” Dear brothers and sisters” ಎನ್ನುವ ಈ ವಾಕ್ಯವು ಸೂರ್ಯ ಚಂದ್ರ ಇರುವವರೆಗೂ ಈ ಭೂಮಿಯ ಮೇಲೆ ಪ್ರಜ್ವಲಿಸುವ ಕಾರುಣ್ಯದ ಧ್ವನಿಯಾಗಿದೆ , ಅಲ್ಲದೆ ಭಾರತದ ಮಣ್ಣಲ್ಲಿರುವ ಆಧ್ಯಾತ್ಮ ಹಾಗೂ ಸಂಸ್ಕೃತಿಯ ಔನತ್ಯವನ್ನು ಎತ್ತಿ ಜಗತ್ತಿಗೆ ತೋರಿಸಿ ವಿವೇಕ ಬೆಳಕನ್ನು ಪಸರಿಸಿದ ಸಿಡಿಲಸಂತನ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ .
‘ ಯುವಕರೇ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ನೀವು ಶಕ್ತಿಶಾಲಿಗಳಾಗಿ ಶ್ರದ್ಧಾವಂತರಾಗಿ ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ ಎಂದು ಹೇಳಿರುವ ಆ ಸಿಡಿಲ ಮರಿಯ ಮಾತು ಯುಗ-ಯುಗಕ್ಕೂ ಕೇಳಿದ ಯುವ ಜನಾಂಗದ ರೋಮಗಳು ಎದ್ದೇಳಬೇಕು ಶಕ್ತಿಯ ಚಿಲುಮೆಯ ರಕ್ತವು ತಟ್ಟನೆ ಬಿಸಿ ಆಗಬೇಕು.
ವಿವೇಕಾನಂದರು 18ನೇ ಶತಮಾನದಲ್ಲಿ ಭಾರತದ ದೇಶದ ಜಾತಿ ಪಿಡುಗು,ಏಣಿ ಶ್ರೇಣಿ ವ್ಯವಸ್ಥೆ , ಲಿಂಗ ತಾರತಮ್ಯ ಹಾಗೂ ಮೌಢ್ಯತೆಗಳ ಕುರಿತು ಮಮ್ಮಲ ಮರುಗಿ ಕುಸಿದವರು. ಭಾರತೀಯರಲ್ಲಿ ಬೇರೂರಿರುವ ಇಂತಹ ಅನಿಷ್ಟಗಳನ್ನು ತೊಡೆದು ಹಾಕುವಲ್ಲಿ ಅವರು ಅವಿಶ್ರಾಂತ ಶ್ರಮ ಪಟ್ಟವರು ಪರಕೀಯರ ದಾಳಿಗಳು,ವಿದೇಶಿಯರ ತಾತ್ಸಾರ ಮನೋಭಾವನೆಗಳು ಹಾಗೂ ಭಾರತೀಯರಿಗೆ ಅಂಟಿಸಿ ಹೋಗಿದ್ದ ದರಿದ್ರ ದೇಶವೆಂಬ ಪಟ್ಟ ಇವೆಲ್ಲದಕ್ಕೆ ತಕ್ಕದಾದ ಉತ್ತರವನ್ನು ಕೊಡುವುದಕ್ಕಾಗಿಯೇ ವೀರ ಸನ್ಯಾಸಿ ಈ ನೆಲದಲ್ಲಿ ಜನ್ಮವೆತ್ತಿದ್ದು.
ಜೀವಿತದ ಅಲ್ಪ ಕಾಲಾವಧಿಯಲ್ಲಿಯೇ ಸಮಾಜ ದ್ರೋಹಿ ನಂಬಿಕೆಗಳ ವಿರುದ್ಧ ತಮ್ಮ ತತ್ವ ಬೋಧನೆ ಹಾಗೂ ಧಾರ್ಮಿಕ ಭಾಷಣಗಳ ಮೂಲಕ ಅವುಗಳನ್ನು ಬುಡ ಸಮೇತ ಕಿತ್ತು ಎಸೆಯುವ ಪ್ರಯತ್ನ ಮಾಡಿದ ಕಲಿ ಸಂತ ರಾಗಿದ್ದರು ಸ್ವಾಮಿ ವಿವೇಕಾನಂದರು.
1893ರಲ್ಲಿ ಕೇವಲ 30ನೇ ವಯಸ್ಸಿನ ಒಬ್ಬ ತೇಜಸ್ವಿ ಯುವಕ ಆ ಸಮ್ಮೇಳನದಲ್ಲಿ ನೆರೆದಿರುವ ಪ್ರಪಂಚದ ಮುಖ್ಯ ಧಾರ್ಮಿಕ ಪ್ರಚಾರಕರನ್ನು ದಿಗ್ಭ್ರಮೆಗೆ ಒಳಪಡಿಸಿ ಭಾರತದ ಸಂಸ್ಕೃತಿಯನ್ನು ಮುಗಿಲತ್ತರಕ್ಕೆ ಎದ್ದು ನಿಲ್ಲಿಸಿದ್ದರು. ಈ ಕಾರ್ಯಕ್ರಮಕ್ಕೆ ಹೋಗಬೇಕೆಂಬುದು ಅವರ ಅಧಮ್ಯ ಕನಸಾಗಿತ್ತು ಆ ಕನಸನ್ನು ನನಸು ಮಾಡಿಕೊಂಡ ಪ್ರಯತ್ನವೇನು ಸುಗಮವಾಗಿರಲಿಲ್ಲ ಎಷ್ಟೋ ಸಮಯ ಹೊಟ್ಟೆ ಹಸಿವನ್ನು ಕೂಡ ಅವರು ಮರೆತಿದ್ದರು ಆಡಳಿತ ರಾಜರುಗಳಲ್ಲಿ ತಮ್ಮ ಅರಿಕೆಯನ್ನು ಹೇಳಿ ಕಷ್ಟಪಟ್ಟು ಕಡಲಾಚೆಯ ಪಯಣವನ್ನು ಪ್ರಾರಂಭಿಸಿಯೇ ಬಿಟ್ಟರು. ಅಮೇರಿಕಾದ ಸ್ವಚ್ಛ ಹಾಗೂ ತುಂಬಾ ಕಟ್ಟುನಿಟ್ಟಾದ ವ್ಯವಸ್ಥಿತವಾದ ಪ್ರದೇಶ ಹಾಗೂ ಅಲ್ಲಿಯ ಜನರು ತೊಡುತ್ತಿದ್ದ ಸೂಟು ಬೂಟು ಕೋಟುಗಳನ್ನು ಕಂಡು ಭಾರತೀಯರ ಪರಸ್ಥಿತಿಗಳನ್ನು ಹೋಲಿಸಿಕೊಂಡು ಕಣ್ಣೀರಿಟ್ಟಿದ್ದರು.
ಬಹು ಶಿಸ್ತಿನಿಂದ ಓಡಾಡುವ ಜನರ ಮಧ್ಯ ಕಾವಿ ತೊಟ್ಟ ಜ್ಞಾನ ಫಕೀರರನ್ನು ನೋಡಿ ಅಲ್ಲಿಯ ಜನರು ಕುಹಕವಾಗಿ ನೋಡುವರು ಹಾಗೂ ಮಾತನಾಡುವರು, ಅಷ್ಟರಲ್ಲಿಯೇ ಒಬ್ಬ ಅಮೇರಿಕಾದವನು ನೋಡಿದಿರಾ? ಇದೇ ! ಭಾರತೀಯರ ಪರಿಸ್ಥಿತಿ ಹರಕು ಕೊಳಕು ಬಟ್ಟೆ ಹಾಗೂ ಮಲೀನ ಮೌಲ್ಯಗಳ ಮನುಷ್ಯರು ಎಂದರು , ಆಗ ವಿವೇಕಾನಂದರು ಅವನನ್ನು ತಡೆದು ಹೀಗೆ ಹೇಳಿದರು “ಅಮೇರಿಕಾದಲ್ಲಿ ಜೆಂಟಲ್ ಮೆನ್ ಗಳನ್ನು ಒಬ್ಬ ಟೈಲರ್ ನಿರ್ಮಾಣ ಮಾಡುತ್ತಾನೆ , ಆದರೆ ಭಾರತದಲ್ಲಿ ಒಬ್ಬ ಜೆಂಟಲ್ ಮ್ಯಾನ್ ನನ್ನು ಅವನ ವ್ಯಕ್ತಿತ್ವವೇ ನಿರ್ಮಾಣ ಮಾಡುತ್ತದೆ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿ ಹೊರಟರು.
ಅಷ್ಟರಲ್ಲಿ ತಾವು ಭಾಗವಹಿಸ ಬಂದ ಸಮ್ಮೇಳನವು ಎರಡು ತಿಂಗಳು ಕಾಲ ತಡವಾದ ವಿಷಯ ತಿಳಿಯಿತು, ಆಗ ಸ್ವಾಮಿ ವಿವೇಕಾನಂದರು ಕ್ಯಾಥರಿನ್ ಸನ್ಬರ್ನ್ ಮಹಿಳೆಯ ಮನೆಯಲ್ಲಿ ವಾಸ್ತವ್ಯ ಹೂಡಿದರು ಏನೇ ! ಆದರೂ ನಾನು ಸಮ್ಮೇಳನದಲ್ಲಿ ಭಾಗವಹಿಸಿ ಭಾರತೀಯ ಪರಂಪರೆಯ ಕುರಿತಾಗಿ ಹೇಳಲೇಬೇಕು ಎಂದು ನಿರ್ಧರಿಸಿದ್ದರು. ಅಂತೂ ತಾವು ಜಾತಕ ಪಕ್ಷಿಯಂತೆ ಕಾದಂತಹ ಕಾಲವದು ಬಂದೇ ಬಿಟ್ಟಿತು ಸಮ್ಮೇಳನಕ್ಕೆ ಪ್ರವೇಶಿಸುವ ಮೊದಲು ಅಲ್ಲಿ ಶುಭ ಕೋರಲು ನಿಂತಿದ್ದ ಹಾರ್ವರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಆದ ರೈಟ್ ರವರು ಹೀಗೆ ಹೇಳುತ್ತಾರೆ ‘ಅಮೇರಿಕಾದ ನೆಲದ ಮೇಲೆ ಸುಮಾರು 400 ವರ್ಷಗಳಲ್ಲಿ ಇಂತಹ ಜ್ಞಾನಿಗಳು ತಿರುಗಾಡಿದ ಉಲ್ಲೇಖಗಳೇ ಇಲ್ಲವೆಂದು ‘ ವಿವೇಕಾನಂದರನ್ನು ಅಭಿನಂದಿಸಿ ಸಮ್ಮೇಳನಕ್ಕೆ ಹೋಗಲು ಶುಭ ಕೋರಿದರು.
ಆ ಸಮಯದಲ್ಲಿ ಭಾರತದ ಹೆಮ್ಮೆಯ ಪುತ್ರನೊಬ್ಬ ಇತಿಹಾಸ ನಿರ್ಮಿಸುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ ಅಲ್ಲಿಯವರೆಗೂ ಭಾರತವನ್ನು ದರಿದ್ರ ದೇಶವೆಂದು ಕಾಣುತ್ತಿದ್ದ ಮುಂದುವರೆದ ರಾಷ್ಟ್ರಗಳು ನಿಬ್ಬೆರೆಗಾಗಿ ಭಾರತವೂ ಕೂಡ ಒಂದು ಸಂಸ್ಕೃತಿಕ ಶ್ರೇಷ್ಠ ದೇಶವೆಂದು ಮನಃಪೂರ್ವಕವಾಗಿ ಒಪ್ಪಿಕೊಳ್ಳಲೇ ಬೇಕಾಯಿತು. ನಂತರ ಅಲ್ಲಿಂದ ಮರಳಿದ ಸಂತರು ಭಾರತದ ತುಂಬೆಲ್ಲಾ ಸಂಚರಿಸಿ ಧಾರ್ಮಿಕ, ಸಾಮಾಜಿಕ ಸುಧಾರಣಾ ಕಾರ್ಯಗಳನ್ನು ತಮ್ಮ ಶಿಷ್ಯಕೂಟದೊಂದಿಗೆ ಶ್ರಮಿಸಿದರು ಜೊತೆಯಲ್ಲಿ ರಾಮಕೃಷ್ಣ ಮಿಷನ್ ಗಳನ್ನು ತೆರೆದರು ಆಧ್ಯಾತ್ಮದ ಮಹಾ ಪ್ರಸಾದವನ್ನು ಜನರಿಗೆ ಉಣಬಡಿಸಿ, ಭಾರತೀಯರನ್ನು ಸದ್ಗುಣ ಸಂಪನ್ನ ರಾಗುವಂತೆ ಮಾಡಲು ಹಗಲಿರುಳು ಶ್ರಮಿಸಿದರು. ‘ನನಗೆ ನೂರು ಬಲಿಷ್ಠ ಯುವಕರನ್ನು ಕೊಡಿ ನಾನು ಆಗ ಭಾರತದ ಚಿತ್ರಣವನ್ನೆ ಬದಲಿಸುವೆ ‘ಎಂದಿದ್ದರು ವಿವೇಕಾನಂದರು. ಏಕೆಂದರೇ ! ಒಂದು ದೇಶದ ಸಂಪತ್ತು ಅಲ್ಲಿಯ ಸದೃಢ ಮಾನವ ಸಂಪನ್ಮೂಲದ ಮೇಲೆ ನಿರ್ಮಾಣವಾಗಿದೆ ಎಂದು ಅವರು ನಂಬಿದ್ದರು .ಇದನ್ನು ಓದಿ –ಕ್ರಶ್ ಎಂಬ ಮಾಯಾ ಜಿಂಕೆ
ಆದರೆ ಇತ್ತೀಚಿನ ಯುವಕರಲ್ಲಿಯ ಸಂಕುಚಿತ ಹಾಗೂ ಉದಾಸೀನ ಮನಸ್ಥಿತಿಗಳನ್ನು ನೋಡಿದಾಗ ನಮಗೆ ನೋವುಂಟಾಗುವುದು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಯುವಕರು ದುಶ್ಚಟಗಳಿಗೆ ಬಲಿಯಾಗುವುದು, ಸಮಾಜದ ಹೀನ ಕೃತ್ಯಗಳಲ್ಲಿ ತೊಡಗುವುದು , ಸ್ವಾರ್ಥ ಲಾಲಸೆಗಾಗಿ ದೇಶದ್ರೋಹ ಕೆಲಸದಲ್ಲಿ ಭಾಗಿಯಾಗುವುದು ,ಹಾಗೂ ಸಮಾಜಿಕ ಅಶಾಂತಿಯನ್ನು ಉಂಟು ಮಾಡಿ ಜಾತಿ ಭೇದ ಹಾಗೂ ಧಾರ್ಮಿಕ ಪ್ರತಿಷ್ಠೆಗಳಲ್ಲಿ ಪಾಲ್ಗೊಳ್ಳುವುದನ್ನು ಕಂಡರೆ ನಿಜವಾಗಿಯೂ ಮನಸ್ಸಿಗೆ ಬೇಸರಿಸುತ್ತದೆ.ದೇಶದ ಸದೃಢ ಸ್ತಂಭವಾಗಿರುವ ಯುವಶಕ್ತಿಯು ತಮಗೆ ತಾವೇ ಕೊಡಲಿ ಪೆಟ್ಟು ಸ್ವ ಇಚ್ಛೆಯಿಂದ ಹಾಕಿಕೊಳ್ಳುತ್ತಿರುವುದು ಸಂಕಟಪಡುವ ವಿಷಯವಾಗಿದೆ.ಯುವಕರಲ್ಲಿ ಜ್ಞಾನದ ಬೆಳಕು ಮೂಡಬೇಕು ಸ್ವಾರ್ಥ ಮನೋಭಾವ ತೊಲಗಿ, ಭಾತೃತ್ವ ಭಾವ ಮೂಡಬೇಕು, ಪ್ರತಿ ಯುವಕರು ತಮ್ಮಲ್ಲಿ ಸ್ವಾಮಿ ವಿವೇಕಾನಂದರನ್ನು ಆಹ್ವಾನಿಸಿಕೊಂಡು ಸಮಾಜವನ್ನು ಸುಧಾರಿಸುವ ಕಾರ್ಯದಲ್ಲಿ ನಿರತರಾದರೆ ಆ ವೀರ ಸನ್ಯಾಸಿಯ ಆತ್ಮಕ್ಕೆ ಶಾಂತಿ ದೊರಕಿದಂತಾಗುವುದು. ಹಾಗಾಗಿ ಯುವ ಸಮೂಹವೇ ಬನ್ನೀ ! ನಮ್ಮಲ್ಲಿ ನುಸುಳಿರುವ ಅನಿಷ್ಠ ಆಧುನಿಕ ಶೈಲಿಯ ವಿಕಾರ ದಿನಚರಿಯನ್ನು ದೂರ ಮಾಡಿ ಗತವೈಭವ ಕಂಡಂತಹ ಭಾರತದ ಸಾಂಸ್ಕೃತಿಕ ಆಚಾರ ವಿಚಾರ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಮತ್ತೊಮ್ಮೆ ನಮ್ಮ ದೇಶದ ಔನತ್ಯಕ್ಕೆ ಕಾರಣಿಭೂತರಾಗೋಣ…..
ಅಶ್ವಿನಿ ಅಂಗಡಿ
ಬದಾಮಿ
More Stories
ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ಮಂಡ್ಯ ರೈತರನ್ನು ಕಾಡುತ್ತಿರುವ ವಕ್ಫ್ ಭೂಮಿ ವಿವಾದ