January 3, 2025

Newsnap Kannada

The World at your finger tips!

WhatsApp Image 2023 05 27 at 5.33.28 PM

“ನಮ್ಮ ಜೀವನದ ಯಜಮಾನರು ನಾವೇ “

Spread the love

“ನಾನು ಒಂದು ಕಾಲದಲ್ಲಿ ಅವನಿಗೆ ತುಂಬಾ ಉಪಕಾರ ಮಾಡಿದ್ದೆ. ಅವನ ಕಷ್ಟ ಕಾಲದಲ್ಲಿ ಜೀವನದಲ್ಲಿ ಮೇಲೆ ಬರಲು ಅವನಿಗೆ ಜೊತೆಯಾಗಿದ್ದೆ. ನನ್ನ ಕಂಪನಿಯಲ್ಲೇ ಕೆಲಸ ಕೊಡಿಸಿದೆ…..ಆದರೆ ಇಂದು ಅವನಿಗೆ ನನ್ನ ನೆನಪಿಲ್ಲ ಎಂಬುವುದು ಹೋಗಲೀ,,ಅವನೇ ನನ್ನನ್ನು ಕೆಲಸದಿಂದ ಕಿತ್ತು ಹಾಕಿಸಿದ ಸಾ…..”
ಇದು ಇಂದು ಒಬ್ಬ ನಿಷ್ಕಲ್ಮಶ ಮನಸ್ಸಿನ ಒಬ್ಬ ಆಪ್ತರು ನನ್ನಲ್ಲಿ ನೋವು ತೋಡಿಕೊಂಡಿದ್ದ ರೀತಿ….

(ನಿಮಗೂ ಗೊತ್ತಿರುವ)ಒಂದು ಪಂಚತಂತ್ರ ಕತೆಯೊಂದಿಗೆ ನಾನು ಅವರಿಗೆ ಸಮಾಧಾನ ಹೇಳಿದೆ….

ಪಟ್ಟಣದ ಪಕ್ಕದ ಒಬ್ಬ ರೈತನ ಕುದುರೆ ಕೂತಲ್ಲೇ ಆಯಿತು. ಪಶುವೈದ್ಯಾಧಿಕಾರಿ ಬಂದು ಕುದುರೆಯನ್ನು ಪರೀಕ್ಷಿಸಿ ನೋಡಿ , ಮದ್ದುಗಳನ್ನು ಕೊಟ್ಟು ಹೊರಡುವಾಗ, “ಮೂರು ದಿನಗಳ ನಂತರ ಈ ಮದ್ದಿನಿಂದ ಕುದುರೆ ಎದ್ದೇಳದಿದ್ದಲ್ಲಿ, ಕಟುಕನಿಗೆ ಮಾರಿ” ಎಂದು ಹೇಳಿದ್ದು ರೈತನ ಆಡು ಕೇಳಿಸಿತು. ತಾನು ಕೇಳಿಸಿದ್ದನ್ನು ಆಡು ಕುದುರೆಗೆ ಹೇಳಿತು.

ಆಡು ಎಲ್ಲಾ ದಿನ ಕುದುರೆಯನ್ನು ಎದ್ದೇಳಲು ಹುರಿದುಂಬಿಸುತ್ತಿತ್ತು..ಆದರೆ ಫಲಕಾರಿಯಾಗಲಿಲ್ಲ. ಮೂರನೇ ರಾತ್ರಿಯೂ ಕುದುರೆ ಎದ್ದೇಳದ್ದು ನೋಡಿ, ರೈತ ಬೆಳ್ಳಂಬೆಳಗ್ಗೆ ಕಟುಕನನ್ನು ಬರಲು ಹೇಳಿ ಕಳಿಸಿದ್ದು ದೊಡ್ಡಿಯಿಂದ ಕೇಳಿಸಿತು. ಅಂದು ರಾತ್ರಿಯಿಂದ ಬೆಳಗಾಗುವವರೆಗೂ ಆಡು ಕುದುರೆಯನ್ನು ಉತ್ಸಾಹಿಯಾಗಿಸುವುದರಲ್ಲಿ ಸಫಲವಾಯಿತು. ರೈತ ಬೆಳಿಗ್ಗೆ ಬಂದು ನೋಡಿದಾಗ, ಕುದುರೆ ಎದ್ದು ನಿಂತು ನಡೆಯುತ್ತಿತ್ತು. ಆ ಖುಷಿಗೆ ರೈತ ಆಡನ್ನು ಕೊಂದು ಊರಿಗೆ ಔತಣಕೂಟವಿತ್ತ.

ನಾವು ಯಾರಿಗಾದರೂ ಉಪಕಾರ ಮಾಡುತ್ತಿದ್ದರೆ, ಅವರು ಅದರಿಂದ ಪ್ರಯೋಜನ ಪಡೆದ ಕೂಡಲೇ ನಾವು ಅವರಿಗೆ ಸತ್ತಂತೆ, ಅವರು ಕಷ್ಟದಿಂದ ಹೊರಬಂದ ಕೂಡಲೇ ನಾವು ಅವರ ಮುಂದೆ ಪ್ರಕಟವಾಗುವುದು, ನಮ್ಮ ಅಲ್ಪತನ. ನಾವು ಮಾಡಿದ ಯಾವುದೇ ಸಹಾಯ ಅಥವಾ ಉಪಕಾರ ಅವರು ಮರೆಯುವ ಮೊದಲು ನಾವೇ ಮರೆಯಬೇಕು.ಅದೇ ನಮ್ಮ‌ ಮನದಲ್ಲಿ ನಾವು ಮಾಡಬೇಕಾದ ಔತಣ ಕೂಟ.

ನಾನು ಅತ್ತರೆ… ಅದು ನನಗೆ‌ ಮಾತ್ರ ಗೊತ್ತಾಗುವ ನೋವು ಎಂಬುವುದು ಅರಿತಾಕ್ಷಣ ನಾವು ಅಳುವುದನ್ನು ನಿಲ್ಲಿಸಬೇಕು. ಮನಸ್ಸಿನ ಸಮಾಧಾನವನ್ನು ಹಾಳುಮಾಡುವ ಸ್ಥಿತಿಗಳು ಜೀವನದಲ್ಲಿ ಹಾಗೊಮ್ಮೆ ಹೀಗೊಮ್ಮೆ ಬರುವುದಿದೆ. ಅದು ಬರಲೇ ಬೇಕು ಯಾಕೆಂದರೆ ಅದೊಂದು ಅತಿಥಿಗಳಾಗಿ ಬರುವ ಗುರುಗಳು. ಅದಕ್ಕೆ ನಮ್ಮ ಬಳಿ ಬರಲು ಸಾಹಚರ್ಯಗಳೆಂಬ ಸುಗಮವಾದ ಹಾದಿಗಳಿರುತ್ತದೆ. ಆದರೆ ಅದನೆಲ್ಲಾ ಜಾಸ್ತಿ ಗಮನಕೊಡದೇ ಇರುವುದನ್ನು , ಅಥವಾ ಅದರಿಂದ ಆದಷ್ಟು ದೂರ ಇರಲು ಕಲಿಯುವುದೇ ನಮ್ಮ ಪರಿಪಕ್ವತೆ ಲಾಂಛನ.
ಜೀವನದಲ್ಲಿ ಮುಖಾಮುಖಿಯಾಗುವ ಬಹಳಷ್ಟು ದುರನುಭವಗಳು , ಅನಿರೀಕ್ಷಿತ ಹಿಂದೊಡೆತಗಳು ಇವೆ. ಅದನ್ನೆಲ್ಲಾ ಎದುರಿಸಿ, ಹತೋಟಿ ತಪ್ಪಿ ಮುನ್ನಡೆಯಲಾಗದ ಜನರು ನಮ್ಮ ನಡುವೆ ಇದ್ದಾರೆ.
ಆಳವಾಗಿ ಆಲೋಚಿಸಿದರೆ ಪ್ರತೀಯೊಂದು ಸಂದಿಗ್ಧತೆಯ ಪರಿಸ್ಥಿತಿ ಅರ್ಥವಾಗುತ್ತದೆ ಅದರ ಕಾರಣಗಳೂ, ಪರಿಹಾರಗಳೂ ಸಹಜ ಚಿಂತನೆಯಲ್ಲಿ ಗೊತ್ತಾಗುತ್ತದೆ. ಕೆಲವೊಮ್ಮೆ ಅನಿಸುತ್ತೆ ಜೀವನ ಎಷ್ಟು ದೊಡ್ಡದೆಂದರೆ ಕೆಲವು ಶೀತ- -ನೆಗಡಿ-ಜ್ವರ ಬಂದು ಹೋಗುತ್ತದೆ. ಅದು ಜಾಸ್ತಿ ಹೊತ್ತು ನಮ್ಮ ದೇಹಕ್ಕೆ ಅಂಟಿಕೊಂಡಿರಲ್ಲ. ಅದೇ ರೀತಿ ಜೀವನದಲ್ಲಿ ಸಮಸ್ಯೆಗಳೂ ಬಂದು ಹೋಗುತ್ತದೆ, ನಮ್ಮ ಜೊತೆ ತುಂಬಾ ಕಾಲ ಇರುವುದಿಲ್ಲ.

ಅವರ ಸಂಕಷ್ಟದಲ್ಲಿ ನಿಮ್ಮ ಜೀವ ಜೀವನ ಒತ್ತೆಯಾಗಿ ಕೊಟ್ಟರೂ, ಅವರು ಶ್ರೀಮಂತಿಕೆ ಪಡೆದಾಗ ನಿಮ್ಮನ್ನು ಪರಿಗಣಿಸುವುದಿಲ್ಲ ಎಂದು ಯೋಚಿಸುವುದು ನಿಮ್ಮ ಉಪಕಾರಕ್ಕೆ ನೀವೇ‌ ಮಾಡುವ ದೊಡ್ಡ ಪ್ರಮಾಣದ ಅಪಮಾನ. ಜೀವನವನ್ನು ಹಾಳು/ನಾಶ ಮಾಡಲು ಹಲವಾರು ಜನ ಅಥವಾ ಪರಿಸ್ಥಿತಿ ಬರಬಹುದು ಅದನ್ನು ಎದುರಿಸಿ , ಜೀವನ ನಡೆಸುವುದೇ ನಮ್ಮ ಜೀವನದ ಸೌಂಧರ್ಯ. ನಿಮ್ಮನ್ನು ಸೋಲಿಸಿದವರ ಮುಂದೆ ನೀವು ಅಭಿಮಾನದಿಂದ ಖುಷಿಯಿಂದ ನಿಮ್ಮದೇ ಲೋಕದಲ್ಲಿ ನಿಮ್ಮದೇ ರೀತಿಯಲ್ಲಿ ಸ್ವತಂತ್ರವಾಗಿ ಜೀವಿಸಿ ತೋರಿಸುವುದೇ ನಿಮ್ಮ ಕಲಾತ್ಮಕತೆ ಆಗಿರಬೇಕು. ಯಾಕೆಂದರೆ ನಿಮ್ಮ ಜೀವನಕ್ಕೆ ಬಣ್ಣ ಕೊಡುವ ಯಜಮಾನ ನೀವೇ.ಇದನ್ನು ಓದಿ –ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ

ಕನಿಷ್ಟ ಪಕ್ಷ ನಾವು ಜೀವಂತರು, ನಮ್ಮ ಜೀವನದ ಯಜಮಾನರು ನಾವೇ ಎಂದು ಅರಿತರೆ….ಎಲ್ಲವೂ ಸಾಧ್ಯ , ನಿಮ್ಮ ಚೌಕಟ್ಟಿನಲ್ಲಿ ಎಲ್ಲವನ್ನು ದಾಟಿದ ಫಲಾನುಭವಿ ನೀವು ಖಂಡಿತ ಆಗಬಹುದು.

ಎಂಬ ಭಾವನೆಯೊಂದಿಗೆ…

image 21

ಪ್ರೋ. ರೂಪೇಶ್ ಪುತ್ತೂರು

Copyright © All rights reserved Newsnap | Newsever by AF themes.
error: Content is protected !!