December 19, 2024

Newsnap Kannada

The World at your finger tips!

siddu Minister

ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Spread the love

ಬೆಳಗಾವಿ, ಡಿಸೆಂಬರ್ 19: ವಕ್ಫ್ ಆಸ್ತಿಗಳನ್ನು ಸಂಬಂಧಿಸಿದ ವಿಷಯಗಳಲ್ಲಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆಗೆ ಸರ್ಕಾರ ಸಿದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ, ವಕ್ಫ್ ಸಂಬಂಧ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಅವರು ಈ ವಿಷಯವನ್ನು ತಿಳಿಸಿದರು. ವಿರೋಧ ಪಕ್ಷಗಳ ಆರೋಪಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದು, ಸರ್ಕಾರವು ವಿವಾದಗಳಿಗೆ ಸ್ಪಷ್ಟ ಉತ್ತರ ನೀಡಿದೆ.

1954ರಲ್ಲಿ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಯನ್ನು ಜಾರಿ ಮಾಡಿದ್ದು, ರಾಜ್ಯ ಸರ್ಕಾರಕ್ಕೆ ಈ ಕಾಯ್ದೆಗೆ ತಿದ್ದುಪಡಿ ತರುವ ಅವಕಾಶವಿಲ್ಲ. 2008ರಿಂದ 2013 ಮತ್ತು 2019 ರಿಂದ 2023ರ ವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಿದ ಸಂದರ್ಭದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಯಾವುದೇ ಚರ್ಚೆಯಾಗಲಿಲ್ಲ. ಆದರೆ ಈಗ ವಿವಾದವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ವಕ್ಫ್ ಆಸ್ತಿಗಳನ್ನು ರಕ್ಷಿಸುವ ಕುರಿತು ಸರ್ಕಾರ ಬದ್ಧವಾಗಿದೆ. ಇನಾಂ ರದ್ದತಿ ಮತ್ತು ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ಮಂಜೂರಾದ ವಕ್ಫ್ ಜಮೀನುಗಳನ್ನು ಸರ್ಕಾರ ಮುಟ್ಟುವುದಿಲ್ಲ ಎಂದು ಅವರು ಖಚಿತಪಡಿಸಿದರು. ಖಬರಸ್ತಾನ, ದರ್ಗಾ, ಮಸೀದಿಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ.

ರಾಜ್ಯದಲ್ಲಿ ಒಟ್ಟು 1.28 ಲಕ್ಷ ಎಕರೆ ವಕ್ಫ್ ಆಸ್ತಿಯಲ್ಲಿನ 47,263 ಎಕರೆ ಇನಾಂ ರದ್ದತಿ ಕಾಯ್ದೆ ಅಡಿಯಲ್ಲಿ ಮತ್ತು 23,623 ಎಕರೆ ಭೂ ಸುಧಾರಣೆ ಕಾಯ್ದೆ ಅಡಿಯಲ್ಲಿ ಬಳಸಲಾಗುತ್ತಿದ್ದು, 3000 ಎಕರೆ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಾಗಿರುತ್ತದೆ.

ಸುಮಾರು 17,969 ಎಕರೆ ವಕ್ಫ್ ಜಮೀನು ಖಾಸಗಿ ವ್ಯಕ್ತಿಗಳ ಅತಿಕ್ರಮಣಕ್ಕೆ ಒಳಗಾಗಿದ್ದು, ಈ ಆಸ್ತಿಗಳನ್ನು ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಒಮ್ಮೆ ವಕ್ಫ್ ಆಸ್ತಿ ಎಂದು ನೋಂದಾಯಿತಾದರೆ ಅದು ಯಾವಾಗಲೂ ವಕ್ಫ್ ಆಸ್ತಿಯೇ ಆಗಿರುತ್ತದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ವಿರೋಧ ಪಕ್ಷಗಳು ಸಮಾಧಾನ ಹೊಂದದಿದ್ದರೆ, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆಗೆ ಸರ್ಕಾರ ಸಿದ್ಧವಾಗಿದೆ. ಇದರಲ್ಲಿ ಯಾವುದೇ ಪ್ರತಿಷ್ಠೆಯ ಪ್ರಶ್ನೆಯಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ವಕ್ಫ್ ಆಸ್ತಿ ಕುರಿತು ರೈತರಲ್ಲಿ ಸುಳ್ಳು ಸುದ್ದಿ ಹರಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವುದೇ ರೈತರಿಗೆ ಅನ್ಯಾಯವಾಗಲು ಸರ್ಕಾರ ಅವಕಾಶ ನೀಡುವುದಿಲ್ಲ.

ಈಗಾಗಲೇ ರೈತರಿಗೆ ನೀಡಿದ ನೋಟಿಸ್‌ಗಳನ್ನು ಹಿಂಪಡೆದು, ಉಳಿದ ನೋಟಿಸ್‌ಗಳನ್ನು ಕೂಡ ಹಿಂಪಡೆಯಲಾಗುವುದು. ವಕ್ಫ್ ಮಂಡಳಿ ಒತ್ತುವರಿಯಾಗಿರುವ 19987 ಎಕರೆ ವಕ್ಫ್ ಭೂಮಿಯನ್ನು ವಾಪಸು ಪಡೆಯಲು ಕೋರಿದೆ ಎಂದು ತಿಳಿಸಿದರು.ಇದನ್ನು ಓದಿ –ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ

ರೈತರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಹಿಂದಿನಿಂದಲೂ ನಡೆದು ಬಂದಿದ್ದು, ಈ ಹಿಂದಿನ ಸರ್ಕಾರದ ಕಾಲದಲ್ಲಿ 4500 ಆಸ್ತಿಗಳನ್ನು ವಕ್ಫ್‌ಗೆ ಖಾತೆ ಬದಲಾವಣೆ ಮಾಡಲಾಗಿತ್ತು. ನಮ್ಮ ಸರ್ಕಾರ ಇದುವರೆಗೆ ಕೇವಲ 600 ಆಸ್ತಿಗಳನ್ನು ಮಾತ್ರ ವಕ್ಫ್‌ಗೆ ಖಾತೆ ಬದಲಾವಣೆ ಮಾಡಿದೆ. ರೈತರ ಹಿತ ಕಾಯಲು ನಾವು ಬದ್ಧ ಎಂದು ಅವರು ವಿವರಿಸಿದರು.

Copyright © All rights reserved Newsnap | Newsever by AF themes.
error: Content is protected !!