ಇಂತಹ ನಾಯಕರು ಬೇಕಿದೆ

Team Newsnap
4 Min Read

ರಾಜಕೀಯ ನಾಯಕರೆಂದರೆ ದೇಶದ ಕಾನೂನುಗಳನ್ನು ರಚಿಸಿ ದೇಶವನ್ನು ಮುನ್ನಡೆಸುವವರು. ಜನ ಸಾಮಾನ್ಯರ ನಾಡಿ ಮಿಡಿತ ಅರಿತವರು. ಜನರಿಗೆ ಆದರ್ಶವಾಗಿರಬೇಕಾದವರು. ಇಂದಿನ ಪರಿಸ್ಥಿತಿಯಲ್ಲಿ ರಾಜಕೀಯ ಹಣಹಣಿ ವೈಯಕ್ತಿಕವಾಗಿ ಸಾಗುತ್ತಿದೆ. ಇದು ಲೋಕತಂತ್ರದ ತಳಹದಿಗೆ ವಿರುದ್ಧ ಎನಿಸುತ್ತದೆ.

ಹಾಗಾದರೆ ರಾಜಕೀಯ ನಾಯಕರ ನಡೆ ದ್ವೇಷದಾಚೆ ಆದರ್ಶಪ್ರಿಯವಾಗಿರಬೇಕು. ಹಾಗಾದರೆ ಈ ಕೆಳಗಿನ ರಾಜಕೀಯ ಮುತ್ಸದ್ಧಿಗಳ ವರ್ತನೆಯನ್ನು ಒಮ್ಮೆ ಅವಲೋಕಿಸಿ ನೋಡೋಣ.

ಘಟನೆ-2:

1984-1989 ರ ಸಮಯದಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಶ್ರೀ ರಾಜೀವ್ ಗಾಂಧಿಯವರು ತಮ್ಮ ತಾಯಿ ಶ್ರೀಮತಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ನೇಮಕಗೊಂಡಿದ್ದು ನಮಗೆ ತಿಳಿದಿದೆ. ನಮಗೆಲ್ಲ ಗೊತ್ತಿರುವಂತೆ ರಾಜೀವ್ ಕಾಂಗ್ರೆಸ್ಸಿನ ಕಟ್ಟಾಳು. ಆಗ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಯ ನಾಯಕ. ಕಾಂಗ್ರೆಸ್ ಮತ್ತು ಬಿಜೆಪಿ ಹಾವು ಮುಂಗಸಿಯಂತಿರುವ ಪಕ್ಷಗಳು. ಒಂದು ಉತ್ತರವಾದರೆ ಇನ್ನೊಂದು ದಕ್ಷಿಣ ಎನ್ನುವಂತೆ. ಎರಡೂ ಪಕ್ಷಗಳು ಕಟ್ಟಾ ವಿರೋಧಿಗಳು.

ಹೀಗಿರುವ ಸಂದರ್ಭದಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಂದು ಅವರ ಕಿಡ್ನಿಯಲ್ಲಿ ಗಂಭೀರವಾದ ಸಮಸ್ಯೆ ಉಂಟಾಗುತ್ತದೆ. ಆಗಿನ ಸಮಯದಲ್ಲಿ ಆ ಕಿಡ್ನಿಯ ತೊಂದರೆಗೆ ಭಾರತದಲ್ಲಿ ತಕ್ಕ ಚಿಕಿತ್ಸೆ ಲಭಿಸುತ್ತಿರಲಿಲ್ಲ. ಅದು ವಾಜಪೇಯಿ ಅವರ ಪ್ರಾಣಕ್ಕೆ ಕುತ್ತು ತಂದಿತ್ತು. ಈ ವಿಷಯ ಹೇಗೋ ರಾಜೀವ್ ಗಾಂಧಿಯವರಿಗೆ ತಿಳಿದು ವಾಜಪೇಯಿಯವರನ್ನು ತಮ್ಮ ಹತ್ತಿರ ಕರೆಸಿ ಹೀಗೆ ಹೇಳುತ್ತಾರೆ. ನಿಮ್ಮನ್ನು ವಿಶ್ವ ಸಂಸ್ಥೆಯ ನಿಯೋಗಕ್ಕೆ ಭಾರತದ ಒಬ್ಬ ಸದಸ್ಯನನ್ನಾಗಿ ನೇಮಕ ಮಾಡಿ ಕಳಿಸುತ್ತಿದ್ದೇನೆ. ಈ ನಿಯೋಗ ವರ್ಷಗಟ್ಟಲೆ ಅಮೆರಿಕದಲ್ಲಿ ಇರುವ ಕಾರಣ ನೀವು ಬರುವುದರೊಳಗಾಗಿ ನಿಮ್ಮ ಕಿಡ್ನಿಯ ಸಮಸ್ಯೆಗೆ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಭಾರತಕ್ಕೆ ಮರಳುವರೆಂದು ಆಶಿಸುತ್ತೇನೆ. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನಾನು ಮಾಡಿದ್ದೇನೆ ಎಂದು ಶುಭ ಹಾರೈಸಿ ಕಳಿಸುತ್ತಾರೆ. ಅವರ ಆಸೆಯಂತೆ ಅಟಲ್ ಬಿಹಾರಿ ವಾಜಪೇಯಿ ಅವರು ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಮರಳುತ್ತಾರೆ.

ಈ ವಿಷಯವನ್ನು ರಾಜೀವ್ ಗಾಂಧಿ ಅವರು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಮುಂದೆ 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯಾದ ಮೇಲೆ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಈ ವಿಷಯವನ್ನು ಸ್ವತಹ ತಾವೇ ಮಾಧ್ಯಮದ ಮುಂದೆ ಇಡುತ್ತಾ ಶ್ರೀ ರಾಜೀವ್ ಗಾಂಧಿ ಅವರು ನನಗೆ ಪ್ರಾಣ ದಾನ ಮಾಡಿದ್ದಾರೆ ಎನ್ನುತ್ತಾರೆ.

ಸಂಬಂಧವೆಂದರೆ ಹೀಗಿರಬೇಕು ಅಲ್ಲವೇ! ರಾಜಕೀಯವಾಗಿ ಅದೆಷ್ಟೇ ವಿರೋಧಿಗಳಾದರೂ ಕೂಡ ವೈಚಾರಿಕವಾಗಿ ಹೋರಾಡಬೇಕೆ ಹೊರತು ವ್ಯಕ್ತಿಗತ ಅಲ್ಲ. ಈ ತರದ ಹೊಂದಾಣಿಕೆ ಇದ್ದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಎದುರಿರುವ ವಿರೋಧ ಪಕ್ಷದವರ ಜೊತೆ ಹೊಂದಾಣಿಕೆ ಮಾಡಿಕೊಂಡು ಸಾಗುತ್ತಾರೆ. ಈ ರಾಜಕೀಯ ಸಂಬಂಧ ದೇಶದ ಹಿತವನ್ನು ಬಯಸುತ್ತದೆ.

ಘಟನೆ -2:

ಪಾರ್ಲಿಮೆಂಟ್ ನ ಸೌತ್ ಬ್ಲಾಕ್ ಲ್ಲಿ ಒಂದು ಗೋಡೆಗೆ ಸುಮಾರು ವರ್ಷಗಳಿಂದ ನೆಹರುರವರ ಭಾವಚಿತ್ರವನ್ನು ನೇತು ಹಾಕಲಾಗಿತ್ತು.

ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಮೊದಲ ಬಾರಿ ವಿದೇಶ ಮಂತ್ರಿಯಾಗಿ ಆ ಸೌತ್ ಬ್ಲಾಕ್ ನ ಆ ಭಾಗದಲ್ಲಿ ಓಡಾಡುವಾಗ ನೆಹರುರವರ ಫೋಟೋ ತೆಗೆದು ಹಾಕಿದ್ದಾರೆ ಎನ್ನುವುದು ವಾಜಪೇಯಿಯವರ ಗಮನಕ್ಕೆ ಬರುತ್ತದೆ.

ತಕ್ಷಣವೇ ಸಂಬಂಧ ಪಟ್ಟವರನ್ನು ಕರೆದು ಯಾರು ತಗೆದದ್ದು, ಯಾಕೆ ತಗೆದದ್ದು ಎಂದು ಪ್ರಶ್ನೆ ಮಾಡುತ್ತಾರೆ. ಉತ್ತರ ಬರುವುದಿಲ್ಲ. ಈ ಕ್ಷಣವೇ ಆ ನೆಹರುರವರ ಭಾವಚಿತ್ರವನ್ನು ಅದೇ ಸ್ಥಳದಲ್ಲಿ ಹಾಕಬೇಕೆಂದು ಆದೇಶ ಮಾಡಿ ತಮ್ಮ ಮುತ್ಸದ್ಧಿತನವನ್ನು ಮೆರೆಯುತ್ತಾರೆ. ಹಾಗಂತ ವಾಜಪೇಯಿ ಮತ್ತು ನೆಹರುರವರ ನಡುವೆ ರಾಜಕೀಯ ವಾದ, ವಾಗ್ವಾದಗಳಿರಲಿಲ್ಲ ಎಂದಲ್ಲ. ಅವೆಲ್ಲವನ್ನು ಮೀರಿ ದ್ವೇಷ, ಅಸೂಯೆಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳದೆ ವೈಚಾರಿಕವಾಗಿ, ಸೈದ್ದಾಂತಿಕವಾಗಿ ಮಾತ್ರ ಅವರು ಒಬ್ಬರಿಗೊಬ್ಬರು ವಿರೋಧಿಸುತ್ತಿದ್ದರೆ ಹೊರತು ವೈಯಕ್ತಿಕವಾಗಿ ಅಲ್ಲ.

ನೆಹರುರವರು ಪ್ರಧಾನ ಮಂತ್ರಿಯಾಗಿದ್ದಾಗ ವಾಜಪೇಯಿಯವರು ನವ ಯುವಕನಾಗಿ ಪಾರ್ಲಿಮೆಂಟ್ ಪ್ರವೇಶ ಮಾಡಿ, ಪಾರ್ಲಿಮೆಂಟ್ ನಲ್ಲಿ ಹಿಂದಿನ ಭಾಗದಲ್ಲಿ ಕೂಡುತ್ತಿದ್ದರು. ಒಮ್ಮೆ ಇಬ್ಬರಿಗೂ ವಾಗ್ವಾದ ಪ್ರಾರಂಭವಾಯ್ತು. ಆಗ ವಾಜಪೇಯಿ ಯವರು ನೆಹರುರವರಿಗೆ “ನಿಮ್ಮ ವ್ಯಕ್ತಿತ್ವದಲ್ಲಿ ಚರ್ಚಿಲ್ ನೂ ಇದ್ದಾನೆ. ಚೇಂಬರ್ಲೇನ್ ಕೂಡ ಇದ್ದಾನೆ” ಎಂದು ಮಾತಿನ ಬರದಲ್ಲಿ ಹೇಳುತ್ತಾರೆ. ಚೇಂಬರ್ಲೇನ್ UK ಯ ಪ್ರಧಾನಿಯಾಗಿದ್ದು ಸಮಾಧಾನಗೊಳಿಸುವಿಕೆಯ ವಿದೇಶಾಂಗ ನೀತಿಗೆ (policy of Appeasment) ಪ್ರಸಿದ್ಧನಾಗಿದ್ದ. ಹಿಟ್ಲರ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಕೂಡ ವಿವಾದವಾಗಿತ್ತು.

ಹಾಗೆಯೇ ಚರ್ಚಿಲ್ ಕೂಡ ಬ್ರಿಟೀಷ್ ರಾಜಕಾರಣಿ, ಮುತ್ಸದ್ದಿ, ಉತ್ತಮ ವಾಗ್ಮಿ, ಇತಿಹಾಸಕಾರ, ಬರಹಗಾರ, ಕಲಾವಿದ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಮುಂದಾಳುತ್ವ ವಹಿಸಿ, ಸೋಲಿನ ದವಡೆಯಿಂದ ವಿಜಯದೆಡೆಗೆ ನಡೆಸಿ ಪ್ರಸಿದ್ಧರಾದವರು.

ಸಂವಾದ ಮುಗಿಸಿ ಹೊರಬಂದ ಮೇಲೆ ನೆಹರುರವರು ಯುವಕ ವಾಜಪೇಯಿಯವರನ್ನು ಹತ್ತಿರ ಕರೆದು ಏನೊಂದು ನಕಾರಾತ್ಮಕವಾಗಿ ಮಾತನಾಡದೆ ಹೆಗಲ ಮೇಲೆ ಕೈ ಹಾಕಿ ನಗುತ್ತಾ “ನೀನು ತುಂಬಾ ಚನ್ನಾಗಿ ಮಾತನಾಡುತ್ತೀಯಾ” ಎಂದು ಬೆನ್ನು ತಟ್ಟುತ್ತಾರೆ.

ಹೀಗೆ ಆಡಿದ ಮಾತುಗಳನ್ನು ಮನಸಿಗೆ ತೆಗೆದುಕೊಳ್ಳದೆ ಅವರಲ್ಲಿಯ ಗುಣವನ್ನು ಗುರುತಿಸಿ ಪ್ರೋತ್ಸಾಹಿಕವಾಗಿ ಮಾತನಾಡುವ ವ್ಯಕ್ತಿತ್ವದ ಪರಿಪಕ್ವತೆ ಮೇರು ವ್ಯಕ್ತಿತ್ವದಲ್ಲಿ ಮಾತ್ರ ಕಾಣಲು ಸಾಧ್ಯ. ಈ ಕಾರಣಕ್ಕಾಗಿ ವಿಷಯಜ್ಞಾನದ ಜೊತೆಗೆ ಜೀವನಾನುಭವದಲ್ಲಿಯೂ ನೆಹರುರವರು ಪಂಡಿತ ನೆಹರು ರವರಾಗಿ ಕಾಣುತ್ತಾರೆ.

ಇಂತವರನ್ನು ನಾವು ಅದ್ಭುತವಾದ ಮುತ್ಸದ್ದಿ ರಾಜಕಾರಣಿಗಳು ಎನ್ನಬಹುದು. ಇಂತಹ ನಾಯಕರು ಎಲ್ಲಾ ಪಕ್ಷದಲ್ಲಿ ಇದ್ದರೆ ಲೋಕತಂತ್ರ ಅದೆಷ್ಟು ಚಂದ ಅಲ್ವಾ..!

dr rajshekar nagur

ಡಾ. ರಾಜಶೇಖರ ನಾಗೂರ

Share This Article
Leave a comment