December 26, 2024

Newsnap Kannada

The World at your finger tips!

aravinda

ವಿಶ್ವಕಂಡ ಅಪರೂಪದ ಎಂಜಿನಿಯರ್‌ ವಿಶ್ವೇಶ್ವರಯ್ಯ – ಅರವಿಂದ್ ಅಭಿಮತ

Spread the love

ವಿಶ್ವಕಂಡ ಅಪರೂಪದ ಎಂಜಿನಿಯರ್‌ಗಳಲ್ಲಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅಗ್ರಗಣ್ಯರು ಎಂದು ಜಿಲ್ಲಾ ಬಿಜೆಪಿ ನಾಯಕ ಎಚ್.ಆರ್.ಅರವಿಂದ್ ಹೇಳಿದರು.

ಮಂಡ್ಯ ದ ಕಾವೇರಿ ನಗರದಲ್ಲಿರುವ ಮಂಡ್ಯ ಶಿಕ್ಷಣ ಸಂಸ್ಥೆ ಶಾಲೆಯಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಘಟಕ, ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ-ಪ್ರಬಂಧ ಸ್ಪರ್ಧೆ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಭಾರತ ನಿರ್ಮಾತೃಗಳಲ್ಲಿ ಅಗ್ರಗಣ್ಯ ಮಹಾನುಭಾವರಲ್ಲಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಒಬ್ಬರು, ದೇಶದ ನೀರಾವರಿ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಲ್ಲದೆ, ದಖನ್ ಪ್ರಸ್ಥಭೂಮಿಯಲ್ಲಿ ನೀರಾವರಿ ಕ್ರಾಂತಿಗೆ ಕಾರಣೀಕರ್ತರಾಗಿ ಅಣೆಕಟ್ಟು ನಿರ್ಮಾಣದ ವಿನ್ಯಾಸದ ಆವಿಷ್ಕಾರ ಮಾಡಿದ ದೇಶಕಂಡ ಅಪರೂಪದ ಎಂಜಿನಿಯರ್ ಆಗಿದ್ದರು ಎಂದು ತಿಳಿಸಿದರು.

ಇಂತಹ ಅಪ್ರತಿಮ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಇಂದು ಅವರ ಜನ್ಮ ದಿನ ಪ್ರಯುಕ್ತ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಚಾರ ವಿಸ್ತರಿಸಿರುವುದು ಉತ್ತಮ, ಭಾರತ ಮಾತ್ರವಲ್ಲದೆ ವಿಶ್ವದ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸರ್ ಎಂ.ವಿಯವರ ಜೀವನವೇ ಒಂದು ಸ್ಫೂರ್ತಿದಾಯಕ ಎಂದು ನುಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1860 ಸೆಪ್ಟೆಂಬರ್ 15 ರಂದು ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಾಧನೆ ಈ ಸೂರ್ಯಚಂದ್ರರಿರುವ ತನಕ ಶಾಶ್ವತ. ಈ ರಾಷ್ಟ್ರಕ್ಕೆ ಸರ್ ಎಂ ವಿ ನೀಡಿದ ಕೊಡುಗೆ ಅಪೂರ್ವ. ಇದೇ ಕಾರಣಕ್ಕೆ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟಂಬರ್ 15ರಂದು ಪ್ರತಿವರ್ಷ ಭಾರತದಲ್ಲಿ `ಇಂಜಿನಿಯರ್‌ಗಳ ದಿನ’ ಎಂದು ಆಚರಿಸಲಾಗುತ್ತಿದೆ ಎಂದು ಸ್ಮರಿಸಿದರು.

ಬಳಿಕ ವಕೀಲ ಎಂ.ಗುರುಪ್ರಸಾದ್, ಜನಪರ ಲಯನ್ಸ್ ಸಂಸ್ಥೆ ಅಧ್ಯಕ್ಷೆ ರತ್ನಮ್ಮ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಕಿ ಬಿ.ವಿ. ಮಹಾರಾಣಿ ಮತ್ತು ವೈದ್ಯರಾದ ಡಾ.ಎಚ್.ಸಿ. ಆನಂದ್ ಅವರನ್ನು ಗಣ್ಯರು ಅಭಿನಂದಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಡ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ವಿ. ಧರಣೇಂದ್ರಯ್ಯ, ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೋತೇರ್ ಮಹದೇವು ಮತ್ತು ಶಿಕ್ಷಕವೃಂದ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!