November 15, 2024

Newsnap Kannada

The World at your finger tips!

deepa1

ವೈಯಕ್ತಿಕ ಬದುಕಿನ ಕೆಟ್ಟ ವರ್ತನೆಗಳನ್ನು ಮರೆಯಬೇಕೆ ? ಕ್ಷಮಿಸಬೇಕೆ ?

Spread the love

ವೈಯಕ್ತಿಕ ಬದುಕಿನ ಕೆಟ್ಟ ವರ್ತನೆಗಳನ್ನು ಮರೆಯಬೇಕೆ ? ಕ್ಷಮಿಸಬೇಕೆ ?

ಆ ವ್ಯಕ್ತಿಯ ವೈಯಕ್ತಿಕ ನಡವಳಿಕೆ ಸರಿಯಿಲ್ಲ ಆದರೆ ಆತ ಅತ್ಯುತ್ತಮ ಕಲಾವಿದ.

ಈ ವ್ಯಕ್ತಿಯ ವೈಯಕ್ತಿಕ ವರ್ತನೆ ಕೆಟ್ಟದಾಗಿ ಇರುತ್ತದೆ. ಆದರೆ ಆತ ತುಂಬಾ ಒಳ್ಳೆಯ ಪತ್ರಕರ್ತ.

ಅವರೊಬ್ಬ ನೀಚ ಮನೋಭಾವದ ವ್ಯಕ್ತಿ. ಆದರೆ ಅವರು ಬಹುದೊಡ್ಡ ಬರಹಗಾರರು.

ಇವರೊಬ್ಬರು ವೈಯಕ್ತಿಕವಾಗಿ ಸಹಿಸಲಾಸಾಧ್ಯ ಗುಣದವರು. ಆದರೆ ಸಮಾಜ ಸೇವೆಯಲ್ಲಿ ಹೆಸರು ಮಾಡಿದ್ದಾರೆ.

ಮತ್ತೊಬ್ಬರು ಹೆಣ್ಣು ಬಾಕ. ಆದರೆ ಆತ ಅತ್ಯುತ್ತಮ ಸಾಹಿತಿ.

ಅವನೊಬ್ಬ ಭ್ರಷ್ಟ ವ್ಯಕ್ತಿ. ಆದರೆ ಉತ್ತಮ ಕೆಲಸಗಾರ.

ಇನ್ನೊಬ್ಬ ವಿಚಿತ್ರ ಅಸಹಜ ನಡವಳಿಕೆಯ ವ್ಯಕ್ತಿ. ಆದರೆ ಪ್ರತಿಭಾವಂತ ವಿಜ್ಞಾನಿ.

ಹೀಗೆ ಅನೇಕ ಪ್ರಖ್ಯಾತರು, ಸಾಧಕರು, ಆದರ್ಶ ವ್ಯಕ್ತಿಗಳ ಬಗ್ಗೆ ಬಹಳಷ್ಟು ಜನ ಆಗಾಗ ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ.

ಹಾಗಾದರೆ,
ಆ ವ್ಯಕ್ತಿಗಳ ಸಾಧನೆ, ಜನಪ್ರಿಯತೆ, ಪ್ರಶಸ್ತಿ, ಅಧಿಕಾರದ ಮುಂದೆ ಆ ವೈಯಕ್ತಿಕ ಬದುಕಿನ ಕೆಟ್ಟ ವರ್ತನೆಗಳನ್ನು ಮರೆಯಬೇಕೆ ? ಅಥವಾ ಕ್ಷಮಿಸಿಬೆಡಬೇಕೆ ? ಎಂಬ ಪ್ರಶ್ನೆ ಕೆಲವೊಮ್ಮೆ ಕಾಡುತ್ತದೆ.

ಒಬ್ಬ ವ್ಯಕ್ತಿಯ ಒಟ್ಟು ವ್ಯಕ್ತಿತ್ವವನ್ನು ಕೇವಲ ಆತನ ಸಾಧನೆ ಜನಪ್ರಿಯತೆಯ ಆಧಾರದಲ್ಲಿ ಮಾತ್ರ ಪರಿಗಣಿಸಬೇಕೆ. ಆತನ ಇತರ ದೌರ್ಬಲ್ಯಗಳನ್ನು ನಿರ್ಲಕ್ಷಿಸಬೇಕೆ. ವ್ಯಕ್ತಿತ್ವ ಎಂದರೆ ಕೇವಲ ಮಾತು ಭಾಷಣಗಳಿಗೆ ಮಾತ್ರ ಸೀಮಿತವೇ ? ಇವರನ್ನು ಆದರ್ಶ ವ್ಯಕ್ತಿಗಳಾಗಿ ಪರಿಗಣಿಸಿ ಯುವ ಜನಾಂಗಕ್ಕೆ ಪರಿಚಯಿಸುವಾಗ ವೈಯಕ್ತಿಕ ನಡವಳಿಕೆಗಳನ್ನು ಮರೆ ಮಾಚಬೇಕೆ.

ವ್ಯಕ್ತಿತ್ವ ಇಷ್ಟೊಂದು ಸರಳವೇ ?

ಒಬ್ಬ ವ್ಯಕ್ತಿಯ ವ್ಯಕ್ತಿತ್ವವೆಂದರೆ, ಅದು ಅವನ ಹುಟ್ಟು ಸಾವಿನ ನಡುವಿನ ಅವಧಿಯಲ್ಲಿ ಅವನ ಬದುಕಿನ ಒಟ್ಟು ರೀತಿ ನೀತಿಯ ಮೊತ್ತ. ಸಾಧನೆ ಮತ್ತು ವ್ಯಕ್ತಿತ್ವ ಒಂದೇ ನಾಣ್ಯದ ಎರಡು ಮುಖಗಳು.

ಅನೇಕ ಜನರನ್ನು ಗಮನಿಸಿದ್ದೇನೆ. ಅವರುಗಳು ಜನಪ್ರಿಯನಾದ ವ್ಯಕ್ತಿ, ಆತನ ಜಾತಿಯ, ಪರಿಚಯದ, ಪ್ರದೇಶ ಮುಂತಾದ ಅಂಶಗಳನ್ನು ಗಮನಿಸಿ ಆತ ಅವರಿಗೆ ಹತ್ತಿರದವನಾಗಿದ್ದರೆ ಆತನ ಎಲ್ಲಾ ದೌರ್ಬಲ್ಯಗಳನ್ನು ಮರೆಮಾಚಿ ಆತನನ್ನು ಮಹಾನ್ ವ್ಯಕ್ತಿಯಂತೆ ಚಿತ್ರಿಸುತ್ತಾರೆ.

ಒಬ್ಬ ಧಾರ್ಮಿಕ ನಾಯಕ, ಆಧ್ಯಾತ್ಮಿಕ ಚಿಂತಕ, ಒಬ್ಬ ಸಿನಿಮಾ ನಟ, ರಾಜಕಾರಣಿ, ಸಾಹಿತಿ, ಪತ್ರಕರ್ತ, ಕ್ರೀಡಾ ಪಟು, ವಿಜ್ಞಾನಿ ಅಥವಾ ಇನ್ಯಾವುದೇ ಕ್ಷೇತ್ರದ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಉತ್ತಮ ಸಾಧನೆ ಮಾಡಿ ವೈಯಕ್ತಿಕ ಬದುಕಿನಲ್ಲಿ ಅಸಹಜ ನಡವಳಿಕೆ ರೂಪಿಸಿಕೊಂಡಿದ್ದರೆ ಆತನನ್ನು ನಾವು ಆದರ್ಶ ವ್ಯಕ್ತಿ ಎಂದು ಪರಿಗಣಿಸಲು ಕಷ್ಟವಾಗುತ್ತದೆಯಲ್ಲವೇ ? ಆತ್ಮ ಶುದ್ದವಿಲ್ಲದ, ಕೇವಲ ತನ್ನ ಶ್ರಮ ಪ್ರತಿಭೆ ಅದೃಷ್ಟದಿಂದ ಪ್ರಖ್ಯಾತನಾದ ಮಾತ್ರಕ್ಕೆ ಆತನನ್ನು ದೈವತ್ವಕ್ಕೆ ಏರಿಸುವ ನಮ್ಮ ಮನೋಭಾವ ಸ್ವಲ್ಪ ಬದಲಾಯಿಸಿಕೊಳ್ಳಬೇಕಿದೆ.

ವೈಯಕ್ತಿಕ ಬದುಕು ಮತ್ತು ಸಾರ್ವಜನಿಕ ಜೀವನದ ಸಮ್ಮಿಲನದಿಂದ ಮೂಡುವ ವ್ಯಕ್ತಿತ್ವವೇ ನಿಜವಾದ ಆದರ್ಶ. ಇಲ್ಲದಿದ್ದರೆ ಯುವ ಪೀಳಿಗೆಗೆ ಕೇವಲ ಬಾಹ್ಯದಲ್ಲಿ ಯಶಸ್ವಿಯಾದ ವ್ಯಕ್ತಿಗಳ ವ್ಯಕ್ತಿತ್ವವೇ ಮುಖ್ಯವಾದರೆ ಮುಂದೆ ಮಾನವೀಯ ಮೌಲ್ಯಗಳು ಬೆಲೆ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ.

ಈ ಬಗ್ಗೆ ನಮ್ಮ ಪ್ರತಿಕ್ರಿಯೆಗಳು ಹೆಚ್ಚು ವಾಸ್ತವಿಕ ನೆಲೆಯಲ್ಲಿ ನಿಜ ವ್ಯಕ್ತಿತ್ವದ ಗುರುತಿಸುವಿಕೆಯತ್ತ ಇರಲಿ.

ಇಲ್ಲದಿದ್ದರೆ ಕಳ್ಳರು, ಮುಖವಾಡದ ಸ್ವಾಮಿಗಳು, ಸಾಹಿತಿಗಳು, ಪತ್ರಕರ್ತರು, ಪ್ರವಚನಕಾರರು, ನಟರು, ರಾಜಕಾರಣಿಗಳು ಮುಂತಾದ ನಕಲಿಗಳು ಯಾವುದೇ ವ್ಯಕ್ತಿತ್ವ ಇಲ್ಲದೇ ಕೇವಲ ಮೇಲ್ನೋಟದ ಒಣ ಬುದ್ದಿವಂತಿಕೆಯಿಂದ ಸಮಾಜದ ಮೇಲೆ ನಿಯಂತ್ರಣ ಪಡೆದು, ನಿಜ ವ್ಯಕ್ತಿತ್ವದವರು ಹಿನ್ನೆಲೆಗೆ ಸರಿಯಬೇಕಾಗುತ್ತದೆ. ಅದು ಯುವ ಜನಾಂಗಕ್ಕೆ ನಾವು ಮಾಡುವ ವಂಚನೆಯಾಗುತ್ತದೆ.
ಎಚ್ಚರವಿರಲಿ..

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!