಪರಿಣಾಮ ಆಗುವುದಿಲ್ಲ. ಮಧ್ಯಮ ಮತ್ತು ಕೆಳ ವರ್ಗದವರ ಬದುಕಿನಲ್ಲಿ ಹೆಚ್ಚು ಏರಿಳಿತ ಉಂಟಾಗಬಹುದು.
ಈ ವರ್ಗದವರು ಮುಂದಿನ ಆರು ತಿಂಗಳು ದೇಶದ ಎಲ್ಲಾ ಬದಲಾವಣೆಗಳನ್ನು ಆರ್ಥಿಕ ಅಧ್ಯಯನದ ದೃಷ್ಟಿಕೋನದಿಂದ ಸೂಕ್ಷ್ಮವಾಗಿ ಗಮನಿಸಬೇಕು. ವೈಯಕ್ತಿಕವಾಗಿ ತಮ್ಮ ಜೀವನ ಶೈಲಿಯನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿಕೊಂಡು ಹಣಕಾಸಿನ ವ್ಯವಸ್ಥೆಯ ಮೇಲೆ ಎಚ್ಚರಿಕೆಯ ನಿಗಾ ಇಟ್ಟಿರಬೇಕು. ಅನವಶ್ಯಕ ಮತ್ತು ಇಷ್ಟು ದಿನ ಖರ್ಚು ಮಾಡುತ್ತಿದ್ದ ರೀತಿ ಮಾಡಬಾರದು. ದುಬಾರಿ ಬೆಲೆಯ ಬಟ್ಟೆ ಪಾದರಕ್ಷೆ ಪ್ರವಾಸ ವಾಹನ ಮೊಬೈಲ್ ಮುಂತಾದ ವಸ್ತುಗಳಿಗೆ ಹಣ ಖರ್ಚು ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ.
ಇದೆಲ್ಲವೂ ಕೊರೋನಾ ವೈರಸ್ ಎಷ್ಟು ದೀರ್ಘಕಾಲ ಕಾಡುತ್ತದೆ ಮತ್ತು ಎಷ್ಟು ಸಾವು ನೋವು ಉಂಟುಮಾಡುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಅದೃಷ್ಟವಶಾತ್ ಒಂದು ವೇಳೆ ಶೀಘ್ರದಲ್ಲೇ ಇದಕ್ಕೆ ಪ್ರತಿರೋಧಕ ಔಷಧಿ ಸಿದ್ದವಾದರೆ ನನ್ನ ಮೇಲಿನ ಎಲ್ಲಾ ಅನಿಸಿಕೆಗಳು ಬುಡಮೇಲಾಗಬಹುದು. ಇಲ್ಲದಿದ್ದರೆ ಬದಲಾವಣೆಗಳನ್ನು ಗ್ರಹಿಸುವ ಸಾಮರ್ಥ್ಯದ ಮೇಲೆ ಸಾಧಾರಣ ಮಧ್ಯಮ ವರ್ಗದ ಜನರ ಬದುಕು ನಿರ್ಧಾರವಾಗಬಹುದು.
ಇದು ಒಂದು ಮೇಲ್ನೋಟದ ಅಭಿಪ್ರಾಯ.
ಆಳವಾಗಿ ಯೋಚಿಸುತ್ತಾ ಹೋದಂತೆ ಮತ್ತು ಇದರಲ್ಲಿ ಅನುಭವ ಇರುವ ಹಿತೈಷಿಗಳ ಸಲಹೆ ಮಾರ್ಗದರ್ಶನ ಪಡೆದು ಹೊಸ ಆರ್ಥಿಕ ವಲಯ ಸೃಷ್ಟಿ ಮಾಡಿಕೊಳ್ಳಲು ಪ್ರಯತ್ನಿಸಬಹುದು.
ಕೆಲವರ ಬದುಕಿನಲ್ಲಿ ಕೊರೋನಾ ಪರಿಣಾಮದಿಂದಾಗಿಯೇ ಕಷ್ಟಗಳು ಪ್ರಾರಂಭವಾಗಬಹುದು. ಹಾಗೆಯೇ ತುಂಬಾ ಕಷ್ಟದಲ್ಲಿದ್ದವರು ಅನಿರೀಕ್ಷಿತವಾಗಿ ಚೇತರಿಸಿಕೊಳ್ಳಲೂ ಬಹುದು.
ಕೋವಿಡ್ 19 ದುಷ್ಪರಿಣಾಮಗಳನ್ನು ದಿಟ್ಟವಾಗಿ ಎದುರಿಸುವ ಒಂದು ಮಾರ್ಗವೆಂದರೆ ಹಳೆಯ ವೈಭವಗಳನ್ನು ಮರೆಯುವುದು, ಭವಿಷ್ಯದ ಕನಸುಗಳನ್ನು ಮಿತಿಯಲ್ಲಿಡುವುದು, ವರ್ತಮಾನಕ್ಕೆ ನಿಧಾನವಾಗಿ ಒಗ್ಗಿಕೊಳ್ಳುವುದು…..
ಏನೇ ಆಗಲಿ, ಎಷ್ಟೇ ಕುಸಿತವಾಗಲಿ, ವೈಯಕ್ತಿಕ ಬದುಕು ಸಂಕಷ್ಟಕ್ಕೆ ಸಿಲುಕಲಿ ಧೃತಿಗೆಡದಿರಿ. ಮುಂದಿನ ದಿನಗಳು ಖಂಡಿತ ಒಳ್ಳೆಯದಾಗುತ್ತದೆ ಎಂಬ ಭರವಸೆಯೊಂದಿಗೆ…..
ಮಾನಕ್ಕಿಂತ ಪ್ರಾಣವೇ ದೊಡ್ಡದು.
ಮಾನ ಒಂದು ಸಾಮಾಜಿಕ ಭ್ರಮೆ.
ಅದು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ.
ಪ್ರಾಣ ಇರುವುದು ಒಂದೇ. ಅದು ಸಾಧ್ಯವಾದಷ್ಟು ಕಾಪಾಡಿಕೊಳ್ಳೋಣ….
- ವಿವೇಕಾನಂದ. ಹೆಚ್.ಕೆ.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ
ಮೈಸೂರಿನ ಸರ್ಕಾರಿ ಶಾಲೆಯ ಜಾಗ ವಕ್ಫ್ ಆಸ್ತಿಯಾಯ್ತು – ಸಿಎಂಗೆ ಪ್ರತಾಪ್ ಸಿಂಹ ಟಾಂಗ್